ಶಿವಸೇನೆ, ಎಂಇಎಸ್ ಕುತಂತ್ರಗಳಿಗೆ, ಕಿತಾಪತಿಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ- ನಾರಾಯಣಗೌಡ್ರು

ಬೆಳಗಾವಿಯನ್ನು ದಕ್ಕಿಸಿಕೊಳ್ಳುವ ಹಗಲುಗನಸು ಕಾಣುವುದನ್ನು ಬಿಟ್ಟು ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಲಿ

ಬೆಂಗಳೂರು : ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಹಿಂದಕ್ಕೆ ಪಡೆಯುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಇದು ಕುಚೇಷ್ಟೆ. ಶಿವಸೇನೆಯವರಿಗೆ ಮೂರು ತಿಂಗಳಿಗೊಮ್ಮೆ ಗಡಿ ತಂಟೆ ಕೆದಕದಿದ್ದರೆ ತಿಂದಿದ್ದು ಅರಗುವುದಿಲ್ಲ. ಹೀಗೆ ಮಾತಾಡುವುದರಿಂದ ಉದ್ಧವ್ ಠಾಕ್ರೆ ಪದೇಪದೇ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ ಎಂದು ಕರವೇ ರಾಜ್ಯಾದ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ವಾಸ್ತವಾಂಶ ಏನು ಎಂಬುದನ್ನು ಉದ್ಧವ್ ಠಾಕ್ರೆ ಮರಾಠಿ ಇತಿಹಾಸಕಾರರಿಂದ ತಿಳಿದುಕೊಳ್ಳಲಿ. ಇಡೀ‌ ಮಹಾರಾಷ್ಟ್ರದ ಮುಕ್ಕಾಲು ಭಾಗ ಹಿಂದೆ ಕರ್ನಾಟಕವೇ ಆಗಿತ್ತು. ಮಹಾರಾಷ್ಟ್ರದ ಮೂಲೆಮೂಲೆಗಳಲ್ಲಿ ಸಿಕ್ಕಿರುವ ಶಾಸನಗಳು ಕನ್ನಡದಲ್ಲಿ ಬರೆಯಲ್ಪಟ್ಟಿವೆ. ಯಾರ ಪ್ರದೇಶವನ್ನು ಯಾರು ಆಕ್ರಮಿಸಿಕೊಂಡಿದ್ದಾರೆಂದು ಅವರು ಅರಿತು ಮಾತನಾಡಲಿ.

ಹಾಗೆ ನೋಡಿದರೆ, ಶಿವಸೇನೆಯವರು ಸದಾ ಕನ್ನಡಿಗರಿಗೆ ಚಿರ ಋಣಿಗಳಾಗಿರಬೇಕು. ಅವರ ಆರಾಧ್ಯ ದೊರೆ ಛತ್ರಪತಿ ಶಿವಾಜಿಯವರ ಎರಡನೇ ಮಗನಿಗೆ ಆಶ್ರಯ ನೀಡಿ‌ ಔರಂಗಜೇಬನ ಸೈನ್ಯದಿಂದ ಕಾಪಾಡಿದ್ದು ಕನ್ನಡದ ವೀರ‌ರಾಣಿ‌ ಕೆಳದಿ ಚೆನ್ನಮ್ಮ. ಕನ್ನಡಿಗರು ಆಶ್ರಯದಾತರು, ಆಕ್ರಮಣಕಾರಿಗಳಲ್ಲ ಎಂಬುದನ್ನು ಠಾಕ್ರೆ ಅರಿತುಕೊಳ್ಳಲಿ.

ಮೆಹರ್ ಚಂದ್ ಮಹಾಜನ್ ಆಯೋಗ ರಚನೆಯಾಗಿದ್ದೇ ಮಹಾರಾಷ್ಟ್ರದ ಒತ್ತಡದ ಮೇರೆಗೆ. ಆಯೋಗದ‌ ವರದಿಯನ್ನು ಒಪ್ಪಿಕೊಳ್ಳಲೇಬೇಕು ಎಂದು ಮಹಾರಾಷ್ಟ್ರ ರಾಜಕಾರಣಿಗಳು ಕರ್ನಾಟಕಕ್ಕೆ ತಾಕೀತು ಮಾಡಿದ್ದರು. ಆದರೆ ಆಯೋಗದ ವರದಿ ಬಂದನಂತರ ಮಹಾರಾಷ್ಟ್ರ ಸರ್ಕಾರ ಮಾತಿಗೆ ತಪ್ಪಿತು. ವರದಿಯನ್ನು ಒಪ್ಪುವುದಿಲ್ಲ ಎಂದು ತಗಾದೆ ತೆಗೆಯಿತು.

ಗಡಿವಿವಾದ ಪರಿಹಾರಕ್ಕೆ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬುದು ಕರ್ನಾಟಕ ಪ್ರತಿಪಾದಿಸಿಕೊಂಡು ಬಂದಿರುವ ನಿಲುವು. ಆದರೆ ಬೆಳಗಾವಿ ತಮಗೆ ಸೇರಬೇಕೆಂಬ ಕಾರಣಕ್ಕೆ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ಗೆ ಹೋಗಿದೆ. ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ನೀಡಿರುವ ಪ್ರಮಾಣಪತ್ರದಲ್ಲೂ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದೆಂದು ಹೇಳಿದೆ.

ವಾಸ್ತವ ಹೀಗಿರುವಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನಸಿಗೆ ಬಂದಂತೆ ಹೇಳಿಕೆ ನೀಡುವುದು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಇಂಥ ಬಾಯಿಮಾತಿನ ಹೇಳಿಕೆಗಳಿಂದ ಏನೂ ಬದಲಾಗುವುದಿಲ್ಲ. ಕೀಳು ರಾಜಕೀಯಕ್ಕಾಗಿ ಭಾಷಾ ಸಮುದಾಯಗಳ ನಡುವೆ ಬೆಂಕಿ ಹಚ್ಚುವುದು ದುಷ್ಟತನ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳು ಪ್ರಗತಿಪರ ರಾಜ್ಯಗಳಾಗಿದ್ದು, ಅತಿಹೆಚ್ಚು ತೆರಿಗೆ ಸಂಗ್ರಹಿಸಿಕೊಡುತ್ತವೆ. ಆದರೂ ಈ ರಾಜ್ಯಗಳ ಮೇಲೆ ಹಿಂದಿ ಸಾಮ್ರಾಜ್ಯಶಾಹಿ ದಬ್ಬಾಳಿಕೆ ನಡೆಸುತ್ತಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ನಡೆಸಬೇಕಿತ್ತು. ಉದ್ಧವ್ ಠಾಕ್ರೆಗೆ ಈ ಸಾಮಾನ್ಯ ಜ್ಞಾನ ಇಲ್ಲದಿರುವುದು ವಿಷಾಧನೀಯ

ಶಿವಸೇನೆ, ಎಂಇಎಸ್ ಕುತಂತ್ರಗಳಿಗೆ, ಕಿತಾಪತಿಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ. ಕರ್ನಾಟಕದ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ.‌ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ನೆಲೆವೀಡು ಬೆಳಗಾವಿಯನ್ನು ದಕ್ಕಿಸಿಕೊಳ್ಳುವ ಹಗಲುಗನಸು ಕಾಣುವುದನ್ನು ಬಿಟ್ಟು ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಲಿ ಎಂದು ಟಿ.ಎ.ನಾರಾಯಣಗೌಡ ಕಿವಿಮಾತು ಹೇಳಿದ್ದಾರೆ.

Please follow and like us:
error