ಭಯಬಿದ್ದಾಗ ಜ್ವರ ಏಕೆ ಬರುತ್ತದೆ?-ನಾಗೇಶ್ ಹೆಗಡೆ

ಕರೋನಾ ಬಗ್ಗೆಯೂ ಇದೆ ಓದಿ….ಹಿರಿಯ ವಿಜ್ಞಾನ ಲೇಖಕರ ಫೇಸ್ ಬುಕ್ ಕಥನ..‌

[ನಮ್ಮ ದೇಹದಲ್ಲಿ ನಡೆಯುವ ಈ ಸೋಜಿಗದ ವಿದ್ಯಮಾನದ ಬಗ್ಗೆ ಕೊರೊನಾ ಸಂದರ್ಭದಲ್ಲಿ ತುಸು ವಿವರಣೆ ಇಲ್ಲಿದೆ. ಇದು ನಾಗೇಶ ಹೆಗಡೆಯ ಫೇಸ್‌ಬುಕ್ ಕಥನ. ಕೊರೊನಾ ಆತ್ಮಘಾತುಕ ಅಲ್ಲ, ನಮ್ಮೆಲ್ಲರ ಒಳ್ಳೆಯದಕ್ಕೇ ಬಂದಿದ್ದು ಎಂಬ ಆರ್ಗ್ಯೂಮೆಂಟ್ ಕೊನೆಯಲ್ಲಿದೆ]

ನೀವು ಹಳ್ಳಿಯವರು ಅಂದ್ಕೊಳ್ಳಿ. ನಿಮಗೆ ಎರಡು ದಿನಗಳಿಂದ ಜ್ವರ ಬಿಟ್ಟು ಬಿಟ್ಟು ಬರುತ್ತಿದೆ. ಡಾಕ್ಟರಿಗೆ ತೋರಿಸೋಣವೆಂದು ನೀವು ನಸು ಬೆಳಗಿನಲ್ಲಿ ಕಾಡಿನ ರಸ್ತೆಗುಂಟ ಬಸ್ ಹಿಡಿಯಲು ಕಾಲ್ನಡಿಗೆ ಹೊರಟಿದ್ದೀರಿ.
ಹಠಾತ್ತಾಗಿ ಪಕ್ಕದ ಪೊದೆಯಿಂದ ದೈತ್ಯಗಾತ್ರದ ಕಾಡುಕೋಣ ರಸ್ತೆಗೆ ಇಳಿಯುತ್ತದೆ. ನಿಮ್ಮನ್ನು ನೋಡಿ ಕಲ್ಲಾಗಿ ನಿಲ್ಲುತ್ತದೆ.
ನಿಮ್ಮ ಮೈ ಜುಮ್ಮೆನ್ನುತ್ತದೆ. ಕಣ್ಣಾಲಿ ದೊಡ್ಡದಾಗುತ್ತದೆ. ರೋಮಾಂಚನವಾಗುತ್ತದೆ. ಗಂಟಲ ದ್ರವ ಆರಿ, ಎದೆ ಡವಡವ ಹೊಡೆದುಕೊಳ್ಳುತ್ತದೆ.
ನೀವೀಗ ಓಡಬೇಕು ಅಥವಾ ಆ ದೈತ್ಯನನ್ನು ಓಡಿಸಬೇಕು. ಎರಡೇ ಆಯ್ಕೆ! ಅದಕ್ಕೇ ದೇಹ ಈ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತದೆ.

ನಿಮ್ಮ ಮಿದುಳಿನ ಆಳದಲ್ಲಿ ಅನಾದಿ ಕಾಲದ ಲಿಂಬಿಕ್ ಬ್ರೇನ್ ಇದೆ. ಅದು ಹಿಂದಿನ ಎಲ್ಲಾ ಜನ್ಮಗಳ ಮೆಮೊರಿಯನ್ನು ಕೆದಕುತ್ತದೆ. ಮುಂಗುಸಿಯಾಗಿದ್ದಾಗಿನ, ಮುಳ್ಳುಹಂದಿಯಾಗಿದ್ದಾಗಿನ ಪ್ರಕ್ರಿಯೆಗಳು ಈಗ ಹಠಾತ್ ಚುರುಕಾಗುತ್ತವೆ. ಅದು ಅಡ್ರಿನಾಲಿನ್ ಗ್ರಂಥಿಯನ್ನು ಮಿಂಚಿನ ವೇಗದಲ್ಲಿ ಬಡಿದೆಬ್ಬಿಸುತ್ತದೆ. ರೋಮ ನಿಮಿರಿದಾಗ, ಕಣ್ಣಾಲಿ ದೊಡ್ಡದಾದಾಗ, ನೀವು ತೋರಿಕೆಗಿಂತ ಭಾರೀ ಬಲಶಾಲಿ ಎಂಬ ಸಂಕೇತ ಎದುರಾಳಿಗೆ ಹೋಗುತ್ತದೆ.
ನೀವು ಈಗ ಹೋರಾಟಕ್ಕೆ ಅಥವಾ ಓಟಕ್ಕೆ ಸಜ್ಜಾಗಬೇಕು ಅಂದರೆ ದೇಹಕ್ಕೆ ಜಾಸ್ತಿ ಆಮ್ಲಜನ ಬೇಕು. ಅದಕ್ಕೇ ಹೃದಯ ಬಡಿತ ಜೋರಾಗುತ್ತದೆ. ನಿಮ್ಮ ದೇಹದಿಂದ ಬೆವರು ಹರಿಯಲಿದೆ, ಅದಕ್ಕೇ ರೋಮಗಳು ಹಿಗ್ಗಿ, ಅದರ ತಳದ ರಂಧ್ರಗಳು ತೆರೆದುಕೊಳ್ಳಬೇಕು. ನಿಮ್ಮ ಕಣ್ಣಾಲಿಗಳು ಹಿಗ್ಗುತ್ತವೆ, ಏಕೆಂದರೆ ನಸುಗತ್ತಲಲ್ಲೂ ಸ್ಪಷ್ಟ ಕಾಣಬೇಕು.
ಈ ಅವಧಿಯಲ್ಲಿ ನಿಮ್ಮ ಜ್ವರ ಮಟಾಮಾಯ ಆಗಿರುತ್ತದೆ! ರೋಗನಿರೋಧಕ ಕಣಗಳನ್ನು ಸ್ಫುರಿಸಬೇಕಿದ್ದ ಗ್ರಂಥಿಗಳು ತಟಸ್ಥ ಕೂತಿವೆ. ಏಕೆಂದರೆ ಈಗ ಅದು ಮುಖ್ಯ ಅಲ್ಲವೇ ಅಲ್ಲ. ಈಗೇನಿದ್ದರೂ ಅಡ್ರಿನಾಲಿನ್ ಗ್ರಂಥಿಯದೇ ನಾಯಕತ್ವ. ಓಡು ಇಲ್ಲವೇ ಹೋರಾಡು.

ಆದರೆ ಈ ಸಂದರ್ಭದಲ್ಲಿ ನಿಮ್ಮ ದೇಹದಲ್ಲಿ ಹೊಕ್ಕಿದ್ದ ರೋಗಾಣುಗಳಿಗೆ ಖುಷಿಯೋ ಖುಷಿ. ಅವಕ್ಕೆ ವೈರಿಗಳೇ ಇಲ್ಲ.
ಸಾಮಾನ್ಯ ದಿನಗಳಲ್ಲಿ ನಿಮ್ಮ ಕಣ್ಣೀರು, ಬಾಯೊಳಗಿನ ಲಾಲಾರಸ, ಮೂಗಿನೊಳಗಿನ ಸಿಂಬಳದಲ್ಲೂ ಇಮ್ಯೂನೊ ಗ್ಲೊಬ್ಯುಲಿನ್ (ಐಜಿ) ಎಂಬ ರೋಗನಿರೋಧಕ ಕಣಗಳು ಬಾಗಿಲು ಕಾಯುವ ಸೈನಿಕರಂತೆ ರೋಗಾಣುಗಳನ್ನು ಸದೆ ಬಡಿಯುತ್ತಿರುತ್ತವೆ. ಆದರೆ ಈಗ ಕಾವಲುಗಾರರೇ ಇಲ್ಲ. ಗಂಟಲದ್ರವ ಆರಿದೆ. ರೋಗಾಣುಗಳಿಗೆ ಮುಕ್ತದ್ವಾರ.

ನೀವು ಕಾಡುಕೋಣನಿಂದ ತಪ್ಪಿಸಿಕೊಂಡು ಏದುಸಿರು ಬಿಡುತ್ತ, ಮನೆಗೆ ಹಿಂದಿರುಗಿ, ಆ ಘಟನೆಯನ್ನೇ ನೆನಪಿಸಿಕೊಂಡು ದಿಗಿಲುಬೀಳುತ್ತ, ನಿಮ್ಮ ಅನುಭವವನ್ನು ಅವರಿವರಿಗೆ ಹೇಳುತ್ತಿದ್ದಷ್ಟು ಕಾಲವೂ ನಿಮ್ಮೊಳಗಿನ ರೋಗಾಣುಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ.
ಕ್ರಮೇಣ ನೀವು ಸಾವರಿಸಿಕೊಂಡು ವಿರಮಿಸಿದಾಗ ರೋಗನಿರೋಧಕ ಗ್ರಂಥಿಗಳು ಎಚ್ಚೆತ್ತುಕೊಳ್ಳುತ್ತವೆ. ಎಲ್ಲಿ ನೋಡಿದಲ್ಲಿ ರೋಗಾಣುಗಳು ಹೆಚ್ಚಿರುವುದರಿಂದ ಜ್ವರ ಬರುತ್ತದೆ. ಜ್ವರ ಎಂದರೆ ರೋಗವನ್ನು ಹೊರಕ್ಕೆ ದಬ್ಬುವ ಮೊದಲ ಶಸ್ತ್ರ ತಾನೆ?

ಸರಿ, ನಿಮಗೇನೊ ಮೊದಲೇ ಜ್ವರ ಇತ್ತು. ಅದು ಈಗ ಕೆಣಕಿದಂತಾಗಿದೆ. ಅದಕ್ಕೇನೀಗ?
ಇಲ್ಲೊಂದು ವಿಶೇಷ ಇದೆ. ನಮ್ಮ ದೇಹಕ್ಕೆ ಸದಾಕಾಲ ಒಂದಲ್ಲ ಒಂದು ಬಗೆಯ ವೈರಸ್, ಬ್ಯಾಕ್ಟೀರಿಯಾ, ಫಂಗಸ್ ಇಂಥ ಸೂಕ್ಷ್ಮ ಜೀವಿಗಳು ಎಂಟ್ರಿ ಪಡೆಯಲು ಯತ್ನ ನಡೆಸುತ್ತಲೇ ಇರುತ್ತವೆ. ಆದರೆ ದ್ವಾರದಲ್ಲಿರುವ ಐಜಿ, ಡಿಐಜಿಗಳು ಅವನ್ನು ಅಲ್ಲೇ ತಡೆದು ನಿಲ್ಲಿಸಿ ನಿಮ್ಮ ಕೋಟೆಯನ್ನು ಭದ್ರವಾಗಿಟ್ಟಿರುತ್ತವೆ. ‘ಐಸ್ಕ್ರೀಮ್ ತಿಂದರೆ ಥಂಡಿ-ಜ್ವರ ಬರುತ್ತೆ!’ ಎಂದು ಅಮ್ಮ ಹೇಳುತ್ತಾಳಲ್ಲ. ಜ್ವರ ಕೆಲವೊಮ್ಮೆ ಬರುತ್ತದೆ ಅನ್ನೋದೂ ನಿಜ.
ಅದಕ್ಕೆ ಕಾರಣ ಏನು ಗೊತ್ತೆ? ಐಸ್ಕ್ರೀಮ್ ಬಾಯೊಳಗಿದ್ದಾಗ ಗಂಟಲಿನ ಶಾಖ ತೀರ ಕಡಿಮೆ ಆಗುತ್ತದೆ. ಆಗ ಸೂಕ್ಷ್ಮ ರೋಗಾಣುಗಳಿಗೆ ಹಬ್ಬ! ಅವು ಖುಷಿಯಿಂದ ತಮ್ಮ ಸಂಖ್ಯೆಯನ್ನು ದ್ವಿಗುಣ, ನೂರ್ಗುಣ ಮಾಡಿಕೊಳ್ಳುತ್ತವೆ. ಐಜಿ ಸಾಹೇಬರು ಚಳಿಯಿಂದ ಮುದುಡಿ ಕೂತಿರುತ್ತಾರೆ. ರೋಗಾಣುಗಳು ಒಳಕ್ಕೆ ನುಗ್ಗುತ್ತವೆ. ಥಂಡಿ ಜ್ವರ ಬರುತ್ತದೆ.

ಮೇಲ್ನೋಟಕ್ಕೆ ನಿರೋಗಿಯಾಗಿದ್ದವರೂ ಸದಾಕಾಲ ಸೂಕ್ಷ್ಮಾಣುಗಳ ಜೊತೆ ಹೋರಾಡುತ್ತಲೇ ಇರುತ್ತಾರೆ. ಅಂಥವರ ಎದುರು ಹಠಾತ್ತಾಗಿ ಹುಲಿಯೊ, ಹಾವೋ, ದೆವ್ವವೊ, ಪಂಜುರ್ಲಿ ಭೂತವೋ ಅಥವಾ ಸಾಲಕೊಟ್ಟ ಸಾಹುಕಾರನೊ ಎದುರಿಗೆ ಬಂದರೆ ಉದ್ವೇಗ, ಭಯ, ಆತಂಕದಿಂದ ನಮ್ಮ ರೋಗನಿರೋಧಕ ಶಕ್ತಿ ಮುದುಡುತ್ತದೆ. ಖಿನ್ನತೆ, ಅಧೈರ್ಯ, ಸೋಲಿನ ಭಾವನೆಗಳಿಂದ ಕಾಯಿಲೆಗಳು ಹೆಚ್ಚುತ್ತವೆ.

ಇದು ಸೈಕಾಲಜಿ ಅಷ್ಟೇ ಅಲ್ಲ; ಶರೀರವಿಜ್ಞಾನವನ್ನು ಓದಿಕೊಂಡಿರುವ ಯಾರನ್ನಾದರೂ ಕೇಳಿ ನೋಡಿ. ದೇಹಕ್ಕೆ ಬೇರೊಬ್ಬರ ಅಂಗವನ್ನು ಕಸಿ ಮಾಡುವ ಮುಂಚೆ ಸರ್ಜನ್ನರು ಇಂಜಕ್ಷನ್ ಕೊಟ್ಟು, ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಂದ್ ಮಾಡುತ್ತಾರೆ. ಹಾಗೆ ಮಾಡದೇ ಇದ್ದರೆ, ದೇಹಕ್ಕೆ ಪರಕೀಯ (ವೈರಿ) ಅಂಗಾಂಶ ಬಂದಿದೆ ಎಂದು ಭಾವಿಸಿ ನಿಮ್ಮದೇ ರೋಗ ನಿರೋಧಕ ಕಣಗಳು ಸರ್ಜರಿ ಮಾಡಿದ ಜಾಗಕ್ಕೆ ದಾಳಿ ಮಾಡುತ್ತವೆ.
ಅಂಥ ದಾಳಿ ಆಗಬಾರದೆಂದು ಕಸಿ ಕೂಡುವವರೆಗೂ ಇಂಜೆಕ್ಷನ್ ಕೊಡುತ್ತಲೇ ಇರುತ್ತಾರೆ. ಆ ಅವಧಿಯಲ್ಲಿ ಐಸಿಯುದಲ್ಲಿ ಒಂದೇ ಒಂದು ರೋಗಾಣುವೂ ಸೊಳ್ಳೆಯೂ ನರಪಿಳ್ಳೆಯೂ ಬಾರದಂತೆ ಬಿಗಿಯಾದ ದಿಗ್ಬಂಧನ ಹಾಕಿರುತ್ತಾರೆ (ಕಿಮೊಥೆರಪಿಯ ಸಂದರ್ಭದಲ್ಲೂ ಹೀಗೇ ನಿರ್ಬಂಧ ಹಾಕುತ್ತಾರೆ).

ನೀವೂ ನಿಮ್ಮಷ್ಟಕ್ಕೆ ನಿರ್ಬಂಧ ಹಾಕಿಕೊಂಡು ಟಿವಿ ಎದುರು ಕೂತಿದ್ದರೆ ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನೂ ಕೈಕಾಲು ಕಟ್ಟಿ ಕೂರಿಸಿದಂತಾಗುತ್ತದೆ. ಏಕೆಂದರೆ ಸ್ಕ್ರೀನ್ ಮೇಲೆ ನಿಮ್ಮನ್ನು ವಿಹ್ವಲಗೊಳಿಸುವಂತೆ ಸತತವಾಗಿ ಕೋವಿಡ್ ಕಾಯಿಲೆ ಹೆಚ್ಚುತ್ತಿರುವ ಸುದ್ದಿ, ಅದರಿಂದ ಆತಂಕಿತಗೊಂಡು ಆತ್ಮಹತ್ಯೆ ಮಾಡಿಕೊಂಡವರ ಸುದ್ದಿ, ಆಸ್ಪತ್ರೆಗಳಲ್ಲಿ ದಫನಕ್ಕಾಗಿ ಕಾಯುತ್ತಿರುವ ಸಾಲುಸಾಲು ಶವಗಳ ದೃಶ್ಯ, ಇವೆಲ್ಲವನ್ನೂ ನೋಡುತ್ತ, ಅದನ್ನೇ ಚರ್ಚಿಸುತ್ತ, ಒಳಗೊಳಗೇ ತಳಮಳಗೊಳ್ಳುತ್ತಿದ್ದರೆ ನಿಮ್ಮ ಹಾರ್ಮೋನ್ಗಳು ತಳಹಿಡಿದು ಕೂರುತ್ತವೆ.
ಚಿಂತೆ ಅಧೀರತೆಗೂ ಅಧೀರತೆ ಖಿನ್ನತೆಗೂ ಖಿನ್ನತೆ ಕಾಯಿಲೆಗೂ ಕಾರಣವಾಗುತ್ತದೆ.

ಅದರಿಂದ ಹೊರಬನ್ನಿ. ಇಷ್ಟಕ್ಕೂ ಏನಾಗಿದೆ ಈಗ? ಇದ್ದುದರಲ್ಲಿ ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ತೀರಾ ಕಡಿಮೆ ಇದೆ. ಪ್ರತಿ ಒಂದು ಲಕ್ಷ ಜನರಲ್ಲಿ’  ಒಬ್ಬರು (ಕೇವಲ ಒಬ್ಬರು) ಮಾತ್ರ ವಿಧಿವಶರಾಗುತ್ತಿದ್ದಾರೆ. ಆಸ್ಪತ್ರೆ ವ್ಯವಸ್ಥೆ, ಶುಶ್ರೂಷೆಯ ಗುಣಮಟ್ಟ ನಮ್ಮದಕ್ಕಿಂತ ಎಷ್ಟೋ ಪಾಲು ಹೆಚ್ಚಿಗೆ ಇರುವ ಅಮೆರಿಕದಲ್ಲಿ ಪ್ರತಿ ಒಂದು ಲಕ್ಷ ರೋಗಿಗಳಲ್ಲಿ 36 ಜನ ಸಾವಪ್ಪುತ್ತಿದ್ದಾರೆ. ಇಟಲಿಯಲ್ಲಿ 57, ಸ್ಪೇನಿನಲ್ಲಿ 60, ಬ್ರಿಟನ್ನಿನಲ್ಲಿ 63 ಜನರ ಪ್ರಾಣ ಹೋಗುತ್ತಿದೆ.
ನಮ್ಮಲ್ಲಿ ಕೇವಲ ಒಬ್ಬರು! ಅದೂ ಯಾರು? ಹೃದ್ರೋಗಿಗಳು, ಕಿಡ್ನಿ, ಲಿವರ್ ತೊಂದರೆ ಇದ್ದವರು, ತೀವ್ರ ಆಸ್ತಮಾ, ಡಯಾಬಿಟೀಸ್, ಟಿಬಿ ಇಂಥದ್ದೇನೊ ಇದ್ದವರು ಅಥವಾ ವೃದ್ಧಾಪ್ಯದಿಂದಾಗಿ ಆಚೆ ಹೋಗಲು ಒಂದು ಹೆಜ್ಜೆ ಇಟ್ಟವರು ಕೊರೊನಾ ಹೆಸರಿನಲ್ಲಿ ಆಚೆ ದಾಟುತ್ತಿದ್ದಾರೆ.

ಹಾಗೆ ನೋಡಿದರೆ ಕೊರೊನಾ ಯಾರನ್ನೂ ಬಲಿಹಾಕಲು ಬಂದಿದ್ದಲ್ಲ. ಕೋವಿಡ್‌ ಕಾಯಿಲೆಯಿಂದ ಯಾರಾದರೂ ಸತ್ತರೆ, ಅದು ಕೋಟಿಕೋಟಿ ಕೊರೊನಾ ವೈರಸ್ಸ್‌ ಗಳ ಅಂತ್ಯವೇ ತಾನೆ? ಹಾಗಾಗಿ ಅಂಥ ಆತ್ಮಘಾತುಕ ಕೆಲಸಕ್ಕೆ ಅದು ಬಂದಿಲ್ಲ.
ಅದು ನಮ್ಮ ಆರೋಗ್ಯವ್ಯವಸ್ಥೆಯನ್ನು ಸುಧಾರಿಸಲೆಂದು ಬಂದಿದೆ; ನೆಗಡಿ ಬಂತೆಂದು ಮೂಗನ್ನೇ ಕೊಯ್ಯುತ್ತ ಕೂತ ಆಡಳಿತಕ್ಕೆ ಮೂಗುದಾಣ ಹಾಕಲು ಬಂದಿದೆ. ನಮ್ಮ ಸರಕಾರಿ ಧೋರಣೆಯನ್ನು ಸರಿಪಡಿಸಲು ಬಂದಿದೆ. ಮತದಾರರು ಮಾಡದೇ ಇದ್ದ ಕೆಲಸವನ್ನು ಅದು ಮೌನವಾಗಿ ಮಾಡುತ್ತಿದೆ.
ಅದರ ಆಟವನ್ನು ನೋಡುತ್ತ ನಾವು ಹುಷಾರಾಗಿರೋಣ. ಟಿವಿಯಿಂದ ಮತ್ತು ಜನಜಂಗುಳಿಯಿಂದ ದೂರ ಇರೋಣ. ಹಸ್ತಶುದ್ಧಿ, ಮುಖಶುದ್ಧಿ, ಒಳಸುರಿ ಶುದ್ಧಿ, ಚಾರಿತ್ರ್ಯಶುದ್ಧಿ ಇವೆಲ್ಲ ನಮಗೂ ಒಳ್ಳೆಯದು, ಸಮಾಜಕ್ಕೂ.

Please follow and like us:
error