ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿ ಇಬ್ಬರನ್ನು ಕೊಂದಿದ್ದಾರೆ, ಈಗ ನನ್ನನ್ನು ಕೊಲ್ಲಲಿ: ಝಮೀರ್‌ ಅಹ್ಮದ್

ಬಳ್ಳಾರಿ, ಜ.13: ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿಯನ್ನು ಬಂಧಿಸದಿದ್ದರೆ, ಹಿರಿಯ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಶಾಸಕ ಸೋಮಶೇಖರ್ ರೆಡ್ಡಿ ಮನೆಮುಂದೆ ಬೆಂಬಲಿಗರೊಂದಿಗೆ ಝಮೀರ್ ಅಹ್ಮದ್ ಖಾನ್ ಧರಣಿ ಮಾಡಲು ಮುಂದಾದ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದು ಆ ನಂತರ ಬಿಡುಗಡೆ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಚೋದನಕಾರಿ ಹೇಳಿಕೆ ನೀಡಿರುವ ಸೋಮಶೇಖರ ರೆಡ್ಡಿಯನ್ನು ಬಂಧಿಸುವಂತೆ ಆಗ್ರಹಿಸಿದರೂ ಬಂಧನವಾಗಿಲ್ಲ. ಹತ್ತು ದಿನದೊಳಗೆ ಅವರನ್ನು ಬಂಧಿಸಬೇಕೆಂದು ಒತ್ತಾಯ ಮಾಡಿದರು.

ಬಿಜೆಪಿ ಸರಕಾರ ತಮ್ಮ ಪಕ್ಷದ ಶಾಸಕ ಸೋಮಶೇಖರ್ ರೆಡ್ಡಿಯನ್ನು ಬೆಂಬಲಿಸಲು ಮುಂದಾದರೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಮತ್ತಿತರ ನಾಯಕರು ಬಳ್ಳಾರಿಗೆ ಆಗಮಿಸುತ್ತೇವೆ. ಲಕ್ಷಾಂತರ ಕಾರ್ಯಕರ್ತರೊಂದಿಗೆ ನಿರಂತರವಾಗಿ ಪ್ರತಿಭಟನೆ ಕೈಗೊಳ್ಳಲಿದ್ದೇವೆಂದು ಅವರು ಎಚ್ಚರಿಕೆ ನೀಡಿದರು.

ಬಿಗಿಭದ್ರತೆ: ಶಾಸಕ ಝಮೀರ್ ಅಹ್ಮದ್ ಖಾನ್ ಬಳ್ಳಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಸೋಮಶೇಖರ ರೆಡ್ಡಿ ಮನೆಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಝಮೀರ್ ಅಹ್ಮದ್ ಖಾನ್‌ರನ್ನು ಬೆಂಬಲಿಸಿ ಬೆಂಗಳೂರು, ಚನ್ನಪಟ್ಟಣ, ಕಲಬುರಗಿ ಸೇರಿದಂತೆ ರಾಜ್ಯದ ಹಲವೆಡೆಯಿಂದ ಕಾರ್ಯಕರ್ತರು ಕೂಡ ಆಗಮಿಸಿದ್ದರು.

ಈ ವೇಳೆ ಝಮೀರ್ ಅಹ್ಮದ್ ಖಾನ್ ಬೆಂಬಲಿಗರು ಸೋಮಶೇಖರ್ ರೆಡ್ಡಿ ನಿವಾಸಕ್ಕೆ ಮೆರವಣಿಗೆ ಮೂಲಕ ಹೋಗಲು ಸಿದ್ಧತೆಯಲ್ಲಿ ತೊಡಗಿರುವಾಗಲೇ ಝಮೀರ್ ಸೇರಿದಂತೆ 30ಕ್ಕೂ ಹೆಚ್ಚು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ಆನಂತರ ಬಿಡುಗಡೆ ಮಾಡಿದರು.

ನಿನ್ನ ಖಡ್ಗ ತೋರಿಸು: ಝಮೀರ್ ವ್ಯಂಗ್ಯ

ಶಾಸಕ ಸೋಮಶೇಖರ್ ರೆಡ್ಡಿ ಮನೆಮುಂದೆ ಧರಣಿ ನಡೆಸಲು ಪೊಲೀಸರ ಅನುಮತಿ ಕೇಳಿದ್ದೆ ಕೊಟ್ಟಿಲ್ಲ. ಯಾವುದೇ ಶಾಂತಿಭಂಗ ಮಾಡಲು ನಾವು ಬಂದಿಲ್ಲ. ಉಫ್ ಅಂತ ಊದಿದ್ರೆ ಮುಸ್ಲಿಮರಲ್ಲ ಹಾರಿ ಹೋಗ್ತೀರಿ ಎಂದಿದ್ದರು. ನಮ್ಮ ವಿರುದ್ಧ ಖಡ್ಗ ತೆಗೆಯುತ್ತೇವೆ ಎಂದಿದ್ದರು. ಈಗ ಬಳ್ಳಾರಿಗೆ ಬಂದಿದ್ದೇವೆ. ನಿಮ್ಮ ಮನೆಗೂ ಬರಲು ಸಿದ್ದರಿದ್ದೇವೆ. ಎಲ್ಲಪ್ಪಾ ನಿನ್ನ ಖಡ್ಗ ತೆಗೆ ನೋಡೋಣವೆಂದು ಶಾಸಕ ಝಮೀರ್ ಅಹ್ಮದ್ ಖಾನ್ ವ್ಯಂಗ್ಯವಾಡಿದರು.

ಸೋಮಶೇಖರ್ ವಿರುದ್ದದ ಹೋರಾಟ ಶಾಂತಿಭಂಗವಲ್ಲ, ಪ್ರತಿಭಟನೆ ಮಾತ್ರ. ಪೊಲೀಸರೆಂದರೆ ನಮಗೆ ಗೌರವ ಇದೆ. ಪೊಲೀಸರು ನನ್ನನ್ನ ಬಂಧನ ಮಾಡಲಿ. ಗುಂಡು ಹೊಡೆದು ಸಾಯಿಸಲಿ. ಯಾರು ಬೇಡ ಅಂತಾರೆ. ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿ ಇಬ್ಬರು ಸಾಯಿಸಿದ್ದಾರೆ. ಈಗ ನನ್ನನ್ನು ಸಾಯಿಸಲಿ ಬಿಡಿ ಎಂದು ಪೊಲೀಸರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

Please follow and like us:
error