ಲೋಕಸಭಾ ಸಾರ್ವತ್ರಿಕ ಚುನಾವಣೆ : ಅಧಿಕಾರಿಗಳಿಗೆ ತರಬೇತಿ

ಚುನಾವಣಾ ಕಾರ್ಯಗಳ ಸುಗಮ ನಿರ್ವಹಣೆಗೆ ಸಹಕರಿಸಿ : ಕೃಷ್ಣಮೂರ್ತಿ ದೇಸಾಯಿ
ಕೊಪ್ಪಳ ಫೆ. :  ಚುನಾವಣಾ ಕಾರ್ಯಗಳ ಸುಗಮ ನಿರ್ವಹಣೆಗಾಗಿ ಸಹಕರಿಸುವಂತೆ ಕೊಪ್ಪಳ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಜಿಲ್ಲೆಯ ಎಲ್ಲಾ ಸೆಕ್ಟರ್ ಅಧಿಕಾರಿಗಳಿಗೆ ಕರೆ ನೀಡಿದರು.  ಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಸೆಕ್ಟರ್ ಅಧಿಕಾರಿಗಳ ಕರ್ತವ್ಯ, ಜವಾಬ್ದಾರಿಗಳ ಕುರಿತು ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಬುಧವಾರದಂದು ಆಯೋಜಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸೆಕ್ಟರ್ ಅಧಿಕಾರಿಗಳು ಚುನಾವಣಾ ಸಂದರ್ಭದಲ್ಲಿ ೧೦ ರಿಂದ ೧೨ ಮತಗಟ್ಟೆಗಳ ಜವಾಬ್ದಾರಿಯನ್ನು ಹೊಂದಿರುತ್ತಾರೆ. ರಾಜ್ಯ ಮತ್ತು ಕೇಂದ್ರದ ಕೆಲವು ಇಲಾಖೆಗಳ ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು “ಸೆಕ್ಟರ್ ಅಧಿಕಾರಿ” ಎಂದು ಅವರಿಗೆ ನೇಮಕ ಮಾಡುತ್ತಾರೆ. ಮತಗಟ್ಟೆಗಳ ಉಸ್ತುವಾರಿ, ಭೀತಿ-ತಡೆ ನಕಾಶೆ ತಯಾರಿ, ಚುನಾವಣೆ ನಿರ್ವಹಣೆ, ಮತಗಟ್ಟೆಗಳು, ಮತಗಟ್ಟೆ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ಬಿ.ಎಲ್.ಓ., ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸುವುದು ಮತ್ತು ಜಿಲ್ಲಾಧಿಕಾರಿಗಳಿಗೆ ಕಾಲಕಾಲಕ್ಕೆ ವರದಿಯನ್ನು ನೀಡುವುದು ಸೆಕ್ಟರ್ ಅಧಿಕಾರಿಗಳ ಪ್ರಮುಖ ಕರ್ತವ್ಯವಾಗಿದೆ. ಚುನಾವಣೆಯ ನಿರ್ವಹಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಮಾದರಿ ನೀತಿ ಸಂಹಿತೆ, ಚುನಾವಣಾ ಕಾರ್ಯಗಳ ಸುಗಮ ನಿರ್ವಹಣೆ, ಎಲ್ಲಾ ಅಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸುವುದು ಮತ್ತು ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ ಎಂಬ ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ. ಚುನಾವಣೆ ಘೋಷಣೆಯಾದ ದಿನ ಅಥವಾ ಅದಕ್ಕೂ ಮೊದಲಿನಿಂದ ಪ್ರಾರಂಭವಾಗಿ ಫಲಿತಾಂಶ ಘೋಷಣೆಯಾಗುವವರೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸುವುದು ಸೆಕ್ಟರ್ ಅಧಿಕಾರಿಗಳ ಪ್ರಮುಖ ಪಾತ್ರವಾಗಿದ್ದು, ಮತಗಟ್ಟೆಗಳನ್ನು ಗುರುತಿಸುವಿಕೆ, ಮತದಾರರ ಬಗೆಗಿನ ಕಾರ್ಯಗಳು, ಭೀತಿ-ತಡೆ ನಕಾಶೆ ತಯಾರಿಸಬೇಕು.
ಚುನಾವಣಾ ಪೂರ್ವ ಕರ್ತವ್ಯಗಳು : ಸೆಕ್ಟರ್ ಅಧಿಕಾರಿಗಳು ಚುನಾವಣಾ ಪೂರ್ವ ಮತಗಟ್ಟೆಗಳು ಎಲ್ಲೆಲ್ಲಿವೆ ಮತ್ತು ಯಾವ ಮಾರ್ಗದಿಂದ ಕ್ರಮವಾಗಿ ಕ್ಷಿಪ್ರವಾಗಿ ಸಂಚರಿಸಬಹುದು ಎಂಬುವುದನ್ನು ಗುರುತಿಸಬೇಕು. ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯಗಳಿರುವುದನ್ನು ಗಮನಿಸಿ ವರದಿ ಸಲ್ಲಿಸಬೇಕು. ಮತಗಟ್ಟೆ ೨೦೦ ಮೀಟರ್ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಕಛೇರಿಗಳಿಲ್ಲದಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಮಾದರಿ ನೀತಿ ಸಂಹಿತೆ ಪಾಲನೆ ಬಗ್ಗೆ ಗಮನಹರಿಸಿ, ಉಲ್ಲಂಘನೆಯಾದರೆ ತಕ್ಷಣ ಈ ಕುರಿತು ವರದಿಯನ್ನು ಮಾಡಬೇಕು. ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಅಲ್ಲದೇ ಮತಯಂತ್ರಗಳ ಕಾರ್ಯ ವಿಧಾನದ ಬಗ್ಗೆಯೂ ಸಹ ಮಾಹಿತಿ ನೀಡಬೇಕು. ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಹೊಸದಾಗಿ ಸ್ಥಾಪಿಸಲ್ಪಟ್ಟ ಮತಗಟ್ಟೆಗಳಿದ್ದರೆ ಮತದಾರರಿಗೆ ಅವುಗಳ ಬಗ್ಗೆ ಸಾಕಷ್ಟು ಮೊದಲೇ ಮಾಹಿತಿ ನೀಡಬೇಕು. ಭಯಮುಕ್ತ ಚುನಾವಣೆಗಳನ್ನು ನಡೆಸುವದಕ್ಕಾಗಿ ಭಯಪೀಡಿತ ಪ್ರದೇಶ ಮತ್ತು ವ್ಯಕ್ತಿಗಳನ್ನು ಗುರುತಿಸಿ ಭೀತಿ-ನಕಾಶೆ ತಯಾರಿಸಿ ಸೂಕ್ತ ಕ್ರಮಕ್ಕಾಗಿ ಶಿಫಾರಸ್ಸು ಮಾಡಬೇಕು. ಮುಕ್ತ, ನ್ಯಾಯಸಮ್ಮತ ಪಾರದರ್ಶಕ ಚುನಾವಣೆಗಳ ತಯಾರಿ ಭಯಭೀತ ಪ್ರದೇಶಗಳಿಗೆ ಪದೇ-ಪದೇ ಭೇಟಿ ನೀಡಿ, ಜನರಲ್ಲಿನ ಭಯವನ್ನು ಹೋಗಲಾಡಿಸಬೇಕು. ತಮ್ಮ ಸೆಕ್ಟರ್‌ನ ಚುನಾವಣಾ ವಿಧಿ ವಿಧಾನದ ಸ್ಪಷ್ಟ ಯೋಜನೆಯನ್ನು ಸಿದ್ಧಪಡಿಸಬೇಕು.
ಚುನಾವಣಾ ಮುನ್ನಾ ದಿನದ ಜವಾಬ್ದಾರಿಗಳು : ಚುನಾವಣಾ ಮುನ್ನಾ ದಿನದಂದು ಸೆಕ್ಟರ್ ಅಧಿಕಾರಿಗಳು ತಮಗೆ ಹಂಚಿಕೆಯಾದ ಮಾರ್ಗದ ಅಧಿಕಾರಿಗಳು, ಸಾಮಾಗ್ರಿ ಮತಯಂತ್ರಗಳು ಲಭ್ಯ ಇರುವುದನ್ನು ಖಾತ್ರಿ ಮಾಡಿಕೊಳ್ಳಬೇಕು. ಪೊಲೀಸ್ ಬಂದೋಬಸ್ತ್ ಇರುವುದನ್ನು ಸಹ ಖಾತ್ರಿ ಮಾಡಿಕೊಳ್ಳಬೇಕು. ಮಾದರಿ ಸದಾಚಾರಿ ಸಂಹಿತೆ ಜಾರಿಯಲ್ಲಿರಬೇಕು. ಕಾನೂನು ಉಲ್ಲಂಘನೆಯಾಗಬಾರದು. ಎಲ್ಲಾ ಮತಗಟ್ಟೆಗಳ ೧೦೦ ಮತ್ತು ೨೦೦ ಮೀಟರ್ ವ್ಯಾಪ್ತಿಯ ಮಾರ್ಕ್ ಮಾಡಿರುವುದನ್ನು ಗಮನಿಸಬೇಕು.
ಮತದಾನ ದಿನದ ಜವಾಬ್ದಾರಿಗಳು : ಮತದಾನ ದಿನದಂದು ಸೆಕ್ಟರ್ ಅಧಿಕಾರಿಗಳು ಮಾದರಿ ಸದಾಚಾರ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಅಣಕು ಮತದಾನ ನಡೆಯುವಾಗ ಯಾವುದಾದರೂ ಒಂದು ಮತಗಟ್ಟೆಯಲ್ಲಿ ಹಾಜರಿರಬೇಕು. ನಿಮ್ಮ ವ್ಯಾಪ್ತಿಯಲ್ಲಿನ ಯಾವುದೇ ಮತಗಟ್ಟೆಯಲ್ಲಿ ತೊಂದರೆ ಆದರೆ ತಕ್ಷಣ ಪರಿಹರಿಸಬೇಕು. ಅದಕ್ಕಾಗಿ ಸಂಬಂಧಪಟ್ಟವರಿಂದ ಸಲಹೆ ಸೂಚನೆ, ಮಾರ್ಗದರ್ಶನ ಪಡೆಯಿರಿ. ನಿಮ್ಮ ವ್ಯಾಪ್ತಿಯಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ ಕ್ಲುಪ್ತ ಕಾಲಕ್ಕೆ ಮತದಾನ ಪ್ರಾರಂಭವಾಗುವಂತೆ ನೋಡಿಕೊಳ್ಳಿ. ಎಜೆಂಟರಿಲ್ಲದೇ ಅಣುಕು ಮತದಾನ ನಡೆದ ಮತಗಟ್ಟೆಗಳಿಗೆ ನಿಯಮಿತವಾಗಿ ಭೇಟಿ ನೀಡಿ. ಪೋಲಿಸ್ ಭದ್ರತೆಯಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಹೆಚ್ಚುವರಿ ಮತಯಂತ್ರಗಳು, ಸಿಬ್ಬಂದಿ ಮತ್ತು ಮತದಾನ ಸಾಮಾಗ್ರಿ ಜೊತೆಗಿರಲಿ. ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ ವಿತರಿಸಿ. ಮತಯಂತ್ರ ಬದಲಿಸುವುದಕ್ಕಾಗಿ ಗರಿಷ್ಟ ೯೦ ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬೇಡಿ. ಪೋಲಿಂಗ್ ಎಜೆಂಟರ್ ಹಾಜರಿ ಅಥವಾ ಗೈರುಹಾಜರಿ ಮಾಹಿತಿ ಸಂಗ್ರಹಿಸಬೇಕು. ಪೋಲಿಂಗ್ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯಗಳ ಬಗ್ಗೆ ಜ್ಞಾನವಿರುವುದನ್ನು ಗಮನಿಸಿ ಸೂಕ್ತ ಸಲಹೆ ಸೂಚನೆ ನೀಡಿ. ಎಲ್ಲಾ ಚಟುವಟಿಕೆಗಳು ನಿಯಮಾನುಸಾರ ಕಾನೂನುಬದ್ಧವಾಗಿ ನಡೆಸಬೇಕು. ಭಯಗ್ರಸ್ಥ ಏರಿಯಾಗಳಲ್ಲಿ ಮತದಾರರು ನಿರ್ಭೀತರಾಗಿ ಮತ ಚಲಾಯಿಸುತ್ತಿದ್ದಾರೆ ಅಥವಾ ಇಲ್ಲ ಎಂಬ ಮಾಹಿತಿಯನ್ನು ಚುನಾವಣಾಧಿಕಾರಿಗೆ ತಿಳಿಸಬೇಕು. ಕಾಲಕಾಲಕ್ಕೆ ಎಲ್ಲಾ ಮತಗಟ್ಟೆಗಳಿಂದ ಮಾಹಿತಿ ಸಂಗ್ರಹಿಸಿ. ಅಗತ್ಯವಿದ್ದರೆ ಸಿಬ್ಬಂದಿಯನ್ನು ಬದಲಾಯಿಸಿ. ಮತದಾನ ಪ್ರಗತಿಯ ಬಗ್ಗೆ ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಿ. ಮತಯಂತ್ರದ ಸರಿಯಾದ ಬಳಕೆಯ ಬಗ್ಗೆ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಜ್ಞಾನವಿರುವುದನ್ನು ಖಾತ್ರಿಮಾಡಿಕೊಳ್ಳಿ. ಮತದಾನದ ಕೊನೆಗೆ ೧೭ಎ ಮತದಾರರ ರಜಿಸ್ಟರ್‌ಗಳನ್ನು ಆಯೋಗದ ಮಾರ್ಗಸೂಚಿಗಳನ್ವಯ ಮುಕ್ತಾಯಗೊಳಿಸಿರುವುದರ ಬಗ್ಗೆ ನಿಗಾ ಇರಲಿ.
ಮತದಾನಕ್ಕೆ ಏಳು ದಿನಗಳ ಮೊದಲೇ ಸೆಕ್ಟರ್ ಅಧಿಕಾರಿಗೆ ವಲಯ ಮ್ಯಾಜಿಸ್ಟ್ರೀಯಲ್ (ನ್ಯಾಯಾಧಿಕಾರ) ಅಧಿಕಾರಗಳನ್ನು ನೀಡಲಾಗುತ್ತದೆ. ಸಿ.ಆರ್.ಪಿ.ಸಿ. ಅನುಚ್ಛೇದ ೧೪೪ರ ಪ್ರಕಾರ ತುರ್ತು ಸನ್ನಿವೇಶಗಳುಂಟಾದರೆ ಪರಿಸ್ಥಿತಿಯನ್ನು ಹತೋಟಿಗೆ ತರಲು ತಕ್ಷಣ ಆದೇಶಗಳನ್ನು ಹೊರಡಿಸಬಹುದು ಮತ್ತು ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಗಟ್ಟಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಜಿಲ್ಲೆಯ ಎಲ್ಲಾ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ತರಬೇತಿ ಕಾರ್ಯಾಗಾರದಲ್ಲಿ ಸೆಕ್ಟರ್ ಅಧಿಕಾರಿಗಳಾಗಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರರು ಮತ್ತಿತರರು ಉಪಸ್ಥಿತರಿದ್ದರು. ಮತ ಖಾತ್ರಿಗಾಗಿ ಬಳಕೆ ಮಾಡಲಾದ ಮತದಾನ ಖಾತ್ರಿಯಂತ್ರ ವಿ.ವಿ.ಪ್ಯಾಟ್ ಕಾರ್ಯ ನಿರ್ವಹಣೆ ಕುರಿತು ಮಸ್ಟರ್ ಟ್ರೈನರ್ ಪ್ರವೀಣ ಹಾಗೂ ಗಿರೀಶ್ ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು.

Please follow and like us:
error