ಮರಾಠಾ ಅಭಿವೃದ್ಧಿ ಪ್ರಾಧಿಕಾರ -ಉಪಚುನಾವಣೆ ಹಿನ್ನೆಲೆಯಲ್ಲಿ ಓಲೈಕೆ- ಟಿ.ಎ.ನಾರಾಯಣಗೌಡ

ಕರ್ನಾಟಕ ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ₹ 50 ಕೋಟಿ ಮೀಸಲಿರಿಸುವುದಾಗಿ ಹೇಳಿದೆ. ಇದು ‘ಮರಾಠಾ’ ಎಂಬ ಸಮುದಾಯಕ್ಕೆ (ಜಾತಿ) ಸಂಬಂಧಿಸಿದ ಪ್ರಾಧಿಕಾರವೇ ಅಥವಾ ಕರ್ನಾಟಕದಲ್ಲಿರುವ ಮರಾಠಿ ಭಾಷಾ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಪ್ರಾಧಿಕಾರವೇ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕರವೇ ರಾಜ್ಯಾದ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಅವರು ರಾಜ್ಯದ ಯಾವುದೇ ಹಿಂದುಳಿದ ಸಮುದಾಯದ ಹೆಸರಿನಲ್ಲಿ ಪ್ರಾಧಿಕಾರಗಳನ್ನು ಸ್ಥಾಪಿಸಿದರೆ ನಮ್ಮ ಆಕ್ಷೇಪಣೆಯೇನಿಲ್ಲ. ಹಲವಾರು ಸಮುದಾಯಗಳ ಹೆಸರಲ್ಲಿ ಈಗಾಗಲೇ ಹಲವು ಮಂಡಳಿ, ಪ್ರಾಧಿಕಾರಗಳಿವೆ. ಸಾಮಾಜಿಕ ನ್ಯಾಯ ಕಾಪಾಡುವ ದೃಷ್ಟಿಯಲ್ಲಿ ಇಂಥವುಗಳು ಅನಿವಾರ್ಯ. ಆದರೆ ಭಾಷಾ ಅಲ್ಪಸಂಖ್ಯಾತರ ಹೆಸರಿನಲ್ಲಿ ಪ್ರಾಧಿಕಾರಗಳನ್ನು ಸ್ಥಾಪಿಸುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಆಕ್ಷೇಪ ಮತ್ತು ವಿರೋಧವಿದೆ. ವಿವಿಧ ಭಾಷಾ ಸಮುದಾಯಗಳು ಕರ್ನಾಟಕದಲ್ಲಿ ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆತುಹೋಗಿವೆ. ಅವುಗಳನ್ನು ಪ್ರತ್ಯೇಕಿಸಿ ಓಲೈಸುವ ಅಗತ್ಯವಿಲ್ಲ. ಇದು ಅಪಾಯಕಾರಿ ಬೆಳವಣಿಗೆ.

ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ನಂತರ ಕನ್ನಡ, ತೆಲುಗು, ಮರಾಠಿ, ತಮಿಳು, ಮಲಯಾಳಂ ಸೇರಿದಂತೆ ನಾನಾ ಭಾಷಿಗರು ತಮ್ಮದೇ ಆದ ರಾಜ್ಯಗಳನ್ನು ಹೊಂದಿದ್ದಾರೆ ಮತ್ತು ತಮ್ಮ ಭಾಷೆಗಳ ಅಭಿವೃದ್ಧಿಗೆ ತಮ್ಮ ತಮ್ಮ ರಾಜ್ಯಗಳಲ್ಲಿ ಪ್ರಾಧಿಕಾರ, ಮಂಡಳಿಗಳನ್ನು ರಚಿಸಿಕೊಂಡಿವೆ. ಹೇಗೆ ಮಹಾರಾಷ್ಟ್ರದಲ್ಲಿ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ರಚನೆಯಾಗುವುದು ಸಾಧ್ಯವಿಲ್ಲವೋ ಅದೇ ರೀತಿ ಕರ್ನಾಟಕದಲ್ಲಿ ‘ಮರಾಠಿ ಅಭಿವೃದ್ಧಿ ಪ್ರಾಧಿಕಾರ’ ರಚನೆ ಸಾಧ್ಯವಿಲ್ಲ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ.

ಒಂದು ವೇಳೆ ರಾಜ್ಯ ಸರ್ಕಾರ ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ’ವನ್ನು ಕರ್ನಾಟಕದಲ್ಲಿ ಹಲವೆಡೆ ನೆಲೆಸಿರುವ ‘ಮರಾಠಾ’ ಸಮುದಾಯದ ಅಭಿವೃದ್ಧಿಗಾಗಿಯೇ ಸ್ಥಾಪಿಸಲು ಹೊರಟಿದ್ದರೂ ಅದು ನಿರ್ಣಯ ತೆಗೆದುಕೊಂಡಿರುವ ಸಮಯ ಸರಿಯಲ್ಲ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಓಲೈಕೆ ಮಾಡಲಾಗುತ್ತಿದೆ. ಇದು ರಾಜ್ಯದ ಜನತೆಗೆ ತಪ್ಪು ಸಂದೇಶವನ್ನು ನೀಡುತ್ತದೆ.

ಟಿ.ಎ.ನಾರಾಯಣಗೌಡ ಎಂದು ಹೇಳಿದ್ದಾರೆ

https://www.facebook.com/390996657615205/posts/3471687716212735/

Please follow and like us:
error