“ಭಾಡ್ಯಾನ್ ಮಕ್ಳ”ನ್ನ ಬಿಟ್ಟು ಅಗಲಿದ ಧಾರವಾಡ ‘ಹೇಮಾ ಮಾಲಿನಿ’


ನನ್ನ ಭಾವಕೋಶದಲ್ಲಿ ಧಾರವಾಡ ಎನ್ನುವುದು ಫಲವತ್ತಾದ ನೆಲ. ಅಲ್ಲಿ ಸದಾ ಜಿನುಗುವ ನೆನಪುಗಳ ಮಳೆ. ನೆಲದ ಮಣ್ಣ ಜೊತೆ ನಾನೂ ಆಗಾಗ ನೆಂದು ಬಿಡುತ್ತೇನೆ.
ಸಾಹಿತ್ಯ, ಕಲೆ, ನಾಟಕ ಮತ್ತಲ್ಲಿನ ಜನಸಂಸ್ಕೃತಿ ಮನುಷ್ಯ ಆಗುವುದು ಹೇಗೆಂದು ನನಗೆ ಕಲಿಸಿಕೊಟ್ಟಿದೆ.

ಅಲ್ಲಿ ‘ಲೇ ಭಾಡ್ಯಾನ ಮಕ್ಳಾ’, ‘ಸೂಳೀ ಭಕ್ಳಾ’.. ಎಂದೆಲ್ಲಾ ತನ್ನನ್ನು ಛೇಡಿಸುವವರ ಮೇಲೆ ರೇಗುತ್ತ ಚಿಂದಿ ಆಯ್ದು ಬದುಕುತ್ತಿದ್ದ ಹೆಣ್ಣು ಜೀವವೊಂದಿತ್ತು. ಅವಳಿಗೆ ಅದು ಹೇಗೆ ‘ಡ್ರೀಮ್ ಗರ್ಲ್’ ಹೆಸರು ತಗಲ್ಹಾಕಿಕೊಂಡಿತೊ.. ಅವಳನ್ನು ಎಲ್ಲರೂ ಹೇಮಾ ಮಾಲಿನಿ ಅಂತ ಛೇಡಿಸುತ್ತಿದ್ದರು.
‘ಏ ಹೇಮಾ’ ಎಂದು ಯಾರಾದರೂ ಕೂಗಿದರೆ ಸಾಕು ಲೇ ಭಾಡ್ಯಾನ್ ಮಕ್ಳ ಎಂದು ತಿರುಗಿ ಬೀಳುತ್ತಿದ್ದಳು. ಆಗ ಅವಳು ಸಿಂಹಿಣಿಯಂತೆ.
ಹಾಗೆ ನೋಡಿದರೆ ಅವಳು ಬುದ್ಧಿವಂತೆ. ಬೆಳಿಗ್ಗೆ ಯಾವುದೋ ಡಬ್ಬಿ ಅಂಗಡಿ ಮುಂದೆ ಕೂತು ಟೀ ಹೀರುತ್ತಾ ದಿನ ಪತ್ರಿಕೆ ಓದುತ್ತಿದ್ದಳು. ಕನ್ನಡ, ಇಂಗ್ಲಿಷ್ ಇತ್ಯಾದಿ.
ತಾನು ಹುಚ್ಚಿ ಅಲ್ಲ ಜನರಿಗೆಂಥದೋ ಹುಚ್ಚು ಎನ್ನುವುದು ಅವಳ ಆಕ್ರೋಶದಲ್ಲಿ ಪ್ರಕಟಗೊಳ್ಳುತ್ತಿತ್ತು.
ನನಗಿದು ಎಷ್ಟು ಕಾಡಿತೆಂದರೆ ನಾನವಳನ್ನು ನನ್ನ ನಾಟಕದ ಮುಖ್ಯ ಪಾತ್ರವಾಗಿಸಿದೆ (ಬಸಂತಿ ಕೋಟೂರ್ ಮತ್ತು ಉಮಾ ಈ ಪಾತ್ರ ನಿರ್ವಹಿಸಿದ್ದರು).
ಆಗ ಬಾಬ್ರಿ ಮಸೀದಿ ಧ್ವಂಸದ ಘಟನೆ ದೇಶದ ತುಂಬ ವಿಷಮ ಸ್ಥಿತಿ ರೂಪಿಸಿತ್ತು. ಅದೇ ಸಮಯಕ್ಕೆ ಯುನಿವರ್ಸಿಟಿ ಯಲ್ಲಿ ಯೂಥ್ ಫೆಸ್ಟಿವಲ್.
ನಾನೊಂದು ನಾಟಕ ನಿರ್ದೇಶನ ಮಾಡಿದೆ. ಕೋಮು ಸಾಮರಸ್ಯ ನನ್ನ ನಿಲುವಾಗಿತ್ತು. ಬಾಬರಿ ಮಸೀದಿ, ರಾಮಮಂದಿರಕ್ಕೂ ಮಿಗಿಲಾದ ಒಟ್ಟು ಮನುಷ್ಯ ಜೀವ ಮುಖ್ಯ ಎನ್ನುವುದು ನಮ್ಮ ನಿಲುವಾಗಿತ್ತು.
ಇಟ್ಟಿಗೆ ಪವಿತ್ರ ಅಲ್ಲ, ಜೀವ ಪವಿತ್ರ ಎಂದ ಲಂಕೇಶ್ ಮಾತು ನಮ್ಮ ಸಂವೇದನೆಯನ್ನು ಹೊಕ್ಕಿತ್ತು. ಈ ಸಂವೇದನೆಯನ್ನು ರಂಗದ ಮೇಲೆ ಕಟ್ಟಿಕೊಡಲು ಸಾದತ್ ಹಸನ್ ಮಾಂಟೊ ಕತೆ ಸೂಕ್ತ ಎನಿಸಿತು. ಅವರ ‘ತೋಬತೇಕ್ ಸಿಂಗ್’ ಸಿಕ್ಕ. ಕಥಾ ವಸ್ತುವನ್ನು ನೇಟಿವಿಟಿಗೆ ಒಗ್ಗಿಸಿಕೊಂಡು ನಾಟಕ ಕಟ್ಟಿಕೊಂಡೆವು. ಬಾಬರಿ ಮಸೀದಿ ಧ್ವಂಸ, ರಥಯಾತ್ರೆ, ಆ ನಂತರದ ಹಿಂಸೆ.. ರಾಜಕಾರಣ, ಮತೀಯ ವಾದ.. ಈ ಎಲ್ಲದರ ಹಿಂಸೆಯ ನಡುವೆ ನಿಜವಾಗಿ ಮಿಡಿಯುವ ಮನುಷ್ಯರ ಅಂತಃದನಿ ಒಂದರ ಹುಡುಕಾಟದಲ್ಲಿ ಸಿಕ್ಕವಳೇ ಈ ಹೇಮಾ ಮಾಲಿನಿ!
ಇಡೀ ನಾಟಕದ ಅಂತಃದನಿಯನ್ನು ಈ ಪಾತ್ರದ ಮೂಲಕ ಧ್ವನಿಸಿದೆವು. ಮೊದಲ ದೃಶ್ಯದಲ್ಲಿ ಈ ಪಾತ್ರ ರಂಗದ ಮೇಲೆ ಎಂಟ್ರಿ ಆಗುತ್ತಿದ್ದಂತೆ ಪ್ರೇಕ್ಷಕರ ಕರತಾಡನ ಯಾವುದೋ ಕಾಮಿಡಿ ಶೋ ಎನ್ನುವ ಭಾವನೆ ಮೂಡಿಸಿತ್ತು ಹಲವರಲ್ಲಿ. ಆನಂತರದಲ್ಲಿ ಆಗಿದ್ದೇ ಬೇರೆ.
ನಾಟಕದಲ್ಲಿ ಭಾರತ-ಪಾಕಿಸ್ತಾನ ಇಬ್ಭಾಗ ಆಗುವುದನ್ನು ವಿರೋಧಿಸುವ ಲಾಹೋರ್ ಆಸ್ಪತ್ರೆಯ ಹುಚ್ಚರ ನಿಲುವು, ನೋ ಮ್ಯಾನ್ ಲ್ಯಾಂಡ್ ನಲ್ಲಿ ಸಾಯುವ ತೋಬತೇಕ್ ಸಿಂಗ್ (ಸಯಿದ್ ಸನದಿ/ಇಮ್ತಿಯಾಜ್ ದೊಡ್ಡಮನಿ ಈ ಪಾತ್ರ ನಿರ್ವಹಿಸಿದ್ದರು) ಹೃದಯ ವಿದ್ರಾವಕ ದೃಶ್ಯ… ಇದೆಲ್ಲದರ ಕಥನ ನಿರೂಪಿಸಿ, ‘ಮನುಷ್ಯ ಬದುಕಿಗಿಂತ ಈ ಮಂದಿರ-ಮಸೀದಿ ಹೆಸರಿನ್ಯಾಗ್ ಕಿತ್ತಾಟ ಬೇಕೇನ್ರೊ ಭಾಡ್ಯಾನ್ ಮಕ್ಳ’ ಎಂದು ರಾಜಕಾರಣ ಮತ್ತು ಜನಸಮೂಹ ವನ್ನು ಅತ್ಯಂತ ಆರ್ದ್ರ ದನಿಯಲ್ಲಿ ಕೆಣಕಿ ಎಲ್ಲರ ಎದೆಯಲ್ಲಿ ಮನುಷ್ಯ ಪ್ರೀತಿ ಉಕ್ಕಿಸಿ, ಬಹುತೇಕರ ಕಣ್ಣಾಲಿಗಳ ಹುಸಿಗೊಳಿಸಿದ್ದು ಇದೇ ಹೇಮಾ ಮಾಲಿನಿ ಪಾತ್ರ.
ನಮಗೆ ಪ್ರತಿಷ್ಠಿತ “ರಂಗದೀಪ್ತಿ” ಬೃಹತ್ ಪಾರಿತೋಷಕ ದಕ್ಕಿತು. ದಕ್ಷಿಣ ಭಾರತದ ಯುವಜನೋತ್ಸವದಲ್ಲಿ ಮೊದಲ ಬಹುಮಾನ. ರಾಷ್ಟ್ರೀಯ ಯುವೋತ್ಸವದಲ್ಲಿ ಮೊದಲ ಸಲ ಕರ್ನಾಟಕ ವಿಶ್ವವಿದ್ಯಾಲಯ ನಾಟಕ ವಿಭಾಗದಲ್ಲಿ ಪ್ರತಿನಿಧಿಸುವಂತಾಯಿತು. ಹೀಗೆ ಹೇಮಾ ಮಾಲಿನಿ ನಮ್ಮೊಳಗೆ ಅಚ್ಚಳಿಯದ ನೆನಪು.

ಮತ್ತೆ ಮತ್ತೆ ನೆನಪಾಗುವ ಈ ಹೇಮಾ ಮಾಲಿನಿ ಅಲಿಯಾಸ್ ಇಂದುಮತಿ ವಾಜಪೇಯಿ ನಿಜವಾದ ಮನುಷ್ಯ ಅಂತಃಕರಣ.

ಈಗ “ಭಾಡ್ಯಾನ್ ಮಕ್ಳ”ನ್ನ ಬಿಟ್ಟು ಅಗಲಿದ್ದಾಳೆ. ನಮ್ಮೊಳಗಿನ ಮನುಷ್ಯನ ಎಚ್ಚರಿಸಿ, ಮಾನವೀಯ ತುಡಿತ ಜೀವಂತವಾಗಿರಿಸಿದ ಈ ಜೀವಕ್ಕೆ ಸಾವಿರ ಸಲಾಂ. ದಿಲ್ ಸೇ ..

ಲಕ್ಷ್ಮಿ ಕಬ್ಬೇರಹಳ್ಳಿ ಈ ಹೇಮಾ ಮಾಲಿನಿ ಸಾವಿನ ಸುದ್ದಿ ತಿಳಿಸಿದಾಗ ತುಂಬ ನೋವಾಯಿತು. ದಿಲ್ ತುಂಬ ಸುರಿಯುತ್ತಿರುವ ಧಾರವಾಡದ ನೆನಪುಗಳ ಜಿಟಿ ಜಿಟಿ ಮಳ್ಯಾಗ್ ಹೇಮಾ ಮಾಲಿನಿ ತೋಸ್ಕೋಂತ ನಿಂತ ಬಿಟ್ಟಾಳ…
-ದಿಲ್… ದಿಲಾವರ್ ರಾಮದುರ್ಗ

ಪೂರಕ ಮಾಹಿತಿ :

ಕೊಪ್ಪಳದ ವೃದ್ದಾಶ್ರಮದಲ್ಲಿ ನಿನ್ನೆ ಸಾವನ್ನಪ್ಪಿದ ಹೇಮಾ ಮಾಲಿನಿ

Please follow and like us:
error