ರಕ್ತದಾನ ಮಾಡಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ದೇವ! Positive News @ Corona Time

ಕಳೆದ ಮಂಗಳವಾರ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ (AIIMS) ಆಸ್ಪತ್ರೆಗೆ 30 ವರ್ಷ ಪ್ರಾಯದ ಒಬ್ಬ ರೋಗಿ ತುರ್ತು ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರ ಎಡಗಾಲಿನ ಕೆಳಭಾಗದಲ್ಲಿ ಏನೋ ಸೋಂಕು ತಗಲಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸೋಂಕು ತಗಲಿದ ಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕ ಬೇಕಾಗಿತ್ತು. ಇಲ್ಲವಾದರೆ ಅದು ಇಡೀ ಕಾಲಿಗೆ ಹರಡುವ ಅಪಾಯವಿತ್ತು. ಶಸ್ತ್ರ ಚಿಕಿತ್ಸೆಗೆ ಆಪರೇಷನ್ ಥಿಯೇಟರಿನೊಳಗೆ ರೋಗಿಯನ್ನು ಕರೆದುಕೊಂಡು ಹೋಗುವ ಮೊದಲು ರಕ್ತಕ್ಕೆ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ, ಆಸ್ಪತ್ರೆಯ ರಕ್ತ ಬ್ಯಾಂಕಿನಲ್ಲಿ ಸಾಕಷ್ಟು ರಕ್ತದ ಸಂಗ್ರಹವಿರಲಿಲ್ಲ. ಆತನ ಜೊತೆಯಲ್ಲಿ ಬಂದ ಅವನ ಹೆಂಡತಿ ರಕ್ತದಾನ ಮಾಡಲು ದೈಹಿಕವಾಗಿ ಸಮರ್ಥಳಾಗಿರಲಿಲ್ಲ. ಕೋವಿಡ್ ಆಪತ್ತಿನ ಈ ಕಾಲದಲ್ಲಿ ಬೇರೆ ರಕ್ತದಾನಿಗಳನ್ನು ಹುಡುಕಿ ಅವರು ಆಸ್ಪತ್ರೆಗೆ ಬಂದು ರಕ್ತದಾನ ಮಾಡುವ ಸಾಧ್ಯತೆಯಾಗಲೀ ಮತ್ತು ಅಷ್ಟು ಸಮಯಾವಕಾಶವಾಗಲೀ ಇರಲಿಲ್ಲ. ಆಗ ರೋಗಿಯ ಶಸ್ತ್ರಚಿಕಿತ್ಸೆಗೆ ನಿಯುಕ್ತಿಗೊಂಡ ವೈದ್ಯರ ತಂಡದ ಜ್ಯೂನಿಯರ್ ಡಾಕ್ಟರ್ ಮಹಮ್ಮದ್ ಫಯಾಜ್ ತಾನೇ ಆ ರೋಗಿಗೆ ರಕ್ತದಾನ ಮಾಡಿದರು. ರೋಗಿಯ ಹೀಮೋಗ್ಲೋಬಿನ್ ಪ್ರಮಾಣ ನಿರ್ಧಾರಿತ ಮಟ್ಟಕ್ಕೆ ಬಂದು ನಿಂತ ನಂತರ ಇತರ ವೈದ್ಯರೊಂದಿಗೆ ಡಾ ಫಯಾಜ್ ಸ್ವತಃ ಶಸ್ತ್ರಚಿಕಿತ್ಸೆ ನಡೆಸಿ ತನ್ನ ವೈದ್ಯ ಕರ್ತವ್ಯದ ಹಿರಿಮೆಯನ್ನು ಮೆರೆದರು.

“ಕೋವಿಡ್ ನ ಈ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರೂ ಆಪತ್ತಿನಲ್ಲಿರುವುದರಿಂದ ಜನ ಒಬ್ಬರಿಗೊಬ್ಬರು ನೆರವಾಗುವುದು ಬಹಳ ಕಷ್ಟ ಸಾಧ್ಯ. ಆದರೆ, ಎಂತಹದೇ ಸಮಯದಲ್ಲಿ ರೋಗಿಯ ಜೀವವುಳಿಸುವುದು ಡಾಕ್ಟರೊಬ್ಬನ ಆದ್ಯ ಕರ್ತವ್ಯ” ಎನ್ನುವ ಡಾ ಮಹಮ್ಮದ್ ಫಯಾಜ್ ದಿನೆ ದಿನೇ ನೈತಿಕವಾಗಿ ಕಳೆಗುಂದುತ್ತಿರುವ ವೈದ್ಯಲೋಕದ ಒಂದು ಅಪರೂಪದ ಆಶಾಕಿರಣ.

 

Panju Ganguli

Please follow and like us:
error