ಶರಣ ಬದುಕನ್ನು ಬದುಕಿದ ಶ್ರೀಮತಿ ಮರಿಬಸಮ್ಮ ಶಿವಲಿಂಗಪ್ಪ ಕಂಠಿ

ನಿನ್ನೆ ಶೂನ್ಯದೊಳಗೆ ಬಯಲು ಬಯಲಾಗಿ ಲಿಂಗದೊಳಗೆ ಐಕ್ಯವಾದ ಶ್ರೀಮತಿ ಮರಿಬಸಮ್ಮ ಶಿವಲಿಂಗಪ್ಪ ಕಂಠಿಯವರ ಭೌತಿಕ ದೇಹದ ಅಂತ್ಯಸಂಸ್ಕಾರ ಇಂದು ದಿನಾಂಕ 9-12-2020 ರಂದು ಇಳಕಲ್ ನ ಲಿಂಗೈಕ್ಯ ವಿಜಯ ಮಹಾಂತೇಶ್ವರ ಶಿವಯೋಗಿಗಳವರ ಕರ್ತೃ ಗದ್ದುಗೆಯ ಆವರಣದಲ್ಲಿರುವ ಪತಿ ಎಸ್. ಆರ್. ಕಂಠಿಯವರ ಸಮಾಧಿಯ ಪಕ್ಕದಲ್ಲಿ ಜರುಗುತ್ತಿದೆ.ಇವರದೇನೂ ವಿಶೇಷ ಎಂದು ನೀವು ಕೇಳಬಹುದು ? ಮರಿಬಸಮ್ಮ ಕಂಠಿಯವರು ಇಪ್ಪತ್ತು ಮತ್ತು ಇಪ್ಪತ್ತೊಂದನೆಯ ಶತಮಾನದ ಚರಿತ್ರೆಯೇ ಸಾಕ್ಷಿ ಪ್ರಜ್ಞೆಯಾಗಿ ಬದುಕಿದವರು.ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಶಿವಲಿಂಗಪ್ಪ ರುದ್ರಪ್ಪ ಕಂಠಿ (ಎಸ್. ಆರ್.ಕಂಠಿ ) ಯವರ ಧರ್ಮ ಪತ್ನಿ. ಒಂದು ಶತಮಾನಕ್ಕೂ ಮಿಗಿಲಾಗಿ ಅಂದರೆ ಒಂದನೂರಾ ಮೂರು ವರ್ಷ ಶರಣ ಬದುಕನ್ನು ಬದುಕಿದ ಮರಿಬಸಮ್ಮ ಜನಿಸಿದ್ದು 1-1-1918 ರಂದು ಬಳ್ಳಾರಿ ಜಿಲ್ಲೆಯ ಕಣವಿನಹಳ್ಳಿಯ ಸುಸಂಸ್ಕೃತ ಲಿಂಗಾಯತ ಬಣಜಿಗ ಮನೆತನದಲ್ಲಿ.ಬ್ರಿಟೀಷರ ವಿರುದ್ಧ ಭಾರತದ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿದ್ದ ಕಾಲವದು.ಬಾಲ್ಯದಲ್ಲಿಯೇ ಅಕ್ಷರ ಜ್ಞಾನ ಪಡೆಯುವಷ್ಟು ಶಿಕ್ಷಣ ದೊರಕಲಿಲ್ಲವಾದರೂ, ಮನೆತನದ ಶರಣ ತತ್ವದ ಸಂಸ್ಕಾರವನ್ನು ಮೇಳವಿಸಿಕೊಂಡು ಬೆಳೆದುಬಂದ ಮರಿಬಸಮ್ಮ ಹತ್ತೊಂಬತ್ತನೂರಾ ಮೂವತ್ತಾರ (1936 ) ರಲ್ಲಿ ವೃತ್ತಿಯಿಂದ ವಕೀಲರು,ಸ್ವಾತಂತ್ರ ಹೋರಾಟಗಾರರು, ಶರಣ ಸಂಸ್ಕಾರ ಸಂಪನ್ನರಾದ ಇಳಕಲ್ಲಿನ ಶಿವಲಿಂಗಪ್ಪ ರುದ್ರಪ್ಪ ಕಂಠಿಯವರನ್ನು ವಿವಾಹವಾಗಿ ಗೃಹಸ್ಥ ಜೀವನವನ್ನು ಪ್ರಾರಂಭಿಸಿದ ಮರಿಬಸಮ್ಮನವರ ಜೀವನ ಎಲೆಯ ಮರೆಯ ಕಾಯಿಯಂತೆ. ಎಸ್. ಆರ್. ಕಂಠಿಯವರು ಕೊಲ್ಲಾಪುರದ ಕಾನೂನು ಮಹಾವಿದ್ಯಾಲಯದಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದ ವಿ.ವಿ. ಗಿರಿಯವರು,ಮಹಾರಾಷ್ಟ್ರದ ಚಾಣಾಕ್ಷ ರಾಜಕಾರಣಿ ಕೇಂದ್ರ ಸರ್ಕಾರದ ಗೃಹ ಮಂತ್ರಿಗಳು ಆಗಿದ್ದ ವೈ.ಬಿ.ಚವ್ಹಾಣರ ಸಹಪಾಠಿಗಳಾಗಿ ಕಾನೂನು ಪದವಿಯನ್ನು ಪಡೆದು ಬಂದು ವಕೀಲಿ ವೃತ್ತಿಯನ್ನು ಮಾಡಿದ್ದು ಕೇವಲ ಒಂದೆರಡು ವರ್ಷ.ಮಹಾತ್ಮಾ ಗಾಂಧೀಜಿಯವರ ಸೆಳೆತಕ್ಕೆ ಒಳಗಾಗಿ ಭಾರತ ಸ್ವಾತಂತ್ರ ಹೋರಾಟದಲ್ಲಿ ದುಮುಕಿ ಮನೆಯಲ್ಲಿ ಇದ್ದುದಕ್ಕಿಂತ ಜೈಲಿನಲ್ಲಿ ಇದ್ದದ್ದೆ ಜಾಸ್ತಿ.ಶ್ರೀಮತಿ ಮರಿಬಸಮ್ಮ ಕಂಠಿ ಅವರು ಸಹ ಗಂಡನ ಹಾದಿಯನ್ನೇ ತುಳಿದು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಮಹಾತ್ಮ ಗಾಂಧೀಜಿಯವರ ಪತ್ನಿ ಕಸ್ತೂರಬಾ ಅವರ ಜತೆಗೆ ಜೈಲು ವಾಸ ಅನುಭವಿಸಿ ಬಂದವರು.ಮರಿ ಬಸಮ್ಮನವರು ಸಾಂಪ್ರದಾಯಿಕ ಶಿಕ್ಷಣ ಪಡೆಯದಿದ್ದರೂ ಸಹ ಎಸ್. ಆರ್. ಕಂಠಿಯವರನ್ನು ಮದುವೆಯಾಗಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮೇಲೆ ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಕನ್ನಡ ಅಷ್ಟೇ ಅಲ್ಲದೆ ಸುಮಾರು ಹತ್ತು ಭಾಷೆಗಳನ್ನು ಕಲಿತು ಸುಲಲಿತವಾಗಿ ಮಾತನಾಡುತ್ತಿದ್ದರು.ಇವರಿಗೆ ಜನಿಸಿದ್ದು ಇಬ್ಬರು ಮಕ್ಕಳು. ಸ್ವಾತಂತ್ರ್ಯ ಹೋರಾಟದ ಜೊತೆಜೊತೆಗೆ ಮಕ್ಕಳಿಗೆ ಯೋಗ್ಯ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿ ಬೆಳೆಸಿದರು. ಮೊದಲನೆಯವರು ವೃತ್ತಿಯಲ್ಲಿ ವೈದ್ಯರಾಗಿದ್ದ ಡಾಕ್ಟರ್ ಚಂದ್ರಶೇಖರ ಕಂಠಿ,ಮತ್ತೊಬ್ಬರು ಅಮೇರಿಕಾದ ಮಿಚಿಗನ್ ಪ್ರಾಂತದ ಸಗಿನಾವ್ ವ್ಯಾಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಾ, ವಿಶ್ವದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಗೌರವ ಪ್ರೊಫೆಸರ್ ಆಗಿ ಸೇವೆಯನ್ನು ಮಾಡುತ್ತಿರುವ ಅರ್ಥಶಾಸ್ತ್ರಜ್ಞ ಡಾ.ಮಹೇಂದ್ರ ಕಂಠಿ.1946 ರಲ್ಲಿ ಎಸ್. ಆರ್.ಕಂಠಿಯವರು ಮುಂಬೈ ವಿಧಾನಸಭೆಗೆ ಆಗಿನ ಹಳೆಯ ಬಾಂಬೆ ಪ್ರಾಂತ್ಯದಲ್ಲಿದ್ದ ಉತ್ತರ ಕರ್ನಾಟಕದ ವಿಜಾಪುರ ಜಿಲ್ಲೆಯ ದಕ್ಷಿಣ ಭಾಗದ ಶಾಸಕರಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು.ಅದಾಗಲೇ ಸ್ವಾತಂತ್ರ್ಯ ಹೋರಾಟದ ಮೂಲಕ ಹೆಸರುವಾಸಿಯಾಗಿದ್ದ ಇವರ ವಿದ್ವತ್ತನ್ನು ಗಮನಿಸಿ ಅಂದಿನ ಮುಂಬಯಿ ಪ್ರಾಂತ್ಯದ ಮುಖ್ಯಮಂತ್ರಿಗಳಾಗಿದ್ದ ಬಿ.ಜಿ.ಖೇರ್ ರವರು, ಇವರ ಜೊತೆಗೆ ಶಾಸನಸಭೆಗೆ ಆರಿಸಿ ಬಂದಿದ್ದ ಬಿ.ಡಿ.ಜತ್ತಿ ಮತ್ತು ವೈ. ಬಿ ಚವಾಣ್ ರ ಜೊತೆಗೆ ಇವರನ್ನು ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಸರಕಾರದ ಕೃಷಿ, ಆಹಾರ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆಗಳಿಗೆ ನೇಮಿಸಿದ್ದರು.ಸ್ವಾತಂತ್ರ್ಯಾನಂತರ 1952 ರಲ್ಲಿ ಮುಂಬೈ ವಿಧಾನಸಭೆಗೆ ಹುನಗುಂದ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.ಅಂದಿನ ಮುಂಬೈ ಪ್ರಾಂತದ ಮುಖ್ಯಮಂತ್ರಿಗಳಾಗಿದ್ದ ಮೊರಾರ್ಜಿ ದೇಸಾಯಿಯವರು ಇವರ ವಿದ್ವತ್ತು ಮತ್ತು ಚಾಣಾಕ್ಷತನವನ್ನು ಕಂಡು ಮುಂಬೈ ವಿಧಾನಸಭೆಯ ಉಪಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.ಜೊತೆಜೊತೆಗೆ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪಾಲ್ಗೊಂಡು
ನವ ಮೈಸೂರು ರಾಜ್ಯ ಉದಯವಾಗಲು ಕಾರಣರಾದರು.ಮುಂದೆ ನವ ಮೈಸೂರು ರಾಜ್ಯದಲ್ಲಿ ಶಿಕ್ಷಣ, ಕಂದಾಯ ಹಾಗೂ ಕಾನೂನು ಮಂತ್ರಿಗಳಾಗಿ ತಮ್ಮದೇ ಛಾಪನ್ನು ಮೂಡಿಸಿದವರು. ಮುಂಬಯಿ ಮತ್ತು ಕರ್ನಾಟಕ ಎರಡು ರಾಜ್ಯಗಳ ವಿಧಾನಸಭಾ ಉಪಸಭಾಧ್ಯಕ್ಷರಾಗಿ,ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರದು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ ತಮ್ಮ ಹೆಜ್ಜೆಯ ಗುರುತನ್ನು ಮೂಡಿಸಿ ಹೋದವರು ಎಸ್. ಆರ್. ಕಂಠಿಯವರು.ಹಾಗೆಯೇ ಕಿತ್ತೂರು ಚನ್ನಮ್ಮನ ನಾಡಿನಲ್ಲಿ ಬಾಲಕಿಯರಿಗಾಗಿ ಸೈನಿಕ ವಸತಿ ಶಾಲೆಯನ್ನು ಸ್ಥಾಪಿಸಲು ಪಣತೊಟ್ಟು ಹತ್ತೊಂಬತ್ತನೂರಾ ಅರುವತ್ತೇಳರಲ್ಲಿ ಈಗಿನ ಕಿತ್ತೂರಿನ ಪೂರ್ವಕ್ಕಿರುವ ಬೆಟ್ಟದ ಮೇಲೆ ಅಂದಿನ ಪ್ರಧಾನಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರಿಂದ ಶಿಲಾನ್ಯಾಸವನ್ನು ನೆರವೇರಿಸಿ ಸೈನಿಕ ಶಾಲೆಯನ್ನು ಪ್ರಾರಂಭಿಸಿ ತಮ್ಮ ಕೊನೆಯ ಉಸಿರನ್ನು ಅಲ್ಲಿಯೇ ಕಳೆದರು. ಎಸ್.ಆರ್. ಕಂಠಿಯವರ ಈ ಎಲ್ಲ ಯಶಸ್ಸಿನ ಹಿಂದಿನ ಶಕ್ತಿ ಮತ್ತು ಸ್ಫೂರ್ತಿಯಾಗಿದ್ದವರು ಶ್ರೀಮತಿ ಮರಿಬಸಮ್ಮ ಕಂಠಿಯವರು.ಪತಿ ಸ್ವಾತಂತ್ರ್ಯ ಹೋರಾಟ, ರಾಜಕಾರಣವೆಂದು ದೇಶ ಸೇವೆಯಲ್ಲಿ ಮಗ್ನರಾಗಿದ್ದಾಗ ಸ್ವಲ್ಪವೂ ವಿಚಲಿತಳಾಗದೆ, ಗೊಣಗದೆ, ಗುಣಗುಡದೆ ಮನೆ ಮಕ್ಕಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದ ಸಹನಾಮಯಿ.ಎಸ್.ಆರ್. ಕಂಠಿಯವರು ಇರುವಾಗಲೇ ಹಿರಿಯ ಮಗ ಡಾಕ್ಟರ್ ಚಂದ್ರಶೇಖರ ಕಂಠಿ ಅವರನ್ನು ಕಳೆದುಕೊಂಡರು. ಮುಂದೆ ಹತ್ತೊಂಬತ್ತನೂರಾ ಅರುವತ್ತೊಂಬತ್ತ ( 1969 ) ರಲ್ಲಿ ಪತಿ ಎಸ್.ಆರ್. ಕಂಠಿಯವರನ್ನು ಕಳೆದುಕೊಂಡ ಮರಿಬಸಮ್ಮನವರು ಒಂಟಿಯಾದರೂ ಹೆದರಲಿಲ್ಲ, ಕುಗ್ಗಲಿಲ್ಲ.ಆಸ್ತಿ ಅಂತಸ್ತಿನ ಮೋಹ ಎಂದಿಗೂ ಇವರನ್ನು ಆವರಿಸಲಿಲ್ಲ.ಇಳಕಲ್ಲನಲ್ಲಿರುವ ತಮ್ಮ ಅರಮನೆಯಂಥ ಮನೆಯನ್ನು ಬಾಲಕಿಯರ ಶಾಲೆ ಸ್ಥಾಪನೆ ಮಾಡಲು ದಾನ ಮಾಡಿದವರು.ಕಂಠಿಯವರು ಮಂತ್ರಿಗಳಾಗಿ ಮುಖ್ಯಮಂತ್ರಿಗಳಾಗಿದ್ದಾಗ ಬೆಂಗಳೂರಿನಲ್ಲಿ ವಾಸವಿದ್ದದ್ದು ಈಗಿನ ಕೆ.ಪಿ.ಎಸ್.ಸಿ.ಯ ಆವರಣದಲ್ಲಿರುವ ‘ಸುದರ್ಶನ ಅತಿಥಿ ಗೃಹ’ದಲ್ಲಿ.ಅಂದು ಮಕ್ಕಳು ಕೆ.ಆರ್. ಮಾರ್ಕೆಟ್ ನಲ್ಲಿರುವ ಸರಕಾರಿ ಶಾಲೆಗೆ ನಡೆದೇ ಹೋಗುತ್ತಿದ್ದರು.ಮನಸ್ಸು ಮಾಡಿದ್ದರೆ ಸರ್ಕಾರದ ವಾಹನಗಳಲ್ಲಿ ಕಳುಹಿಸಬಹುದಿತ್ತು. ಆದರೆ ಸರ್ಕಾರದ ಹಣವನ್ನು ಸ್ವಂತಕ್ಕೆ ದುರುಪಯೋಗ ಪಡಿಸಿಕೊಳ್ಳುವ ಮನಸ್ಥಿತಿ ಇವರದಾಗಿರಲಿಲ್ಲ.ಒಟ್ಟಾರೆ ನೂರಾ ಮೂರು ವರ್ಷಗಳ ಬದುಕಿನಲ್ಲಿ ( 18 ವರ್ಷ ಬಾಲ್ಯ +33 ವರ್ಷ ಗೃಹಸ್ಥ ಜೀವನ+52 ವರ್ಷ ಸನ್ಯಾಸಿನಿಯಂತೆ ಶರಣ ಜೀವನ )ಸುಖದ ಗೆರೆಗಳು ಕ್ಷಣ ಮಾತ್ರ ಮಿಂಚಿನಂತೆ ಬಂದು ಹೋಗಿವೆ. ನಾನು ಇವರನ್ನು ಮೊಟ್ಟ ಮೊದಲ ಸಲ ಕಂಡು ಮಾತನಾಡಿಸಿದ್ದು, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ನಮ್ಮ ಸಮಾಜದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಶಾಸಕರಿಗೆ 2004 ರಲ್ಲಿ ಬೆಂಗಳೂರಿನ ವಿಜಯನಗರದಲ್ಲಿರುವ ‘ಭಂಟರ ಕಲ್ಯಾಣಮಂಟಪ’ದಲ್ಲಿ ಸನ್ಮಾನ ಸಮಾರಂಭವನ್ನು ಶ್ರೀಮತಿ ಮರಿಬಸಮ್ಮ ಕಂಠಿಯವರ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಾಗ.ಅಂದು ಕಾರ್ಯಕ್ರಮಕ್ಕೆ ಆಗಮಿಸಿ ನೂತನ ಶಾಸಕರುಗಳಿಗೆ ಭ್ರಷ್ಟಾಚಾರಮುಕ್ತ ಸಮಾಜದ ಗುರಿ ನಿಮ್ಮದಾಗಿರಲಿ ಎಂದು ಆಶೀರ್ವದಿಸಿದ್ದು ನನ್ನ ಸ್ಮೃತಿಪಟಲದಲ್ಲಿ ಇನ್ನೂ ಅಚ್ಚಳಿಯದೇ ನಿಂತಿದೆ.ಮುಂದೆ ನನ್ನ ಮಕ್ಕಳಾದ ಸಂಜನಾ ಮತ್ತು ಮಾನಸ ಕಿತ್ತೂರಿನ ರಾಣಿ ಚನ್ನಮ್ಮ ಸೈನಿಕ ಶಾಲೆಯಲ್ಲಿ ಓದುತ್ತಿದ್ದಾಗ ಮೇಲಿಂದ ಮೇಲೆ ಬೆಟ್ಟಿಯಾಗಿ,ಇವರ ಸಾಮೀಪ್ಯದಲ್ಲಿಯೆ ಕುಳಿತು ಮಾತನಾಡಿ ಪುಳಕಿತನಾಗಿದ್ದೇನೆ.ಆವಾಗೆಲ್ಲ ಇಪ್ಪತ್ತನೆಯ ಶತಮಾನದ ಭಾರತ ಸ್ವಾತಂತ್ರ್ಯ ಹೋರಾಟದ ಕಥನಗಳನ್ನು, ಪತಿ ಎಸ್.ಆರ್.ಕಂಠಿಯವರ ಹೋರಾಟ,ಆದರ್ಶಗಳು ಮತ್ತು ಅವರ ಜತೆಗೆ ಕಳೆದ ಮಹನೀಯರುಗಳನ್ನು ನೆನಪಿಸಿಕೊಳ್ಳುತ್ತಾ ಮಾತನಾಡುತ್ತಿದ್ದರು.ಒಂದು ಶತಮಾನ ಕಳೆದಿದ್ದರೂ ಶ್ರೀಮತಿ ಮರಿಬಸಮ್ಮ ಕಂಠಿಯವರ ಕಣ್ಣಿಗೆ ಚಾಳೀಸು ಬಂದಿರಲಿಲ್ಲ.ಕೊನೆಯ ಉಸಿರಿನವರೆಗೂ ಪ್ರತಿನಿತ್ಯ ಕನ್ನಡ ಮತ್ತು ಇಂಗ್ಲೀಷ್ ದಿನಪತ್ರಿಕೆಗಳನ್ನು ಓದುವುದು ಇವರ ಪ್ರೀತಿಯ ಹವ್ಯಾಸಗಳಲ್ಲೊಂದಾಗಿತ್ತು. ಬಹುಶಃ ಇಂದಿನ ದಿನಗಳಲ್ಲಿ ನಡೆಯುತ್ತಿರುವ “ಕೌನ್ ಬನೇಗಾ ಕರೋಡ್ ಪತಿ” ಎನ್ನುವ ಸ್ಪರ್ಧೆಯಲ್ಲಿ ಶ್ರೀಮತಿ ಮರಿಬಸಮ್ಮ ಕಂಠಿಯವರು ಭಾಗವಹಿಸಿದ್ದರೆ ಖಂಡಿತ ಏಳು ಕೋಟಿ ರೂಪಾಯಿಗಳನ್ನು ಗೆಲ್ಲುತ್ತಿದ್ದರೇನೋ ? ಅಷ್ಟೊಂದು ಸ್ಮರಣಶಕ್ತಿ ಇವರದಾಗಿತ್ತು. ಭಾರತದ ಇತಿಹಾಸ, ಸಂಸ್ಕೃತಿ, ಶಿಕ್ಷಣ, ರಾಜಕಾರಣ, ಕಲ್ಯಾಣ ಕ್ರಾಂತಿ ಇವರ ಅಚ್ಚುಮೆಚ್ಚಿನ ವಿಷಯಗಳಾಗಿದ್ದವು.ಮಹಾತ್ಮ ಬಸವೇಶ್ವರರು ಐಕ್ಯವಾದ ಸ್ಥಳ ಕೂಡಲಸಂಗಮ,ಇಳಕಲ್ ನ ವಿಜಯ ಮಹಾಂತೇಶ್ವರ ಮಠ ಮತ್ತು ಹುಬ್ಬಳ್ಳಿಯ ಮೂರು ಸಾವಿರ ಮಠ ಇವರ ಅಚ್ಚುಮೆಚ್ಚಿನ ಪವಿತ್ರ ತಾಣಗಳಾಗಿದ್ದವು. ಎರಡು ಸಾವಿರದ ಒಂಬತ್ತ (2009)ರಿಂದ ನಿನ್ನೆಯವರೆಗೆ ತಮ್ಮ ಪತಿ ಕೊನೆಯುಸಿರೆಳೆದ ಕರ್ಮಭೂಮಿ ಕಿತ್ತೂರಿನ ಸೈನಿಕ ವಸತಿ ಶಾಲೆಯ ಅಂಗಳದ ಬಯಲಿನಲ್ಲಿ ಬಯಲಾದರು.ಇವರ ಚಿರಂಜೀವಿ ಡಾ.ಮಹೇಂದ್ರ ಕಂಠಿಯವರು ಕಿತ್ತೂರಿನ ರಾಣಿ ಚನ್ನಮ್ಮಾ ಅಂತರಾಷ್ಟ್ರೀಯ ಸೈನಿಕ ಶಾಲೆಯ ಚೇರ್ಮನ್ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಶರಣ ಸಮ್ಮತ ಸಾರ್ಥಕ ಬದುಕನ್ನು ಬದುಕಿದ ಶ್ರೀಮತಿ ಮರಿಬಸಮ್ಮ ಕಂಠಿಯವರ ಜೀವನ ಇಂದಿನ ಹೆಣ್ಣು ಮಕ್ಕಳಿಗೆ ಆದರ್ಶ.ಈ ತ್ಯಾಗಮಯಿ ತಾಯಿಯನ್ನು ನಾನು ಹಲವಾರು ಸಲ ಸಮೀಪದಿಂದ ಕಂಡು ಮಾತನಾಡಿದ್ದೇನಲ್ಲ ಎನ್ನುವ ಸಾರ್ಥಕ ಭಾವ ನನ್ನದು. ಶ್ರೀಮತಿ ಮರಿಬಸಮ್ಮ ಕಂಠಿಯವರ ಆತ್ಮಕ್ಕೆ ಮಹಾತ್ಮ ಬಸವೇಶ್ವರ ಶಾಂತಿಯನ್ನು ಕರುಣಿಸಲಿ…ಗವಿಸಿದ್ದಪ್ಪ ವೀ.ಕೊಪ್ಪಳ

Please follow and like us:
error