ವಿಡಿಯೊ ಮೂಲಕ ವಿಜ್ಞಾನದ ಕಿರುಕಥನ:
ಅದಕ್ಕೊಂದು ಸ್ಪರ್ಧೆ

ವಿಡಿಯೊ ಮೂಲಕ ವಿಜ್ಞಾನದ ಕಿರುಕಥನ:
ಅದಕ್ಕೊಂದು ಸ್ಪರ್ಧೆ ಏರ್ಪಾಟಾಗಿದೆ. ಕನ್ನಡದಲ್ಲಿ ವಿಜ್ಞಾನದ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲಿರಾ? ವಿಡಿಯೊ ರೆಕಾರ್ಡ್‌ ಮಾಡಿ ಕಳಿಸಿ. ದೊಡ್ಡ ಮೊತ್ತದ ಬಹುಮಾನಗಳು ನಿಮಗಾಗಿ ಕಾದಿವೆ.
ನಮ್ಮಲ್ಲಿ ಸಿನೆಮಾ, ಕ್ರೀಡೆ, ರಾಜಕೀಯ, ಸಾಹಿತ್ಯ, ಜಾನಪದ, ಸಂಗೀತ, ಸಂಸ್ಕೃತಿಯ ಬಗ್ಗೆ ಕ್ಯಾಮರಾ ಮುಂದೆ ಸಖತ್ತಾಗಿ ಮಾತಾಡಬಲ್ಲವರು ಬೇಕಷ್ಟು ಯುವಕ ಯುವತಿಯರು ಸಿಗುತ್ತಾರೆ. ವಿಜ್ಞಾನ ವಿಷಯಗಳಲ್ಲೂ ಆತ್ಮವಿಶ್ವಾಸದಿಂದ, ಮನಮೆಚ್ಚುವಂತೆ ಮಾತಾಡಬಲ್ಲ ಪ್ರತಿಭೆಗಳು ನಮ್ಮಲ್ಲಿರಬಹುದು.
ಎಲ್ಲಿದ್ದಾರೊ ಗೊತ್ತಿಲ್ಲ. ಅಂಥವರನ್ನು ಹುಡುಕುವ ಯತ್ನವೊಂದು ಇದೀಗ ಆರಂಭವಾಗಿದೆ. “ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ” Karnataka Science and Technology Academy KSTA ಅಂಥದ್ದೊಂದು ಸ್ಪರ್ಧೆಯನ್ನು ಆಯೋಜಿಸಿದೆ. ಹತ್ತು ನಿಮಿಷಗಳ ಅತ್ಯುತ್ತಮ ವಿಡಿಯೊಕ್ಕೆ ರೂ. ೨೫ ಸಾವಿರ, ಎರಡನೆಯ ಬಹುಮಾನವಾಗಿ ರೂ. ೧೫ ಮತ್ತು ಪ್ರೋತ್ಸಾಹಕ ಎಂಟ್ರಿಗೆ ರೂ. ೧೦ ಸಾವಿರ ಮೀಸಲಿದೆ.

ಎಂಟ್ರಿ ಅರ್ಹತೆ ಹೇಗೆ?
ನೀವು ಮೊದಲು ಕೇವಲ ಎರಡು ನಿಮಿಷಗಳ ನಿಮ್ಮ ವಿಡಿಯೊ ಕಳಿಸಿ. ಅದು ತೀರ್ಪುಗಾರರಿಗೆ ಮೆಚ್ಚುಗೆಯಾದರೆ ನೀವು ಇನ್ನೊಂದು ೧೦ ನಿಮಿಷಗಳ ಸ್ಪರ್ಧೆಗೆ ಅರ್ಹತೆ ಪಡೆಯುತ್ತೀರಿ. ಮೊದಲನೆಯ ಆ ಎರಡು ನಿಮಿಷಗಳಲ್ಲಿ ನೀವು ಯಾವು ವಿಷಯದ ಬಗ್ಗೆ ಹತ್ತು ನಿಮಿಷಗಳ ವಿಡಿಯೊ ಮಾಡಬಯಸುತ್ತೀರಿ, ಅದು ಯಾಕೆ ಮುಖ್ಯ, ಅದಕ್ಕೆಂದು ಏನೇನು ದೃಶ್ಯಗಳನ್ನು, ಚಿತ್ರಗಳನ್ನು ಮತ್ತು ಯಾರ್ಯಾರ ಸಂದರ್ಶನಗಳನ್ನು ರೆಕಾರ್ಡ್‌ ಮಾಡಲಿದ್ದೀರಿ ಎಂಬುದನ್ನು ನಿಮ್ಮ ಆಕರ್ಷಕ ಶೈಲಿಯಲ್ಲಿ ಹೇಳಬೇಕು.
ಆ ಮೊದಲ ಸುತ್ತಿನ ಚಿಕ್ಕ ವಿಡಿಯೊ ಆಯ್ಕೆಯಾದರೆ ಮುಂದೆ ಹತ್ತು ನಿಮಿಷಗಳ ಖ್ಯಾತಿಯ ಮೆಟ್ಟಿಲಿಗೆ ನೀವು ಏರಲು ಹೊರಟಿದ್ದೀರಿ ಎಂದರ್ಥ.
ಮೊದಲ ಮೂರು ಪ್ರಶಸ್ತಿಗಳಲ್ಲಿ ನಿಮಗೆ ಒಂದೂ ಬಂದಿಲ್ಲ ಎಂದರೂ ಚಿಂತೆ ಇಲ್ಲ. ಮೆಚ್ಚುಗೆ ಪಡೆದ ಮೊದಲ ಮೂವತ್ತು ಸ್ಪರ್ಧಿಗಳನ್ನು ಬೆಂಗಳೂರಿಗೆ ಕರೆಸಿ ವಿಶೇಷ ತರಬೇತಿ ನೀಡಲಾಗುವುದು. ಉಚಿತ ವಸತಿ, ತರಬೇತಿ.
ಅದರಲ್ಲಿ ನೀವು ಪ್ರತಿಭೆಯನ್ನು ತೋರಿಸಿದರೆ ಮುಂದೆ ಅನೇಕ ಹೊಸ ಅವಕಾಶಗಳು ನಿಮ್ಮದಾಗಬಹುದು. ನೀವೊಬ್ಬ ಯಶಸ್ವೀ ವಿಜ್ಞಾನ ಸಂವಹನಕಾರರಾಗಿ ಅದನ್ನೇ ಒಂದು ವೃತ್ತಿಯಾಗಿ ಆಯ್ದುಕೊಳ್ಳುವ ಅವಕಾಶ ನಿಮ್ಮದಾಗಬಹುದು.
ನೆನಪಿಡಿ, ನೀವು ವಿಜ್ಞಾನದ ವಿದ್ಯಾರ್ಥಿಯೇ ಆಗಬೇಕೆಂದೇನಿಲ್ಲ. ಆಸಕ್ತಿ ಇದ್ದರೆ ಸಾಕು. ಡೇವಿಡ್‌ ಅಟೆನ್‌ಬರೊ ಗೊತ್ತಲ್ಲ? ಅಥವಾ ನಮ್ಮವರೇ ಆಗಿದ್ದ ಪ್ರೊ. ಯಶ್‌ಪಾಲ್‌? ಈಗಂತೂ ನೀಲ್‌ ಡಿಗ್ರಾಸ್‌ ಟೈಸನ್‌ ಖ್ಯಾತಿಯ ಉತ್ತುಂಗಕ್ಕೇರಿದ್ದಾರೆ.
ಕನ್ನಡದಲ್ಲೂ ಅಂಥ ಪ್ರತಿಭೆಗಳಿದ್ದರೆ KSTA ಅದಕ್ಕೆ ಪ್ರೋತ್ಸಾಹದ ವೋಲ್ಟೇಜ್‌ ಕೊಡಲಿದೆ.

ಈ ಸ್ಪರ್ಧೆಯ ಕುರಿತ ಹೆಚ್ಚಿನ ವಿವರಗಳಿಗೆ https://kstacademy.in/kn/ ನೋಡಿ. ನಿಮ್ಮ ವಯಸ್ಸು ೩೫ರ ಒಳಗಿರಬೇಕು. ಬೇರೇನೂ ಕಂಡೀಶನ್‌ ಇಲ್ಲ.

ಇದೇ ಜಾಲತಾಣದಲ್ಲಿ ಇನ್ನೂ ಅನೇಕ ಬಗೆಯ ಸ್ಪರ್ಧೆಗಳ ಬಾಗಿಲುಗಳನ್ನು ತೆರೆಯಲಾಗಿದೆ. ನೀವು ವಿಜ್ಞಾನ ವಿಷಯದ ಪುಸ್ತಕ ಬರೆದಿದ್ದೀರಾ? ೫೦ ಸಾವಿರ ರೂಪಾಯಿಗಳ ಬಹುಮಾನ ಇದೆ. ನಿಮ್ಮ ಪುಸ್ತಕವನ್ನು ಸ್ಪರ್ಧೆಗೆ ಕಳಿಸಬಹುದು. ನೀವು ಗೀತಾಂಜಲಿ ರಾವ್‌ ಮಾದರಿಯ ಹೊಸ ಸಂಶೋಧನೆ ಏನಾದರೂ ಮಾಡಿದ್ದೀರಾ? ಅಂಥ ಸಂಶೋಧನೆಯ ವಿವರಗಳನ್ನು ಅಥವಾ ಬರೀ ಐಡಿಯಾವನ್ನು ಕಳಿಸಿ ಅಲ್ಲೂ ನಗದು ಬಹುಮಾನ ಗಳಿಸಬಹುದು.
ಗೀತಾಂಜಲಿ ರಾವ್‌ ಯಾರು ಎಂತ ಗೊತ್ತಾಗಿಲ್ಲ ತಾನೆ? ಅದ್ಭುತ ಪ್ರತಿಭೆಯುಳ್ಳ ೧೫ರ ಹುಡುಗಿ. ಕಳೆದ ವರ್ಷ ಇದೇ ದಿನಗಳಲ್ಲಿ ಗ್ರೇತಾ ಥನ್‌ಬರ್ಗ್‌ ಎಂಬ ಹುಡುಗಿಯನ್ನು ಟೈಮ್‌ ವಾರಪತ್ರಿಕೆ ಮುಖಪುಟದಲ್ಲಿ ಕೂರಿಸಿತ್ತಲ್ಲ? ಈ ವರ್ಷ ಗೀತಾಂಜಲಿಯ ಸರದಿ. ನಾಳೆ ಅವಳ ಬಗ್ಗೆ ಡಿಟೇಲಾಗಿ ಬರೆಯಲು ಕೂರುವವನಿದ್ದೇನೆ. ನಾಡಿದ್ದು ಅವಳ ಬಗ್ಗೆ ಇದೇ ಪುಟದಲ್ಲಿ ಜಾಸ್ತಿ ವಿವರ ಕೊಡುತ್ತೇನೆ, ತಾಳಿ. ಈ ಹುಡುಗಿಯ ಸಾಧನೆ ನಂಬಲಸಾಧ್ಯ. (ಇಲ್ಲಿ ಕೊಟ್ಟ ಚಿತ್ರ ಅವಳದ್ದಲ್ಲ ಮತ್ತೆ! ಈ ಸಾಂದರ್ಭಿಕ ಚಿತ್ರವನ್ನು shethepeople ಎಂಬ ಜಾಲತಾಣದಿಂದ ಎತ್ತಿದ್ದೇನೆ.

ವಿಜ್ಞಾನದಲ್ಲಿ ಏನೆಲ್ಲ ಹೊಸ ಹೊಸದು ದಿನದಿನವೂ ಬರುತ್ತಿದೆ. ಆದರೆ ಅದರ ಬಗ್ಗೆ ಕನ್ನಡದಲ್ಲಿ ಹೇಳುವವರ ಕೊರತೆ ಸಖತ್‌ ಇದೆ. ನಿಮಗೆ ಸ್ಪರ್ಧೆಗಳಲ್ಲಿ ಆಸಕ್ತಿ ಇಲ್ಲದಿದ್ದರೂ ಚಿಂತೆ ಇಲ್ಲ. ಆಸಕ್ತಿ ಇದ್ದವರಿಗೆ ಇದನ್ನು ಫಾರ್ವರ್ಡ್‌ ಮಾಡಿ. ಇದು ಯಾರ ಸ್ವಾರ್ಥಕ್ಕೂ ಅಲ್ಲ. ಕನ್ನಡವನ್ನು ಇನ್ನೂ ತುಸು ಶ್ರೀಮಂತಗೊಳಿಸುವ ಯತ್ನ ಅಷ್ಟೆ.

ನಿನ್ನೆ-ಇಂದು-ನಾಳೆ ಬೆಂಗಳೂರು ವಿವಿಯಲ್ಲಿ ʼವಿಜ್ಞಾನ ಸಂವಹನʼದ ವಿವಿಧ ರೂಪಗಳ ಬಗ್ಗೆ ವೆಬಿನಾರ್‌ ನಡೆಯುತ್ತಿದೆ. ನಿನ್ನೆ ಆರೋಗ್ಯ ವಿಷಯಗಳ ಬಗ್ಗೆ ಇತ್ತು. ಇಂದು ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಇದೆ. ಯೂಟ್ಯೂಬ್‌ನಲ್ಲಿ Bengaluru University Science Communication ಅಂತ ಶೋಧಪದ ಕೊಟ್ಟರೆ ಉಪನ್ಯಾಸಗಳನ್ನು ನೋಡಬಹುದು.
ನಾಳೆ ನನ್ನ ಪಾಳಿ. ನಾನು ಸಂಜೆ ಆರಕ್ಕೆ ಅಲ್ಲಿ ʼಪರಿಸರ ಸಂವಹನʼ ಕುರಿತು ಕೀನೋಟ್‌ ಚಿತ್ರೋಪನ್ಯಾಸ ಕೊಡಲಿದ್ದೇನೆ. ಚಂದಚಂದ ಕತೆ, ಚಿತ್ರಗಳೆಲ್ಲ ಅದರಲ್ಲಿ ಬರಲಿವೆ.
ಯೂಟ್ಯೂಬ್‌ನಲ್ಲಿ ಅದೇ ಸಮಯಕ್ಕೆ ಅಥವಾ ಆಮೇಲಾದರೂ ನೋಡಬಹುದು.

ಸದ್ಯಕ್ಕೆ, ವಿಜ್ಞಾನದ ವಿಡಿಯೊ ಮಾಡಬಲ್ಲವರನ್ನು ಹುಡುಕೋಣ ಬನ್ನಿ.

Please follow and like us:
error