ರಾಜ್ಯಾದ್ಯಂತ ಸೋಮವಾರ ಈದುಲ್ ಫಿತ್ರ್ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ

ಬೆಂಗಳೂರು, ಮೇ.23: ಕರಾವಳಿ ಜಿಲ್ಲೆಗಳು ಹೊರತುಪಡಿಸಿ ರಾಜ್ಯಾದ್ಯಂತ ಈದುಲ್ ಫಿತ್ರ್ ಅನ್ನು ಮೇ 25ರಂದು ಸೋಮವಾರ ಆಚರಿಸಲಾಗುವುದು ಎಂದು ರಾಜ್ಯ ಚಂದ್ರ ದರ್ಶನ ಸಮಿತಿಯ ಸಂಚಾಲಕ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ ತಿಳಿಸಿದ್ದಾರೆ.

ಶನಿವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಚಂದ್ರ ದರ್ಶನ ಸಮಿತಿ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಬೆಂಗಳೂರು, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ, ಬೀದರ್, ಹರಿಹರ, ಚಿಕ್ಕಮಗಳೂರು, ಬಾಳೆಹೊನ್ನೂರು, ರಾಯಚೂರು, ಗದಗ, ಮೈಸೂರು ಹಾಗೂ ತುಮಕೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಎಲ್ಲಿಯೂ ಶವ್ವಾಲ್ ಮಾಸದ ಚಂದ್ರದರ್ಶನವಾಗಿಲ್ಲ ಎಂದು ಅವರು ಹೇಳಿದರು. ಆದುದರಿಂದ, ಎಲ್ಲ ಉಲಮಾಗಳು ಈದುಲ್ ಫಿತ್ರ್ ಅನ್ನು ಮೇ 25ರಂದು ಆಚರಿಸಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

ಅದೇ ರೀತಿ, ದಿಲ್ಲಿ, ಮೆವಾಟ್, ಭೋಪಾಲ್, ಗೋಧ್ರಾ, ಮುಂಬೈ, ಅಲಹಾಬಾದ್, ಚೆನ್ನೈ, ಪಾಲನ್‍ಪುರ್, ಕಾನ್‍ಪುರ್, ಲಕ್ನೊ, ಹೈದರಾಬಾದ್ ಹಾಗೂ ದೇವಬಂದ್ ಸೇರಿದಂತೆ ಇನ್ನಿತರ ಪ್ರದೇಶಗಳಿಂದಲೂ ಚಂದ್ರದರ್ಶನ ಆಗದೆ ಇರುವ ಮಾಹಿತಿ ಸಿಕ್ಕಿದೆ ಎಂದು ಮಕ್ಸೂದ್ ಇಮ್ರಾನ್ ತಿಳಿಸಿದರು.

ಸಭೆಯಲ್ಲಿ ಹಝ್ರತ್ ಮೌಲಾನ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಹಝ್ರತ್ ಮೌಲಾನ ಅಬ್ದುಲ್ ಖಾದಿರ್ ಶಾ ವಾಜಿದ್, ಹಝ್ರತ್ ಖಾರಿ ಮುಹಮ್ಮದ್ ಝುಲ್ಫಿಖಾರ್ ರಝಾ ನೂರಿ, ಹಝ್ರತ್ ಮೌಲಾನ ಏಜಾಝ್ ಅಹ್ಮದ್ ನದ್ವಿ, ಹಝ್ರತ್ ಮೌಲಾನ ಸೈಯ್ಯದ್ ಮನ್ಝೂರ್ ರಝಾ ಆಬಿದಿ ಭಾಗವಹಿಸಿದ್ದರು.

Please follow and like us:
error