ರೈತ ಹೋರಾಟಗಳಿಗೆ ಸ್ಪಂದಿಸದ ಬಿಜೆಪಿ ದೇಶ ಮಾರಾಟಕ್ಕೆ ಹೊರಟಿದೆ- ಬಯ್ಯಾಪೂರ

-ಸುಳ್ಳು ಹೇಳುತ್ತಲೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ

-ಏಳು ವರ್ಷಗಳಲ್ಲಿ ಕೇಂದ್ರದ ಸಾಧನೆ ಏನು?

ಕೊಪ್ಪಳ: ಇಷ್ಟು ವರ್ಷ ಅಧಿಕಾರ ನಡೆಸಿದ ಬಿಜೆಪಿ ಸಾಧಿಸಿದ್ದೇನೆಂದರೆ ಬಿಎಸ್‌ಎನ್‌ಎಲ್, ರೈಲ್ವೆ ವ್ಯವಸ್ಥೆಯನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದು. ಹೀಗೇ ಬಿಟ್ಟರೆ ವಿಮಾನ ವ್ಯವಸ್ಥೆಯನ್ನು ಮಾರಾಟ ಮಾಡುತ್ತಾರೆ, ಮುಂದೆ ದೇಶವನ್ನೇ ಮಾರಾಟ ಮಾಡುತ್ತಾರೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಕೊಪ್ಪಳದ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ನೂತನ ಸದಸ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಬಡವರ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯ ಶಾಸಕರ ಆಸ್ತಿ ಕನಿಷ್ಠ ಸಾವಿರಾರು ಕೋಟಿ ಇರುತ್ತೆ. ಸಚಿವ ಸ್ಥಾನ ನೀಡಬೇಕಾದರೆ ಪಕ್ಷಕ್ಕೆ ದುಡಿದ ಬಗೆ, ಜನಪರ ಕೆಲಸ ಮಾಡಿದ ರೀತಿ, ಜಾತಿ ನೋಡಿ ಸಚಿವ ಸ್ಥಾನ ನೀಡುವ ಪರಿಪಾಠ ಕಾಂಗ್ರೆಸ್‌‌ನಲ್ಲಿದ್ದರೆ, ಬಿಜೆಪಿಯಲ್ಲಿ ಯಾವ ಶಾಸಕ ಎಷ್ಟು ಕೋಟಿ ಹಣ ಪಕ್ಷಕ್ಕೆ ಕೊಡುತ್ತಾರೆ ಎಂಬುದರ ಮೇಲೆ ಮಂತ್ರಿ ಸ್ಥಾನ ನಿರ್ಧಾರ ಆಗುತ್ತೆ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಮುಖ್ಯಮಂತ್ರಿಗಳು ಶೇಕಡಾ 60 ರಷ್ಟು ಸ್ಥಾನಗಳು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ ಎಂದರೆ, ಬಿಜೆಪಿ ರಾಜ್ಯಾಧ್ಯಕ್ಷರು ಶೇಕಡಾ 55 ರಷ್ಟು ಎಂದು ತಿಳಿಸಿದರು. ಮಂತ್ರಿಗಳು ಶೇಕಡಾ 50 ರಷ್ಟು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ ಎಂದು ಹೇಳಿರುವುದನ್ನ ನೋಡಿದರೆ  ಬಿಜೆಪಿ ನಾಯಕರೆಲ್ಲ ಹೇಳುವುದು ಸುಳ್ಳು ಎಂಬುದು ಸ್ಪಷ್ಟ. ರಾಜ್ಯಾದ್ಯಂತ ಕಾಂಗ್ರೆಸ್ ಬೆಂಬಲಿತರೇ ಹೆಚ್ಚು ಗೆದ್ದಿದ್ದಾರೆ ಎಂದು ಹೇಳಿದರು.

Please follow and like us:
error