ಬೆಂಗಳೂರು : ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ನಡೆಸಿದಂತೆ ರಾಜ್ಯದಲ್ಲೂ ಎನ್ಆರ್ಸಿ ನಡೆಸುವ ಕುರಿತು ಸಭೆ ನಡೆಸಿದ್ದೇವೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ
ತಿಳಿಸಿದ್ದಾರೆ . ದೇಶದ ಹಲವು ರಾಜ್ಯಗಳು ಎನ್ಆರ್ಸಿ ನಡೆಸಲು ಒಪ್ಪಿಗೆ ಸೂಚಿಸಿವೆ . ಬೆಂಗಳೂರು ಹಾಗೂ ರಾಜ್ಯದ ವಿವಿಧ ನಗರಗಳಲ್ಲಿ ಹೊರ ದೇಶಗಳಿಂದ ಬಂದವರು ಬಹುದೊಡ್ಡ ಪ್ರಮಾಣದಲ್ಲಿ ನೆಲೆಸಿದ್ದಾರೆ . ನಮ್ಮ ರಾಜ್ಯದಲ್ಲಿಯೂ ಎನ್ಆರ್ಸಿ ನಡೆಸುವ ಕುರಿತು ಅಧ್ಯಯನ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇವೆ . ರಾಜ್ಯದಲ್ಲೂ ಎನ್ ಆರ್ ಸಿ ಜಾರಿಗೊಳಿಸಲಾಗುವುದು ಎಂದು ವಿಧಾನಸೌಧದ ಬಳಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು . ವಲಸೆಗಾರರು ಅತಿಹೆಚ್ಚು ಕರ್ನಾಟಕಕ್ಕೆ ಬರುತ್ತಿದ್ದಾರೆ . ವಿಶೇಷವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ . ಅವರ ಚಟುವಟಿಕೆಗಳ ಮೇಲೆ ನಾವು ನಿಗ ಇಡುವ ಅವಶ್ಯಕತೆ ಇದೆ . ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು , ಇದರ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ . ಅಸ್ಸಾಂ ಮಾದರಿಯಲ್ಲಿ ರಾಜ್ಯದಲ್ಲೂ ತರಬೇಕಾದರೆ ತುಂಬಾ ಸವಾಲುಗಳಿವೆ , ಅದರ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಬೇಕು ಮತ್ತು ಕೇಂದ್ರದ ಗೃಹ ಸಚಿವರೊಂದಿಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು .