ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಅರಿವು ಮೂಡಿಸಿ : ವಿಕಾಸ್ ಕಿಶೋರ್ ಸುರಳ್ಕರ್


ಕೊಪ್ಪಳ, : ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ತಿಳುವಳಿಕೆ ಮೂಡಿಸಿ, ದೇವದಾಸಿ ಪುನರ್ವಸತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ದೇವದಾಸಿ ಪುನರ್ವಸತಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ದೇವದಾಸಿ ಪುನರ್ವಸತಿ ಯೋಜನೆಗಳಲ್ಲಿ 45 ವರ್ಷ ಮೇಲ್ಪಟ್ಟ ಮಾಜಿ ದೇವದಾಸಿ ಮಹಿಳೆಯರಿಗೆ ಪ್ರತಿ ತಿಂಗಳು ರೂ. 1500 ರಂತೆ ಮಾಸಾಶನ ನೀಡಲಾಗುತ್ತದೆ. ನಿವೇಶನ ಹೊಂದಿದ ಮಾಜಿ ದೇವದಾಸಿ ಮಹಿಳೆಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಘಟಕ ವೆಚ್ಚವನ್ನು ನೀಡಲಾಗುತ್ತದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಆದಾಯೋತ್ಪನ್ನಕರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಗರಿಷ್ಠ ರೂ. 50,000 ಗಳವರೆಗೆ ಸಹಾಯಧನ ನೀಡಲಾಗುತ್ತದೆ. ಆದರೂ ಇವುಗಳ ಕುರಿತು ಫಲಾನುಭವಿಗಳಿಗೆ ಜಾಗೃತಿ ಇರುವುದಿಲ್ಲ. ಆದ್ದರಿಂದ ಸಮೀಕ್ಷೆಯಲ್ಲಿ ಗುರುತಿಸಿದ ಮಾಜಿ ದೇವದಾಸಿಯರನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ನೇರವಾಗಿ ಭೇಟಿ ಮಾಡಿ ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳಿಸಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಅವರಲ್ಲಿ ಅರಿವು ಮೂಡಿಸಬೇಕು ಎಂದು ಅವರು ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳಿಗೆ ಹೇಳಿದರು.
 ಸ್ವಯಂಉದ್ಯೋಗಕ್ಕಾಗಿ ಈಗಾಗಲೇ ಸಹಾಯಧನ ಪಡೆದ ಫಲಾನುಭವಿಗಳು ಅದನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಬಗ್ಗೆ, ಇನ್ನೂ ಹೆಚ್ಚಿನ ಅನುಕೂಲದ ಅಗತ್ಯವಿರುವ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳಬೇಕು. ತರಕಾರಿ ಅಂಗಡಿ, ಹೈನುಗಾರಿಕೆ ಮುಂತಾದ ಆದಾಯೋತ್ಪನ್ನಕರ ಚಟುವಟಿಕೆಗಳ ಬಗ್ಗೆ ಸಹಾಯಧನ ಪಡೆದ ಫಲಾನುಭವಿಗಳಿಗೆ ತರಬೇತಿಗಳನ್ನು ನೀಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಇಲಾಖೆ ಸಹಾಯ ಮಾಡಬೇಕು ಎಂದು ಅವರು ಹೇಳಿದರು.
 ಸರ್ಕಾರದಿಂದ ಮಾಜಿ ದೇವದಾಸಿಯರ ಮಕ್ಕಳ ಮದುವೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದ್ದು, ಹೆಣ್ಣು ಮಕ್ಕಳ ಮದುವೆಗೆ ರೂ.5,00,000, ಗಂಡು ಮಕ್ಕಳ ಮದುವೆಗೆ ರೂ.3,00,000 ಗಳನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಅರ್ಹರಿರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸೌಲಭ್ಯ ತಲುಪಿಸಿ. ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರಸ್ತುತ ಸಹಾಯಧನಕ್ಕಾಗಿ ಒಟ್ಟು 214 ಜನರು ಅರ್ಜಿ ಸಲ್ಲಿಸಿದ್ದು ಅವರಲ್ಲಿ 198 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಮಾಜಿ ದೇವದಾಸಿಯರಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಆದ್ದರಿಂದ ಇನ್ನುಳಿದವರಿಗೆ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಅವರು ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು.
 ದೇವದಾಸಿ ಪುನರ್ವಸತಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಗೋಪಾಲ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 2963 ಮಾಜಿ ದೇವದಾಸಿ ಮಹಿಳೆಯರಿಗೆ ಮಾಸಾಶನವನ್ನು ನೀಡಲಾಗಿದೆ. ವಸತಿ ಸೌಲಭ್ಯ ಯೋಜನೆಯಡಿ ನಿವೇಶನ ಹೊಂದಿದವರಿಗೆ ಮನೆ ನಿರ್ಮಾಣಕ್ಕೆ ನಗರ ಪ್ರದೇಶದಲ್ಲಿ ರೂ. 2,00,000 ಮತ್ತು ಗ್ರಾಮೀಣ ವಸತಿಗೆ ರೂ. 1,75,000 ಗಳನ್ನು ಘಟಕವೆಚ್ಚವಾಗಿ ನೀಡಲಾಗುತ್ತಿದೆ. ಸ್ವಯಂ ಉದ್ಯೋಗ ಕೈಗೊಳ್ಳಲು ರೂ. 50,000 ಸಹಾಯಧನ ಹಾಗೂ ರೂ. 50,000 ಸಾಲ ಸೌಲಭ್ಯ ಒಟ್ಟು ರೂ. 1,00,000 ಗಳನ್ನು ನೇರವಾಗಿ ನಿಗಮದಿಂದ ಆರ್.ಟಿ.ಜಿ.ಎಸ್. ಮೂಲಕ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಸಂಪನ್ಮೂಲ ವ್ಯಕ್ತಿಗಳಿಂದ ಕಾನೂನು ಅರಿವು ಕಾರ್ಯಕ್ರಮ, ಅನಿಷ್ಠ ಪದ್ಧತಿಯಾದ ದೇವದಾಸಿ ಪದ್ದತಿಯನ್ನು ಹೋಗಲಾಡಿಸಲು ಬೀದಿನಾಟಕಗಳನ್ನು ನಡೆಸುವುದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದು, ಜಿಲ್ಲೆಯ ವಿವಿಧೆಡೆ ನಡೆಯುವ ಪ್ರಮುಖ ಜಾತ್ರೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
 ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಲಕ್ಷö್ಮಣ ಬಬಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error