ಯಡಿಯೂರಪ್ಪ ರಾಜಾಹುಲಿ, ಇನ್ನೂ ೩ ವರ್ಷ ಅವರೇ ಸಿಎಂ : ಅಶೋಕ್

ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ರಾಜಾಹುಲಿ. ನಮ್ಮ ತಂಡದ ಕಬ್ಬಡ್ಡಿ ತಂಡದ ಕ್ಯಾಪ್ಟನ್. ಅವರಿಗೆ ರೈಟ್ ಮಾಡೋದು ಗೊತ್ತು, ಕ್ಯಾಚ್ ಹಾಕೋದು ಗೊತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಕೊಪ್ಪಳದಲ್ಲಿ ಗುರುವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯವೇ ಇಲ್ಲ, ಮುಂದೆಯೂ ಅವರೇ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದರು.

ಈಗಾಗಲೇ ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಾಗಿದ್ದು, ಗುರುವಾರ ಕೊಪ್ಪಳ ಮತ್ತು ಗದಗ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲಿಸಲಾಗುವುದು. ಈಗಷ್ಟೇ ಕೊಪ್ಪಳದಲ್ಲಿ ಸಭೆ ಮುಗಿದಿದ್ದು, ಮಳೆಹಾನಿ ಮತ್ತು ಕೋವಿಡ್19 ಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದರು.

ಕೋವಿಡ್19ಗೆ ಸಂಬಂಧಿಸಿದಂತೆ ಕೊಪ್ಪಳಕ್ಕೆ 9.83 ಕೋಟಿ ಸರ್ಕಾರ ಹಣ ನೀಡಿದೆ. 3 ಕೋಟಿ ರೂಪಾಯಿ ಹಣ ಜಿಲ್ಲಾಡಳಿತ ಬಳಿ ಇನ್ನೂ ಇದೆ. ವೆಂಟಿಲೇಟರ್ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರವಾಹದಿಂದಾಗಿ 38 ಜಾನುವಾರು ಸತ್ತಿವೆ, 465 ಮನೆ ಬಿದ್ದಿವೆ. ಕೊಪ್ಪಳ ಜಿಲ್ಲೆಯಲ್ಲಿ ಬಿದ್ದ ಅಕಾಲಿಕ ಮಳೆಗೆ 23 ಕೋಟಿ ಪರಿಹಾರ ನೀಡಲಾಗಿದೆ. 3 ಸಾವಿರ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.

ಡಿಸಿ ಅವರ ಪಿಡಿ ಖಾತೆಯಲ್ಲೂ ಸಾಕಷ್ಟು ಹಣ ಇದೆ. ಖಾತೆಯಲ್ಲಿ 5 ಕೋಟಿಗೂ ಕಡಿಮೆ ಹಣ ಇದ್ದರೆ ಕೂಡಲೇ ಹಣ ಹಾಕ್ತಿವಿ. 1 ಲಕ್ಷ 71 ಸಾವಿರಕ್ಕೂ ಹೆಚ್ಚು ಸಾಮಾಜಿಕ ಭದ್ರತೆಯ ಫಲಾನುಭವಿಗಳಿದ್ದಾರೆ. ಎಲ್ಲರಿಗೂ ಬ್ಯಾಂಕ್ ಮೂಲಕ ಹಣ ನೀಡಲು ಸೂಚಿಸಲಾಗಿದೆ. ಆಧಾರ ಲಿಂಕ್ ಮಾಡಲು ಹೇಳಲಾಗಿದೆ. ಇದರಿಂದ 5 ರಿಂದ 6 ಕೋಟಿ ಹಣ ಸರ್ಕಾರಕ್ಕೆ ಉಳಿಯಲಿದೆ.
ಅರಣ್ಯ ಮತ್ತು ರೆವಿನ್ಯೂ ಜಮೀನಿನ ಬಗ್ಗೆ ಸಮಸ್ಯೆ ಇದೆ. ಅರಣ್ಯ ಇಲಾಖೆಯ ಭೂಮಿ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 334 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 8 ಸಾವಿರದ 71 ಕೋಟಿ ರೂಪಾಯಿ ಹಾನಿಯಾಗಿದೆ.
ಸಿಎಂ ಯಡಿಯೂರಪ್ಪ ನಾಳೆ ದೆಹಲಿಗೆ ಹೋಗುತ್ತಿದ್ದಾರೆ. ರಾಜ್ಯಕ್ಕೆ ಸಿಗಬೇಕಾದ ಅನುದಾನ ಕೇಳಲು ದೆಹಲಿಗೆ ಹೋಗುತ್ತಿದ್ದಾರೆ. ಸಿಎಂ ಕೇಂದ್ರದ ನಾಯಕರನ್ನು ಭೇಟಿ ಮಾಡಿ, ಹೆಚ್ಚು ಅನುದಾನ ತರುವ ಕೆಲಸ ಮಾಡ್ತಿದ್ದಾರೆ ಎಂದರು.

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ವಿಚಾರ; ಇದು ಕೇವಲ ರಾಜ್ಯದಲ್ಲಿ ಇದೆ.
ವಿದ್ಯಾವಂತ ‌ರೈತರು ಕೃಷಿ‌ ಕಡೆಗೆ ಬರಬೇಕು ಎಂಬುದು ನಮ್ಮ ಕಾಯ್ದೆ ತಿದ್ದುಪಡಿಯ ಉದ್ದೇಶ ಎಂದ ಆರ್.ಅಶೋಕ, ವೃದ್ಧಾಪ್ಯ ವೇತನಕ್ಕಾಗಿ ಇನ್ನು‌ ಮುಂದೆ ಅರ್ಜಿ ಹಾಕಬೇಕಿಲ್ಲ‌. ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಆಧಾರದ ಮೇಲೆ ಫಲಾನುಭವಿಗಳೆಂದು ಆಯ್ಕೆ ಮಾಡಲಾಗುವುದು. ಅಧಿಕಾರಿಗಳು ಬೋಗಸ್ ಪಿಂಚಣಿ ತಡೆಯಲು ಇನ್ನೂ 15 ದಿನಗಳೊಳಗೆ ಫಲಾನುಭವಿಗಳ ಆಧಾರ್ ಲಿಂಕ್ ಮಾಡಿಸಬೇಕು. ಇಲ್ಲದಿದ್ದರೆ ಕ್ರಮ ಖಚಿತ ಎಂದು ಎಚ್ಚರಿಸಿದರು.

ಈ ವೇಳೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಓ ರಘುನಂದನ್ ಮೂರ್ತಿ ಇತರರು ಇದ್ದರು.

Please follow and like us:
error