ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಹಂಪಿ ವಿ.ವಿ. ವಿದ್ಯಾರ್ಥಿಗಳ ಮನವಿ

ಹಂಪಿ :  ಸಂಶೋಧನಾರ್ಥಿಗಳಿಗೆ ಬಾಕಿ ಉಳಿಸಿಕೊಂಡಿರುವ ಮಾಸಿಕ ಸಹಾಯಧನ ಬಿಡುಗಡೆ ಮಾಡುವಂತೆ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ನಿಲಯವನ್ನು ಪೂರ್ಣಗೊಳಿಸಿ ಪ್ರಾರಂಭಿಸಲು ಒತ್ತಾಯಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಇಂದು ಮನವಿ ಸಲ್ಲಿಸಲಾಯಿತು..
ಕನ್ನಡ ವಿಶ್ವವಿದ್ಯಾಲಯವು ಕನ್ನಡ ನಾಡು, ನುಡಿ, ಸಂಸ್ಕೃತಿಗಳ ವಿಶೇಷ ಅಧ್ಯಯನಕ್ಕಾಗಿ ಮತ್ತು ಸಂಶೋಧನೆಗಾಗಿಯೇ 1991 ರಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯವಾಗಿದೆ. ಚಂದ್ರಶೇಖರ ಕಂಬಾರ, ಎಂ.ಎಂ. ಕಲಬುರ್ಗಿ ಅವರಂತಹ ಹಿರಿಯ ಸಾಹಿತಿಗಳು ಕಟ್ಟಿಸಿದ ವಿಶ್ವವಿದ್ಯಾಲಯ ಇದಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವಂತಹ ವಿದ್ವಾಂಸರನ್ನು ಒಳಗೊಂಡಿದೆ. ಇಂತಹ ವಿಶ್ವವಿದ್ಯಾಲಯದಲ್ಲಿ ಸಂಶೋಧನಾರ್ಥಿಗಳಾಗಿ ದಾಖಲಾತಿ ಪಡೆಯುವುದು ಎಮ್ಮೆಯ ವಿಷಯವೇ ಸರಿ.
ಈ ವಿಶ್ವವಿದ್ಯಾಲಯಕ್ಕೆ ಸರ್ಕಾರಗಳ ನಿರ್ಲಕ್ಷತನ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಿಂದಾಗಿ ಇಲ್ಲಿನ ಸಂಶೋಧನಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದು ಸಂಶೋಧನೆಯನ್ನು ಕೈಗೊಂಡಿರುವ ಸುಮಾರು 500ಕ್ಕೂ ಹೆಚ್ಚು ದಲಿತ ಸಮುದಾಯದ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇವರಲ್ಲಿ ಹಲವರಿಗೆ ವಿಶ್ವವಿದ್ಯಾಲಯವು ಕೊಡುವ ಮಾಸಿಕ ಸಹಾಯಧನವನ್ನು 2016 – 17, 2017 – 18 ಮತ್ತು 2018 – 19 ರಿಂದ ನೀಡದಿರುವುದು ಮಾತ್ರ ದುರಂತ.
ಈ ವಿಷಯವಾಗಿ ಹಲವು ಬಾರಿ ವಿಶ್ವವಿದ್ಯಾಲಯಕ್ಕೆ ಮತ್ತು ಸರಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ರಾಜ್ಯದ ಗಮನ ಸೆಳೆಯುವಂತೆ ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಮುಂದೆ ಮೂರು ದಿನಗಳ ಕಾಲ ಹೋರಾಟವನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ಸಂಶೋಧನಾರ್ಥಿಗಳಿಗೆ ಮಾನ್ಯ ಉಪ ಕುಲಪತಿಗಳು ನೀಡಿದ ಭರವಸೆಯನ್ನು ನಂಬಿ ಅವರ ಮೇಲಿನ ಗೌರವದಿಂದ ಅಂದು ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು.
ಆಗಸ್ಟ್ ತಿಂಗಳಿನಲ್ಲಿ 2017 – 18 ಮತ್ತು  2018 – 19 ನೇ ಸಾಲಿನ ವಿದ್ಯಾರ್ಥಿಗಳಿಗೆ ಹಿಂದಿನ ಕುಲಪತಿಗಳು ಹಾಗೂ ಅಂದಿನ ಆಡಳಿತ ಮಂಡಳಿಯು ಸಂಶೋಧನಾ ಸಹಾಯಧನವನ್ನು ಕೊಡದೆ ಬಾಕಿ ಉಳಿಸಿಕೊಂಡಿರುವ ಕಾರಣದಿಂದಾಗಿ ಮತ್ತು ವಿಶ್ವವಿದ್ಯಾಲಯದಲ್ಲಿ ಹಣಕಾಸಿನ ಕೊರತೆ ಇರುವುದರಿಂದ ತಕ್ಷಣ ಸಹಾಯಧನ ನೀಡಲು ಸಾಧ್ಯವಿಲ್ಲವೆಂದು ಅನುದಾನ ಬಂದ ತಕ್ಷಣ ಸಹಾಯಧನವನ್ನು ನೀಡುತ್ತೇವೆಂದು ಭರವಸೆ ನೀಡಲಾಗಿತ್ತು. ನಂತರ ವಿಭಾಗಗಳಿಗೆ ನೀಡಿದ ಸುತ್ತೋಲೆಯಲ್ಲಿ ಎಸ್ಸಿ ಸಂಶೋಧನಾರ್ಥಿಗಳಿಗೆ ಒಂದು ತಿಂಗಳು ಹಾಗೂ ಎಸ್ಟಿ ಸಂಶೋಧನಾರ್ಥಿಗಳಿಗೆ ಎರಡು ತಿಂಗಳು ಮಾತ್ರ ಸಹಾಯಧನ ನೀಡುತ್ತೇವೆಂದು ಗೊಂದಲವನ್ನು ಉಂಟುಮಾಡಲಾಗಿತ್ತು. ನಂತರದಲ್ಲಿ 2019 ಏಪ್ರಿಲ್ ನಿಂದ ಸೆಪ್ಟೆಂಬರ್ ತಿಂಗಳ ವರೆಗೆ ಮಾಸಿಕ ಸಹಾಯಧನವನ್ನು ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಹಿಂದಿನ 2016 – 17 ನೇ ಸಾಲಿನಲ್ಲಿ ನಾಲ್ಕು ತಿಂಗಳು, ಮತ್ತು 2017 – 18 ನೇ ಸಾಲಿನಲ್ಲಿ 19 ತಿಂಗಳ ಮಾಸಿಕ ಸಹಾಯಧನವನ್ನು ನೀಡಿರುವುದಿಲ್ಲ. ಈ ಹಣವನ್ನು ತಕ್ಷಣವೇ ನೀಡಲು ಕ್ರಮ ವಹಿಸಬೇಕು.
ಅಲ್ಲದೆ ವಿಶ್ವವಿದ್ಯಾಲಯದಲ್ಲಿರುವ ಸಂಶೋಧನಾರ್ಥಿಗಳಿಗೆ ಸೂಕ್ತ ವಸತಿ ನಿಲಯದ ವ್ಯವಸ್ಥೆಯಿಲ್ಲ. ಇರುವಂತಹ ವಸತಿ ನಿಲಯವು ಹಲವು ಸಮಸ್ಯೆಗಳಿಂದ ಕೂಡಿವೆ. ಹಾಗಾಗಿ ನಿರ್ಮಾಣ ಹಂತದಲ್ಲಿರುವ ವಸತಿ ನಿಲಯವನ್ನು ಕೂಡಲೇ ಪ್ರಾರಂಭಿಸಬೇಕು. ಹಾಗೂ ಹಿಂದುಳಿದ ವರ್ಗದ ಸಂಶೋಧನಾರ್ಥಿಗಳಿಗೆ ವಸತಿ ನಿಲಯದ ಹೊಸ ಕಟ್ಟಡವನ್ನು ನಿರ್ಮಿಸಿ ಸೌಲಭ್ಯ ಕಲ್ಪಿಸಬೇಕು.
ನಮ್ಮ ಬೇಡಿಕೆಗಳು:

1. ಕನ್ನಡ ವಿಶ್ವವಿದ್ಯಾಲಯವು ಬಾಕಿ ಉಳಿಸಿಕೊಂಡಿರುವ ಎಸ್ಸಿ / ಎಸ್ಟಿ ಸಂಶೋಧನಾರ್ಥಿಗಳ ಸಹಾಯಧನವನ್ನು ಕೂಡಲೇ ನೀಡಬೇಕು
2. ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಇಲಾಖೆಗಳು ನೀಡುವಂತೆ ಎಸ್ಸಿ /ಎಸ್ಟಿ ವಿದ್ಯಾರ್ಥಿಗಳಿಗೂ ಆನ್ ಲೈನ್ ಮೂಲಕವೇ ಮಾಸಿಕ ಸಹಾಯಧನವನ್ನು ನೀಡಬೇಕು. ಮತ್ತು ಮೂರು ವರ್ಷಗಳ ಬದಲಿಗೆ ಐದು ವರ್ಷಗಳಿಗೆ ಹೆಚ್ಚಿಸಬೇಕು.
3. ಸಂಶೋಧನಾರ್ಥಿಗಳಿಗೆ ಈಗ ನೀಡುತ್ತಿರುವ ಆರ್ಥಿಕ ಸಹಾಯಧನವನ್ನು 10,000 ದಿಂದ 20,000 ರೂಗೆ ಹೆಚ್ಚಿಸಬೇಕು
4. ನಿರ್ಮಾಣ ಹಂತದಲ್ಲಿರುವ ವಸತಿ ನಿಲಯವನ್ನು ಈ ಕೂಡಲೇ ತೆರೆದು ಎಸ್ಸಿ ಎಸ್ಟಿ ಸಂಶೋಧನಾರ್ಥಿಗಳಿಗೆ ವಸತಿ ನಿಲಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಹಾಗೂ ಹಿಂದುಳಿದ ವರ್ಗದ ಸಂಶೋಧನಾರ್ಥಿಗಳಿಗೆ ವಸತಿ ನಿಲಯದ ಹೊಸ ಕಟ್ಟಡವನ್ನು ನಿರ್ಮಿಸಿ ಸೌಲಭ್ಯ ಕಲ್ಪಿಸಬೇಕು.
5. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು ಈ ಭಾಗದ ಎಸ್ಸಿ /ಎಸ್ಟಿ ಓಬಿಸಿ ಮತ್ತು ಮೈನಾರಿಟಿ ಸಂಶೋಧನಾರ್ಥಿಗಳಿಗೆ ಸಂಶೋಧನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸಹಾಯಧನವನ್ನು ಮತ್ತು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅನುದಾನವನ್ನು ನೀಡಬೇಕು.
6. ಇತರೆ ವಿಶ್ವವಿದ್ಯಾಲಯಗಳಿಗೆ ಇರುವಂತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಅನ್ಯ ಆದಾಯ ಮೂಲಗಳು ಇಲ್ಲದೆ ಇರುವುದರಿಂದ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಬಜೆಟ್ನಲ್ಲಿ ಹೆಚ್ಚಿನ ಅನುದಾನವನ್ನು ನೀಡಬೇಕು.
ಈ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳಾದ SFI, AISF, AIDSO ಮತ್ತು KVS ನೇತೃತ್ವದಲ್ಲಿ ದಿನಾಂಕ 24/10/2019 ರಿಂದ ವಿಶ್ವವಿದ್ಯಾಲಯದ ‘ಬಿ’ ಗೇಟಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಇಂದು ವಿಶ್ವವಿದ್ಯಾಲಯಲ್ಲಿ ನೂರಾರು ಸಂಶೋಧನಾರ್ಥಿಗಳು ಮೆರವಣಿಗೆಯಲ್ಲಿ ತೆರಳಿ ತಮ್ಮ ವ್ಯಾಪ್ತಿಯಲ್ಲಿ ಬರುವ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಉಪಕುಲಪತಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ SFI ರಾಜ್ಯಾಧ್ಯಕ್ಷರಾದ ವಿ. ಅಂಬರೀಷ್, AISF ರಾಜ್ಯ ಕಾರ್ಯದರ್ಶಿ ರಮೇಶ್ ನಾಯಕ್, AIDSO ಜಿಲ್ಲಾಧ್ಯಕ್ಷ ಸುರೇಶ್, KVS ರಾಜ್ಯ ಮುಖಂಡ ಸಂತೋಷ ಹಾಜರಿದ್ದರು

Please follow and like us:
error