ಮಿತಿಮೀರಿ ಅಂತರ್ಜಲ ಬಳಕೆ- ಜಲತಜ್ಞ ಎನ್.ಜೆ.ದೇವರಾಜ ರೆಡ್ಡಿ ಆತಂಕ


ಕೊಪ್ಪಳ ತಾಲ್ಲೂಕಿನ ಕಾಮನೂರಿನಲ್ಲಿ ‘ಮಣ್ಣಿನೊಂದಿಗೆ ಮಾತುಕತೆ’ ರೈತ ಬಳಗವು ಸೋಮವಾರ ಆಯೋಜಿಸಿದ್ದ ‘ಅಧೋಗತಿಯತ್ತ ಅಂತರ್ಜಲ- ಪರಿಹಾರ ಏನು?’ ಸಂವಾದದಲ್ಲಿ ಜಲತಜ್ಞ ಡಾ. ಎನ್.ಜೆ.ದೇವರಾಜ ರೆಡ್ಡಿ ಮಾತನಾಡಿದರು.


ಕಾಮನೂರು :
ಮಿತಿಮೀರಿದ ನೀರಿನ ಬಳಕೆಯಿಂದಾಗಿ ಅಂತರ್ಜಲ ಅತಿವೇಗದಲ್ಲಿ ಖಾಲಿಯಾಗುತ್ತಿದ್ದು, ಈಗಲೇ ಎಚ್ಚೆತ್ತುಕೊಳ್ಳದೇ ಹೋದರೆ ಮುಂದಿನ ದಿನಗಳು ಕರಾಳವಾಗಲಿವೆ ಎಂದು ಅಂತರ್ಜಲ ಮರುಪೂರಣ ತಜ್ಞ ಡಾ. ಎನ್.ಜೆ.ದೇವರಾಜ ರೆಡ್ಡಿ ಕಳವಳ ವ್ಯಕ್ತಪಡಿಸಿದರು. “ನೀರಾವರಿ, ಉದ್ಯಮ ಹಾಗೂ ಇತರ ಬಳಕೆಗೆ ಕೊಳವೆಬಾವಿಗಳಿಂದ ಯಥೇಚ್ಛವಾಗಿ ನೀರನ್ನು ಮೇಲಕ್ಕೆ ಎತ್ತಲಾಗುತ್ತಿದೆ. ಆದರೆ ಉಚಿತವಾಗಿ ಸಿಗುವ ಮಳೆನೀರಿನ ಮರುಪೂರಣಕ್ಕೆ ಮಾತ್ರ ಮುಂದಾಗುತ್ತಿಲ್ಲ” ಎಂದು ಅವರು ವಿಷಾದಿಸಿದರು. ‘ಮಣ್ಣಿನೊಂದಿಗೆ ಮಾತುಕತೆ’ ರೈತ ಬಳಗವು ಸೋಮವಾರ ಇಲ್ಲಿ ಆಯೋಜಿಸಿದ್ದ ‘ಅಧೋಗತಿಯತ್ತ ಅಂತರ್ಜಲ- ಪರಿಹಾರ ಏನು?’ ಸಂವಾದದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಆರು ಕೋಟಿ ಕೊಳವೆಬಾವಿಗಳಿದ್ದು, ಪ್ರಾಯಶಃ ಇಷ್ಟೊಂದು ಸಂಖ್ಯೆಯ ಬೋರ್‌ವೆಲ್ ಎಲ್ಲೂ ಇಲ್ಲ. ವರ್ಷಕ್ಕೆ ೫,೦೦೦ ಮಿ.ಮೀ ಮಳೆ ಸುರಿಯುವ ಮಲೆನಾಡಿನಲ್ಲೂ ನೀರಿನ ಸಮಸ್ಯೆ ಇದೆ ಎಂದರೆ, ನಾವು ಎಲ್ಲೋ ದಾರಿ ತಪ್ಪುತ್ತಿದ್ದೇವೆ ಎಂದು ಅವರು ಹೇಳಿದರು.
ಪ್ರಕೃತಿದತ್ತವಾದ ಮಳೆನೀರನ್ನು ಮರುಪೂರಣ ಮಾಡುವುದರಿಂದ, ಅಂತರ್ಜಲದ ಮಟ್ಟ ಹಾಗೂ ಗುಣಮಟ್ಟ ಹೆಚ್ಚುತ್ತದೆ. ನೀರಿನ ಮಿತಬಳಕೆಯ ಬಗ್ಗೆ ಎಲ್ಲರಲ್ಲೂ ಅರಿವು ಮೂಡಬೇಕು. ಮುಂದಿನ ಪೀಳಿಗೆಗೆ ನೀರ ನೆಮ್ಮದಿ ಕಲ್ಪಿಸಲು ಮಳೆನೀರು ಸಂಗ್ರಹ, ಇಂಗಿಸುವಿಕೆಯು ಒಂದು ಅಂದೋಲನದ ರೂಪದಲ್ಲಿ ನಡೆಯಬೇಕು ಎಂದು ಸಲಹೆ ಮಾಡಿದರು.
ಮಳೆನೀರನ್ನು ಇಂಗಿಸಿ, ಕೊಳವೆಬಾವಿಗೆ ಪುನರುಜ್ಜೀವನ ಕಲ್ಪಿಸಿದ ಯಶೋಗಾಥೆಗಳನ್ನು ಅವರು ನೀಡಿದರು. ಚಾವಣಿ ನೀರು ಸಂಗ್ರಹ, ಕೊಳವೆಬಾವಿ ಮರುಪೂರಣದ ಸರಳ ವಿಧಾನಗಳ ಕುರಿತು ಮಾಹಿತಿ ಹಂಚಿಕೊAಡರು. ಕೃಷಿ ವಿಜ್ಞಾನಿ ಡಾ. ಬದರಿಪ್ರಸಾದ್ ಪಿ.ಆರ್., ಸಾವಯವ ಕೃಷಿಕರಾದ ಶ್ರೀಪಾದರಾಜ ಮುರಡಿ, ಶಂಕರ ರಡ್ಡಿ ಕಾಟ್ರಳ್ಳಿ, ಆನಂದತೀರ್ಥ ಪ್ಯಾಟಿ, ವಿ.ಎಸ್.ಶೆಟ್ಟರ್, ಪವನ ಗಡಚಿಂತಿ ಇತರರು ಉಪಸ್ಥಿತರಿದ್ದರು.

Please follow and like us:
error