ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ಕೈಬಿಡಿ

ಕೊಪ್ಪಳ: ಇಡೀ ದೇಶ ಕೊರೊನಾದಿಂದ ತತ್ತರಿಸಿದ ಈ ಸಂದರ್ಭದಲ್ಲಿ ಸುಗ್ರೀವಾಜ್ಞೆಗಳ ಮೂಲಕ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ವಿದ್ಯುತ್ ಖಾಸಗೀಕರಣ ಮಾಡುವ ಜರೂರತ್ತು ಏನಿತ್ತು ಎಂದು ಜಿಲ್ಲಾ ರೈತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರು ಪ್ರಶ್ನಿಸಿದರು.

ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ಮುಖಂಡರ ಪೈಕಿ ಮಾತನಾಡಿದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಮುತ್ಸದ್ಧಿ ದೇವರಾಜ ಅರಸು ಜಾರಿಗೆ ತಂದ ಭೂ ಸುಧಾರಣೆ ಕಾಯ್ದೆಯನ್ನು ಉಳುವವನೇ ಒಡೆಯ ಎಂಬುದರ ಬದಲಾಗಿ ಉಳ್ಳವನೇ ಒಡೆಯ ಎಂಬುದಾಗಿ ಮಾರ್ಪಾಟು ಮಾಡಲು ಹೊರಟಿರುವುದು ರೈತರ ಪಾಲಿಗೆ ಮರಣ ಶಾಸನವಾಗಿದೆ. ಇದರಿಂದ ಸಣ್ಣಪುಟ್ಟ, ಮಧ್ಯಮ ರೈತರ ಶೇಕಡಾ 80ರಷ್ಟು ಭೂಮಿ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತದೆ. ಈಗಾಗಲೇ ಗುತ್ತಿಗೆ ಕೃಷಿ ಕಾಯ್ದೆ ಮೂಲಕ ರೈತರ ಭೂಮಿ ಕೊಳ್ಳುವ ಕಂಪನಿಗಳಿಗೆ ಇನ್ನಷ್ಟು ಅನುಕೂಲ ಮಾಡಿದಂತಾಗುತ್ತದೆ ಎಂದು ಅವರು ಹೇಳಿದರು.

ಈಗಿರುವ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಎಪಿಎಂಸಿ ಹೊರಗಡೆ ರೈತರ ಕೃಷಿ ಉತ್ಪನ್ನ ಖರೀದಿಸಲು ಅವಕಾಶ ಕಲ್ಪಿಸಿದ್ದು ಸರಿಯಲ್ಲ. ಇದರಿಂದ ಸ್ಥಳೀಯ ವರ್ತಕರು, ಖರೀದಿದಾರರು, ಕೂಲಿಕಾರರು, ಹಮಾಲರು ಬೀದಿಪಾಲಾಗುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳು ರೈತರ ಉತ್ಪನ್ನ ಖರೀದಿಸಿದರೆ ರೈತರಿಗೆ ಲಾಭವಾಗುತ್ತದೆ ಎನ್ನುವುದು ಅವೈಜ್ಞಾನಿಕವಾಗಿದೆ. ಸಣ್ಣ ಸಣ್ಣ ಹಿಡುವಳಿಗಳನ್ನು ಕೊಂಡು ನಾಶಪಡಿಸಿ ಇಡೀ ಗ್ರಾಮಗಳ ಭೂಮಿಯನ್ನು ಏಕಪ್ರಭುತ್ವಕ್ಕೆ ಒಳಪಡಿಸುವುದರಿಂದ ರೈತರು ಕೃಷಿಯಿಂದ ವಂಚಿತರಾಗುತ್ತಾರೆ. ಆದ್ದರಿಂದ ಕೂಡಲೇ ಎಪಿಎಂಸಿ ಕಾಯ್ದೆಗೆ ತಂದ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರೈತರ ಪಂಪ್‌ಸೆಟ್‌ಗಳಿಗೆ, ಬಡವರ ಮನೆಗೆ ಭಾಗ್ಯಜ್ಯೋತಿ ಅಡಿಯಲ್ಲಿ ಉಚಿತವಾಗಿ ವಿದ್ಯುತ್ ದೊರೆಯುತ್ತಿತ್ತು. ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಯವ ಮತ್ತು ಖಾಸಗೀಕರಣಗೊಳಿಸುವ ಸರಕಾರದ ಆಲೋಚನೆ ರೈತ ವರ್ಗಕ್ಕೆ ಕುತ್ತು ತರುತ್ತದೆ. ಆದ್ದರಿಂದ ಸರಕಾರ ಈ ನಿರ್ಧಾರ ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸಬೇಕಾದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಮಾರುತಿ ಅವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರರಾದ ಬಸವರಾಜ ಶೀಲವಂತರ್, ಡಿ.ಎಚ್.ಪೂಜಾರ, ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಜೆ.ಭಾರದ್ವಾಜ್ ಸೇರಿದಂತೆ ಇತರರು ಇದ್ದರು.

 

Please follow and like us:
error