ಭಾರತದ 43% ಜನರ ಮಾತೃಭಾಷೆ ಹಿಂದಿ ಎನ್ನುವ ಶುದ್ದ ಸುಳ್ಳು !

ಭಾರತದ ಒಟ್ಟು ಜನಸಂಖ್ಯೆಯಲ್ಲಿ 43% ಜನರ ಮಾತೃಭಾಷೆ ಹಿಂದಿ ಎನ್ನುವ ಶುದ್ದ ಸುಳ್ಳು ಬಹಳ ಕಾಲದಿಂದ ಚಾಲ್ತಿಯಲ್ಲಿದೆ. ಅಸಲ್ಲಿಗೆ ‘ಹಿಂದಿ’ ಭಾಷೆಯಡಿಯಲ್ಲಿ 56 ವಿವಿಧ ಮಾತೃ/ಉಪ ಭಾಷೆಗಳು ಬರುತ್ತವೆ. ಹರ್ಯಾಣ್ವಿ, ರಾಜಾಸ್ಥಾನಿ, ಭೋಜ್‍ಪುರಿ, ಖೋರ್ತಾ, ಮಗಧಿ, ಮರ್ವಾರಿ, ಬುಂಧೇಲಿ ಮುಂತಾದ 56 ಭಾಷೆಗಳು ‘ಹಿಂದಿ’ ಎನ್ನುವ ವಿಶಾಲ ಭಾಷಾ ಸಂಸ್ಕೃತಿಯೊಳಗೆ ಬರುತ್ತವೆ. ಉದಾಹರಣೆಗೆ ಹರ್ಯಾಣದಲ್ಲಿ 45% ರಷ್ಟು ಜನರ ಮಾತೃಭಾಷೆ ಹಿಂದಿಯ ಭಾಗವಾಗಿರುವ ಹರ್ಯಾಣ್ವಿ. ಅಲ್ಲಿ ಸರ್ಕಾರಿ ಹಿಂದಿ ಅಥವಾ ಖಡೀ ಬೋಲಿ ಮಾತಾನಾಡುವವರು 50% ಮಾತ್ರ. ಇದು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‍ಗಢ, ರಾಜಸ್ಥಾನ ಮುಂತಾದ ‘ಹಿಂದಿ ಬೆಲ್ಟ್’ ರಾಜ್ಯಗಳಿಗೂ ಅನ್ವಯ. ಅಧಿಕೃತ ದಾಖಲೆಗಳ ಪ್ರಕಾರ ನಮ್ಮ ದೇಶದಲ್ಲಿ ‘ಸರ್ಕಾರಿ ಹಿಂದಿ’ ಅಥವಾ ‘ಖಡಿ ಬೋಲಿ’ಯನ್ನು ಮಾತೃಭಾಷೆಯನ್ನಾಗಿ ಬಳಸುವವರು ಕೇವಲ 26% ಮಂದಿ ಮಾತ್ರ. ಮಿಕ್ಕವರು ಹಿಂದಿ ಭಾಷೆಯ ಉಳಿದ ಉಪಭಾಷೆಗಳನ್ನು ಮಾತೃಭಾಷೆಯಾಗಿ ಬಳಸುತ್ತಾರೆ. ಅತೀ ಹೆಚ್ಚು ಹಿಂದಿ ಬಳಕೆಯಲ್ಲಿರುವುದು ಉತ್ತರ ಪ್ರದೇಶದಲ್ಲಾದರೆ, ಅತೀ ಕಡಿಮೆ ಪ್ರಮಾಣದಲ್ಲಿ ಹಿಂದಿ ಬಳಕೆಯಲ್ಲಿರುವುದು ಕೇರಳದಲ್ಲಿ.

ಹಿಂದಿಯ ಎಲ್ಲಾ ಉಪಭಾಷೆಗಳನ್ನು ಗಣನೆಗೆ ತೆಗೆದುಕೊಂಡಾಗ ‘ಹಿಂದಿ’ ಮಾತಾನಾಡುವವರು ಸುಮಾರು 53 ಕೋಟಿ ಜನರಿದ್ದರೆ, ‘ಸರ್ಕಾರಿ ಹಿಂದಿ/ಖಡಿ ಬೋಲಿ’ಯನ್ನು ಮಾತಾನಾಡುವವರು 34 ಕೋಟಿಯಷ್ಟು. ಅಂದರೆ ಈ ದೇಶದ ನೂರು ಕೋಟಿಗಿಂತಾ ಹೆಚ್ಚಿನ ಜನರು, ಹಿಂದಿವಾಲಾಗಳು ಹಾಗೂ ಅವರ ಚೇಲರು ಹೇಳುವ ‘ರಾಷ್ಟ್ರೀಯ ಭಾಷೆ’ ಹಿಂದಿಯನ್ನು ಮಾತೃಭಾಷೆಯಾಗಿ ಬಳಸುವುದಿಲ್ಲ. ಇನ್ನೊಂದೆಡೆ ಹಿಂದಿಯ ಎಲ್ಲಾ ಉಪಭಾಷೆಗಳನ್ನು ಗಣನೆಗೆ ತೆಗೆದುಕೊಂಡರೂ ‘ಹಿಂದಿ’ಯನ್ನು ಮಾತೃಭಾಷೆಯಾಗಿ ಬಳಸುವವರು 53-54 ಕೋಟಿ ಜನರಷ್ಟೇ. ಮಿಕ್ಕ 80 ಕೋಟಿಗಿಂತಾ ಹೆಚ್ಚಿನ ಜನರು ಹಿಂದಿ, ಹಿಂದಿಯ ಯಾವುದೇ ಉಪಭಾಷೆಯನ್ನೂ ಮಾತೃಭಾಷೆಯನ್ನಾಗಿ ಬಳಸುವುದಿಲ್ಲ.

ಹಾಗಾಗಿಯೇ ಹಿಂದಿ ಹೇರಿಕೆಯ ಪ್ರತೀ ಪ್ರಯತ್ನವನ್ನು ನಾವು ಉಗ್ರವಾಗಿ ವಿರೋಧಿಸಬೇಕು. ಕೇಂದ್ರ ಸರಕಾರ ಇಡೀ ದೇಶದ ಜನರು ಕಟ್ಟಿದ ತೆರಿಗೆಯಲ್ಲಿ ‘ಹಿಂದಿ ದಿವಸ್’ ಆಚರಿಸುವುದನ್ನು ಮೊಟ್ಟಮೊದಲು ಬಿಟ್ಟುಬಿಡುವಂತೆ ಆಗ್ರಹಿಸಬೇಕು. ಒಂದು ವೇಳೆ ಕೇಂದ್ರ ಸರಕಾರ ಹಿಂದಿ ದಿವಸ್ ಆಚರಿಸುವುದನ್ನು ಬಿಡುವುದಿಲ್ಲ ಅಂದರೆ ಅದೇ ಕೇಂದ್ರ ಸರಕಾರ ಕನ್ನಡ/ತಮಿಳು/ತೆಲುಗು/ಮಲಯಾಳಂ/ಬಂಗಾಳಿ ಹೀಗೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಬರುವ ಎಲ್ಲಾ ಭಾಷೆಗಳಿಗೆ ಒಂದು ದಿನವನ್ನು ಮೀಸಲಿಟ್ಟು ಅದನ್ನು ಆಚರಿಸಬೇಕು, ದೇಶಾದಾದ್ಯಂತ. ಇದಾಗದೇ ಹೋದಲ್ಲಿ, ದಿನಗಳೆದಂತೆ ನಾವು ಕೇವಲ ನಮ್ಮ ಅಸ್ಮಿತೆಯನ್ನು ಮಾತ್ರ ಕಳೆದುಕೊಳ್ಳುವುದಿಲ್ಲ ಬದಲಾಗಿ ನಮ್ಮ ಅಸ್ತಿತ್ವವನ್ನೂ ಕಳೆದುಕೊಳ್ಳಲಿದ್ದೇವೆ. ಮುಂದಿನ ನಾಲ್ಕೈದು ವರುಷಗಳಲ್ಲಿ ಲೋಕಸಭೆಯ ಕ್ಷೇತ್ರಗಳ ಮರುವಿಂಗಡೆನೆ ಬರಲಿದೆ. ಒಂದೊಮ್ಮೆ ಸರಕಾರ ಇದನ್ನು ಈಗಿರುವ 1971 ರ ಜನಗಣತಿಯ ಬದಲು 2011 ರ ಜನಗಣತಿಯ ಆಧಾರದ ಮೇಲೆ ಮಾಡಿದರೆ, ದಕ್ಷಿಣ ಭಾರತದ ಕೈಯಿಂದ ಸುಮಾರು ಮೂವತ್ತು ಲೋಕಸಭೆ ಸ್ಥಾನಗಳೂ ಕಳೆದುಹೋದರೆ, ಉತ್ತರ ಭಾರತಕ್ಕೆ 80 ರಷ್ಟು ಹೊಸ ಲೋಕಸಭೆ ಸ್ಥಾನಗಳು ಸಿಗಲಿವೆ. ಹೀಗೆ ಸಂಸತ್ತಿನಲ್ಲೇ ನಮ್ಮ ಪ್ರಾತಿನಿಧ್ಯ ಕಡಿಮೆಯಾಗಿ, ನಮ್ಮ ದನಿ ಇನ್ನೂ ಕ್ಷೀಣಿಸಲಿದೆ. ಅದಕ್ಕಾಗಿಯೇ ಕನ್ನಡ ರಾಷ್ಟ್ರೀಯತೆ, ಕರ್ನಾಟಕದ ಆರ್ಥಿಕತೆಯ ಬಗ್ಗೆ ಸ್ವಷ್ಟ ಹೋರಾಟವನ್ನು ರೂಪಿಸಲೇಬೇಕಾಗಿದೆ.

(Almeida Gladson ಅವರ fb ವಾಲ್ ನಿಂದ)

Please follow and like us:
error