ಭಾರತ್ ಬಂದ್ ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬೆಂಬಲ

Kannadanet NEWS ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೆಲವು ಕೃಷಿ ಕಾಯ್ದೆಗಳಿಗೆ ವಿರೋಧವಾಗಿ ದೇಶದ ಬಹುತೇಕ ರೈತ ಸಂಘಟನೆಗಳು ಕರೆ ಕೊಟ್ಟಿರುವ ನಾಳೆಯ “ಭಾರತ್ ಬಂದ್” ಅನ್ನು “ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷ ಬೆಂಬಲಿಸುತ್ತದೆ. ಈ ವಿಚಾರವಾಗಿ ತಾವಿರುವ ಸ್ಥಳಗಳಲ್ಲಿ ನಡೆಯುವ ಶಾಂತಿಯುತ ಧರಣಿ ಅಥವ ಪ್ರತಿಭಟನೆ ಕಾರ್ಯಕ್ರಮಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಭಾಗವಹಿಸಿ, ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡಬೇಕೆಂದು ರಾಜ್ಯಾಧ್ಯಕ್ಷ. ರವಿ ಕೃಷ್ಣಾರೆಡ್ಡಿ ಮನವಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲು ಪ್ರಕಟಣೆ ನೀಡಿರುವ ಅವರು ದೇಶದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಭತ್ತ ಮತ್ತು ಗೋಧಿ ಬೆಳೆಯುವ ರಾಜ್ಯಗಳ ರೈತರು ಇಂದು ಕೇಂದ್ರ ಸರ್ಕಾರ ತಂದಿರುವ ಕಾಯ್ದೆಗಳ ಕುರಿತು ಆತಂಕಿತರಾಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಕಾರಣ ಆತಂಕಗಳನ್ನು ನಿವಾರಿಸಬೇಕಿದ್ದ ಕೇಂದ್ರ ಸರ್ಕಾರ, ಪ್ರತಿಭಟನೆಗೆ ಮುಂದಾದ ರೈತರ ಮೇಲೆ ಬಲಪ್ರಯೋಗ ಮಾಡಿದೆ ಮತ್ತು ಈಗಲೂ ಸಂವೇದನಾಶೂನ್ಯವಾಗಿ ನಡೆದುಕೊಳ್ಳುತ್ತಿದೆ. ಈ ರೈತ ಹೋರಾಟದ ಕುರಿತು ಕೆಲವೊಂದು ವ್ಯಕ್ತಿ ಮತ್ತು ಸಂಘಟನೆಗಳು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿರುವುದನ್ನೂ ನಾವು ಕಾಣುತ್ತಿದ್ದೇವೆ. ಸರ್ಕಾರದ ಇಂತಹ ಕೃತ್ಯಗಳು ಸಮಸ್ಯೆ ಮತ್ತು ಸಂಘರ್ಷವನ್ನು ಹೆಚ್ಚಿಸುತ್ತದೆಯೇ ಹೊರತು ಪರಿಹಾರಗಳನ್ನು ಸೃಷ್ಟಿಸುವುದಿಲ್ಲ.

ಇಂದು ಕೇಂದ್ರ ಸರ್ಕಾರವನ್ನು ಟೀಕಿಸುವ ಪ್ರತಿಯೊಬ್ಬರನ್ನೂ ಶತ್ರುಗಳು ಮತ್ತು ಉಪದ್ರವಿಗಳು ಎಂದೂ, ಪ್ರತಿಭಟನೆ ಹಾಗೂ ಧರಣಿ ಮಾಡುವವರನ್ನು ದೇಶದ್ರೋಹಿಗಳೆಂದೂ ಬಿಂಬಿಸುವ ಅಪಾಯಕಾರಿ, ಪ್ರಜಾಪ್ರಭುತ್ವ-ವಿರೋಧಿ ಕೃತ್ಯಗಳು ನಡೆಯುತ್ತಿವೆ. ದೇಶದ ಹಿತದೃಷ್ಟಿಯಿಂದ ಎಲ್ಲರೂ ಇದನ್ನು ಖಂಡಿಸಬೇಕಿದೆ.

ನಾಳೆಯ ಪ್ರತಿಭಟನೆ ಶಾಂತಿಯುತವಾಗಿ ಇರಲಿ; ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗುವ ಕೃತ್ಯಗಳು ಯಾರಿಂದಲೂ ಆಗದಿರಲಿ. ರೈತರ, ಅನ್ನದಾತರ ಆತಂಕಗಳನ್ನು ಕೇಂದ್ರ ಸರ್ಕಾರ ಆದಷ್ಟು ಶೀಘ್ರವಾಗಿ ದೂರ ಮಾಡಲಿ ಎಂದು

,
ರವಿ ಕೃಷ್ಣಾರೆಡ್ಡಿ ಹೇಳಿದ್ದಾರೆ

Please follow and like us:
error