ಯುಪಿ ಪೈಶಾಚಿಕ ಕೃತ್ಯ ಖಂಡಿಸಿ ಪ್ರತಿಭಟನೆ

ಕೊಪ್ಪಳ: ಹತ್ರಾಸ್‌ನಲ್ಲಿ ನಡೆದ ಗುಂಪು ಅತ್ಯಾಚಾರವನ್ನು ಖಂಡಿಸಿ AIDSO, AIDYO ಹಾಗೂ AIMSS ನೇತೃತ್ವದಲ್ಲಿ ಜಂಟಿಯಾಗಿ ಬುಧವಾರ ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎ .ಐ. ಡಿ. ವೈ .ಓ ಸಂಘಟನೆಯ ಜಿಲ್ಲಾ ಸಂಚಾಲಕ ಶರಣು ಪಾಟೀಲ್,
ಉತ್ತರ ಪ್ರದೇಶ ಯೋಗಿ ಆದಿತ್ಯ ನಾಥ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲದಂತಾಗಿದೆ. ಈಗ ಮತ್ತೋರ್ವ ಯುವತಿ ಮನೀಷಾ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದಾಳೆ. ದಲಿತ ಸಮುದಾಯಕ್ಕೆ ಸೇರಿದ 19 ವರ್ಷದ ಮನೀಷಾ ನಾಲ್ವರು ದುಷ್ಕರ್ಮಿಗಳ ಕಾಮತೃಷೆಗೆ ಬಲಿಯಾಗಿದ್ದಾಳೆ. ಎಂದಿನಂತೆ ಆರೋಪಿಗಳು ಮೇಲ್ಜಾತಿಯವರಾಗಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಮನಿಷಾ ಹಲವು ದಿನಗಳ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮತ್ತದೇ ಹಲವು ಲಕ್ಷ ರೂಗಳ ಪರಿಹಾರ, ತನಿಖೆ, ವಿಚಾರಣೆ, ಆರೋಪಿಗಳಿಗೆ ಜಾಮೀನು , ನಂತರ ಸಾಕ್ಷ್ಯಾಧಾರಗಳಿಲ್ಲದೆ ಬಿಡುಗಡೆ. ಮನೀಷಾಳ ನಾಲಿಗೆ ಕತ್ತರಿಸಲಾಗಿದೆ, ಕಾಲು ತುಂಡಾಗಿದೆ ಎನ್ನಲಾಗಿದೆ. ಆದರೂ ಅತ್ಯಾಚಾರಿಗಳ ರಕ್ಷಣೆಗೆ ಯೋಗಿ ಆದಿತ್ಯ ಸರ್ಕಾರ ಟೊಂಕಕಟ್ಟಿ ನಿಂತಿದ್ದಾರೆ ಎಂದು ಅವರು ಕಿಡಿ ಕಾರಿದರು.

ಎ.ಐ.ಎಂ.ಎಸ್.ಎಸ್ ಮಹಿಳಾ ಸಂಘಟನೆಯ ಜಿಲ್ಲಾ ಜಿಲ್ಲಾ ಸಂಘಟನ ಕಾರರಾದ ಮಂಜುಳಾ ಎಂ ಮಾತನಾಡಿ,
ಯೋಗಿ ಆದಿತ್ಯ ಆಡಳಿತದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವುದಿಲ್ಲ ಎನ್ನುವುದು ಸಾಕಷ್ಟು ಬಾರಿ ನಿರೂಪಿತವಾಗಿದೆ. ನಿರಪರಾಧಿಗಳಿಗೆ ಉಗ್ರ ಶಿಕ್ಷೆ ಆಗುವುದನ್ನೂ ಕಫೀಲ್ ಖಾನ್ ಪ್ರಕರಣದಲ್ಲಿ ಕಂಡಿದ್ದೇವೆ. ಇದು ಬದಲಾಗುತ್ತಿರುವ ಭಾರತದ ದಿಕ್ಸೂಚಿ. ದೆಹಲಿ ಗಲಭೆಗಳಲ್ಲೂ ಗೋಲಿ ಮಾರೋ ಸಾಲೋಂಕೋ ಎಂದವರು, ಪೊಲೀಸರ ಎದುರಿನಲ್ಲೇ ಬಂದೂಕು ಬಳಸಿದವರು ಮುಕ್ತವಾಗಿ ಓಡಾಡುತ್ತಿದ್ದಾರೆ.
ಭಾರತದಲ್ಲಿ ಮಹಿಳೆಯರ ಅತ್ಯಾಚಾರ, ದೌರ್ಜನ್ಯ ನಿತ್ಯ ಹೆಚ್ಚಾಗುತ್ತಿರುವುದು ನೋವಿನ ಸಂಗತಿ. ನಿರ್ಭಯ ಪ್ರಕರಣದ ನಂತರ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನು ರೂಪಿಸಿದರೂ ಕಾಲಕಾಲಕ್ಕೆ ಕಠಿಣ ಆಗುತ್ತಿಲ್ಲ . ಪುರುಷ ಪ್ರಧಾನ ಧೋರಣೆಯಿಂದ ಮಹಿಳೆಯನ್ನು ಭೋಗವಸ್ತುವಿನಂತೆ ನೋಡುವ ಸಮಾಜದ ದೃಷ್ಟಿಕೋನ ಬದಲಾಗಬೇಕು ಎಂದು ಅವರು ಆಗ್ರಹಿಸಿದರು.

ಈಗಾಗಲೇ ಉತ್ತರ ಪ್ರದೇಶದ ಪೊಲೀಸರು ಮನೀಷಾ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳಿಲ್ಲ ವಾದಿಸುತ್ತಿದ್ದಾರೆ. ಆರೋಪಿಗಳ ಪರ ಮೇಲ್ಜಾತಿಯ ಬಲಾಢ್ಯರು ಸರಕಾರದ ಮೇಲೆ ಒತ್ತಡ ಹೇರಲಾರಂಭಿಸಿರುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಮನೀಷಾ ಹತ್ತು ಜನರಲ್ಲೊಬ್ಬಳಾಗುತ್ತಾಳೆ., ಮೇಲ್ಜಾತಿಯ ಪ್ರಾಬಲ್ಯ, ಬಲಪಂಥೀಯ ರಾಜಕಾರಣ, ಕೋಮು ದ್ವೇಷ, ಜಾತಿ ಶ್ರೇಷ್ಠತೆಯ ವ್ಯಸನ ಈ ಎಲ್ಲ ಅನಿಷ್ಟಗಳನ್ನೂ ವ್ಯವಸ್ಥಿತವಾಗಿ ಒಡಲಲ್ಲಿ ಕಾಪಿಟ್ಟುಕೊಂಡಿರುವ ಹಾಲಿ ಯೋಗಿ ಆದಿತ್ಯ ನಾಥ ಸರ್ಕಾರದಲ್ಲಿ ಶೋಷಿತ ಸಮುದಾಯಗಳು ನಿರಂತರ ದೌರ್ಜನ್ಯ ಎದುರಿಸುತ್ತಲೇ ಇವೆ. ದಲಿತ ಸಮುದಾಯದ ಹೆಣ್ಣುಮಕ್ಕಳು ನಿರಂತರ ದೌರ್ಜನ್ಯ, ಅತ್ಯಾಚಾರಕ್ಕೊಳಗಾಗುತ್ತಲೇ ಇದ್ದಾರೆ. ನ್ಯಾಯಕ್ಕಾಗಿ ಹಂಬಲಿಸುತ್ತಲೇ ಇದ್ದಾರೆ. ನ್ಯಾಯ ಮರೀಚಿಕೆಯಾಗಿಯೇ ಇವೆ ಗೌರವ-ಮರ್ಯಾದಾ ಹತ್ಯೆಗಳು ನಡೆಯುತ್ತಲೆ ಇವೆ. ಇದು ಒಂದು ರಾಜ್ಯದ ಪ್ರಶ್ನೆಯಲ್ಲ. ಒಂದು ಸಮುದಾಯದ ಪ್ರಶ್ನೆಯೂ ಅಲ್ಲ. ಇದು ಈ ದೇಶದ ಮಹಿಳೆಯರ ಸಮಸ್ಯೆ, ರಾಜಕಾರಣ ಕಳೆದುಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಯ ನಾಯಕರಾದ ದೇವರಾಜ್ ಹೊಸಮನಿ, ಅಭಿಷೇಕ್, ವಿವಿಧ ಸಂಘಟನೆಗಳ ಮುಖಂಡರಾದ ಸಲೀಂ ಮಂಡಲಗಿರಿ , ಮಂಜು ದೊಡ್ಡಮನಿ, ಪರಶುರಾಮ್, ಸಣ್ಣ ಭೀಮನಗೌಡ, ದೇವೇಂದ್ರ, ಮಂಜು, ಮುಂತಾದವರು ಇದ್ದರು.

Please follow and like us:
error