ಲಸಿಕೆಯ ಕದನದ ಕಿರು ಕಥನ -ನಾಗೇಶ ಹೆಗಡೆ

ಕ್ರಿ.ಶ. ೧೮೦೨ರಲ್ಲಿ ಹೊಸದಾಗಿ ಜಗತ್ತಿಗೆ ಸಿಡುಬಿನ ಲಸಿಕೆಯನ್ನು ತಂದಾಗಿನ ದೃಶ್ಯ ಈ ಕೆಳಗಿನ ಚಿತ್ರದಲ್ಲಿದೆ. ಈಗ ಅದರದ್ದೇ ಇನ್ನೊಂದು ಅವತಾರವನ್ನು ನಾವು ನೋಡಲಿದ್ದೇವೆ.

ಮಾಧ್ಯಮಗಳ ತಮಟೆ ಆರಂಭವಾಗಿದೆ. ನೇಪಥ್ಯದಲ್ಲಿ ಕೊರೊನಾ ಲಸಿಕೆಯ ಜಟಾಪಟಿಯ ಸದ್ದು ಕೇಳತೊಡಗಿದೆ. ಕೊರೊನಾ ದಾಳಿಯ ಕಾಲ ಮುಗಿದು ಪ್ರತಿದಾಳಿಯ ಕಾಲ ಆರಂಭವಾಗುತ್ತಿದೆ. ಇನ್ನು ಒಂದೆರಡು ವರ್ಷಗಳ ಕಾಲ ಇದರದ್ದೇ ಸುದ್ದಿಯಲ್ಲಿ ಅದ್ದಿ ನಮ್ಮನ್ನು ಎತ್ತುತ್ತಿರುತ್ತವೆ ಮಾಧ್ಯಮಗಳು.
ಇದರ ಮುನ್ನೋಟವನ್ನು ಇಲ್ಲಿ ನಾಲ್ಕು ಹಂತಗಳಲ್ಲಿ ನೀವು ನೋಡಬಹುದು. ಇದರಲ್ಲಿ (೧) ಲಸಿಕೆಯ ಹೊಸ ರೂಪಗಳು (೨) ತಂಪು ಸರಪಳಿಯ ರಗಳೆ (೩) ಲಸಿಕೆ ಮೊದಲು ಯಾರಿಗೆ? ಮತ್ತು (೪) ಹೊಸ ವಿವಾದಗಳು, ಲಡಾಯಿಗಳು ಹೀಗೆ ನಾಲ್ಕು ಕಿರುವಿಭಾಗಗಳಿವೆ.
*
ನಮ್ಮೊಳಗೇ ಸಿದ್ಧವಾಗುವ ಹೊಸಬಗೆಯ ಲಸಿಕೆ
ಲಸಿಕೆ ಎಂಬುದು ಮನುಕುಲದ ಅತಿ ದೊಡ್ಡ ವೈದ್ಯಕೀಯ ಸಂಶೋಧನೆ. ರೋಗಕ್ಕೆ ಕಾರಣವಾಗುವ ಸೂಕ್ಷ್ಮಜೀವಿಯನ್ನು ದುರ್ಬಲಗೊಳಿಸಿ, ಅಥವಾ ಕೊಂದು ನಮ್ಮ ದೇಹಕ್ಕೆ ತೂರಿಸುತ್ತಾರೆ. ಆಗ ಆ ರೋಗಾಣುವನ್ನು ಹೊಡೆದು ಹಾಕಬಲ್ಲ ಸೂಕ್ತವಾದ ಶಸ್ತ್ರಾಸ್ತ್ರಗಳು (ಆಂಟಿಬಾಡೀಸ್- ಅಂದರೆ ಜೀವಿರೋಧಕಗಳು) ನಮ್ಮ ದೇಹದಲ್ಲಿ ಸೃಷ್ಟಿಯಾಗುತ್ತವೆ. ಅಷ್ಟಾದಮೇಲೆ, ನಿಜವಾದ ಪ್ರಬಲ ರೋಗಾಣು ನಮ್ಮ ದೇಹವನ್ನು ಹೊಕ್ಕರೂ ಔಷಧವಿಲ್ಲದೇ ಸೋಲಿಸಬಹುದು. ಎಡ್ವರ್ಡ್ ಜೆನ್ನರ್ ಎಂಬಾತ 1796ರಲ್ಲಿ ಸಿಡುಬು ರೋಗ ಬಾರದಂತೆ ಈ ತಂತ್ರವನ್ನು ಮೊದಲು ಪ್ರಯೋಗಿಸಿದ. ಹಸುವಿನ ಕೆಚ್ಚಲಿನಿಂದ ಮೊದಲ ವೈರಸ್ಸನ್ನು ತೆಗೆದಿದ್ದರಿಂದ ವ್ಯಾಕ್ಸಿನ್ ಎಂಬ ಪದದ ಮೂಲ ಅರ್ಥ ಆಕಳು.

ಲಸಿಕೆ ತಯಾರಿಕೆ ಅಂದರೆ ಭಾರೀ ರಗಳೆಯ ಕೆಲಸವಾಗಿತ್ತು. ಕುದುರೆ, ಮೇಕೆ, ಕೋಳಿಗಳಂಥ ಜೀವಿಗಳಿಗೆ ಮೊದಲು ರೋಗ ಬರುವಂತೆ ಮಾಡಿ, ನಂತರ ಅವುಗಳ ರಕ್ತದಿಂದ ವೈರಸ್‍ಗಳನ್ನು ಹೀರಿ ತೆಗೆದು, ಕುದಿಸಿ ಕೊಂದು, ಅದನ್ನೇ ಲಸಿಕೆಯ ರೂಪದಲ್ಲಿ ನಿರೋಗಿಗಳ ದೇಹಕ್ಕೆ ಚುಚ್ಚುತ್ತಿದ್ದರು. ಅದು ಅಂಥ ಸುರಕ್ಷಿತ ವಿಧಾನವೇನೂ ಆಗಿರಲಿಲ್ಲ. ಕೆಲವು ಜೀವಂತ ರೋಗಾಣುಗಳೂ ಲಸಿಕೆಯಲ್ಲಿ ಸೇರಿಕೊಳ್ಳುತ್ತಿದ್ದವು. ಚುಚ್ಚುಮದ್ದು ಹಾಕಿಸಿದ್ದರಿಂದಲೇ ಕಾಯಿಲೆ ಬಂದ ಘಟನೆಗಳೂ ಇದ್ದವು. ಈಚಿನ ದಶಕಗಳಲ್ಲಿ ಸುರಕ್ಷಿತ ಲಸಿಕೆಗಳನ್ನು ತಯಾರಿಸುವ ಹೊಸ ಹೊಸ ವಿಧಾನಗಳು ಬಂದಿವೆಯಾಗಿದರೂ ಲಸಿಕೆ ತಯಾರಿಕೆಗೆ ನಾಲ್ಕಾರು ವರ್ಷಗಳೇ ಬೇಕಾಗುತ್ತಿದ್ದವು.

ಕೊರೊನಾ ಮಹಾಮಾರಿ ಬಂದಾಗಿನಿಂದ ವೈದ್ಯರಂಗಕ್ಕೆ ಭಾರೀ ದೊಡ್ಡ ಪ್ರಮಾಣದ ಧನಧಾರೆ ಹರಿದು ಬಂದಿದೆ. ಲಸಿಕೆ ತಯಾರಿಕೆಯಲ್ಲಿ ಕ್ರಾಂತಿಕಾರಿ ವಿಧಾನಗಳು ಬಂದಿವೆ. ಫೈಝರ್‌ ಮತ್ತು ಮೊಡರ್ನಾ ಕಂಪನಿಯವರು ಲಸಿಕೆ ತಯಾರಿಕೆಗೆ ಇಡೀ ಕೊರೊನಾ ವೈರಸ್ಸನ್ನು ಬಳಸುವುದಿಲ್ಲ. ಅದರ ಬದಲು, ಕೊರೊನಾದ ಹೊರಮೈ ಮೇಲೆ ಮುಳ್ಳುಗಳಂತೆ ಕಾಣುವ ಪ್ರೋಟೀನ್ ತಳಿಸೂತ್ರದ (ಅದು mRNA) ನಕಲನ್ನು ಲ್ಯಾಬಿನಲ್ಲೇ ತಯಾರಿಸುತ್ತಾರೆ. ಅದನ್ನೇ ನಮ್ಮ ದೇಹಕ್ಕೆ ತೂರಿಸಿದಾಗ ನಮ್ಮ ದೇಹದ ಪ್ರತಿಯೊಂದು ಜೀವಕಣದಲ್ಲೂ ಅದೇ ಪ್ರೊಟೀನ್ ತಯಾರಾಗುತ್ತದೆ.
ಹೌದು, ಕೊರೊನಾದ ಬಿಡಿಭಾಗವನ್ನು ನಮ್ಮ ದೇಹದಲ್ಲಿ ನಾವೇ ತಯಾರಿಸಿಕೊಳ್ಳುತ್ತೇವೆ. ಅದರ ಮೂಲಕ ಇಡೀ ಕೊರೊನಾ ಸೃಷ್ಟಿಯಾಗಲು ಸಾಧ್ಯವಿಲ್ಲ. ಆದರೆ ಆ ಮುಳ್ಳುಗಳನ್ನು ಹುಟ್ಟಿನಲ್ಲೇ ಚಿವುಟಿ ಹಾಕಬಲ್ಲ ಯೋಧ ಕಣಗಳು (ಶಸ್ತ್ರಾಸ್ತ್ರಗಳು) ಆಗ ನಮ್ಮ ರಕ್ತದಲ್ಲಿ ಸಿದ್ಧವಾಗುತ್ತವೆ. ಅದರ ಪರಿಣಾಮ ಏನೆಂದರೆ, ಅಸಲೀ ವೈರಿ ಕೊರೊನಾ ನಮ್ಮ ಮೂಗು- ಗಂಟಲ ಮೂಲಕ ಬಂದು ‍ಶ್ವಾಸಕೋಶಕ್ಕೆ ಅಂಟಿಕೊಳ್ಳುತ್ತಲೇ ನಮ್ಮ ಯೋಧ ಕಣಗಳು ಅದರ ಮುಳ್ಳುಗಳನ್ನೆಲ್ಲ ತರಿದು ಹಾಕುತ್ತವೆ. ವೈರಾಣುವಿಗೆ ಕೈಕಾಲು ಮೊಳೆಯಲು, ವೃದ್ಧಿಯಾಗಲು ಬಿಡುವುದಿಲ್ಲ. ಮುಳ್ಳಿನಿಂದಲೇ ಮುಳ್ಳನ್ನು ತೆಗೆಯುವ ವಿಧಾನ ಇದು.
ಇಂಥ ಲಸಿಕೆಯ ಲಾಭ ಏನೆಂದರೆ ಬೇಕೆಂದಾಗಲೆಲ್ಲ ಇದನ್ನು ಶೀಘ್ರವಾಗಿ ಲ್ಯಾಬಿನಲ್ಲೇ ಉತ್ಪಾದಿಸಬಹುದು. ಏಕೆಂದರೆ ಈ ವೈರಸ್ಸನ್ನು ಇನ್ನೊಂದು ಜೀವಿಯಲ್ಲಿ ಬೆಳೆಸುವ, ಕೊಲ್ಲುವ, ಸೋಸಿ ಲಸಿಕೆ ತಯಾರಿಸಬೇಕಿಲ್ಲ್ಲ. ಯಾವುದೇ ಪ್ರಾಣಿಯನ್ನು ಕೊಲ್ಲದೆ ಲ್ಯಾಬಿನಲ್ಲೇ ಅದನ್ನು ತಯಾರಿಸಬಹುದು. ಮೇಲಾಗಿ ಇಂಥ ಲಸಿಕೆಯಿಂದ ರೋಗ ಹಬ್ಬುವ ಭಯ ಇಲ್ಲ. (ಸೈಡ್‌ ಇಫೆಕ್ಟ್‌ ಏನಿದ್ದರೂ ಇದುವರೆಗಿನ ಪ್ರಯೋಗಗಳಲ್ಲಿ ಪ್ರಕಟವಾಗಿಲ್ಲ. )
ಎಲ್ಲಕ್ಕಿಂತ ವಿಶೇಷ ಏನೆಂದರೆ ಇದನ್ನು ಚುಚ್ಚುಮದ್ದಿನ ರೂಪದಲ್ಲಿ ಕೊಡಬೇಕೆಂದಿಲ್ಲ. ಮೂಗಿಗೆ ಸಿಂಚನ ರೂಪದಲ್ಲಿ ಇಲ್ಲವೆ ಚರ್ಮಕ್ಕೆ ಅಂಟುವ ಪ್ಯಾಚ್‍ನಂತೆ ಕೂಡ ಕೊಡಬಹುದು.
ನಮ್ಮ ದೇಶದಲ್ಲಿ ಪ್ರಯೋಗಕ್ಕೆ ಬಂದ (ಭಾರತ್‌ ಬಯೊಟೆಕ್‌ ಅಥವಾ ಆಕ್ಸ್‌ಫರ್ಡ್‌) ಲಸಿಕೆಗಳನ್ನು ಮಾತ್ರ ಮಾಮೂಲು ವಿಧಾನದಲ್ಲೇ, ಅಂದರೆ ಅಸಲೀ ವೈರಸ್ಸಿನ ಅವಶೇಷಗಳನ್ನು ನಮ್ಮ ದೇಹಕ್ಕೆ ತೂರಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲಾಗುವುದು. ಇದರಲ್ಲೂ ಅಡ್ಡ ಪರಿಣಾಮಗಳ ಸ್ಯಾಂಪಲ್‌ ಅಧ್ಯಯನ ಮಾತ್ರ ಆಗಿದೆ. ಕೋಟ್ಯಂತರ ಜನರ ಮೇಲೆ ಪ್ರಯೋಗಿಸಿದ ನಂತರವೇ ಅದರ ಪರಿಣಾಮವನ್ನು ನಿಖರವಾಗಿ ಹೇಳಬಹುದು.
*
ಲಸಿಕೆಗೆ ಬೇಕು ತಂಪು ಸರಪಳಿ:
ಲಸಿಕೆಯ ರಗಳೆ ಏನೆಂದರೆ ಅದನ್ನು ಸದಾಕಾಲ ಕಡುಶೀತದಲ್ಲೇ ಇಟ್ಟಿರಬೇಕು. ಉತ್ಪಾದನೆ ಆಗುವಲ್ಲಿಂದ ಹಿಡಿದು, ಗೋದಾಮು, ಹಡಗು, ವಿಮಾನ, ರೈಲು, ಮತ್ತೆ ಗೋದಾಮು ಆಮೇಲೆ ಲಸಿಕೆ ವಿತರಣೆಯ ಆಸ್ಪತ್ರೆ ಅಥವಾ ಸಂಚಾರಿ ವ್ಯಾನಿನವರೆಗೂ ಶೀತಪೆಟ್ಟಿಗೆ (ಫ್ರಿಜ್ ಅಥವಾ ಕಡುಶೀತಲ ಪೆಟ್ಟಿಗೆ ‘ಫ್ರೀಝರ್’) ಅತ್ಯಂತ ಸುಸ್ಥಿತಿಯಲ್ಲಿ ಇರಬೇಕು. ಈ ವ್ಯವಸ್ಥೆಗೆ ಕೋಲ್ಡ್ ಚೇನ್ (ತಂಪು ಸರಪಳಿ) ಎನ್ನುತ್ತಾರೆ. ಈ ಸರಪಳಿ ವ್ಯವಸ್ಥೆಯಲ್ಲಿ ರೈಲು ನಿಂತಿತು, ವಿದ್ಯುತ್ ಕೈಕೊಟ್ಟಿತು, ಐಸ್ ಕರಗಿತು ಎಂದರೆ ಲಸಿಕೆ ವಿಫಲವಾಗುತ್ತದೆ. ಭಾರತದಂಥ ವಿಶಾಲ ದೇಶದಲ್ಲಿ ಅತಿ ಅವಸರದಲ್ಲಿ ಕೋಟಿಗಟ್ಟಲೆ ಜನರಿಗೆ ಹಳ್ಳಿಯವರಿಗೂ ಈ ಲಸಿಕೆಯನ್ನು ವಿತರಿಸುವಾಗ ಇದು ದೊಡ್ಡ ಸಮಸ್ಯೆ ಆಗಲಿದೆ. ಲಸಿಕೆಯನ್ನು ಎರಡೆರಡು ಬಾರಿ ಹಾಕಿಸಬೇಕೆಂದರೆ ಸಮಸ್ಯೆ ದುಪ್ಪಟ್ಟಾಗುತ್ತದೆ.
ಲಸಿಕೆ ಉತ್ಪಾದನೆಯ ಪೈಪೋಟಿಯಲ್ಲಿ ಮೊದಲು ಜಯಘೋಷ ಮಾಡಿದ ಫೈಝರ್ ಕಂಪನಿಯ ಲಸಿಕೆಯನ್ನು ಸದಾಕಾಲ (ಮೈನಸ್‌) -70 ಡಿಗ್ರಿ ಸೆಲ್ಸಿಯಸ್‌ ಘೋರಶೀತದಲ್ಲಿ ಇಟ್ಟಿರಬೇಕು. ನಮ್ಮ ಫ್ರಿಜ್ ಮತ್ತು ಫ್ರೀಝರ್‌ ಗಳು ಕಡಿಮೆ ಎಂದರೆ (ಮೈನಸ್‌) -20 ಡಿಗ್ರಿ ಸೆ.ವರೆಗೆ ಬರ್ಫವನ್ನು ಹಿಡಿದಿಡುತ್ತವೆ. ಅದಕ್ಕಿಂತ ಶೀತ ಬೇಕೆಂದರೆ ಅದು ನೀರಿನಿಂದ/ಬರ್ಫದಿಂದ ಸಾಧ್ಯವಿಲ್ಲ. ಅದಕ್ಕೆಂದೇ ಸಿಓಟು (ಇಂಗಾಲದ ಡೈಆಕ್ಸೈಡ್) ಅನಿಲವನ್ನು ತಂಪಾಗಿಸಿ, ದ್ರವರೂಪಕ್ಕೆ ತಂದು, ಅದನ್ನು ಇನ್ನಷ್ಟು ತಂಪಾಗಿಸಿ ಘನರೂಪಕ್ಕೆ ತರಬೇಕು. ಅಂಥ ಬರ್ಫಕ್ಕೆ ‘ಡ್ರೈ ಐಸ್’ ಎನ್ನುತ್ತಾರೆ. ಪಶುವೈದ್ಯರು ಹೋರಿಗಳ ವೀರ್ಯಾಣುಗಳನ್ನು ಸಂಗ್ರಹಿಸಲು ಚಿಕ್ಕ ಪೆಟ್ಟಿಗೆಗಳಲ್ಲಿ ತುಸುಪ್ರಮಾಣದ ಡ್ರೈಐಸ್ ಬಳಸುತ್ತಾರೆ. ಸಾವಿರಾರು ಜನರಿಗೆ ವಿತರಿಸಲು ಬೇಕಾದ ಲಸಿಕೆಯನ್ನು ಇಡಲು ಬೀರುಗಾತ್ರದ ಪೆಟ್ಟಿಗೆಗಳಲ್ಲಿ ಡ್ರೈ ಐಸ್ ಇಟ್ಟು ಸಾಗಿಸುವುದು ತುಂಬಾ ಕ್ಲಿಷ್ಟಕರ.
ಬ್ರಿಟನ್‌ ಅಮೆರಿಕದಂಥ ಸುಧಾರಿತ ರಾಷ್ಟ್ರಗಳಲ್ಲಿ ಪ್ರತಿ ಊರೂರಲ್ಲೂ ಇಂಥ ವ್ಯವಸ್ಥೆ ಇದ್ದೀತು. ನಮ್ಮಲ್ಲಿಲ್ಲ. ಹಾಗಾಗಿ ಫೈಝರ್ ಕಂಪನಿಯ ಮೊದಲ ವ್ಯಾಕ್ಸೀನ್ ನಮ್ಮ ದೇಶದ ಎಲ್ಲೆಡೆ ವಿತರಣೆಗೆ ಬರಲಾಗದು. ಮೂಲತಃ ಲಸಿಕೆಯೇ ಭಾರೀ ದುಬಾರಿ. ಅದಕ್ಕೆಂದು ಕಡುಶೀತಲ ತಂಪು ಸರಪಳಿ ವ್ಯವಸ್ಥೆ ಮಾಡುವುದೆಂದು ಇನ್ನೂ ದುಬಾರಿ ಆದೀತು.
ಫೈಝರ್ ಬಿಡಿ. ಎರಡನೆಯ ಹಾಗೂ ಮೂರನೆಯ ಲಸಿಕೆಗಳು ಪರವಾಗಿಲ್ಲ. ಮೊಡರ್ನಾ ಮತ್ತು ಆಕ್ಸ್ ಫರ್ಡ್-ಆಸ್ಟ್ರಾಝೆನೆಕಾ ಎರಡೂ ಲಸಿಕೆಗಳಿಗೆ ಅಂಥ ಘೋರ ತಂಪಿನ ಅವಶ್ಯಕತೆ ಇಲ್ಲ. ಅವನ್ನು ಸಾಮಾನ್ಯ ಫ್ರಿಜ್‍ನಲ್ಲಿ ತಿಂಗಳುಗಟ್ಟಲೆ ಇಡಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ. ಅವು ನಮ್ಮಲ್ಲಿಗೆ ಬಂದು ವಿತರಣೆಗೆ ಸಜ್ಜಾಗುವಷ್ಟರಲ್ಲಿ ನಮ್ಮ ದೇಶದಲ್ಲೇ ತಯಾರಾಗುತ್ತಿರುವ ಇನ್ನೂ ಕೆಲವು ಲಸಿಕೆಗಳು ಬಳಕೆಗೆ ಬರಬಹುದು. ಅವಕ್ಕೂ ತಂಪು ಸರಪಳಿ ಅಷ್ಟೇನೂ ಕಟ್ಟುನಿಟ್ಟಾಗಿ ಇರಬೇಕಾಗಿಲ್ಲ.
*
ಲಸಿಕೆ ಯಾರಿಗೆ ಮೊದಲು, ಯಾರಿಗೆ ಕಡ್ಡಾಯ? ಯಾರಿಗೆ ಉಚಿತ, ಯಾರಿಗೆ ಖಚಿತ?

ಸಾರ್ವಜನಿಕ ವಿತರಣೆಗೆ ಲಸಿಕೆ ಇನ್ನೇನು ಬಂದೇಬಿಟ್ಟಿತು ಅನ್ನಿ. ಯಾರಿಗೆ ಮೊದಲು ವಿತರಿಸಬೇಕು? ಇದು ಸಮಾಜ ಕಲ್ಯಾಣದ ಪ್ರಶ್ನೆಯೂ ಹೌದು, ಜಟಿಲ ನೈತಿಕ ಪ್ರಶ್ನೆಯೂ ಹೌದು. ಸಹಜವಾಗಿ, ವೈದ್ಯರಿಗೆ, ದಾದಿಯರಿಗೆ ಮತ್ತು ಆಸ್ಪತ್ರೆಗಳ ಇತರ ಸಿಬ್ಬಂದಿಗೆ ಮೊದಲು ಲಸಿಕೆ ಹಾಕಿಸುವ ವ್ಯವಸ್ಥೆಯಾಗಬೇಕು. ಏಕೆಂದರೆ ರೋಗಿಗಳ ಜೊತೆಗೆ ಇವರು ಸದಾ ಸಂಪರ್ಕದಲ್ಲಿರುತ್ತಾರೆ. ಈಗಾಗಲೇ ನೂರಕ್ಕೂ ಹೆಚ್ಚು ವೈದ್ಯರು ತಮ್ಮ ಜೀವವನ್ನು ಬಲಿಕೊಟ್ಟಿದ್ದಾರಲ್ಲ. ನಿರ್ಭಯವಾಗಿ ವೈದ್ಯಸಿಬ್ಬಂದಿ ತಮ್ಮ ಕೆಲಸವನ್ನು ಮುಂದುವರೆಸಬೇಕು. ಅದಕ್ಕೆ ಅವರಿಗೇ ಮೊದಲ ಲಸಿಕೆ ಅನ್ನಿ.
ಎರಡನೆಯ ಸಾಲಿನಲ್ಲಿ ಯಾರು ಇರಬೇಕು? ಪೊಲೀಸರಿಗೆ ಮತ್ತು ರಕ್ಷಣಾದಳದ ಸಿಬ್ಬಂದಿ ಇರಬೇಕು. ಆದರೆ ಅವರು ಸದೃಢ ಯುವಜನರು. ಶಿಸ್ತು ಪರಿಪಾಲನೆಯಿಂದ ಕೊರೊನಾವನ್ನು ದೂರ ಇಡಬಲ್ಲವರು. ಅವರನ್ನು ಬದಿಗಿಟ್ಟು ವೃದ್ಧರಿಗೆ ಮತ್ತು/ಅಥವಾ ಎಳೆಯರಿಗೆ ಆದ್ಯತೆ ಸಿಗಬೇಕು. ಇಲ್ಲಿ ನೈತಿಕ ಅಥವಾ ಧರ್ಮಸೂಕ್ಷ್ಮಗಳ ಚರ್ಚೆ ತಲೆಎತ್ತುತ್ತದೆ. ಕೋವಿಡ್19 ಕಾಯಿಲೆ ಹೆಚ್ಚಿನ ಪಾಲು ಹಿರಿಯ ನಾಗರಿಕರನ್ನು ಅದರಲ್ಲೂ ವಿಶೇಷವಾಗಿ ಈಗಾಗಲೇ ಹೃದ್ರೋಗ, ಅಸ್ತಮಾ ಮತ್ತಿತರ ಕಾಯಿಲೆಗಳಿರುವ ಹಿರಿಯರನ್ನು ಬಲಿಹಾಕುತ್ತದೆ. ಅವರಿಗೇ ಆದ್ಯತೆಯ ಪ್ರಕಾರ ಲಸಿಕೆ ಹಾಕಬೇಕು. ಆದರೆ ತುಸು ಒರಟಾಗಿ ಹೇಳುವುದಾದರೆ ಅವರೆಲ್ಲ ಹೇಗಿದ್ದರೂ ಬದುಕನ್ನು ಅನುಭವಿಸಿದವರು; ಅವರಿಗೆ ಹೋಲಿಸಿದರೆ ಶಾಲಾ ಮಕ್ಕಳಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕಬೇಕು. ಅವರ ಬದುಕು ಭದ್ರವಾಗಬೇಕು. ಅವರ ಶಿಕ್ಷಣಕ್ಕೆ ಬಾಧೆ ಬರಬಾರದು. ಮಕ್ಕಳಿಗೆ ಕೊಡುವ ಮೊದಲು ಶಿಕ್ಷಕವೃಂದಕ್ಕೆ ಲಸಿಕೆ ಲಭಿಸುವಂತಾಗಬೇಕು. ಅಥವಾ ಶಿಕ್ಷಕರಿಗಿಂತ ಮೊದಲು, ಸ್ಕೂಲ್‌ ವ್ಯಾನ್‌ ಓಡಿಸುವ ಚಾಲಕರಿಗೊ?
ಮುಂದಿನ ಹಂತದ ಆದ್ಯತೆ ಇನ್ನೂ ಗೋಜಲಿನದಾಗುತ್ತದೆ. ಕ್ರೀಡಾಳುಗಳಿಗೊ, ವಿಮಾನ/ರೈಲು/ಬಸ್ ಸಿಬ್ಬಂದಿಗೊ ಅಥವಾ ತುಂಬಾ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕಾದ ರಾಜಕಾರಣಿಗಳಿಗೊ, ಸ್ವಾಮೀಜಿಗಳಿಗೊ ಅಥವಾ ಆರ್‌ ಟಿಓ ಅಥವಾ ನೋಂದಣಿ ಅಧಿಕಾರಿಗೊ ನಂತರದ ಆದ್ಯತೆ ಸಿಗಬೇಕು. ಈ ಹಂತದಲ್ಲಿ ರಾಷ್ಟ್ರೀಯ ನೀತಿಯನ್ನು ಕಡ್ಡಾಯ ಪಾಲಿಸಲು ಸಾಧ್ಯವಾಗುವುದಿಲ್ಲ. ವಾಸ್ತವ ಹೇಗಿರುತ್ತದೆಂದು ನಾವು ಊಹಿಸಬಹುದು. ಯಾವ ಹಂತದಲ್ಲೂ ಯಾವುದೇ ಬಗೆಯ ಶಿಸ್ತನ್ನೂ ಉಲ್ಲಂಘಿಸಲು ಬೇಕಾದ ವ್ಯವಸ್ಥೆಗಳು ನಮ್ಮ ದೇಶದಲ್ಲಿವೆ.
ಇದರ ಮಧ್ಯೆ ಇನ್ನೊಂದು ನೈತಿಕ ಆಯಾಮವೂ ಇದೆ. ಭಾರತ ದೇಶ ಕಡಿಮೆ ವೆಚ್ಚದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನ ಸಾಮರ್ಥ್ಯವನ್ನು ಪಡೆದಿದೆ. ಅಕ್ಕಪಕ್ಕದ, ಬಡರಾಷ್ಟ್ರಗಳಿಗೂ ನಾವು ವಿತರಿಸಬೇಕು. ನಮ್ಮ ದಷ್ಟಪುಷ್ಟ ಯೋಧರಿಗಿಂತ ಆಫ್ರಿಕದ , ಏಷ್ಯದ ಹಿರಿಯ ನಾಗರಿಕರಿಗೆ ಅಥವಾ ಅಲ್ಲಿನ ಶಾಲಾಮಕ್ಕಳಿಗೆ ಆದ್ಯತೆಯ ಮೇರೆಗೆ ಲಸಿಕೆ ದಾನ ಮಾಡಬೇಕಲ್ಲವೆ?
ಅದಕ್ಕಿಂತ ದೊಡ್ಡ ಸಮಸ್ಯೆ ಏನೆಂದರೆ, ಕೆಲವರು ಲಸಿಕೆಯ ರಗಳೆಯೇ ಬೇಡವೆಂದು ನಿರ್ಧರಿಸಬಹುದು. ಅವರಿಗೆ ಆ ಸ್ವಾತಂತ್ರ್ಯ ಇರಬೇಕೆ? ಅಲ್ಲಿಗೆ ರಾಷ್ಟ್ರದ ಹಿತದ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ ಅಂಥ ಕೆಲವು ವ್ಯಕ್ತಿಗಳ ಮೂಲಕ ಕೊರೊನಾ ಜೀವಂತ ಉಳಿಯುತ್ತದೆ. ಹಾಗಿದ್ದರೆ ಕಡ್ಡಾಯ ಮಾಡಬೇಕೆ? ಹಿಂದೆ ಸಿಡುಬನ್ನು ಈ ಜಗತ್ತಿನಿಂದಲೇ ನಿರ್ನಾಮ ಮಾಡಲು ನಿರ್ಧರಿಸಿದಾಗ ಈ ಪ್ರಶ್ನೆ ಎದುರಾಗಿತ್ತು. ಈಗ ಕೊರೊನಾ ಸಮಸ್ಯೆ ಎಲ್ಲೆಡೆ ವ್ಯಾಪಿಸಿದೆ. ಲಸಿಕೆ ಹಾಕಿಸಿಕೊಂಡರೆ ಮಾತ್ರ ಬಸ್, ರೈಲು, ವಿಮಾನ ಪ್ರಯಾಣಕ್ಕೆ ಅವಕಾಶ ಎಂದು ಕಡ್ಡಾಯ ಮಾಡಬಹುದು. ಸಮವಸ್ತ್ರ ತೊಟ್ಟ ಎಲ್ಲರೂ ನಿಮ್ಮ ಮೇಲೆ ಸವಾರಿ ಮಾಡಬಹುದು. ಲಸಿಕೆಯ ಸರ್ಟಿಫಿಕೇಟ್‌ ಇದ್ದವರ ಮನೆಗೆ ಮಾತ್ರ ಗ್ಯಾಸ್‌ ಸಪ್ಲೈಯರು ಅಥವಾ ಕಸ ಎತ್ತುವವರು ಬರಬಹುದು. ಮಾಲ್‍ಗಳ ದ್ವಾರಪಾಲಕರೂ.ಮೀಟರ್‌ ಹಿಡಿದು ದೇಹ ಬಿಸಿ ಇದೆಯೇ ಎಂದು ನೋಡುವ ಬದಲು ಕೈ ಬಿಸಿ ಮಾಡಿರೆಂದು ಮಿದು ಸಿಗ್ನಲ್‌ ಕೊಡಬಹುದು. ನಕಲಿ ಸರ್ಟಿಫಿಕೇಟ್‍ಗಳ ಹಾವಳಿ ಹೆಚ್ಚಾಗಬಹುದು. ಏನೂ ಆಗಬಹುದು. ಎಲ್ಲರಿಗೂ ಲಸಿಕೆ ಬೇಕಿಲ್ಲ ಎಂದು ಸರಕಾರವೇ ನಿರ್ಧರಿಸಬಹುದು. ನಮಗೆ ಬೇಕೇಬೇಕೆಂದು ಕೆಲವರು ಹಠತೊಡಬಹುದು.
*
ನೂಕು ನುಗ್ಗಲಲ್ಲಿ ಅಸಲಿ ಯಾವುದು -ನಕಲಿ ಯಾವುದು?
1೩೭ ಕೋಟಿ ಜನರಿಗೆ ಅವಸರದಲ್ಲಿ -ಅದೂ ಎರಡೆರಡು ಡೋಸ್ ಲಸಿಕೆ ವಿತರಣೆ ಮಾಡುವುದೆಂದರೆ ಅದಕ್ಕೆ ಭಾರೀ ಕಟ್ಟುನಿಟ್ಟಿನ ವ್ಯವಸ್ಥೆ ಬೇಕು. ನಿಧಾನವಾಗಿ ಮೂರು ನಾಲ್ಕು ವರ್ಷಗಳವರೆಗೆ ಉತ್ಪಾದನೆ ವಿತರಣೆ ಮಾಡುತ್ತ ಕೂರುವಂತಿಲ್ಲ. ಏಕೆಂದರೆ ಅಷ್ಟರಲ್ಲಿ ಕೊರೊನಾ ತನ್ನ ಸ್ವರೂಪವನ್ನೇ ಬದಲಿಸಿಕೊಂಡರೆ ಹೊಸದಾಗಿ ಅದಕ್ಕೆ ಬೇರೊಂದು ವ್ಯಾಕ್ಸೀನ್ ತಯಾರಾಗಬೇಕು. ಇದು ಕೊನೆಯಿಲ್ಲದ ಸಂಗ್ರಾಮವೇ ಆಗುತ್ತದೆ.
ಈ ಮಧ್ಯೆ ನಕಲಿ ಲಸಿಕೆಯ ಹಾವಳಿ ಬಾರದ ಹಾಗೆ ತಪಾಸಣಾ ವ್ಯವಸ್ಥೆ ಜಾರಿಗೆ ಬರಬೇಕು.
ಇಷ್ಟೆಲ್ಲ ತ್ವರಿತವಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ ಆಗುವಾಗ ಅಸಲೀ ಲಸಿಕೆಯಲ್ಲೇ ಏನಾದರೂ ಅಧ್ವಾನ ಆಗುವ ಸಂಭವ ಇರುತ್ತದೆ. ಲಸಿಕೆ ಅಸಲಿಯೇ ಆಗಿದ್ದರೂ ಅದು ಪರಿಶುದ್ಧವೇ ಇದ್ದರೂ ಕೆಲವರಲ್ಲಿ ಅದು ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ವಾದವಿವಾದ, ದೋಷಾರೋಪ, ನ್ಯಾಯಾಂಗ ವಿಚಾರಣೆ ಏನೆಲ್ಲ ತುಮುಲ ಏಳಬಹುದು. ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಇದಾಗಿದ್ದರಿಂದ ಎಲ್ಲವೂ ಸುರಳೀತ ಸಾಗುತ್ತದೆ ಎನ್ನುವಂತೇನೂ ಇಲ್ಲ. ಅಂಬುಲೆನ್ಸ್‌ ಚೇಸರ್ಸ್‌ ಹಾವಳಿ ಇಲ್ಲೂ ತಲೆ ಎತ್ತಬಹುದು.
ಹಿಂದೆ ನಮ್ಮಲ್ಲಿ ಲಸಿಕೆಗಳ ಎಡವಟ್ಟಿನಿಂದಾಗಿ ದೊಡ್ಡ ದೊಡ್ಡ ಹಗರಣಗಳಾಗಿವೆ. ಪೋಲಿಯೊ ಲಸಿಕೆ ಹಾಕಿದ್ದಕ್ಕೇ ಅದೆಷ್ಟೋ ಮಕ್ಕಳು ಪೋಲಿಯೊ ರೋಗಕ್ಕೆ ತುತ್ತಾದ ದಾಖಲೆಗಳಿವೆ. (ಈಗಿನ ಪೋಲಿಯೊ ಲಸಿಕೆಗಳಲ್ಲಿ ಅಂಥ ಸಮಸ್ಯೆ ಇಲ್ಲ ಅನ್ನಿ.) ಐದು ವರ್ಷಗಳ ಹಿಂದೆ, ಗರ್ಭದ ಕೊರಳಿನ ಕ್ಯಾನ್ಸರನ್ನು ತಡೆಗಟ್ಟಲೆಂದು ವಿದೇಶೀ ಕಂಪನಿಯೊಂದು ಆಂಧ್ರಪ್ರದೇಶದ ಆದಿವಾಸಿ ಮಕ್ಕಳಿಗೆ ಲಸಿಕೆ ಹಾಕಲು ಹೋಗಿ ಹದಿಹರೆಯದ ಏಳು ಹೆಣ್ಣುಮಕ್ಕಳು ಜೀವ ತೆತ್ತಿದ್ದರು.
ಲಸಿಕೆಯ ಗುಣಮಟ್ಟದ ಬಗ್ಗೆ ಯಾವನೋ ತಜ್ಞನೊಬ್ಬ ಅಪಸ್ವರ ಹೊರಡಿಸಿದರೆ ಜನರು ಅದನ್ನೇ ನಂಬುತ್ತಾರೆ. ಇಂದು ಅಮೆರಿಕದಲ್ಲಿ ಬಹಳಷ್ಟು ಜನರು ತಮ್ಮ ಮಕ್ಕಳಿಗೆ ದಢಾರದ (ಮೀಸಲ್ಸ್) ಲಸಿಕೆ ಹಾಕಿಸುವುದಿಲ್ಲ. ಏಕೆಂದರೆ ಅಂಥ ಲಸಿಕೆ ಹಾಕಿಸಿದ ಮಗುವು ಆಟಿಸಂ ಎಂಬ ನರರೋಗಕ್ಕೆ ತುತ್ತಾಗುತ್ತದೆ ಎಂದು ಡಾ. ಆಂಡ್ರೂ ವೇಕ್‍ಫೀಲ್ಡ್ ಎಂಬ ವಿಜ್ಞಾನಿಯೊಬ್ಬ ತಪ್ಪು ಸಂಶೋಧನೆಯನ್ನು ಪ್ರಕಟಿಸಿದ್ದ. ಅವನದು ಬುರುಡೆ ಸಂಶೋಧನೆ ಎಂಬುದು ಸಾಬೀತಾಗಿ ಆತನ ಡಿಗ್ರಿಗಳನ್ನೆಲ್ಲ ಕಳಚಿ ಹಾಕಿ, ಛೀಮಾರಿ ಹಾಕಿದರೂ ಆತ ಹುಟ್ಟಿಸಿದ ಭಯ ಮಾತ್ರ ಹತ್ತು ವರ್ಷಗಳ ನಂತರವೂ ವೈದ್ಯರಂಗಕ್ಕೆ ದೊಡ್ಡ ಸವಾಲಾಗಿ ಕೂತಿದೆ. ಟ್ರಂಪ್ ಕೂಡ ಆ ಭಯದ ತುತ್ತೂರಿ ಊದಿ ಇನ್ನಷ್ಟು ಗೋಜಲು ಮಾಡಿದ್ದಿದೆ. ಈಗ ಇಷ್ಟೊಂದು ವ್ಯಾಪಕವಾಗಿ ಪ್ರಯೋಗಕ್ಕೆ ಬರಲಿರುವ ಕೊರೊನಾ/ ಕೋವಿಡ್ ಲಸಿಕೆಯ ವಿಷಯದಲ್ಲಿ ಇನ್ನೇನೇನು ವಿವಾದ ಬರಲಿವೆಯೊ?
ಕೊರೊನಾ ಮಹಾಮಾರಿಯಿಂದಾಗಿ ಕಂಪ್ಯೂಟಿಂಗ್ ಕ್ರಾಂತಿ, ಆನ್‍ಲೈನ್ ಕ್ರಾಂತಿ, ನೆಟ್‌ ವರ್ಕ್‌ ಕ್ರಾಂತಿ, ಸ್ಯಾನಿಟೈಸರ್‌ ಕ್ರಾಂತಿ, ಶಿಕ್ಷಣರಂಗದಲ್ಲಿ ಉಲ್ಟಾ ಕ್ರಾಂತಿ ಜಗತ್ತಿನ ಎಲ್ಲಡೆ ಏಕಕಾಲಕ್ಕೆ ಸಂಭವಿಸಿದ್ದನ್ನು ನಾವು ನೋಡಿದ್ದೇವೆ. ಮುಖಕ್ಕೆ ಮುಸುಕು ಹಾಕಿಕೊಂಡು ಪರದೆಯ ಮೂಲಕವೇ ಜಗತ್ತನ್ನು ನೋಡುವ ಹೊಸ ನಾಗರಿಕತೆಗೆ ನಾವು ಕಾಲಿಟ್ಟಿದ್ದೇವೆ.
ಇನ್ನು ಲಸಿಕೆಯಿಂದಾಗಿ ಏನೇನು ಮಹಾಪಲ್ಲಟ ಆಗುತ್ತದೊ ನೋಡಬೇಕು. ನೂಕು ನುಗ್ಗಲಲ್ಲಿ ನಮ್ಮ ವಿವೇಕ ನಜ್ಜುಗುಜ್ಜಾಗಬಾರದು. ಗಾಳಿಸುದ್ದಿಗೆ ನಾವು ಕಿವಿಬಾಯಿಗಳಾಗಬಾರದು.

[ಶಾಲಾ ಶಿಕ್ಷಕರಿಗೆಂದು ಬೆಂಗಳೂರಿನಿಂದ ಪ್ರಕಟವಾಗುವ “ಟೀಚರ್‌” ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಇದು]

Please follow and like us:
error