ಮಾದ್ಯಮದ ಜಾತೀಯತೆ ಮತ್ತು ಸರ್ಕಾರದ ನೀತಿ ಸಂಹಿತೆ..!?’

ಸಿ.ಎಸ್.ದ್ವಾರಕಾನಾಥ್


ಕರೋನ ರೋಗದಂತಹ ಅತ್ಯಂತ ಭೀಕರ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿದೆ. ಈ ನಿರ್ಣಾಯಕ ಹೋರಾಟದಲ್ಲಿ ನಮಗೆ ಬೇಕಿರುವುದು ಏಕತೆ, ಸಮಗ್ರತೆ, ಪ್ರೀತಿ, ಕರುಣೆ, ಸಾಂತ್ವನ, ಜಾತ್ಯಾತೀತತೆ ಮತ್ತು ದೇಶಪ್ರೇಮದಂತಹ ಸಾಂವಿಧಾನಿಕ ಆಶಯಗಳಷ್ಟೆ. ದುರಂತವೆಂದರೆ ಕೆಲವೇ ವಿರಳ ಪ್ರಕಣಗಳನ್ನಿಟ್ಟುಕೊಂಡು ಯಾವುದೋ ಒಂದು ಇಡೀ ಸಮುದಾಯವನ್ನೇ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ನಿಜಕ್ಕೂ ಯಾವುದೇ ಸಮುದಾಯಕ್ಕೆ ಸೇರಿದವರು ಯಾವುದೇ ರೀತಿಯ ತಪ್ಪು ಮಾಡಿದ್ದರೆ, ಅದರ ಬಗ್ಗೆ ತನಿಖೆ ಮಾಡಿ ಸತ್ಯಾಸತ್ಯತೆಗಳನ್ನು ಒರೆಹಚ್ಚಿ ಕ್ರಮ ಕೈಗೊಳ್ಳಲು ಪೋಲಿಸ್ ಇಲಾಖೆಯಿದೆ. ಈ ತಪ್ಪು ಸಾಭೀತಾದರೆ ಶಿಕ್ಷೆ ನೀಡಲು ನ್ಯಾಯಾಲಯಗಳಿವೆ. ಇಂತಹ ದುಷ್ಟರಿಗೆ ಕಾನೂನಿನಲ್ಲಿ ಅವಕಾಶವಿದ್ದರೆ, ನೇಣಿನಂತಹ ಶಿಕ್ಷೆ ಕೊಟ್ಟರೂ‌ ಸರಿ. ಇದು ಸ್ವಾಗತಾರ್ಹ‌ ಕೂಡ. ಆದರೆ, ಅದೇ ರೀತಿ ಕರೋನಾದಂತಹ ಬಿಕ್ಕಟ್ಟನ್ನು‌ ದೇಶ ಗಂಭೀರವಾಗಿ ಎದುರಿಸುತ್ತಿರುವಾಗ, ಇಡೀ ದೇಶದೊಂದಿಗೆ ನಿಲ್ಲಬೇಕಾದ, ದೇಶದ ಸಮಗ್ರ ಹೋರಾಟಕ್ಕೆ ಬೆಂಬಲಿಸಬೇಕಾದ ಮಾದ್ಯಮಗಳಲ್ಲಿ ಕೆಲ ಮಾದ್ಯಮಗಳು ಯಾವುದೇ ಸಾಮಾಜಿಕ ಜವಾಬ್ದಾರಿಯಿಲ್ಲದೆ, ಕನಿಷ್ಟ ವೃತ್ತಿಪರ ನೈತಿಕತೆಯಿಲ್ಲದೆ, ಸಾರ್ವಜನಿಕ ಕಾಳಜಿಯಿಲ್ಲದೆ ದಿನನಿತ್ಯ ಸುಳ್ಳುಗಳನ್ನು ಹೇಳುತ್ತಾ ಒಂದಲ್ಲಾ ಒಂದು ರೀತಿಯಲ್ಲಿ ಜಾತಿ ಮತ್ತು ಕೋಮು ಬಾವನೆಗಳನ್ನು ಪ್ರಚೋದಿಸುತ್ತಿವೆ ಎಂಬುದು ಮೇಲ್ನೋಟಕ್ಕೇ ಡಾಳಾಗಿ ಕಾಣುತ್ತಿದೆ! ಅದರಲ್ಲೂ 'ಕನ್ನಡದ ದೃಶ್ಯ ಮತ್ತು ಪ್ರಿಂಟ್ ಮೀಡಿಯಾ' ಬಗ್ಗೆ ಈ ರೀತಿಯ ಅಸಂಖ್ಯಾತ ಆರೋಪಗಳಿವೆ.

ಈ ಆರೋಪಗಳಲ್ಲೂ ಹುರುಳಿಲ್ಲದಿಲ್ಲ! ಹಾಗಾದರೆ ಇಲ್ಲಿ ಈ ಅಪದ್ದಗಳನ್ನು ಹರಡುತ್ತಿರುವವರು ಯಾರು? ಮೇಲ್ನೋಟಕ್ಕೆ ಕಂಡುಬರುವಂತೆ ಕರ್ನಾಟಕದ ಮಾದ್ಯಮಗಳ ಯಜಮಾನರಲ್ಲಿ ಒಂದೆರಡು ಅಪವಾದಗಳನ್ನು ಬಿಟ್ಟರೆ ಅವರು ಅತಿಯಾದ ಜಾತೀವಾದಿ ಅಥವಾ ಮತೀಯವಾದಿ ಗಳಾಗಿರುವ ಸಾದ್ಯತೆ ಕಡಿಮೆ ಎನಿಸುತ್ತದೆ. ಅವರು ಕೇವಲ ವ್ಯಾಪಾರಿಗಳಾಗಿ ಅಥವಾ ಉದ್ಯಮಿಗಳಾಗಿ ಮಾತ್ರ ವ್ಯಾಪಾರಿ ದೃಷ್ಟಿಯಿಂದ ಲಾಭ ನಷ್ಟಗಳನ್ನಷ್ಟೇ ನೋಡುವವರು.ಹಾಗಾದರೆ ಈ ಜಾತಿ ಮತ್ತು ಕೋಮುಗಳ ದುಷ್ಟ ಅಜೆಂಡ ಯಾರದು?
ಕೆಲ ಮಾದ್ಯಮಗಳು ವ್ಯವಸ್ಥಿತವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ, ಕೋಮು ಮತ್ತು ಜಾತೀ ದ್ವೇಶಗಳನ್ನು ಹರಡುತ್ತಿರುವುದನ್ನು ಮನಗಂಡು ರಾಜ್ಯದ ಮುಖ್ಯ ಮಂತ್ರಿಗಳು ಮತ್ತು ದೇಶದ ಪ್ರಧಾನಮಂತ್ರಿ ಗಳು ಇವರಿಗೆ ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಇನ್ನೂ ಕೆಲವಕ್ಕೆ ನೇರವಾಗಿ ಸರ್ಕಾರದಿಂದ ನೋಟೀಸ್ ಮತ್ತು ಸುಳ್ಳು ಸುದ್ದಿ ನೀಡಿದ್ದನ್ನು ಎತ್ತಿ ತೋರಿಸುವ clarification ಕೂಡ ನೀಡಲಾಗಿದೆ. ಆದರೂ ಈ ಕೆಲ ಮಾದ್ಯಮಗಳು ಸುಳ್ಳು ಹೇಳುವುದನ್ನು ಮತ್ತು ದ್ವೇಷ ಹರಡುವುದನ್ನು ಸ್ವಲ್ಪವೂ ಕಡಿಮೆ ಮಾಡಿಲ್ಲ !?
ಹೀಗಿದ್ದಾಗ ನಾವಿಲ್ಲಿ ಸಮಸ್ಯೆಯ ಮೂಲಕ್ಕೆ ಹೋಗಿ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ? ಸದರಿ ಮಾದ್ಯಮ ಅತಿ ಹೆಚ್ಚು ಜಾತೀಕರಣ ಮತ್ತು ಮತೀಯಕರಣ ಹೊಂದಲು ಕಾರಣಗಳೇನಿರಬಹುದು? ಎಂಬುದನ್ನು ಕನ್ನಡ ನಾಡಿನ‌ ಪ್ರತಿಯೊಬ್ಬ ಪ್ರಜ್ನಾವಂತರೂ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಗಂಭೀರವಾಗಿ ಚಿಂತಿಸಿ ಅರ್ಥಮಾಡಿಕೊಳ್ಳಬೇಕಿದೆ. ಒಳಗಿನ ಸತ್ಯವನ್ನು ಎಳೆಎಳೆಯಾಗಿ ಅರಿಯಬೇಕಿದೆ. ಈ ಸುಳ್ಳು ಮತ್ತು ದ್ವೇಶಗಳನ್ನು ಯಾರು ಹರಡುತಿದ್ದಾರೆ? ಅಂತವರ ಹಿಂದಿರುವ ದುರುದ್ದೇಶವಾದರೂ ಏನು? ಎಂಬ ಅರಿವು ಕೂಡ ನಮಗೆ ಅಗತ್ಯ. ಯಾಕೆಂದರೆ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವನ್ನು ಜಾತಿ, ಮತಗಳ ಆಧಾರದ ಮೇಲೆ ಛಿದ್ರಮಾಡಲು ಹೊರಟ ಈ ಅಘಾತಕಾರಿ ಜನದ್ರೋಹಿ ಮತ್ತು ದೇಶದ್ರೋಹಿ ಚಟುವಟಿಕೆಯ ಬಗ್ಗೆ ಗಂಭೀರವಾಗಿ ಚಿಂತಿಸುವುದು ಪ್ರತಿಯೊಬ್ಬ ದೇಶವಾಸಿಯ, ದೇಶಪ್ರೇಮಿಯ ಕರ್ತವ್ಯ ಎಂಬುದನ್ನು ಮರೆಯಬಾರದು.
ಭಹುಶ್ಯ ಎಲ್ಲರಿಗೂ ಗೊತ್ತಿರುವ ಸತ್ಯ ಮತ್ತು ಕೆಲವರಿಗೆ ಅನುಮಾನಗಳಿರುವಂತೆ ಸದರಿ ಮಾದ್ಯಮಗಳ ಸಂಪಾದಕೀಯ ಮತ್ತು ವರದಿಗಾರಿಕೆಯಲ್ಲಿರುವವರು ಅತ್ಯಂತ ಕರ್ಮಠ ಜಾತೀವಾದಿಗಳು, ಅಥವಾ ಮತೀಯವಾದಿಗಳಾಗಿರಬಹುದೆ? ದೃಶ್ಯ ಮಾದ್ಯಮದ ಸುದ್ದಿ ಮುಖ್ಯರು, ಆಂಕರ್ ಗಳು‌‌ ದ್ವೇಶಪೂರಿತ ಹಾಗೂ ಅತ್ಯಂತ ಅಪಾಯಕಾರಿ ಜಾತೀವಾದಿಗಳಾಗಿರಬಹುದೆ? ಹಾಗಾದರೆ ಇವರೆಲ್ಲ ಯಾವ ಜಾತಿಗೆ ಸೇರಿದವರು? ಇವರೆಲ್ಲರ ಹಿಂದೆ ಯಾವುದೋ ಮತೀಯ ಮತ್ತು ಜಾತೀಯ ದೇಶವಿರೋಧಿ ದುಷ್ಟ ಶಕ್ತಿಗಳ ದುರುದ್ದೇಶದ ಹುನ್ನಾರ, ಷಡ್ಯಂತ್ರಗಳು ಇದೆಲ್ಲದರ ಹಿಂದಿರಬಹುದೆ?
ಯಾವುದೋ ನಿರ್ದಿಷ್ಟ ಕೋಮು ತಪ್ಪು ಮಾಡಿದ್ದರೆ ಅದಕ್ಕೆ ಪೋಲಿಸ್ ಮತ್ತು ನ್ಯಾಯಾಲಗಳಿದ್ದಾವೆ ಎನ್ನುತ್ತೇವೆ. ಅವುಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದು ಸಹಜ, ಹಾಗಾದರೆ ವ್ಯವಸ್ಥಿತವಾಗಿ ಸುಳ್ಳುಗಳನ್ನು ಹರಡುತ್ತಾ ಜಾತಿ, ಮತಗಳೆಂದು ಮನುಷ್ಯ ಮನುಷ್ಯರ ನಡುವೆ ಕಂದಕವನ್ನು ಸೃಷ್ಟಿಸುತ್ತಿರುವ ಮಾದ್ಯಮದ ಮೇಲೂ ಗಂಭೀರ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಲ್ಲವೆ?
“ಇವರ ಮೇಲೆ ಯಾರೂ ದೂರು ನೀಡುವವರಿಲ್ಲ?” ಎನ್ನುವುದಾದರೆ ಸ್ಟೇಟ್ ಇಂಟೆಲಿಜೆನ್ಸ್ ಏನು ಮಾಡುತ್ತಿದೆ? ಜಾತಿಮತಗಳ ಮೇಲೆ ದೇಶವನ್ನೇ ಛಿಧ್ರಮಾಡಲು ಹೊರಟ ಈ ವಿಛ್ಛಿದ್ರಕಾರಿ ಶಕ್ತಿಗಳ ಮೇಲೆ ಪೋಲಿಸ್ ಇಂಟೆಲಿಜೆನ್ಸಿ ಕಣ್ಣಿಡದಿದ್ದರೆ ಇದು ದೇಶದ ಏಕತೆಗೆ, ದೇಶದ ಅಖಂಡತೆಗೆ, ದೇಶದ ಅಭಿವೃದ್ಧಿಗೆ ಮಾರಕವಲ್ಲವೆ? ಇವರ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಇವರ‌ ದಿನನಿತ್ಯದ ದುರುದ್ದೇಶದ ಅಜೆಂಡಾಗಳನ್ನು ಗಮನಿಸಿ, ಸ್ಪಷ್ಟ ಸಾಕ್ಷಾದಾರಗಳ ಮೇಲೆ ಸಂಭಂದಪಟ್ಟ ಪೋಲಿಸರು ಸ್ವಯಂದೂರು (sue motto) ಯಾಕೆ‌ ದಾಖಲಿಸಿಕೊಳ್ಳಬಾರದು?
ಇದು ಜಾತಿಗಳ ದೇಶ, ಎಲ್ಲವೂ ಜಾತಿಗಳ ಆಧಾರದ ಮೇಲೆ ನಡೆಯುತ್ತದೆ‌ ಎಂಬುದು ಎಲ್ಲರಿಗೂ ಗೊತ್ತಿರುವ ನಗ್ನಸತ್ಯ. ಇದು ಅಪಾಯಕಾರಿ ಅಲ್ಲದಿದ್ದರೆ ಅದನ್ನು ನಿರ್ಲಕ್ಷಿಸಬಹುದಿತ್ತು, ಆದರೆ ಇದು ದೇಶವನ್ನೇ ಒಡೆಯಲಿಕ್ಕೆ ಹೊರಟಿದೆಯೆಂದರೆ?
ಆದ್ದರಿಂದ ಯಾವುದೇ ಮುಲಾಜಿಲ್ಲದೆ ಎಲ್ಲಾ ಮಾದ್ಯಮದಿಂದಲೂ ಜಾತಿವಾರು ವಿವರ ಯಾಕೆ ಪಡೆಯಬಾರದು? ಈ ವಿವರ ಸಿಕ್ಕರೆ ಬಹುತೇಕ ಯಾವ ಜಾತಿಯವರು ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ? ಇದು ಸಂಘಟಿತ, ದುಷ್ಟತನದ ಪೂರ್ವನಿಯೋಜಿತ ಷಡ್ಯಂತರವೋ ಅಥವಾ ಆಕಸ್ಮಿಕವೋ ಎಂಬುದು ‘ಜನತಾ ನ್ಯಾಯಾಲಯ’ಕ್ಕೆ ಮನವರಿಕೆಯಾಗುತ್ತದೆ.! ಇದರಿಂದ ಜನ ಜಾಗೃತಿಯಾಗುತ್ತಾರೆ?
ಪತ್ರಿಕೆ/ದೃಶ್ಯ ಮಾದ್ಯಮಗಳ ಸಂಪಾದಕೀಯದಲ್ಲಿ ಯಾವ್ಯಾವ ಜಾತಿಯವರು ಶೇಕಡಾ ಎಷ್ಟು ಜನ ಇದ್ದಾರೆ. ಮುಖ್ಯ ನಿರ್ಣಯ ಕೈಗೊಳ್ಳುವಲ್ಲಿ ಇಲ್ಲಿ ಯಾವ ಜಾತಿಗಳು ಪ್ರಮುಖ ಪಾತ್ರ ವಹಿಸುತ್ತವೆ. Decision making ನಲ್ಲಿರುವವರ ಅರ್ಹತೆಗಳೇನು? ಬದ್ದತೆಗಳೇನು? ಅರ್ಹತೆ ಮತ್ತು ಸೀನಿಯಾರಿಟಿ ಇದ್ದರೂ ಯಾವಯಾವ ಜಾತಿಯವರನ್ನು ಹಿಂದಿಕ್ಕಿ ಯಾವಯಾವ ಜಾತಿಯವರನ್ನು ಕೇವಲ ಜಾತಿ ಕಾರಣಕ್ಕೇ ಆಯಕಟ್ಟಿನ ಜಾಗಗಳಲ್ಲಿ ಕೂರಿಸಲಾಗಿದೆ? ಹಾಗಿದ್ದರೆ ಇವರ ಅಜೆಂಡಾಗಳೇನು? ಎಂಬುದು ಹೊರಬರುತ್ತೆ.
ದೃಶ್ಯ ಮಾದ್ಯಮದ ಮುಖ್ಯರು ಮತ್ತು ಆಂಕರ್ ಗಳು ಯಾವ ಜಾತಿ, ಮತಕ್ಕೆ ಸೇರಿದವರು. ಯಾವ ಯಾವ ಆಂಕರ್ ತಾನು ಆಂಕರಿಂಗ್ ಮಾಡುವಾಗ ಆತ/ಆಕೆ ಸೂಕ್ಷ್ಮವಾಗಿ ಬೆಂಬಲಿಸುವ, ಪ್ರತಿಪಾದಿಸುವ ಜಾತಿಧರ್ಮಗಳ್ಯಾವುವು? ಆತ/ಆಕೆ ವಿರೋಧಿಸುವ, ದ್ವೇಶಿಸುವ ಜಾತಿಮತ ಯಾವುದು? ಯಾವ ಜಾತಿ ಮತ್ತು ಧರ್ಮೀಯರ ಬಗ್ಗೆ ಸತತವಾಗಿ ಸುಳ್ಳು ಸುದ್ದಿ ಹರಡುತ್ತಾರೆ? ಯಾವ ಧರ್ಮೀಯರನ್ನು ಎತ್ತಿಕಟ್ಟಿ ಯಾವ ಧರ್ಮೀಯರ ವಿರುದ್ದ ಪ್ರಚೋದಿಸುತ್ತಾರೆ? ಈ ಕೃತ್ಯಕ್ಕೆ ಆತ/ಆಕೆ ಬಳಸುವ ತಂತ್ರವೇನು, ಆತ/ಆಕೆ ಬಳಸುವ ಪದಪ್ರಯೋಗವೇನು? ನೇರವಾಗಿ ಅಥವಾ ಪರೋಕ್ಷವಾಗಿ ಬಳಸುವ ಷಡ್ಯಂತ್ರದ ಬಾಷೆಯೇನು? ಒಟ್ಟಾರೆ ಆತ/ಆಕೆ ಪ್ರತಿಪಾದಿಸುವ ಸಿದ್ದಾಂತ, ಸಂವಿಧಾನ ವಿರೋಧಿಯಾಗಿದ್ದರೆ ಆ ದೇಶಮಾರಕ ಸಿದ್ದಾಂತವಾದರೂ ಯಾವುದು? ಅದರ ಹಿಂದಿನ‌ ಲಾಭ, ನಷ್ಟ, ದ್ಯೇಯ, ಉದ್ದೇಶಗಳೇನು, ನಿಜಕ್ಕೂ ಅವರ hidden agenda ಗಳೇನು? ಎಂಬುದನ್ನು ತಿಳಿಯಬೇಕು.
ಸರ್ಕಾರ ಈ ಎಲ್ಲದರ ಬಗ್ಗೆ ಜರೂರಾಗಿ ಸಮಗ್ರ ವಿವರ ಪಡೆಯಬೇಕು, “ನಮ್ಮದು ಸರ್ಕಾರಿ ಸಂಸ್ಥೆಯಲ್ಲ ಈ ಬಗ್ಗೆ ವಿವರ ನೀಡಬೇಕಿಲ್ಲ” ಎಂಬ ಉಡಾಫೆಯ, ಉದ್ದಟತನದ ಉತ್ತರ ಕೊಡಲು ಸಾದ್ಯವಿಲ್ಲ. ಯಾಕೆಂದರೆ ಸದರಿ ಸಂಸ್ಥೆಗಳು ಭೂಮಿಯನ್ನು ಪಡೆಯುವುದರಿಂದ ಹಿಡಿದು ಅನೇಕ ರೀತಿಯ ಲಾಭಗಳನ್ನು ನಾವು ತೆರಿಗೆ ಕಟ್ಟುವ ಸರ್ಕಾರದಿಂದಲೇ ಪಡೆದಿರುತ್ತವೆ. ಅಂತೆಯೇ ಜನತೆ ನೀಡುವ ಚಂದಾಹಣ ಮತ್ತು ಟಿಆರ್ಪಿ ಗಳಿಂದ ಇವು‌ ನಡೆಯುತ್ತವೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಇದು ದೇಶದ ರಕ್ಷಣೆಗೆ ಸಂಭಂದಿಸಿದ ಗಂಭೀರ ವಿಷಯ. ಸದರಿ ಸುದ್ದಿ ಸಂಸ್ಥೆಗಳಿಗೆ ಅಪಾಯದ ಸೂಚನೆ ಸಿಕ್ಕಾಗ ಇವರಿಗೆ ಪೋಲಿಸ್ ರಕ್ಷಣೆ ನೀಡುತ್ತಿರುವುದೂ ಕೂಡ ನಮ್ಮ ಸರ್ಕಾರವೇ. ಆದ್ದರಿಂದ ಸರ್ಕಾರ ಕೇಳುವ ಪ್ರತಿ ವಿವರಗಳನ್ನು ನೀಡುವುದು ಸುದ್ದಿ ಸಂಸ್ಥೆಯ ಜವಾಬ್ದಾರಿ, ಬದ್ದತೆ ಮತ್ತು ಕರ್ತವ್ಯ ಕೂಡ.
ಇದೆಲ್ಲದರ ಬಗ್ಗೆ ನಿಷ್ಪಕ್ಷಪಾತ ವರದಿ ನೀಡಲು ಜಾತ್ಯಾತೀತ, ನಿಷ್ಪಕ್ಷಪಾತವಾಗಿರುವ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ‌ ನೇತೃತ್ವದ ಆಯೋಗವನ್ನೇ ನೇಮಿಸಬೇಕು. ಮೇಲಿನ‌ ಅಂಶಗಳ ಆಧಾರದ ಮೇಲೆ ಒಂದಷ್ಟು ಅಗತ್ಯವಾದ ಬದಲಾವಣೆಗಳೊಂದಿಗೆ terms of reference ರೂಪಿಸಬೇಕು. ಇಂತಹ ಆಯೋಗ ಸಮಗ್ರವಾಗಿ ತನಿಖೆ ಮಾಡಿ ನೀಡಲಾಗುವ ವರದಿಯ‌ ಆಧಾರದ ಮೇಲೆ ಸರ್ಕಾರ ‘ಮಾಧ್ಯಮ ನೀತಿ’ಯೊಂದನ್ನು ರೂಪಿಸಬೇಕಾಗುತ್ತದೆ. ದೇಶದ ಮತ್ತು ರಾಜ್ಯದ ಹಿತದೃಷ್ಟಿಯಿಂದ ಇದು ಅಗತ್ಯ ಮತ್ತು ಅನಿವಾರ್ಯ ಕೂಡ. ಈ ವಿಚಾರದಲ್ಲಿ ಪಕ್ಷಬೇದ ತೊರೆದು ಎಲ್ಲಾ ಸಂಸದರು, ವಿಧಾನಸಭಾ ಸದಸ್ಯರು, ವಿಧಾನಪರಿಷದ್ ಸದಸ್ಯರು ಮತ್ತು ಸಾರ್ವಜನಿಕರು ಸರ್ಕಾರದ ಮೇಲೆ ಒತ್ತಡ ತರಬೇಕು.
ಈಗ ಕಾಲ ಪಕ್ವವಾಗಿದೆ, ಇಲ್ಲದಿದ್ದಲ್ಲಿ ಸದರಿ ಕೆಲ ಮಾದ್ಯಮದಲ್ಲಿರುವ ಯಾವುದೇ ಬದ್ದತೆ, ನೈತಿಕ ಮೌಲ್ಯಗಳಿಲ್ಲದ ಜಾತೀವಾದಿ, ದೇಶವಿರೋಧಿ, ಜೀವವಿರೋಧಿ ಮತ್ತು ಸಂವಿಧಾನ ವಿರೋಧಿ ಯಾದ ವಿಛಿದ್ರಕಾರಿ ಶಕ್ತಿಗಳು ದಿನನಿತ್ಯ ಹಗಲುರಾತ್ರಿಗಳೆನ್ನದೆ ಮುಗ್ದಜನರ ಮೆದುಳಿಗೆ ದ್ವೇಶ, ರಕ್ತಪಾತ, ಪ್ರತೀಕಾರದಂತಹ ವಿಷವನ್ನು ಸುರಿದು ಒಬ್ಬರಮೇಲೊಬ್ಬರನ್ನು ಎತ್ತಿಕಟ್ಟಿ ಕೋಮು ಮತ್ತು ಜಾತೀ ದಳ್ಳುರಿಯನ್ನು ಸೃಷ್ಟಿಸಿ, ಇಡೀ ದೇಶಕ್ಕೆ ದೇಶವನ್ನೇ ಛಿದ್ರಮಾಡಿ ಅರಾಜಕತೆಯನ್ನು ಸೃಷ್ಟಿ ಮಾಡುವ ದಿನಗಳು ದೂರವಿಲ್ಲ.
ಸರ್ಕಾರ ಮತ್ತು ಜನಸಾಮಾನ್ಯರು ಎಚ್ಚೆತ್ತುಕೊಳ್ಳಲು ಇದು ಸಕಾಲ..
– ಸಿ.ಎಸ್.ದ್ವಾರಕಾನಾಥ್

Please follow and like us:
error