ಶಿಷ್ಟಾಚಾರದಂತೆ , ಕೋವಿಡ್ ಮಾರ್ಗಸೂಚಿಯಂತೆ ರಾಜ್ಯೋತ್ಸವ ಆಚರಣೆ : ವಿಕಾಸ್ ಕಿಶೋರ್ ಸುರಳ್ಕರ್


ಕೊಪ್ಪಳ, : ನವೆಂಬರ್.01 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವವನ್ನು ಶಿಷ್ಟಾಚಾರ ಹಾಗೂ ಕೋವಿಡ್ ಮಾರ್ಗಸೂಚಿಯಂತೆ ಆಚರಿಸಲಾಗುವುದು. ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂದು ಬೆಳಿಗ್ಗೆ ನಗರದ ತಹಶೀಲ್ದಾರರ ಕಚೇರಿಯಲ್ಲಿ ಭುವನೇಶ್ವರಿ ದೇವಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಅಶೋಕ ವೃತ್ತದ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಮೆರವಣಿಗೆ ನಡೆಸಲಾಗುವುದು. ನಂತರ ಬೆಳಿಗ್ಗೆ 09 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಯಲಿದೆ. ಚುನವಣಾ ನೀತಿ ಸಂಹಿತೆ ಹಾಗೂ ಕೋವಿಡ್ ಇರುವುದರಿಂದ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಅಗತ್ಯ ಶಿಷ್ಠಾಚಾರಗಳನ್ನು ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕು. ಮೆರವಣಿಗೆ ಹಾಗೂ ಕ್ರೀಡಾಂಗಣದಲ್ಲಿ ವಯೋವೃದ್ಧರು, 10 ವರ್ಷದ ಕೆಳಗಿನ ಮಕ್ಕಳು, ಅನಾರೋಗ್ಯ ಪೀಡಿತರು ಭಾಗವಹಿಸದಂತೆ ಎಚ್ಚರ ವಹಿಸಿ. ವೇದಿಕೆ ಅಲಂಕಾರ, ಪರೇಡ್ ತಂಡಗಳಿಗೆ ಲಘು ಉಪಹಾರ, ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಭದ್ರತೆ, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕಿçÃನಿಂಗ್ ಮುಂತಾದವಗಳ ಕುರಿತು ಈಗಾಗಲೇ ರಚಿಸಿದ ಸಮಿತಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಈ ಬಾರಿ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಜಿಲ್ಲಾ ಕ್ರೀಡಾಂಗಣದಲ್ಲಿ 2 ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶವಿದ್ದು, ಈ ಕುರಿತು ಸಂಬAಧಿಸಿದ ಇಲಾಖೆಗಳು ಕ್ರಮ ವಹಿಸಬೇಕು. ಕ್ರೀಡಾಂಗಣದಲ್ಲಿ 5-6 ತಂಡಗಳು ಮಾತ್ರ ಪರೇಡ್‌ನಲ್ಲಿ ಭಾಗವಹಿಸಬಹುದು. ಹೆಚ್ಚಿನ ತಂಡಗಳ ಸೇರ್ಪಡೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಕೊನೆ ಕ್ಷಣದ ಬದಲಾವಣೆಗೆ ಅವಕಾಶವಿಲ್ಲ. ಕ್ರೀಡಾಂಗಣದಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೆ.ಎಸ್.ಆರ್.ಟಿ.ಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ವಿವಿಧ ಕಾಮಗಾರಿಗಳ ಅನುಷ್ಠಾನ ಏಜೆನ್ಸಿಗಳು ಈ ಹಿಂದೆ ವಿವಿಧ ಇಲಾಖೆಗಳಿಂದ ನೀಡಲಾದ ಕಟ್ಟಡ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡು, ಉದ್ಘಾಟನೆಗೆ ಸಿದ್ಧವಿರುವ ಕಟ್ಟಡಗಳ ಮಾಹಿತಿಯನ್ನು ನೀಡಿ. ಉದ್ಘಾಟನೆಗೆ ಸಿದ್ಧವಿರುವ ಕಟ್ಟಡಗಳನ್ನು ನವೆಂಬರ್.01 ರಂದು ಲೋಕಾರ್ಪಣೆಗೊಳಿಸಿ ಸಂಬAಧಿಸಿದ ಇಲಾಖೆಗಳ ಸುಪರ್ದಿಗೆ ವಹಿಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ, ಜಂಟಿ ಕೃಷಿ ನಿರ್ದೇಶಕ ಶಿವಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನೀಲಕಂಠಪ್ಪ ಕಂಬಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error