ಭಾರತದಲ್ಲಿ ಕರೋನಾ ಬಂದು ಹೋದವರ ಸಂಖ್ಯೆ ಎಷ್ಟಿರಬಹುದು ಗೊತ್ತೆ?

ಕನ್ನಡನೆಟ್ ನ್ಯೂಸ್ : ಇರಾನ್ ನಲ್ಲಿ ಎರಡೂವರೆ ಕೋಟಿ ಜನರಿಗೆ ಸೋಂಕು ತಗುಲಿ, ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ಹುಟ್ಟಿಕೊಂಡಿರಬಹುದು ಎಂದು ಅಲ್ಲಿನ ಅಧ್ಯಕ್ಷರೇ ಹೇಳಿದಾಗ ನಾವು ಹುಬ್ಬೇರಿಸಿದ್ದೆವು. ಈಗ ಭಾರತದ್ದೇ ಒಂದು ಡೇಟಾ ಗಮನಿಸಿದರೆ ಒಂದು ಕ್ಷಣ ರೋಮಾಂಚನವಾದೀತು. ಈ ಡೇಟಾ ಪ್ರಕಾರ ಭಾರತದಲ್ಲಿ ಕರೋನಾ ಬಂದು ಹೋದವರ ಸಂಖ್ಯೆ ಎಷ್ಟಿರಬಹುದು ಗೊತ್ತೆ? ಒಂದು, ಎರಡು ಕೋಟಿಗಳಲ್ಲ, ಸರಿಸುಮಾರು 18 ಕೋಟಿ! ಈ ಹದಿನೆಂಟು ಕೋಟಿ ಜನರು ಕೋವಿಡ್-19 ಗೆ expose ಆಗಿ, ಅವರ ದೇಹದಲ್ಲಿ ಸಹಜವಾಗಿ ಆಂಟಿಬಾಡೀಸ್ ಉತ್ಪತ್ತಿಯಾಗಿವೆ! ಒಂದು ಕ್ಷಣ ನಿಟ್ಟುಸಿರು ಬಿಡಿ, ಆ ಹದಿನೆಂಟು ಕೋಟಿಯಲ್ಲಿ ನೀವೂ ಇರಬಹುದು! ನೀವು ಮಾಸ್ಕ, ಸ್ಯಾನಿಟೈಜರ್, ಫಿಜಿಕಲ್ ಡಿಸ್ಟೆನ್ಸಿಂಗ್ ಎಲ್ಲ ಬಳಸಿಯೂ ಕರೋನಾಗೆ expose ಆಗಿರುವ ಎಲ್ಲ ಸಾಧ್ಯತೆಗಳೂ ಇವೆ. ಅಲ್ಲಿಗೆ ಕರೋನಾ ನಿಮಗೆ ಸಣ್ಣದಾಗಿ ಸಮಸ್ಯೆ ಕೊಟ್ಟು ಹೋಗಿರಬಹುದು. ಒಂಚೂರು ಕೆಮ್ಮು, ಗಂಟಲಲ್ಲಿ ಸಣ್ಣ ಕೆರೆತ, ಜ್ವರವೆನ್ನಲು ಸಾಧ್ಯವಾಗದ ಮೈ ಬೆಚ್ಚಗಾಗಿ ಮತ್ತೆ ಸರಿಹೋದ ಅನುಭವ. ಅಥವಾ ಇದ್ಯಾವುದೂ ಆಗದೆಯೇ ಕರೋನಾ‌ ವಿರುದ್ಧ ನಿಮ್ಮ ದೇಹ ಸೆಣಸಿ ವಾಪಾಸು ಕಳಿಸಿರಬಹುದು. ಮನುಷ್ಯನ ದೇಹದ ಒಳಗಿನ ರೋಗ ನಿರೋಧಕ ಶಕ್ತಿಯ ಒಳವಿನ್ಯಾಸವೇ ಅಂಥದ್ದು, ಅದು ತನ್ನ ಕೈಲಾದಷ್ಟು ಶಕ್ತಿಮೀರಿ ಬಡಿದಾಡುತ್ತದೆ. ಕೈ ಮೀರಿ ಹೋದ ಮೇಲಷ್ಟೆ ನಿಮ್ಮನ್ನು ಅದು ವೈದ್ಯರ ಬಳಿ ಕಳಿಸುತ್ತದೆ.

ಈ ಡೇಟಾ ಈಗ ಹೊಸಬಗೆಯ ಚರ್ಚೆಗಳನ್ನು ಹುಟ್ಟುಹಾಕಬಹುದು. “Herd Immunity”ಯ ಪ್ರಶ್ನೆಗಳು ಮುನ್ನೆಲೆಗೆ ಬರಬಹುದು. ” Immunity passport” ವಿಷಯವೂ ಪ್ರಸ್ತಾಪವಾಗಬಹುದು. ಕೋವಿಡ್-19 ಸಮುದಾಯಕ್ಕೆ ಹರಡುವುದರ ಕುರಿತು ಇದುವರೆಗೆ ಇದ್ದ ಭೀತಿ ಸ್ವಲ್ಪ ಮಟ್ಟಿಗೆ ತಗ್ಗಬಹುದು. ಎಲ್ಲಕ್ಕಿಂತ ಮಿಗಿಲಾಗಿ, ಸಾವಿನ ಪ್ರಮಾಣ (mortality rate) ಗಮನಿಸಿ. ಭಾರತದಲ್ಲಿ ಅಧಿಕೃತ ಮಾಹಿತಿಯ ಪ್ರಕಾರ ಕರೋನಾದಿಂದ ಸತ್ತವರ ಸಂಖ್ಯೆ ಇದುವರೆಗೆ 28,000. ಹದಿನೆಂಟು ಕೋಟಿಗೆ 28,000 ಎಂದರೆ ಎಷ್ಟು ಕಡಿಮೆ ಪರ್ಸೆಂಟೇಜ್ ಆಗಬಹುದು ಎಂದು ಊಹಿಸಿ. ಅಂದಾಜು ಹತ್ತು ಸಾವಿರ ಜನಸಂಖ್ಯೆಗೆ ಒಂದು ಸಾವಿರಬಹುದಾ? ಕಾಲ್ಕುಲೇಟರ್ ಮೇಲೆ ಕೈಯಾಡಿಸಿ ನೋಡಿ‌.

ಅಷ್ಟಕ್ಕೂ ಇದು ಯಾವ ಡೇಟಾ? ಯಾರು ಇದನ್ನು‌ ಸಂಗ್ರಹಿಸಿದವರು? ಇದನ್ನು ನಂಬಬಹುದಾ ಎಂದು ನೀವು ಕೇಳಬಹುದು.‌ ಥೈರೋಕೇರ್ ಎಂಬ ಖಾಸಗಿ ಲ್ಯಾಬ್ ದೇಶಾದ್ಯಂತ ದೊಡ್ಡ ಮಟ್ಟದ ಸರ್ವೆಯೊಂದನ್ನು ನಡೆಸಿ ಈ ಮಾಹಿತಿಗಳನ್ನು ನೀಡಿದೆ. ಥೈರೋಕೇರ್ ಪ್ರಕಾರ ದೇಶದ ಶೇ.15ರಷ್ಟು ಮಂದಿ ಈಗಾಗಲೇ ಕೋವಿಡ್-19 ಗೆ ಆಂಟಿಬಾಡೀಸ್ ಹೊಂದಿದ್ದಾರೆ.‌ ಥೈರೋಕೇರ್ ದೇಶಾದ್ಯಂತ ಇಪ್ಪತ್ತು ದಿನಗಳ ಅವಧಿಯಲ್ಲಿ ದೇಶದ ಅರವತ್ತಕ್ಕೂ ಹೆಚ್ಚು ಪಿನ್ ಕೋಡ್ ಗಳಲ್ಲಿ 60,000 ಪರೀಕ್ಷೆಗಳನ್ನು ನಡೆಸಿ ಈ ಅಂದಾಜನ್ನು ನೀಡಿದೆ. ಇದರಲ್ಲಿ ಒಂದೆರಡು ಪರ್ಸೆಂಟ್ ಹಿಂದೆ ಮುಂದೆ ಆಗಬಹುದು. ನಮ್ಮದು ಅತ್ಯಂತ ವೇಗವಾಗಿ ನಡೆಸಿದ ಪರಿಣಾಮಕಾರಿ ಸಮೀಕ್ಷೆ‌ ಎಂದು ಹೇಳುತ್ತಾರೆ ಥೈರೋಕೇರ್ ಟೆಕ್ನಾಲಜೀಸ್ ಮುಖ್ಯಸ್ಥ ವೇಲುಮಣಿ.

ಇದು ಯಾವುದೇ ಸರ್ಕಾರಿ ಏಜೆನ್ಸಿ ನಡೆಸಿದ ಅಧಿಕೃತ ಸರ್ವೆ ಅಲ್ಲ. Herd Immunity ಯ ಸಾಧ್ಯತೆ ಕಂಡುಕೊಳ್ಳುವ randomised study ಕೂಡ ಅಲ್ಲ. ಆದರೆ ಇದರಲ್ಲಿ ವಿಶ್ವಾಸವಿಡುವುದಕ್ಕೆ ಒಂದು ಕಾರಣವೂ ಇದೆ.‌ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಜೂನ್ ಆರಂಭದಲ್ಲಿ Seroprevalence study ನಡೆಸಿತ್ತು. ಇದರ ವರದಿ ಬಿಡುಗಡೆಗೂ ಮುನ್ನ ಲೀಕ್ ಆಗಿದ್ದು ದೇಶದ ಶೇ.15ರಿಂದ ಶೇ.20 ರಷ್ಟು ಜನಸಂಖ್ಯೆ ಕೋವಿಡ್-19ಗೆ ಈಗಾಗಲೇ ರೋಗನಿರೋಧಕ ಶಕ್ತಿ ಹೊಂದಿದ್ದಾರೆ ಎಂದು ಹೇಳುತ್ತದೆ. ಥೈರೋಕೇರ್ ವರದಿ ಮತ್ತು ICMR ಸೋರಿಕೆಯಾದ ವರದಿಗಳು ಹೆಚ್ಚು ಕಡಿಮೆ ಒಂದೇ ಕಥೆಯನ್ನು ಹೇಳುತ್ತಿವೆ.

ಕಳೆದ ಏಪ್ರಿಲ್ ತಿಂಗಳಿನಲ್ಲೂ ICMR Seroprevalence study ನಡೆಸಿತ್ತು. ಆಗ ಶೇ. 0.73 ರಷ್ಟು ಜನಸಂಖ್ಯೆ ಕೋವಿಡ್ -19ಗೆ ಆಂಟಿಬಾಡೀಸ್ ಹೊಂದಿರುವುದಾಗಿ ಅಂದಾಜು ಮಾಡಲಾಗಿತ್ತು. ಶೇ.0.73 ಎಂದರೆ ಹೆಚ್ಚು ಕಡಿಮೆ ಒಂದು ಕೋಟಿ. ಕರೋನಾ ವೇಗವಾಗಿ ಹರಡಿದಂತೆ ಇದನ್ನು ಹೆಚ್ಚುತ್ತ ಬಂದಿದೆ.

ಥೈರೋಕೇರ್ ವರದಿ ಪ್ರಕಾರ ಕೋವಿಡ್-19 ಯಾವ ಪ್ರದೇಶದಲ್ಲಿ ಅತಿಹೆಚ್ಚು ಕಾಟ ಕೊಟ್ಟಿದೆಯೋ ಅಲ್ಲಿ ಹೆಚ್ಚು ಜನರು ಸದ್ದುಗದ್ದಲವಿಲ್ಲದಂತೆ ಇಮ್ಯೂನಿಟಿ ಪಡೆದಿದ್ದಾರೆ. ಮುಂಬೈನ ಥಾಣೆಯ ಭಿವಾಂಡಿಯಲ್ಲಿ ಶೇ.44ರಷ್ಟು ಜನ‌ ಆಂಟಿಬಾಡೀಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇದನ್ನು ಬಿಟ್ಟರೆ ಅತಿ ಹೆಚ್ಚು ಪಾಸಾಗಿರುವುದು ಎಲ್ಲಿ ಗೊತ್ತೆ? ನಮ್ಮ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ. ಅಲ್ಲಿ ಒಟ್ಟು ಶೇ. 44ರಷ್ಟು ಮಂದಿ ಕರೋನಾಗೆ ಎಕ್ಪೋಸ್ ಆಗಿ ಆಂಡಿಬಾಡೀಸ್ ಹೊಂದಿದ್ದಾರೆ.

ಥೈರೋಕೇರ್ ನ ಅಧ್ಯಯನವನ್ನು ಹೇಗೆ ನಂಬುವುದು? ಥೈರೋಕೇರ್ ಆಂಟಿಬಾಡೀಸ್ ಪರೀಕ್ಷೆಗೆ ಆಯ್ಕೆ ಮಾಡಿಕೊಂಡಿರುವುದು ELISA ಮತ್ತು CILA ಮಾದರಿಗಳನ್ನು. ಇವೆರಡೂ ಕೂಡ ನಮ್ಮ ICMR ಅಧಿಕೃತ ಸಮ್ಮತಿಯನ್ನು ನೀಡಿದೆ. National Institute of Virology ಸಂಸ್ಥೆ ಕೂಡ ಕೋವಿಡ್-19 ಕುರಿತಾದ ಆಂಟಿಬಾಡೀಸ್ ಪರೀಕ್ಷೆಯಲ್ಲಿ ELISA ಅತ್ಯಂತ ಪರಿಣಾಮಕಾರಿ ಎಂದು ಹೇಳಿದೆ. ಥೈರೋಕೇರ್ ತಾನು ಸಂಗ್ರಹಿಸಿದ ಎಲ್ಲ ಮಾದರಿಗಳನ್ನು ಒಂದೇ ಲ್ಯಾಬ್ ನಲ್ಲಿ ಪರೀಕ್ಷಿಸಿದೆ. ಇದೆಲ್ಲವೂ ಥೈರೋಕೇರ್ ಅಧ್ಯಯನದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ.

ಥೈರೋಕೇರ್ ವರದಿ ಮತ್ತು ಈ ಹಿಂದಿನ ICMR ಅಧ್ಯಯನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದೇಶದಲ್ಲಿ ಕೋವಿಡ್-19 ಅಧಿಕೃತ ಸೋಂಕಿತರ ಸಂಖ್ಯೆ ಹೆಚ್ಚಾದಷ್ಟೂ ಆಂಡಿಬಾಡಿ ಪಾಜಿಟಿವಿಟಿ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಅತ್ಯಂತ ಸಮಾಧಾನ ತರುವ ವಿಷಯ.

ನಮ್ಮ ನ್ಯೂಸ್ ಚಾನಲ್ ಗಳಿಗೆ ಒಂದು ಮನವಿ. ಬೆಂಗಳೂರಿನ ಚಿತಾಗಾರಗಳ ಎದುರು ನಿಂತ ಆಂಬುಲೆನ್ಸ್ ಸಾಲುಗಳನ್ನು ಪದೇಪದೇ ತೋರಿಸಿ ಜನರನ್ನು ಹೆದರಿಸುವ ಬದಲು ಇಂಥವುಗಳನ್ನು ಪ್ರಸಾರ ಮಾಡಿ, ಜನರಲ್ಲಿ ಒಂದಷ್ಟು ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನಾದರೂ ಮಾಡಿ. ಥೈರೋಕೇರ್ ತಾನು ಎಲ್ಲೆಲ್ಲಿ ಪರೀಕ್ಷೆಗಳನ್ನು ಎಂಬ ಪಟ್ಟಿಯ ಜತೆಗೆ ಹಲವು ಬಗೆಯ ಚಾರ್ಟ್ ಗಳನ್ನು ನೀಡಿದೆ. ಒಮ್ಮೆ ಗೂಗಲ್ ಮಾಡಿ ಹುಡುಕಿದರೆ ಒಂದು ಗಂಟೆ ಕಾರ್ಯಕ್ರಮಕ್ಕೆ ಆಗುವಷ್ಟು ಮಾಹಿತಿ ಸಿಗುತ್ತದೆ.

ಇದೆಲ್ಲದರ ನಡುವೆ, ಈ ಹಿಂದೆ ನಾನು ಬರೆದ ಹಾಗೆ, ಈ ಆಂಟಿಬಾಡೀಸ್ ನಮ್ಮನ್ನು ಎಷ್ಟು ಕಾಲ ಕೋವಿಡ್-19ನಿಂದ ಕಾಪಾಡಬಹುದು? ಒಂದು ತಿಂಗಳು, ಆರು ತಿಂಗಳು, ಒಂದು ವರ್ಷ? ಇದನ್ನು ಖಚಿತವಾಗಿ ಯಾವ ವೈರಾಲಾಜಿಸ್ಟ್ ಗಳೂ ಹೇಳುತ್ತಿಲ್ಲ. ಅದಕ್ಕಾಗಿಯೇ ನಾವು ಶಾಶ್ವತ ಪರಿಹಾರಕ್ಕಾಗಿ ಹಾತೊರೆಯುತ್ತಿರುವುದು. ಶಾಶ್ವತ ಪರಿಹಾರವೆಂದರೆ ಕೋವಿಡ್-19 ವ್ಯಾಕ್ಸಿನ್. ಅದರ ದಾರಿ ಕಾಯುವುದು ಉಳಿದಿರುವ ಏಕೈಕ ಹಾದಿ.

  • ದಿನೇಶ್ ಕುಮಾರ್ ಎಸ್.ಸಿ.
Please follow and like us:
error