ರಂಗಭೂಮಿಯ ಸಂಘಟಕ ಹಿರಿಯ ರಂಗಕರ್ಮಿ ಪಿ.ಶಾಡ್ರಾಕ್

ಮೈಕಿಲ್ಲದೆ ಎದೆ ತುಂಬಿ ಹಾಡುತ್ತಿದ್ದಾರೆ, ಅಲ್ಲೊಂದು ಹೋರಾಟದ ಕಿಚ್ಚು ಹತ್ತಿಸುತ್ತಿದ್ದಾರೆ, ಅಕ್ಷರ ಜಾಗೃತಿ ಮೂಡಿಸುತ್ತಿದ್ದಾರೆ ಅಂದರೆ ಅಲ್ಲಿ ಶಾಡ್ರಾಕ್ ಧ್ವನಿ ಇದೆ ಎಂದೇ ಭಾಸವಾಗುತ್ತದೆ.

ಅಷ್ಟರ ಮಟ್ಟಿಗೆ ಜ್ಞಾನ-ವಿಜ್ಞಾನ ಜಾಥಾ, ಸಾಕ್ಷರತಾ, ಬೀದಿ ನಾಟಕ, ನಾಟಕ ತರಬೇತಿ ಶಿಬಿರ, ಚಿಣ್ಣರ ಮೇಳ… ಹೀಗೆ ಹತ್ತು ಹಲವು ಕಡೆಯಲ್ಲಿ ಶಾಡ್ರಾಕ್ ಧ್ವನಿ ಅಚ್ಚಳಿಯದ ಉಳಿದಿದೆ.

ತೊಂಬತ್ತರ ದಶಕದ ಕಾಲಘಟ್ಟದಲ್ಲಿ ಹಾಸನ ಜಿಲ್ಲೆಯಾದ್ಯಂತ ಹಾಡಿನ ಮೂಲಕವೇ ಆಂದೋಲನ ತೋರಣ ಕಟ್ಟಿದ, ಅದರೊಳೊಗೆ ಭಾವ ಬಂಧ ಬೆಸೆದು ಸೌಹಾರ್ದ ತೆಕ್ಕೆಯಲ್ಲಿ ಒಂದಿಷ್ಟು ರಂಗಸಮೂಹವನ್ನು ಹೊಸತನ ಧಾವಂತಕ್ಕೆ ಮೀಯಿಸಿದ ಸಣ್ಣೇಗೌಡ, ಅಪ್ಪಾಜಿಗೌಡ ಅವರ ಸಾಲಿನಲ್ಲಿ ಶಾಡ್ರಾಕ್ ಪ್ರಮುಖರು.

ರಂಗಭೂಮಿಯಲ್ಲಿ ಯಾರು ಮುಖ್ಯರು ಅಲ್ಲ, ಅಮುಖ್ಯರು ಅಲ್ಲ ಎನ್ನುವುದನ್ನು ಸಾರುತ್ತಲೇ ಹಾಸನದ ಸಿಎಸ್ಐ ಶಾಲೆಯನ್ನು ದಶಕಗಳ ಕಾಲ‌ ಕೇಂದ್ರವಾಗಿರಿಸಿಕೊಂಡು, ನಾಡಿನ ನಾನಾ ಕ್ಷೇತ್ರದ ಜನರನ್ನು ಆ ನೆಲಕ್ಕೆ ಸೆಳೆದ ಸಂಘಟನೆಯ ಹಿಂದೆ ಶಾಡ್ರಾಕ್ ಶಕ್ತಿಯಿದೆ. ನಾವೆಲ್ಲರೂ ಅಲ್ಲಿ ನಿಮಿತ್ತ ಮಾತ್ರ. ಎಲ್ಲರನ್ನೂ ಒಳಗೊಳ್ಳುವ ಭಾವ ಅವರದು.

ಆ ಕಾರಣದಿಂದಾಗಿಯೇ ಅಷ್ಟ ಕ್ರೀಯಾಶೀಲವಾದ ರಂಗಸಿರಿ ತಂಡ ಕಟ್ಟಲು ಸಾಧ್ಯವಾಯಿತು. ಆ ಮೂಲಕ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆ, ನಾಟಕೋತ್ಸವ, ಚಿಣ್ಣರ ಮೇಳ, ನಾಟಕ ಶಿಬಿರ ಸೇರಿದಂತೆ ಹತ್ತು ಹಲವು ಯಶಸ್ವಿ ಕಾರ್ಯಕ್ರಮ ಸಂಘಟಿಸಲು ಸಾಧ್ಯವಾಯಿತು.

ಚಂದ್ರಶೇಖರ ಕಂಬಾರರ ಸಂಗ್ಯಾ-ಬಾಳ್ಯಾ
ನಾಟಕದಲ್ಲಿ ನನಗೊಂದು ಪಾತ್ರ ನೀಡಿ ನನ್ನೊಳಗಿನ ಕಲಾವಿದ ಮುಕ್ತವಾಗಲು ರಂಗಸಿರಿ ವೇದಿಕೆ ಕಾರಣ. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾ ಕೇಸರಿ ಹರವು ಅವರ ತೆಂಕ ಬಡಗ ನಾಟಕದಲ್ಲಿ ನಾನೊಬ್ಬ ಶಾಸಕನ ಪಾತ್ರ ಮಾಡಲು ಇದೇ ರಂಗಸಿರಿ ಕಾರಣ.

ಇಂಥಹ ಅದೆಷ್ಟು ಯಶಸ್ವಿ ನಾಟಕ, ಕಾರ್ಯಕ್ರಮಗಳನ್ನು ರಂಗಸಿರಿ ಉಣಬಡಿಸಿದೆಯೊ ಲೆಕ್ಕವಿಲ್ಲ.

ರಂಗಸಿರಿ ಅಂದರೆ ಅದು ಸಮಾನ ಮನಸ್ಕರ ಕಲಾವಿದರ ಕೂಟ. ಸಂಗ್ಯಾ ಬಾಳ್ಯಾ, ಸಿಂಗಾರೆವ್ವ ಮತ್ತು ಅರಮನೆ, ರಥಮಸುಲ ನಾಟಕಗಳಲ್ಲಿ
ಮುತ್ತಣ್ಣ ಹಾಡು ಮತ್ತೆ ಮತ್ತೆ ಕೇಳಬೇಕು ಅನ್ನಿಸುವಷ್ಟು ಆಪ್ತವಾಗಿ ಬಿಡುತ್ತವೆ.
ಸಾಕ್ಷರತೆಯ ಬೀದಿ ನಾಟಕಗಳಲ್ಲಿ ಜಹೊನಾ, ಆರ್ ಪಿ ವಿ, ಎಚ್.ಆರ್.ಸ್ವಾಮಿ ಮಾತು ಮರೆಯಲಾಗದು.
ರಂಗಸಿರಿ ಬಳಗ ಅಂದರೆ ಅಷ್ಟು ದೊಡ್ಡದು.
ಸತ್ಯಮೂರ್ತಿ, ರುದ್ರೇಶ್, ಚಿತ್ರ, ಮೋಹನ್, ಜವರಯ್ಯ, ವಿಶ್ವನಾಥ್, ಅಣ್ಣಾಜಿ, ಶಂಕರ, ಉದಯ್, ಸತ್ಯ, ಬೇಬಿ, ರಾಜಶೇಖರ, ನಾಜೀಮಾ, ನರಸಿಂಗ, ಯೋಗೇಶ್, ಭಾರತೀಶ್, ಜಯಶಂಕರ, ರಂಗನಾಥ… ನೆನೆಸುತ್ತಾ ಹೋದರೆ ಅದೊಂದು ದೊಡ್ಡ ಪಟ್ಟಿ.

ಇಂತಹ ತಂಡದಿಂದ ಧರ್ಮರಾಜ್, ಕೋರ್ಟ್ ಸತೀಶ್, ಹೊಳೆನರಸೀಪುರ ಗುರುಪ್ರಸಾದ್, ಕೊಟ್ಟೂರು ಶ್ರೀನಿವಾಸ್ ಸೇರಿದಂತೆ ಹಲವರು ಅಗಲಿ, ಬಾರದ ಲೋಕಕ್ಕೆ ಹೋಗಿದ್ದು ನೋವಿನ ಸಂಗತಿ.

ಏನೇ ಇರಲಿ, ದಶಕಗಳ ಕಾಲಘಟ್ಟ ಕಾಪಿಟ್ಟುಕೊಂಡ ಅಸಂಖ್ಯ ಬಳಗ ನಾಡಿನ ಉದ್ದಗಲಕ್ಕೂ ಪಸರಿಸಿದೆ.
ಹಿರಿಯ ರಂಗಕರ್ಮಿ ಕೆ.ರಂಗಸ್ವಾಮಿ ಅವರು, ಅದರ ನೇತೃತ್ವ ವಹಿಸಿ ಮುನ್ನೆಡೆಸುತ್ತಿದ್ದಾರೆ.

ಇದೆಲ್ಲಾ ಯಾಕೊ ನೆನಪಾಗುತ್ತಾ ಹೋಯಿತು.
ರಂಗಕರ್ಮಿ, ಆತ್ಮೀಯ ಗೆಳೆಯ ಶಾಡ್ರಾಕ್ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡುವ ಹೊತ್ತಿನಲ್ಲಿ ಇದು ಒಂದು ಬಗೆಯ ನುಡಿ ನಮನ.

ಶಾಡ್ರಾಕ್ ಗೆ ನಿಮ್ಮೆಲ್ಲರ ಹಾರೈಕೆ ಇರಲಿ.

ಚಿತ್ರ ಶೀರ್ಷಿಕೆ:
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಹಾಸನ ರಂಗಸಿರಿ ತಂಡದ ಕಾರ್ಯದರ್ಶಿ ಪಿ.ಶಾಡ್ರಾಕ್ ಅವರಿಗೆ ತುಮಕೂರು ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪ್ರದಾನ ಮಾಡಿದರು. ಸಂಸದ ಜಿ.ಎಸ್.ಬಸವರಾಜು, ಅಕಾಡೆಮಿ ಅಧ್ಯಕ್ಷ ಪ್ರೊ.ಭೀಮಸೇನ, ಮಾಜಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ಮೇಯರ್ ಫರಿದಾಬೇಗಂ ಮತ್ತಿತರರು ಹಾಜರಿದ್ದರು.

ಅಭಿನಂದನೆ:
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶಾಡ್ರಾಕ್ ಅವರನ್ನು ರಂಗಸಿರಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಅಭಿನಂದಿಸಿದೆ.

Please follow and like us:
error