ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ರಿಗೂ ಕೊರೋನಾ ದೃಢ!

ಕೊಪ್ಪಳ: ಜಿಲ್ಲೆಯ ಶಾಸಕರಾದ ರಾಘವೇಂದ್ರ ಹಿಟ್ನಾಳ ಹಾಗೂ ಪರಣ್ಣ ಮುನವಳ್ಳಿ ನಂತರ ಇದೀಗ ಮತ್ತೊಬ್ಬ ಶಾಸಕ ಹಾಲಪ್ಪ ಆಚಾರ್ ಅವರಿಗೂ ಕೊರೋನಾ ಸೋಂಕು ತಗುಲಿದೆ.

ಶುಕ್ರವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಕೊರೋನಾ ದೃಢಪಟ್ಟಿತ್ತು. ಸಚಿವರು ಇತ್ತೀಚೆಗೆ ಕೊಪ್ಪಳಕ್ಕೆ ಭೇಟಿ ನೀಡಿದ ವೇಳೆ ಶಾಸಕ ಹಾಲಪ್ಪ ಆಚಾರ್ ಸಹ ಜೊತೆಗಿದ್ದರು. ಹಾಗಾಗಿ
ಸ್ವಯಂ ಕೋವಿಡ್ ತಪಾಸಣೆ ಮಾಡಿಸಿಕೊಂಡ ಹಾಲಪ್ಪ ಅವರಿಗೆ ಕೊರೋನಾ ದೃಢಪಟ್ಟಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ವೈದ್ಯಕೀಯ ವರದಿಯನುಸಾರ ಕೊರೋನಾ ಸೊಂಕು ಧೃಢಪಟ್ಟಿದೆ. ವೈದ್ಯರ ಸಲಹೆಯನ್ವಯ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ. ತಮ್ಮೆಲ್ಲರ ಹಾರೈಕೆಯಿಂದ ಆರೋಗ್ಯವಾಗಿದ್ದು, ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕದಲ್ಲಿರುವವರಲ್ಲಿ ಯಾರಿಗಾದರೂ ಸೊಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ತಪಾಸಣೆ ಮಾಡಿಸಿಕೊಳ್ಳುವಂತೆ ವಿನಂತಿಸಿದ್ದಾರೆ.

ಸಾರ್ವಜನಿಕರ ಆರೋಗ್ಯ ಹಾಗೂ ಹಿತದೃಷ್ಟಿಯಿಂದ ಖುದ್ದು ಭೇಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜನರ ಸಹಕಾರ ಕೋರಿರುವ ಅವರು, ಈ ಅವಧಿಯಲ್ಲಿ ದೂರವಾಣಿ ಮೂಲಕ ತಾವು ಹಾಗೂ ತಮ್ಮ ಕಛೇರಿಯ ಸಿಬ್ಬಂದಿ ಜನರ ಸೇವೆಗೆ ಸದಾ ಕಾಲ ಲಭ್ಯ ಎಂದು ತಿಳಿಸಿದ್ದಾರೆ.

ಎಲ್ಲರೂ ಸೇರಿ ಮುಂಜಾಗ್ರತೆ ವಹಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನಾ ವಿರುದ್ಧದ ಸಮರದಲ್ಲಿ ಜಯವನ್ನು ಸಾಧಿಸೋಣ ಎಂದು ಶಾಸಕ ಹಾಲಪ್ಪ ಆಚಾರ್ ಸಂದೇಶ ನೀಡಿದ್ದಾರೆ.

Please follow and like us:
error