fbpx

ರಾಮನಗರ ಪ್ರತಿ ತಾಲ್ಲೂಕಿನಲ್ಲಿ 570 ಹಾಸಿಗೆಯ ಕೋವಿಡ್ ಕೇರ್ ಸಿದ್ಧ : ಡಿಸಿಎಂ

ರಾಮನಗರ, ಜುಲೈ :- ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕೋವಿಡ್-19 ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸುವ ದಿಸೆಯಲ್ಲಿ ಜಿಲ್ಲಾಡಳಿತ ಕಾರ್ಯನ್ಮುಖವಾಗಿದ್ದು ಮೊದಲ ಹಂತದಲ್ಲಿ 570 ಹಾಸಿಗೆಗಳ ಸೆಂಟರ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದ್ದಾರೆ.

ಅವರು ರಾಮನಗರ ಜಿಲ್ಲಾಡಳಿತದೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡ ವೇಳೆ ಉಪಮುಖ್ಯಮಂತ್ರಿಗಳಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಪ್ರತಿ ತಾಲ್ಲೂಕಿನಲ್ಲಿ 500 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಅನ್ನು ಸ್ಥಾಪಿಸಲು ಸೂಚಿಸಲಾಗಿತ್ತು. ಅದರಂತೆ ಪ್ರಾರಂಭದಲ್ಲಿ 570 ಹಾಸಿಗೆಗಳನ್ನು ಸಿದ್ದಪಡಿಸಿ ಇಟ್ಟುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಸಾಮರ್ಥ್ಯವನ್ನು ಪ್ರತಿ ತಾಲ್ಲೂಕಿನಲ್ಲಿ 500ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯಕ್ಕೆ ವಿಸ್ತರಿಸುವ ನೀಲ ನಕ್ಷೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

500 ಹಾಸಿಗೆಗಳ ಆಸ್ಪತ್ರೆಯನ್ನು ಹಾಸ್ಟಲ್ ಇಲ್ಲವೆ ಕಲ್ಯಾಣ ಮಂಟಪಗಳಲ್ಲಿ ಸ್ಥಾಪಿಸುವ ಬಗ್ಗೆ ಪ್ರತಿ ತಾಲ್ಲೂಕಿನಲ್ಲೂ ಸ್ಥಳಗಳನ್ನು ಗೊತ್ತುಪಡಿಸಿಕೊಳ್ಳಲಾಗಿದೆ. ಯಾವ ತಾಲ್ಲೂಕಿನಲ್ಲಿ ಯಾವ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅದನ್ನು ವಹಿಸಬೇಕು ಎನ್ನುವ ಬಗ್ಗೆ ಕ್ರಿಯಾ ಯೋಜನೆಯನ್ನು ಮಾಡಿಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಉಪಮುಖ್ಯಮಂತ್ರಿಗಳಿಗೆ ತಿಳಸಿದರು.

ಸುಸಜ್ಜಿತವಾಗಿಸಲು ಸೂಚನೆ: ಜಿಲ್ಲಾಧಿಕಾರಿಗಳು ನೀಡಿದ ಮಾಹಿತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿಗಳು ಆರಂಭಿಸುವ ಪ್ರತಿಯೊಂದು ಕೋವಿಡ್-19 ಕೇರ್ ಸೆಂಟರ್ ಸುಸಜ್ಜಿವಾಗಿರಬೇಕು. ಯಾವುದೇ ಲೋಪ ಬರಬಾರದು. ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆಮ್ಲಜನಕವನ್ನು ಅಳೆಯುವ ಆಕ್ಸಿ ಮೀಟರ್ ಅನ್ನು ಇರಬೇಕು. ಪ್ರತಿ ರೋಗಿಗೂ ಅಗತ್ಯ ಪರಿಕರಗಳಿಂದ ಕೂಡಿರುವ ‘ಕಿಟ್’ ಅನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಉಪಮುಖ್ಯಮಂತ್ರಿಗಳು ತಿಳಿಸಿದರು.

ಆಂಬುಲೆನ್ಸ್ ಸಿದ್ದವಾಗಿರಬೇಕು: ಪ್ರತಿ ತಾಲ್ಲೂಕು ಸೆಂಟರ್‌ಗಳಿಗೂ ಎರಡು ಇಲ್ಲ ಮೂರು ಆಂಬ್ಯುಲೆನ್ಸ್ಗಳಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ರೋಗಿಯಲ್ಲಿ ಆಮ್ಲಜನಕದ ಇಳಿಕೆ ಕಂಡುಬಂದ ಕೂಡಲೇ ಅವರಿಗೆ ತೊಂದರೆಯಾಗದಂತೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ಇಲ್ಲದೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳಿಗೆ ಸಾಗಿಸುವ ವ್ಯವಸ್ಥೆಯಾಗಬೇಕು. ಇದರಲ್ಲಿ ಯಾವುದೇ ರೀತಿಯಲ್ಲೂ ಲೋಪವಾಗಬಾರದು ಎಂದು ಅಶ್ವತ್ಥನಾರಾಯಣ ಅವರು ತಿಳಿಸಿದರು.

ಟ್ರೂನಾಟ್ ಪರೀಕ್ಷಾಯಂತ್ರ: ರಾಮನಗರ ಜಿಲ್ಲಾ ಕೇಂದ್ರದಲ್ಲಿ ಕೋವಿಡ್-19 ಮಾದರಿಗಳನ್ನು ಪರೀಕ್ಷಿಸುವ ಲ್ಯಾಬ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಒಂದೆರಡು ಗಂಟೆಗಳಲ್ಲಿ ವರದಿಯನ್ನು ನೀಡುವಂತ ಟ್ರೂನಾಟ್ ಪರೀಕ್ಷಾ ಯಂತ್ರಗಳನ್ನು ಅಳವಡಿಸಿಕೊಂಡು ಟ್ಯಾಬ್ ಅನ್ನು ಇನ್ನಷ್ಟು ಉತ್ತಮಗೊಳಿಸುವಂತೆ ತಿಳಿಸಿದರು.

ಟ್ಯಾಬ್‌ಗೆ ಅಗತ್ಯವಿರುವ ನಾಲ್ಕು ಟ್ರೂನಾಟ್ ಪರೀಕ್ಷಾ ಯಂತ್ರಗಳನ್ನು ಮುಂಬೈನಿಂದ ತರಿಸಿಕೊಳ್ಳಲಾಗುತ್ತಿದೆ. ಇನ್ನು 7 ದಿನಗಳ ಒಳಗಾಗಿ ಈ ಯಂತ್ರಗಳನ್ನು ಅಳವಡಿಸಿ ಪರೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಮಾಹಿತಿ ನೀಡಿದರು.

ಆಮ್ಲಜನಕ ಪೂರೈಕೆ: ಪ್ರತಿ ತಾಲ್ಲೂಕು ಕೇಂದ್ರಗಳಿಗೆ ಒಂದರಂತೆ ಒಟ್ಟು 5 ಹೈ ಫ್ಲೋ ಆಕ್ಸಿಜನ್ ಪೂರೈಸುವ ಯಂತ್ರಗಳನ್ನು ಖರೀದಿಸಿ ಅವುಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳು ತಿಳಿಸಿದರು.

ಕಟ್ಟುನಿಟ್ಟಿನ ಕ್ವಾರಂಟೈನ್: ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಪ್ರತಿದಿನ 15 ರಿಂದ 30ರ ಒಳಗೆ ಪ್ರಕರಣಗಳು ದಾಖಲಾಗುತ್ತಿದೆ. ಈ ಪೈಕಿ ಬಹುತೇಕ ಪ್ರಕರಣಗಳು ಪ್ರಾಥಮಿಕ ಇಲ್ಲವ ಇಲ್ಲವೆ ದ್ವಿತೀಯ ಸಂಪರ್ಕ ಹೊಂದಿರುವರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕ್ವಾರಂಟೈನ್ ಅನ್ನು ಕಡ್ಡಾಯವಾಗಿ ಜಾರಿಗೆ ತನ್ನಿ. ಅನಗತ್ಯವಾಗಿ ಓಡಾಡಿದರೆ ಕ್ರಮ ಜರುಗಿಸಿ. ಸಾಂಸ್ಥಿತಿಕ ಕ್ವಾರಂಟೈನ್‌ನಲ್ಲಿ ಇರುವವರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಉಪಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಆಂಬುಲೆನ್ಸ್ಗೆ ಜಿಪಿಎಸ್: ಜಿಲ್ಲೆಗಾಗಿ ಪಡೆದುಕೊಳ್ಳುವ ಎಲ್ಲಾ ಆಂಬುಲೆನ್ಸ್ಗಳಿಗೆ ಜಿಪಿಎಸ್ ಅನ್ನು ಅಳವಡಿಸಿ ಅವುಗಳ ಜಾಡನ್ನು ಜಿಲ್ಲೆಯಲ್ಲಿರುವ ವಾರ್ ರೂಂನ ಮೂಲಕ ಗಮನಿಸಬೇಕು. ಅವುಗಳ ಓಡಾಟದ ಬಗ್ಗೆ ನೈಜ ಸಮಯದಲ್ಲಿ ಮಾಹಿತಿ ಪಡೆದುಕೊಳ್ಳುವಂತೆ ವ್ಯವಸ್ಥೆಮಾಡಿಕೊಳ್ಳಲು ಉಸ್ತುವಾರಿ ಸಚಿವರು ಸಲಹೆ ನೀಡಿದರು.

ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವಿಜಯ್, ಜಿಲ್ಲಾ ಆರೋಗ್ಯ ಅಧಿಕಾರಿ ನಿರಂಜನ್ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Please follow and like us:
error
error: Content is protected !!