ಕೊಪ್ಪಳ : ಹಾವು ಕಚ್ಚಿ ಸಹೋದರರಿಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪೂರ ಗ್ರಾಮದ ಜಮೀನೊಂದರ ಜರುಗಿದೆ.
ಪ್ರಶಾಂತ ಹನುಮಪ್ಪ ಜಿಗಳೂರು (20), ಶಿವಕುಮಾರ ಹನುಮಪ್ಪ ಜಿಗಳೂರು (15) ಹಾವಿಗೆ ಬಲಿಯಾಗಿರುವ ನತದೃಷ್ಟರು. ತೋಟದ ಮನೆಯಲ್ಲಿ ವಾಸವಾಗಿದ್ದ ಕುಟುಂಬಕ್ಕೆ ಆಸರೆಯಾಗಿದ್ದ ಯುವಕರಿಬ್ಬರು ಜಾನುವಾರುಗಳಿಗೆ ಮೇವು ತರಲು ಬಣವಿಯಲ್ಲಿ ಮೇವು ಹೊರಹಾಕುವಾಗ ವಿಷ ಸರ್ಪವೊಂದು ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದಾರೆ. ಹಾವು ಕಚ್ಚಿದ ಬಳಿಕ ಚಿಕಿತ್ಸೆಗಾಗಿ ಹನುಮನಾಳದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುವ ಮಾರ್ಗದ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ. ಹನುಮಪ್ಪ ಜಿಗಳೂರುನಿಗಿದ್ದ ಇಬ್ಬರು ಮಕ್ಕಳು ಹಾವಿಗೆ ಬಲಿಯಾದ ಹಿನ್ನಲೆಯಲ್ಲಿ ಕುಟುಂಬವು ಇಂದು ಅನಾಥವಾಗಿದೆ. ಈ ಇಬ್ಬರು ಸಹೋದರರ ಸಾವಿನ ಸುದ್ದಿಯಿಂದ ರಂಗಾಪೂರ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿಕೊಂಡಿದೆ. ಕೃಷಿಯನ್ನೆ ನಂಬಿಕೊಂಡಿದ್ದ ಕುಟುಂಬಕ್ಕೆ ಇಬ್ಬರು ಸಹೋದರರು ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಆಸರೆಯಾಗಿದ್ದರು.
