ಕೊಪ್ಪಳ, : ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಓದುವ ಹವ್ಯಾಸವನ್ನು ಪ್ರೇರೇಪಿಸುವ ಉದ್ದೇಶದಿಂದ ಕಳೆದ ಒಂದು ತಿಂಗಳ ಹಿಂದೆ ಹಮ್ಮಿಕೊಳ್ಳಲಾಗಿರುವ ಮನ್ವಂತರ ಕಾರ್ಯಕ್ರಮಕ್ಕೆ ಜಿಲ್ಲೆಯ ಓದುಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅವರು ಇಂದು (ಸೋಮವಾರ) ನಡೆದ ಮನ್ವಂತರ, ಆತ್ಮನಿರ್ಭರ ಹಾಗೂ ಕೋವಿಡ್-19 ಗೆ ಸಂಬAಧಿಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಮನ್ವಂತರ ಕಾರ್ಯಕ್ರಮದಲ್ಲಿ ನೋಂದಾಯಿಸಿದ ಕೃತಿಗಳಿಗೆ ಸಂಬAಧಿಸಿದAತೆ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ವಿಮರ್ಶೆಗಳನ್ನು ಸಲ್ಲಿಸಲಾಗಿದ್ದು, ಪರಿಣಿತರಿಂದ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ವಿಮರ್ಶಕರ ಸ್ಪರ್ಧೆಯಲ್ಲಿ ಒಟ್ಟು 20 ಸ್ಪರ್ಧಿಗಳಲ್ಲಿ 6 ಸ್ಪರ್ಧಿಗಳನ್ನು ವಿಜೇತರು ಎಂದು ಆಯ್ಕೆ ಮಾಡಲಾಗುವುದು. ಉಳಿದ 14 ಸ್ಪರ್ಧಾಳುಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಗುತ್ತದೆ ಎಂದರು.
ಆತ್ಮನಿರ್ಭರ ಯೋಜನೆ ಕುರಿತಾಗಿ ಮಾತನಾಡಿದ ಜಿಲ್ಲಾಧಿಕಾರಿಗಳು, ಆತ್ಮ ನಿರ್ಭರ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹರನ್ನು ಆಯ್ಕೆ ಮಾಡಿ, ಅವರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಜಿಲ್ಲಾಡಳಿತದಿಂದ ಸಹಾಯ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಸಿರುವ ಯುವಕರ ಕಾರ್ಯ ಕ್ಷೇತ್ರ ಅರಿತು, ಅವರ ಅನುಭವ ಮತ್ತು ಆಸಕ್ತಿಗೆ ಪೂರಕವಾಗಿ ಅವರನ್ನು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಉತ್ತೇಜನ ಮಾಡಲಾಗುತ್ತದೆ ಎಂದರು.
