ವೈಕುಂಠ ಗೆಸ್ಟ್ ಹೌಸಿನಿಂದ ಭರ್ರೆಂದು ಹರಿವ ನೀರಿನ ಅಲೆಯವರೆಗೆ….

ಆಗಸ್ಟ್ ತಿಂಗಳು ಬಂತೆಂದರೆ ಸಾಕು, ಟಿ.ಬಿ.ಡ್ಯಾಂನಲ್ಲಿ ನೀರು ಬಿಡುತ್ತಾರೆ. ತುಂಗಭದ್ರಾ ನದಿ ಭರ್ತಿಯಾಗಿ ನೀರು ಭರ್ರೆಂದು‌ ಕ್ರೆಸ್ ಗೇಟ್ ಮೂಲಕ ಧುಮ್ಮಿಕ್ಕು ತ್ತಿದರೆ ಹತ್ತಿರದಿಂದ ನೋಡಲು ಅದೊಂದು ದೊಡ್ಡ ಖುಷಿ. ಇದಕ್ಕಾಗಿ ಆಗಸ್ಟ್ ಹದಿನೈದರಂದು ಒಂದಿಷ್ಟು ದುಡ್ಡು‌ ಹೊಂಚಿಕೊಂಡು ಹಿಂಡು ಹುಡುಗರು ಹಗರಿಬೊಮ್ಮನಹಳ್ಳಿಯಿಂದ ಬಸ್‌ ಹತ್ತಿದರೆ ಹೊಸಪೇಟೆಯ ಎ.ಪಿ.ಎಂ.ಸಿ ಸರ್ಕಲ್ ನಿಂದ ಬಸ್ಸಿಗೂ, ಆಟೋಕ್ಕೂ ಕಾಯದೇ ಡ್ಯಾಂ ತನಕ ಕಾಲೆಳೆದುಕೊಂಡು ಹೋಗಿಬಿಡುವ ಹುಮ್ಮಸ್ಸು…

ಒಮ್ಮೆ ಮಾತ್ರ ಯಾಶಿಕಾ ಕ್ಯಾಮೆರಾ ಇದ್ದ ಗೆಳೆಯ ಶಿವಕುಮಾರ್ ಹೊಸ ಸೆಲ್ ಹಾಕಿಸಿಕೊಂಡು‌ ಟೇಪ್ ರೆಕಾರ್ಡರ್ ಕೈಯಲ್ಲಿ ಹಿಡಿದ ಹುಂಬ ವಿರುಪ, ಚಾವಿ-ಸೂರಿ, ಪಾಟಿ ಶಿವು, ರಾಟಿ ಬಸವ ಅಲಿಯಾಸ್ ವಾಣಿ, ಕಾಯ್ಗಡ್ಡಿ ಕೊಟ್ರ, ಅಶೋಕ, ಸಲ್ಮಾನ್ ಕಾಕಾ, ಇನ್ನು ಕೆಲವು‌ ಹುಡುಗರ ಹಿಂಡು ಕಾಲೆಳೆಯುತ್ತಲೇ ಸಾಗುವ ಮಧ್ಯೆ “ದೇಖಾ ಹೈ ಪೆಹಲಿ ಬಾರ್ ಸಾಜನ್ ಕಿ ಆಂಖೋ ಮೆ ಪ್ಯಾರ್ ” ಹಾಡು ಒದರಿಸುತ್ತಿದ್ದರೆ ಅದೆಷ್ಟು ಜನ‌ ನಮ್ಮ ಗುಂಪನ್ನು ನೋಡಿ ನಕ್ಕಿದ್ದರೋ ಏನೋ. ಯಾವುದೂ ಲೆಕ್ಕವಿಲ್ಲದೇ ವೈಕುಂಠ ಗೆಸ್ಟ್ ಹೌಸ್ ತನಕ ಕಾಲುದಾರಿಯಿಂದ ಹತ್ತಿ‌ ಇಳಿದು ಕೇಕೆ ಹಾಕಿ ಫೋಟೋ ತೆಗೆಸಿಕೊಂಡು ನಕ್ಕಿದ್ದೇ ನಕ್ಕಿದ್ದು.

ಸಂಜೆತನಕ ತಿರುಗಾಡಿ ವಾಪಸ್ ಮತ್ತೆ ನಡೆದು‌ ಹೊಸಪೇಟೆಯಲ್ಲಿ ರಾತ್ರಿ ಚಂದ್ರಶೀಲಾದಲ್ಲಿ ಉಂಡು ಬೇಬಿಸ್ ಡೇ ಔಟ್ ಸಿನಿಮಾ ನೋಡಿ ಊರು ಸೇರುವುದರಲ್ಲಿ ಮಧ್ಯರಾತ್ರಿ….

ಅದಾಗಿ ವರ್ಷಗಳ ಕಾಲ ಕಳೆದ ನಂತರ ಆಗಸ್ಟ್ ಹದಿನೈದರಂದು ಡ್ಯಾಂ ಗೆ ಹೋಗುವ ಇಂಟರೆಸ್ಟೇ ಹೋಗಿಬಿಟ್ಟಿತು… ಕಾರಣ ಬೇರೇನಲ್ಲ, ಅಲ್ಲಿಗೆ ಬರುವ ಅತಿರೇಕದ ವರ್ತನೆ ಹುಡುಗರು, ಕೀಟಲೆ ಮಾಡಿ ಹೆಣ್ಣು ಮಕ್ಕಳನ್ನು ಸತಾಯಿಸುವುದು, ಗುಂಪುಗಳ ಗಲಾಟೆ, ಕಳ್ಳತನ ಇವುಗಳನ್ನು ನೋಡಿ ಕೇಳಿದ್ದಾಗಿತ್ತು. ಬರಬರುತ್ತಾ ಜಂಗುಳಿಯಿಂದಾಗಿ ವಾಹನ ದಟ್ಟಣೆ, ಓಡಾಟದ ಸಮಸ್ಯೆ ಕೂಡ..

ಮಳೆಗಾಲ ಶುರುವಾಗಿ ಡ್ಯಾಂನಲ್ಲಿ ನೀರು ಭರ್ತಿಯಾಗುತ್ತಿರುವ ಸಮಯದಲ್ಲಿ ತೀರ ಗದ್ದಲವಿಲ್ಲದ ಆಗಸ್ಟ್ ಹದಿನೈದು ಅಲ್ಲದ ದಿನಗಳಲ್ಲಿ ನೋಡಿ ಬರುವುದು ರೂಢಿಯಾಯಿತು.. ವರ್ಷಗಳ ನಂತರ ಈ ಮಧ್ಯೆ ನೌಕರಿ ಆ ನಂತರ ಪ್ರೋಟೋಕಾಲ್ ನಂತೆ ಮೇಲಧಿಕಾರಿ ಗಳ ಪ್ರವಾಸ ಕಾರ್ಯಕ್ರಮಗಳಿಗೆಂದೇ‌ ವೈಕುಂಠ ಗೆಸ್ಟ್ ಹೌಸ್ ಗೆ ತಿರುಗುವುದು‌ ಮಾಮೂಲಾಯ್ತು. ಜೊತೆಗೆ ಫೋಟೋಗ್ರಫಿ ಹುಚ್ಚಿಗೆ ಬಿದ್ದ‌ ಮೇಲಂತೂ ಕ್ಯಾಮೆರಾ ಜೊತೆಗೇ ಹೊರಡು ವುದಾಯ್ತು.

ಹಿಂಗೆ ಹೋಗಿ ವಾಕಿಂಗ್ ಮುಗಿಸಿಕೊಂಡು ಬಂದಂತೆ ಹೋದರೆ ಯಾವ ಪ್ರವಾಸಿ ತಾಣದ, ವಾತಾವರಣದ ಸವಿಯನ್ನು ಅನುಭವಿಸಿದಂತಾಗುವುದಿಲ್ಲ. ಹೋದರೆ ಅದಕ್ಕೆಂದೇ ಸಮಯ ಮನಸ್ಸನ್ನು ಮೀಸಲಿಟ್ಟು ನಡೆದರೆ ಆ ಟ್ರಿಪ್ಪಿನ ತೃಪ್ತಿ . ಡ್ಯಾಂ ಅಂತಲ್ಲ ಎಲ್ಲೇ ಪ್ರವಾಸಿ ತಾಣಗಳಿಗೆ ಹೋದರೂ ಕೂಡ. ಈಗೀಗ ನಾನು ಡ್ಯಾಂ ಗೆ ಹೋದರೆ ಸುಮ್ಮನೇ ಹರಿವ ನೀರನ್ನು, ಭರ್ರೆನ್ನುವ ಸೌಂಡನ್ನು ನೋಡುತ್ತಾ ಕೇಳುತ್ತಾ ಒಂದಿಷ್ಟು ಹೊತ್ತು ಕುಂತುಬಿಡುತ್ತೇನೆ…

ಈ ಬಾರಿ ಮಗನು ನನ್ನೊಂದಿಗಿದ್ದ. ದೂರದಿಂದ ಅನೇಕ ಬಾರಿ ನೋಡಿದ್ದರೂ ಇದೇ ಮೊದಲ ಬಾರಿ ಅವನು ಅಷ್ಟು ಹತ್ತಿರದಿಂದ ಡ್ಯಾಂನಿಂದ ಹರಿವ ನೀರನ್ನು, ಆಣೆಕಟ್ಟಿನ ಕೆಳಭಾಗದಿಂದ ನೋಡಿ ಖುಷಿಪಟ್ಟ. ಆಶ್ಚರ್ಯಪಟ್ಟು, ಥೇಟ್ ಗೆಳೆಯನಂತೆ ಖುಷಿ ಹಂಚಿಕೊಂಡ. ಅವನೇ ಈ ಫೋಟೋ ತೆಗೆಯಲು ಬಹುಶಃ ಕಾರಣವಾದ.

ಅಮರದೀಪ್ P S

Please follow and like us:
error