ಸರ್ಕಾರಿ‌ ಅನುದಾನಿತ ರಂಗಭೂಮಿಯ ಮೆಗಾಪ್ರಾಜೆಕ್ಟ ಗಳು ನಿಲ್ಲಲಿ

ಈ ರೀತಿಯ ಅಭಿಯಾನವೊಂದು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲಾ ಕ್ಷೇತ್ರಗಳು ಆರ್ಥಿಕವಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಸಾಂಸ್ಕೃತಿಕ ಕ್ಷೇತ್ರವಂತೂ ಸ್ತಬ್ಧವಾಗಿ ಹೋಗಿದೆ. ಸದ್ಯದ ವಾತಾವರಣ ಗಮನಿಸಿದರೆ ಎಲ್ಲವೂ ಸರಿ ಹೋಗಿ ಎಂದಿನಂತೆ ಚಟುವಟಿಕೆಗಳು ಆರಂಭವಾಗಲು ಬಹಳ ಕಾಲ ಬೇಕಾಗಬಹುದು. ರಂಗಭೂಮಿ ಕಲಾವಿದರು ಮುಂದೇನು? ಎಂಬ ಪ್ರಶ್ನೆಯೊಂದಿಗೆ ದಿನ ಕಳೆಯುವಂತಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ದೊಡ್ಡ ದೊಡ್ಡ ಯೋಜನೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಒಂದೊಂದು ನಾಟಕ ಕೋಟಿಗಟ್ಟಲೆ ಹಣದಿಂದ ಸಿದ್ಧವಾಗುವ ಬಗ್ಗೆ ಪ್ರಕಟಣೆಗಳನ್ನು ಕಾಣುತ್ತೇವೆ. ಸರ್ಕಾರಗಳು ಬದಲಾದಂತೆ ಈ ರೀತಿಯ ಯೋಜನೆಗಳು ಹೊಸ ರೂಪ ಪಡೆದು ಎದ್ದು ನಿಲ್ಲುತ್ತವೆ. ಪಕ್ಷ ಸಿದ್ಧಾಂತಕ್ಕೆ ನಿಷ್ಠರಾದವರು ನಾಯಕರನ್ನು ಮೆಚ್ಚಿಸಲು ಈ ರೀತಿಯ ಯೋಜನೆಗಳನ್ನು ಹೊಸೆಯುವುದು ಹೊಸತೇನು ಅಲ್ಲ , ಇನ್ನು ಕೆಲವರು ಯಾವ ಸರ್ಕಾರವಿದ್ದರೂ ದೊಡ್ಡ ಯೋಜನೆಗಳನ್ನು ಮಡಿಲಿಗೆ ಹಾಕಿಕೊಳ್ಳುವ ಚಾಣಾಕ್ಷರು. ರಂಗಭೂಮಿಯ ಕೆಲಸ ಯಾವತ್ತೂ ಪ್ರಭುತ್ವದಿಂದ‌ ದೂರ ಇದ್ದು , ಅದನ್ನು ವಿಮರ್ಶಿಸುವ, ಅದರ ಯಜಮಾನಿಕೆಯನ್ನು ಪ್ರಶ್ನಿಸುವ ಅಂತರದಲ್ಲಿ ಇರಬೇಕು. ಅದನ್ನು ಬಿಟ್ಟು ಅದನ್ನು ಹೊಗಳುವ, ಪಕ್ಷ ರಾಜಕಾರಣದ ಜೊತೆ ಸೇರಿ ಅದರ ಅಜಂಡಾವನ್ನು ಸಾಂಸ್ಕೃತೀಕರಣಗೊಳಿಸುವ ಕೆಲಸದಲ್ಲಿ ತೊಡಗಿಕೊಳ್ಳುವುದು ರಂಗಕಲೆಗೆ ಬಗೆಯುವ ಅಪಚಾರವಾಗುತ್ತದೆ. ನಾವು ಪ್ರಭುತ್ವವನ್ನ ಪ್ರಶ್ನಿಸುತ್ತೇವೆ ಎಂಬ ಮಾತು ವೇದಿಕೆಗಳಲ್ಲಿ, ಚಿಂತನೆಗಳಲ್ಲಿ ಮಾತ್ರ ಆಗಬಾರದು. ಕ್ರಿಯೆಯಲ್ಲಿ ವ್ಯಕ್ತವಾಗಬೇಕು. ಹೌದು ನಮ್ಮ ಭಾಷೆಯ ಕ್ಲಾಸಿಕ್ ಕೃತಿಗಳು ರಂಗದ ಮೇಲೆ ಬರಬೇಕು; ಅದು ತಪ್ಪಲ್ಲ , ಆದರೆ ಅವು ಬೆಂಗಳೂರು ಮೈಸೂರಿಗೆ ಮಾತ್ರ ಸೀಮಿತವಾಗಬಾರದು. ಎಲ್ಲವೂ ರಾಜಧಾನಿಗಳಲ್ಲಿ, ಕೆಲವೇ ಸ್ಥಳಗಳಲ್ಲಿ ನಡೆಯುತ್ತಿದ್ದರೆ ವಿಕೇಂದ್ರೀಕರಣ ವ್ಯವಸ್ಥೆ ಬರುವುದು ಯಾವಾಗ? ರಾಜ್ಯದ ಮೂಲೆ ಮೂಲೆಯಲ್ಲಿರುವ ಪ್ರತಿಭಾವಂತರು ಇಂತಹ ಯೋಜನೆಗಳನ್ನು ಮಾಡಲು ಸಮರ್ಥರಿದ್ದಾರೆ, ಅವರಿಗೆಲ್ಲಾ ಅವಕಾಶಗಳು ದೊರೆಯಬೇಡವೆ? ಈಗಿನ ಸಮಯ ಎಂತದ್ದು? ರಂಗಭೂಮಿಯನ್ನೇ ನಂಬಿಕೊಂಡು ಬದುಕು ನಡೆಸುತ್ತಿರುವ ಸಾವಿರಾರು ಕಲಾವಿದರು ಕೆಲಸವಿಲ್ಲದೆ ಬದುಕನ್ನು ಬಲು ಕಷ್ಟದಿಂದ ನಡೆಸುತ್ತಿದ್ದಾರೆ .ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿರುವ ಎರಡು ಸಾವಿರ ಸಹಾಯಧನ ನೆಪಮಾತ್ರಕ್ಕೆ ಎನ್ನುವಂತಾಗಿದೆ. ಈಗಲೂ ಅರ್ಹರಿಗೆ ಸಿಕ್ಕಿಲ್ಲ, ಮುಖ್ಯವಾಗಿ ತಲುಪಬೇಕಾದವರಿಗೆ ತಲುಪಿಲ್ಲ ಎಂಬ ಮಾತುಗಳೂ ಇವೆ. ಇಂತಹ ಸಂದರ್ಭದಲ್ಲಿ ಇಲಾಖೆ ಅಕಾಡೆಮಿ ಮತ್ತು ಸರ್ಕಾರಿ ರೆಪರ್ಟರಿಗಳು ಮಾಡುವ ಯೋಜನೆಗಳು ಎಲ್ಲರನ್ನೂ ಒಳಗೊಳ್ಳುವಂತೆ ಇರುವುದು ಅತಿ ಅಗತ್ಯ . ಖ್ಯಾತ ಸಾಹಿತಿಗಳ ಕಾದಂಬರಿಗಳನ್ನು ,ಕಥೆಗಳನ್ನು, ಕಾವ್ಯಗಳನ್ನು,ನಾಟಕಗಳನ್ನು ರಂಗದ ಮೇಲೆ ತರುವ ಆಲೋಚನೆಗಳು ಇದ್ದಲ್ಲಿ ರಾಜ್ಯಾದ್ಯಂತ ಎಲ್ಲರನ್ನೂ ಒಳಗೊಳ್ಳುವಂತೆ ಹೇಗೆ ಮಾಡಬಹುದು? ಕಾರ್ಯವಿಧಾನಗಳೇನು? ಎಂಬುದನ್ನು ನೋಡಬೇಕೇ ಹೊರತು ಕೆಲವರಿಗೆ ಸೀಮಿತವಾಗುವಂತಾಗಬಾರದು. ಕನ್ನಡದ ಹೆಸರಾಂತ ಸಾಹಿತ್ಯಕೃತಿಗಳನ್ನು ರಂಗದ ಮೇಲೆ ತರಬೇಕು ಎಂಬುದು ಯೋಜನೆಯಾಗಿದ್ದರೆ ಮೂವತ್ತು ಜಿಲ್ಲೆಗಳಿಗೂ ಪ್ರಾತಿನಿಧ್ಯ ಸಿಗುವ ರೀತಿಯಲ್ಲಿ ಅಲ್ಲಿನ ಸಾಹಿತ್ಯ ಕೃತಿಗಳನ್ನು ಆಯ್ದುಕೊಳ್ಳಬೇಕು. ಈಗಾಗಲೇ ರಂಗಕ್ಕೆ ಅಳವಡಿಸಿರುವ ಕೃತಿಗಳನ್ನು ಕೈಬಿಡುವುದು ಉತ್ತಮ. ಸ್ಥಳೀಯ ನಿರ್ದೇಶಕರು, ಸ್ಥಳಿಯ ನಟ-ನಟಿಯರು ತಂತ್ರಜ್ಞರೇ ಇರಲಿ. ಮೊದಲ ಪ್ರದರ್ಶನದ ನಂತರ ಪರಸ್ಪರ ಜಿಲ್ಲೆಗಳಿಗೆ ವಿನಿಮಯ ಮಾಡಿಕೊಳ್ಳುವ ಬಗ್ಗೆ ಯೋಚಿಸಬಹುದು. ಮುಖ್ಯವಾಗಿ ರಂಗಭೂಮಿಯ ಮೆಗಾ ಪ್ರಾಜಕ್ಟ್ ಗಳು ನಿಲ್ಲಬೇಕು. ರಾಜ್ಯದ ಜಿಲ್ಲೆ ತಾಲ್ಲೂಕುಗಳನ್ನು ಒಳಗೊಂಡ ಅಲ್ಲಿನ ಅಸ್ಮಿತೆಗಳನ್ನು ನೆನಪಿಸುವ, ಸಾಂಸ್ಕೃತಿಕ ಶಕ್ತಿಕೊಡುವ ಪುಟ್ಟಪುಟ್ಟ ಯೋಜನೆಗಳನ್ನು ರೂಪಿಸಬೇಕು. ಮೆಗಾ ಪ್ರಾಜೆಕ್ಟ್ ಗಳಿಗೆ ವಿನಿಯೋಗಿಸುವ ಹಣಕ್ಕೆ ಇನ್ನಷ್ಟು ಸೇರಿಸಿ ಎಲ್ಲಾ ಜಿಲ್ಲೆಗಳಿಗೂ,ತಾಲ್ಲೂಕುಗಳಿಗೂ ಅನುದಾನ ನೀಡಬಹುದು. ನಾಲ್ಕು ರಂಗಾಯಣಗಳು ವಿಭಾಗವಾರು ಇದರ ಉಸ್ತುವಾರಿಯನ್ನು ನೋಡಿಕೊಳ್ಳಬಹುದು ಅಥವಾ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಜವಾಬ್ದಾರಿ ತೆಗೆದುಕೊಳ್ಳಬಹುದು. ನಾಟಕ ಅಕಾಡೆಮಿ ಕೂಡ ಯೋಜನೆಯಲ್ಲಿ ಪಾಲ್ಗೊಳ್ಳಬಹುದು ಹೀಗಾದಲ್ಲಿ ಸಾಹಿತ್ಯ ಕೃತಿ ಆಧಾರಿತ ಮೂವತ್ತು ಹೊಸ ನಾಟಕಗಳು ಸಿದ್ಧಗೊಳ್ಳುತ್ತವೆ . ಸಾವಿರಕ್ಕೂ ಹೆಚ್ಚು ರಂಗಕರ್ಮಿಗಳು ಇದರಲ್ಲಿ ಪಾಲ್ಗೊಳ್ಳುವುದರ ಜೊತೆಗೆ ನಿಗಧಿತ ಸಂಬಳವನ್ನು ಪಡೆದು ಜೀವನ ನಿರ್ವಹಿಸುತ್ತಾರೆ. ಈ ಬಗ್ಗೆ ಜವಬ್ದಾರಿ ಸ್ಥಾನದಲ್ಲಿ ಇರುವವರು ಮತ್ತು ಇಲಾಖೆ ಗಂಭೀರವಾಗಿ ಯೋಚಿಸಬೇಕು. ಮೆಗಾ ಪ್ರಾಜೆಕ್ಟ್ ಗಳನ್ನು ಪ್ರೋತ್ಸಾಹಿಸುವ ರಂಗಕರ್ಮಿಗಳು ಎಲ್ಲರ ಒಳಿತನ್ನೂ ಗಮನದಲ್ಲಿಟ್ಟುಕೊಳ್ಳಬೇಕು.

ಆಸಕ್ತ ರಂಗಭೂಮಿಯ ಕಲಾವಿದರು ತಮ್ಮ ಹೆಸರನ್ನು ಸೇರಿಸಿ ಹಂಚಿಕೊಳ್ಳಿ

ಪ್ರಸಾದ್ ರಕ್ಷಿದಿ
ನಟರಾಜ್ ಹೊನ್ನವಳ್ಳಿ
ಡಾ. ಪ್ರಕಾಶ್ ಗರುಡ
ಡಾ. ಸಾಸ್ವೇಹಳ್ಳಿ ಸತೀಶ್
ಗೋಮಾರದಹಳ್ಳಿ ಮಂಜುನಾಥ್
ಮಹಾದೇವ ಹಡಪದ
ಮೌನೇಶ್ ಬಡಿಗೇರ
ಐ ಕೆ ಬೋಳುವಾರ್
ಶ್ರೀಕಾಂತ ‌ಎನ್‌ ವಿ
ಯತೀಶ್ ಎನ್ ಕೊಳ್ಳೇಗಾಲ
ಧರ್ಮೇಂದ್ರ ‌ಅರಸ್
ಸಂಸ ಸುರೇಶ

Please follow and like us:
error