ಭಾರತ ಬಂದ್ ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಬೆಳಿಗ್ಗೆ ಭರ್ಜರಿ ಪ್ರತಿಭಟನೆ : ನಂತರ ಜನಜೀವನ ಯಥಾಸ್ಥಿತಿ

Kannadanet NEWS : ಕೃಷಿ ಕಾಯ್ದೆಗಳ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿ ರೈತರ ದೆಹಲಿ ಹೋರಾಟ ಬೆಂಬಲಿಸಿ ಮಂಗಳವಾರ ಕರೆ ನೀಡಲಾಗಿದ್ದ ಭಾರತ ಬಂದ್‌ಗೆ ಕೊಪ್ಪಳದಲ್ಲಿ ಬೆಳಿಗ್ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆ 5ರ ಸುಮಾರಿಗೆ ರೈತ ಹಿತರಕ್ಷಣಾ ವೇದಿಕೆ ಹಾಗೂ ಇನ್ನೀತರ ಕೃಷಿಕರ ಪರ ಸಂಘಟನೆಗಳ ಮುಖಂಡರು ಕೇಂದ್ರೀಯ ಬಸ್ ನಿಲ್ದಾಣದ ಎದುರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರಧಾನಿ ಮೋದಿಯ ಅಣುಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿದರು.

ಕೆಲ ಕಾಲ ಬಸ್‌ಗಳನ್ನು ತಡೆದು ಕೇಂದ್ರ ಸರಕಾರದ, ಬಿಜೆಪಿ ಮುಖಂಡರ ವಿರುದ್ಧ ಘೋಷಣೆ ಕೂಗಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಸರಕಾರ ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಭಟನೆಯ ಮಾಹಿತಿ ನೀಡಿಲ್ಲವೇಕೆ ಎಂದು ಪ್ರಶ್ನಿಸಿದರು. ಆಗ ರೈತ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಪೊಲೀಸರು ಸುಮ್ಮನಾದ್ದರಿಂದ ವಾತಾವರಣ ತಿಳಿಯಾಯಿತು.

ಮಧ್ಯಾಹ್ನ ಬಂದಿಳಿದ ಹಸಿರು ಸೇನೆ
ಬೆಳಗ್ಗೆ ಮತ್ತೇ ಎಂದಿನಂತೆ ಜನಜೀವನ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಜಿಲ್ಲಾ ಕೇಂದ್ರಕ್ಕೆ ಬಂದ ಹಸಿರು ಸೇನೆಯ ಮುಖಂಡರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದರು.

ಮಧ್ಯಾಹ್ನದ ರೈತರ ಪ್ರತಿಭಟನೆಗೆ ಕಾಂಗ್ರೆಸ್, ಎಐಡಿವೈಓ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡವು. ತಮಟೆ ಬಾರಿಸುವ ಹಾಗೂ ಬಾರ್‌ಕೋಲ್ ಬೀಸುವ ಮೂಲಕ ರೈತರು ರೈತವಿರೋಧಿ ಕೃಷಿ ಕಾಯ್ದೆಗಳನ್ನು ಖಂಡಿಸಿದರು. ಪ್ರತಿಭಟನೆ ಯ ಮೆರವಣಿಗೆಯ ವೇಳೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.

ಈ ವೇಳೆ ರೈತ ಮುಖಂಡರಾದ ಶರಣಪ್ಪ ಕೊತ್ವಾಲ್, ಶರಣೇಗೌಡ ಕೆಸರಟ್ಟಿ, ಶರಣಪ್ಪ, ಹನುಮಂತಪ್ಪ ಹೊಳಿಯಾಚೆ, ಮತ್ತಿತರರು ಇದ್ದರು

Please follow and like us:
error