ಬೆಂಗಳೂರು : ನಾಟಕ ಅಕಾಡೆಮಿಯ ಮಾಜಿ ಸದಸ್ಯ ರಂಗರ್ಮಿ , ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಸಾಯಂಕಾಲ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ರಂಗಭೂಮಿಯ ಬಗ್ಗೆ ತಮ್ಮದೇ ಆದ ಕನಸು, ಕಲ್ಪನೆ,ಯೋಜನೆಗಳನ್ನು ಹೊಂದಿದ್ದ ಹಾಲ್ಕುರಿಕೆ ಇಡೀ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದರು. ರಂಗಪಯಣ ಯೋಜನೆಯ ಮೂಲಕ ರಾಜ್ಯಾದ್ಯಂತ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳಿಂದ ನಾಟಕಗಳನ್ನು ಮಾಡಿಸುವ ಮೂಲಕ ಅವರಲ್ಲಿಯ ಪ್ರತಿಭೆಯನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದರು. ಕೊಪ್ಪಳ ಜಿಲ್ಲೆಯಲ್ಲಿ ಬಂದಾಗಿನಿಂದ ಹಲವಾರ ನಾಟಕಗಳನ್ನು ಆಡಿಸಿದ್ದ ರಂಗರ್ಮಿ ಹಾಲ್ಕುರಿಕೆ ಜೀವಪರ ಕಾಳಜಿಯ ವ್ಯಕ್ತಿ. ಮಾನವೀಯ ತುಡಿತದೊಂದಿಗೆ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತರಾಗಿರುತ್ತಿದ್ದರು. ಅದ್ಬುತ ಓದುಗ, ವಿಮರ್ಶಕರಾಗಿದ್ದ ಹಾಲ್ಕುರಿಕೆ ಥಿಯೇಟರ್ ಮಿರರ್ ಪತ್ರಿಕೆಯನ್ನು ಹೊರತರುತ್ತಿದ್ದರು. ಅವರನ್ನು ಕಳೆದುಕೊಂಡ ರಂಗಭೂಮಿ ಅನಾಥವಾಗಿದೆ.

ಅವರ ನಿಧನಕ್ಕೆ ನಾಡಿನಾದ್ಯಂತ ಸ್ನೇಹಿತರು, ಅಭಿಮಾನಿಗಳು, ಶಿಷ್ಯ ಬಳಗ ಕಂಬನಿ ಮಿಡಿದಿದ್ದಾರೆ
ರಂಗಕರ್ಮಿ ಗೆಳೆಯ ಹಾಲ್ಕುರಿಕೆ ಶಿವಶಂಕರ್ ಇನ್ನಿಲ್ಲ. ತುಂಬಾಡಿ ರಾಮಯ್ಯ ಅವರ “ಮಣೆಗಾರ” ಎಂಬ ಆತ್ಮಕಥೆಯನ್ನು ನಾನು ಖುದ್ದಾಗಿ ಶಿವಶಂಕರ್ ಮೂಲಕ ರಂಗರೂಪಕ್ಕೆ ಅಳವಡಿಸಿ ಯೋಜನೆ ರೂಪಿಸಿ ಕೊಟ್ಟಿದ್ದೆನು. ಶಿವಶಂಕರ್ ನಿರ್ದೇಶನದ ‘ಮಣೆಗಾರ’ ನಾಟಕದಲ್ಲಿ ನನ್ನ ಹಿರಿಯ ಮಗ ಗೌತಮ್ ಬಾಲಕ ಕ್ಯಾತಪ್ಪನ ಪಾತ್ರದಲ್ಲಿ ಅಭಿನಯಿಸಿದ್ದ. ನಾಟಕದ ತಾಲೀಮು ನಡೆಯುತ್ತಿದ್ದಾಗ ಪ್ರತಿದಿನ ಸಂಜೆ ನಾನು, ಗೌತಮ್ ನನ್ನು ಕರೆದುಕೊಂಡು ಹೋಗಿ ರವೀಂದ್ರ ಕಲಾಕ್ಷೇತ್ರದ ತಾಲೀಮು ಕೋಣೆಯಲ್ಲಿ ಹಾಜರಿರುತ್ತಿದ್ದು ತಾಲೀಮು ಮುಗಿದ ಬಳಿಕ ತಡರಾತ್ರಿಯಲ್ಲಿ ಮನೆಗೆ ತಲುಪುತ್ತಿದ್ದೆವು.
ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸುವ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕೆಂದು ಆಗ್ರಹಿಸಿ ನಾವು “ಗ್ರಾಮ ರಾಜ್ಯ” ವೇದಿಕೆಯಿಂದ ರೂಪಿಸಿದ್ದ ಚಳವಳಿಯಲ್ಲಿ ಶಿವಶಂಕರ್ ನಮ್ಮ ಜೊತೆಗಿದ್ದ. ಪ್ರೊ.ಸಿಜಿಕೆ ಅವರು ಬೆಂವಿವಿ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಪರಿಚಯವಾದ ಬಳಿಕ ನಮ್ಮ ಸ್ನೇಹ ಗಾಢವಾಗಿತ್ತು. ಕೋಲಾರದಲ್ಲಿ ತಾನು ನಿರ್ದೇಶಿಸಿದ್ದ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನದ ಗೆಜ್ಜೆಪೂಜೆ(ಫುಲ್ ಪ್ರಾಕ್ಟೀಸ್)ಗೆ ನನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ ನಂತರ ಆತನ ಬಹುತೇಕ ನಾಟಕಗಳಿಗೆ ನನ್ನಿಂದ ಬೌದ್ಧಿಕ ನೆರವು ಪಡೆಯುವುದು ಕಡ್ಡಾಯ ಪದ್ದತಿ ಮಾಡಿಕೊಂಡಿದ್ದ.
ಜೀರೋ ಥಿಯೇಟರ್ ಪರಿಕಲ್ಪನೆ, ಥಿಯೇಟರ್ ಮಿರರ್ ಪತ್ರಿಕೆ ಈಗ ಗೆಳೆಯನ ಅಗಲಿಕೆಯೊಂದಿಗೆ ಕಾಲನ ಪರದೆಯ ಹಿಂದಕ್ಕೆ ಸರಿದಂತಾಯಿತು. ಆಲೂರು ದೊಡ್ಡನಿಂಗಪ್ಪ, ಎನ್.ಕೆ.ಹನುಮಂತಯ್ಯ, ಫೀನಿಕ್ಸ್ ರವಿ, ಉಗಮ ಶ್ರೀನಿವಾಸ್, ಶೀಲಾ ಶುಂಠಿಕೊಪ್ಪ, ಸಬ್ಬನಹಳ್ಳಿ ರಾಜು, ವಿ.ಎಂ.ಮಂಜುನಾಥ್, ವಿ.ಆರ್.ಕಾರ್ಪೆಂಟರ್, ನಟರಾಜ್ ಹುಳಿಯಾರ್, ನಟರಾಜ್ ಹೊನ್ನವಳ್ಳಿ, ನಾಗತಿಹಳ್ಳಿ ರಮೇಶ್ ಇನ್ನೂ ಮುಂತಾದ ಗೆಳೆಯರಾದ ನಾವು ಸದಾ ಒಟ್ಟಿಗೆ ಸೇರಿ ಕಳೆದ ದಿನಗಳು ಇನ್ನು ನೆನಪು ಮಾತ್ರ.
ಶಿವಶಂಕರ್ ಇತ್ತೀಚಿನ ವರ್ಷಗಳಲ್ಲಿ ನನಗೆ ಸಿಕ್ಕಿರಲಿಲ್ಲ. ಆತ್ಮೀಯ ಗೆಳೆಯ ಫೀನಿಕ್ಸ್ ರವಿ ತಿಪಟೂರು ಎರಡು ತಿಂಗಳ ಹಿಂದೆ ತನಗೆ ಮಗು ಹುಟ್ಟಿದ ಖುಶಿಯನ್ನು ನನ್ನೊಂದಿಗೆ ಹಂಚಿಕೊಳ್ಳಲು ನನಗೆ ಫೋನಾಯಿಸಿದಾಗ ಶಿವಶಂಕರ್ ನನ್ನೊಂದಿಗೆ ಆಪ್ತವಾಗಿ ಮಾತನಾಡಿದ. ಕೊಪ್ಪಳಕ್ಕೆ ಬನ್ನಿರೆಂದು ಕರೆದ. ಅವನನ್ನು ಭೇಟಿಯಾಗುವ ಮುನ್ನವೇ ಅಗಲಿಹೋದ ಸಂಗತಿ ತಿಳಿದು ಬಲು ನೋವಾಗುತ್ತಿದೆ.- ಡಾ.ವಡ್ಡಗೆರೆ ನಾಗರಾಜಯ್ಯ