ಬೈರಪ್ಪನವರಿಗೊಂದು ಪ್ರೀತಿಯ ಪತ್ರ-ಯೋಗೇಶ್ ಮಾಸ್ಟರ್

ಪ್ರೀತಿಯ ಭೈರಪ್ಪ,
ಲೈಂಗಿಕತೆ ಪರಸ್ಪರ ಸಮ್ಮತಿಯಿಂದಲೇ ಸರಸದಿಂದಲೇ ಆಗಬೇಕಾಗಿರುವುದು. ಅವಳು ತನ್ನ ಪತ್ನಿಯಾದ ಕಾರಣಕ್ಕೆ ಅವಳು ತನ್ನ ಹಸಿವಿಗೆ ಆಹಾರವಾಗಬೇಕೆಂದರೆ ಅದು ದೌರ್ಜನ್ಯ. ತಮ್ಮ ತಮ್ಮ ಹಸಿವನ್ನೇ ಪರಸ್ಪರ ಉಣಬಡಿಸುತ್ತಾ ತೃಪ್ತವಾಗುವ ಅತಿ ಸುಂದರ ವಿಷಯ ಈ ಕಾಮ. ಹೆಂಡತಿಯೊಬ್ಬಳು ತನ್ನಂತೆಯೇ ಇದ್ದು ಸಂಗಾತಿಯಾಗಿರುವ ಸಹಜೀವಿಯೇ ಹೊರತು. ನಾನು ಹೇರುವ ಎಲ್ಲಾ ಒತ್ತಡಗಳನ್ನು ಅನಿವಾರ್ಯವಾಗಿ ಹೊರಲೇಬೇಕಾಗಿರುವ ಯಂತ್ರವೋ, ಗಾಡಿಗೆ ಕಟ್ಟಿರುವ ಪಶುವೋ ನನ್ನ ಹೆಂಡತಿ ಅಲ್ಲ. ಇದು ಸಾಮಾನ್ಯ ಪ್ರಜ್ಞೆ. ಸಾಮಾನ್ಯ ಪ್ರಜ್ಞೆಯನ್ನು ಹೊಂದಿಲ್ಲದೇ ಇರುವವರಿಗೆಂದೇ ಕಾನೂನು. ನನಗೀಗ ಅರ್ಥವಾಯಿತು. ದೊಡ್ಡ ದೊಡ್ಡ ಸಂಶೋಧನೆಗಳನ್ನು ಮಾಡಿ ಕಾದಂಬರಿಯನ್ನು ಬರೆದಿರುವಂತಹ ಸಾಹಿತಿಗಳಿಗೂ ಇಂತಹ ಸಾಮಾನ್ಯ ವಿಷಯ ತಿಳುವಳಿಕೆಗೆ ಬರದೇ ಇದ್ದಾಗ ಕಾನೂನಿನ ಅಗತ್ಯವಿದೆ ಎಂದು ಮನವರಿಕೆಯಾಗುತ್ತಿದೆ. ಭೈರಪ್ಪನೋರೇ, ಸಾಮಾನ್ಯ ಪ್ರಜ್ಞೆ ಇಲ್ಲದವನಿಗೇ ಕಾನೂನಿನ ಅಗತ್ಯ. ಇಲ್ಲದಿದ್ದರೆ ಅವನು ಸಹಜವಾಗಿಯೇ ಕ್ರಮದಲ್ಲಿರುತ್ತಾರೆ.
ಭೈರಪ್ಪನೋರೇ, ನಮ್ಮ ಸಂವಿಧಾನದಲ್ಲಿ ಪರಂಪರೆ ಇಲ್ಲ ಎಂದಷ್ಟೇ ಹೇಳಿಬಿಟ್ಟರೆ ಹೇಗೆ ಸರಿ? ನಮ್ಮ ಸಂವಿಧಾನದಲ್ಲಿ ಪಕ್ಷಪಾತದ ಪರಂಪರೆ ಇಲ್ಲ, ಸ್ತ್ರೀಶೋಷಣೆಯ ಪರಂಪರೆ ಇಲ್ಲ, ಹುಟ್ಟಿನಿಂದ ಮನುಷ್ಯ ಶ್ರೇಷ್ಟನೆನಿಸಿಕೊಳ್ಳುವ ಪರಂಪರೆ ಇಲ್ಲ, ಯಾವುದೋ ಒಂದು ಜಾತಿ ಅಥವಾ ಧರ್ಮದಲ್ಲಿ ಹುಟ್ಟಿರುವ ಕಾರಣಕ್ಕೆ ಅವನು ಇತರರನ್ನು ತನ್ನ ಅಡಿಯಾಳಾಗಿಸಿಕೊಂಡು ಶೋಷಿಸುವ ಪರಂಪರೆ ಇಲ್ಲ. ಹೀಗೆ ಹೇಳಿದರೆ ಪೂರ್ಣಾರ್ಥ ಬಂದೀತು. ಆದರೆ ಪರಂಪರೆಯೂ ಇದೆ. ಮನುಷ್ಯರ ನಡುವಿನ ಸಂಬಂಧಗಳನ್ನು, ಜೀವಗಳನ್ನು, ಜೀವನಗಳನ್ನು ಮಾನ್ಯ ಮಾಡುವ, ಗೌರವದಿಂದ ಕಾಣುವ, ಹಂಚಿಕೊಂಡು ಬಾಳುವ ಪರಂಪರೆ ಇದೆ. ತಾವು ಮನುಸ್ಮೃತಿ, ಬ್ರಹ್ಮಸೂತ್ರಗಳು, ಇತರ ವೈದಿಕ ಭಾಷ್ಯಗಳನ್ನು ಅಧ್ಯಯನ ಮಾಡಿದಷ್ಟೇ ಶ್ರದ್ಧೆಯಿಂದ ನಮ್ಮ ಭಾರತದ ಸಂವಿಧಾನವನ್ನು ಈಗಲಾದರೂ ಅಧ್ಯಯನ ಮಾಡುವಿರೆಂದು ನಂಬುತ್ತೇನೆ. ಹೌದು, ಈ ದರಿದ್ರ ನಂಬಿಕೆಯೇ ನಮಗೆ ಭರವಸೆಯ ಬೆಳಕು. ದಯಮಾಡಿ ನನ್ನಂತವರ ನಂಬಿಕೆಯನ್ನು ಛಿದ್ರಗೊಳಿಸದೇ ಭರವಸೆಯ ಬೆಳಕಾಗಬೇಕೆಂದು ಕೋರಿಕೆ.
ಅಲ್ಪಸಂಖ್ಯಾತರ ತ್ರಿವಳಿ ತಲ್ಲಾಕ್ ಮತ್ತು ಮೊದಲಾದ ವಿಷಯಗಳಲ್ಲಿ ಗಟ್ಟಿಯಾಗಿ ಮಾತಾಡುವ ಮೊದಲು, ಅವರನ್ನು ನಮ್ಮೊಳಗೊಂದಾಗಿರಲು ಎಷ್ಟರಮಟ್ಟಿಗೆ ಬಿಟ್ಟಿದ್ದೇವೆಂದು ನೋಡಿಕೊಳ್ಳೋಣ. ಯಾವುದೇ ಸಂಸ್ಕೃತಿ ಮತ್ತು ಧರ್ಮದ ನಕಾರಾತ್ಮಕ ಅಂಶಗಳನ್ನು ಮಾತಾಡುವ ಮೊದಲು ಅದರಲ್ಲಿ ಎಷ್ಟರಮಟ್ಟಿಗೆ ನಾವು ಪ್ರವೇಶಿಸಿದ್ದೇವೆ, ಅವುಗಳನ್ನು ನಮ್ಮೊಳಗೆ ಗುರುತಿಸಿಕೊಳ್ಳಲು ಯಾವುದ್ಯಾವುದು ತೊಡಕಿವೆ ಎಂಬುದನ್ನು ಪತ್ತೆ ಹಚ್ಚೋಣ. ಆದರೆ, ಅವರನ್ನು ದೂರವಿಡಲೆಂದೇ ಹುಡುಕುವ ಹುಳುಕುಗಳನ್ನು “ತಣ್ಣನೆಯ ರಕ್ತದ ದ್ವೇಷ” ಎಂದೇ ನನ್ನ ಅನಿಸಿಕೆ.
ಅಯ್ಯೋ ಭೈರಪ್ಪಾ, ಯಾವ ಯೋಜನೆಗಳು ವ್ಯಾಟಿಕನ್ನಿನಲ್ಲಿ ಸಿದ್ಧವಾಗಿ ನಮ್ಮ ಭಾರತಕ್ಕೆ ಬರುತ್ತಿವೆ ಎಂಬುದನ್ನು ಸ್ವಲ್ಪ ವಿವರಿಸಿ ಹೇಳಿ. ವಾಟ್ಸಪ್ ಯೂನಿವರ್ಸಿಟಿಯ ಪಂಡಿತರು ಮಾತಾಡುವಂತೆ, ಪಾಪದ, ತಿಳುವಳಿಕೆ ಇಲ್ಲದ ಭಜರಂಗದಳದ, ಶ್ರೀರಾಮ್ ಸೇನೆಯ ಹುಡುಗರು ಮಾತಾಡುವಂತೆ ಮಾತಾಡುತ್ತಿದ್ದೀರಲ್ಲಾ. ಭೈರಪ್ಪಾ, ನನ್ನ ಪ್ರೀತಿಯ ಭೈರೂ, cool, cool, calm down, please, please, ನಾವು cool headed ಆಗೋಣ. Certainly not cold blooded.
ಭಿನ್ನ ನೆಲೆಗಟ್ಟಿನ, ಭಿನ್ನ ದೃಷ್ಟಿಕೋನಗಳಿದ್ದರೂ ನೀವೂ ಸಂಶೋಧಕರೆಂದೇ ಇದುವರೆಗೂ ನಂಬಿದ್ದೆ. ಸಂಶೋಧಕನ ಮೊಟ್ಟಮೊದಲ ಲಕ್ಷಣವೆಂದರೇನೇ ಅದು ನಿಷ್ಪಕ್ಷಪಾತಿಯಾಗಿರುವುದು, ಎರಡನೆಯದು ಪೂರ್ವಾಗ್ರಹ ಪೀಡಿತನಾಗಿ ಸಂಶೋಧನೆಯ ಫಲಿತಾಂಶವನ್ನು ಪ್ರಾರಂಭದಲ್ಲಿಯೇ ನಿರ್ಧರಿಸದಿರುವುದು, ಮೂರನೆಯದಾಗಿ ತಾನೊಂದು ನಂಬಿದ್ದರೂ, ಗ್ರಹಿಸಿದ್ದರೂ ಅದು ಸಂಶೋಧನೆಯ ದಾರಿಯಲ್ಲಿ ತಪ್ಪೆಂದು ತಿಳಿದರೆ ಒಪ್ಪಿಕೊಳ್ಳುವುದು. ಆದರೆ ಮೊದಲು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ಅಭಿಮಾನ ಭಂಗವೆಂದುಕೊಂಡುಬಿಟ್ಟರೆ, ಅವನು ಸುಳ್ಳುಗಾರನಾಗಿ ಮುಂದುವರಿಯಬೇಕಾಗುತ್ತದೆ.
ಶಬರಿಮಲೆ ದೇವಸ್ಥಾನದೊಳಗೆ ಹೆಣ್ಣಿನ ಪ್ರವೇಶವನ್ನು ಕುರಿತಂತೆ ಏನೂ ಓದಿರದ, ಸಾಹಿತ್ಯ, ಸಂಶೋಧನೆ, ಸಂಸ್ಕೃತಿ ಏನೂ ತಿಳಿಯದ ನಮ್ಮತ್ತೆ ಗೌರಮ್ಮನಿಗಿಂತ ನೀವು ಕಡೆ ಅನ್ನಿಸಿಬಿಡ್ತು. ಅವರು ಹೇಳ್ತಾರೆ, ಮುಟ್ಟಾಗೋದು ನಾವು ಕೇಳ್ಕೊಂಡಿರೋದೇನಮ್ಮಾ, ದೇವರು ಇಂಗಿಂಗೇ ಆಗ್ಬೇಕಂತ ಎಲ್ಲಾ ಜೀವಿ ಜಂತುಗಳಿಗೂ ಮಾಡಿಕ್ಕೌವ್ನೆ. ಯಾವುದು ಪ್ರಕೃತಿ ಸಹಜವೋ, ಗೌರಮ್ಮ ಹೇಳುವಂತೆ ದೇವರು ಮಾಡಿಕ್ಕೌವ್ನೋ, ಅದನ್ನೇ ನೀವು ’ಋತುಮತಿಯಾದಾಗ’ ಎಂದು ನೆಪವೊಡ್ಡಿ ಮಹಿಳೆಯನ್ನು ಅಸ್ಪೃಷ್ಯಳನ್ನಾಗಿ ನೋಡುವುದು, ಅವಳ ಅಸ್ತಿತ್ವವನ್ನು ಕಡೆಗಣಿಸುವುದು, ಅವಮಾನಿಸುವುದು ಸಹಜ ಸಮಾನತೆಯ ನೀತಿಗೇ ತರವೇ ಎಂದು ಕೇಳುತ್ತಿರುವುದು.
ಒಬ್ಬನ ದೋಷ / ಪಾಪಗಳು ಆತನ ಆಲೋಚನೆಗಳಿಂದ, ಉದ್ದೇಶಗಳಿಂದ, ಮಾಡುವ ಕೃತ್ಯಗಳಿಂದ ಗ್ರಹಿಸಲಾಗುತ್ತದೆಯೇ ಹೊರತು, ಒಬ್ಬರ ಸಹಜ ಶಾರೀರಿಕ ಗುಣಧರ್ಮಗಳಿಂದಲ್ಲ, ನೈಸರ್ಗಿಕ ಹುಟ್ಟಿನಿಂದಲ್ಲ. ಇದು ತಿಳಿಯದಾಯ್ತೇ ತಮಗೆ.
ಇನ್ನು ಅಸುರ ಮತ್ತು ರಾಕ್ಷಸರ ಬಗ್ಗೆ ನೀವು ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ, ಜೊತೆಗೆ ರಾಜಕೀಯವಾಗಿ ವಿಶ್ಲೇಷಿಸಲು ಹೋಗಲಾರಿರಿ. ಏಕೆಂದರೆ ವರ್ಣಾಶ್ರಮ ಧರ್ಮದ ಕುತಂತ್ರಗಳೆಲ್ಲಾ ಅಲ್ಲಿ ಬಯಲಾಗಿಬಿಡುತ್ತದೆ. ಬುಡಕಟ್ಟು ಹಾಗೂ ಅರಣ್ಯಕರ ಮೇಲೆ ಮಾಡಿದ ಶೋಷಣೆಗಳು, ಇಲ್ಲಿನ ಮೂಲ ಶ್ರಮಿಕರ ಮತ್ತು ನಿವಾಸಿಗಳ ಮೇಲಾದ ದೌರ್ಜನ್ಯಗಳೆಲ್ಲಾ ತಿಳಿದುಹೋಗುತ್ತವೆ. ಅಸುರರು ಅಥವಾ ರಾಕ್ಷಸರು ಎಂಬುವರು ದುಷ್ಟರಲ್ಲ, ದುರುಳರಲ್ಲ. ಆದರೆ ಹಾಗೊಂದು ಮಿಥ್ ಕ್ರಿಯೇಟ್ ಮಾಡಿ, ಪದೇ ಪದೇ ಉಪಯೋಗಿಸುತ್ತಾ ಜನಜನಿತವಾಗುವ ಹಾಗೆ ಮಾಡಿದ್ದು ಎಂಬುದು ಗೊತ್ತಾಗಿ ಬಿಡುತ್ತದೆ. ಹಾಗಾಗಿ ಪುರಾಣದ ಮೊರೆ ಹೋಗುತ್ತೀರಿ. ಇನ್ನೂ ಮುಂದುವರಿದು ಒಂದೊಂದು ಪುರಾಣವೂ ಒಂದೊಂದು ಮೌಲ್ಯವನ್ನು ಹೇಳುತ್ತದೆ. ಒಪ್ಪಿಕೊಳ್ಳಬೇಕು ಅಷ್ಟೇ ಎಂದು ಫರ್ಮಾನು ಹೊರಡಿಸುತ್ತೀರಿ.
ಮಾಗಿರುವ ಮತ್ತು ಬಾಗಿರುವ ಹಂತದಲ್ಲಾದರೂ ನಿಜವನ್ನು ಹೇಳದಿದ್ದರೆ, ನಾವು ಸತ್ತ ಮೇಲೆ ಉಳಿದವರು ಅಸತ್ಯದ ನರಕದಲ್ಲಿ ಬದುಕಿಯೂ ಸತ್ತಂತೆ ಮಾಡಿ ಹೋಗುವುದು ಯಾವ ಪುರುಷಾರ್ಥಕ್ಕೆ? ಪುರಾಣಗಳು ಎಂದಿಗೂ ಸಾರ್ವತ್ರಿಕ ಮೌಲ್ಯಗಳನ್ನು ಹೇಳುವುದಿಲ್ಲ. ಅವುಗಳಲ್ಲಿರುವುದು ಆಯಾ ರಚನಕಾರರ ಮತ್ತು ಅವರು ಪ್ರತಿನಿಧಿಸುವ ವರ್ಣ, ವರ್ಗಗಳ ಧ್ಯೇಯ ಧೋರಣೆಗಳು, ಆಶಯ ಉದ್ದೇಶಗಳು. ವಿವಿಧ ಕಾಲಘಟ್ಟಗಳಲ್ಲಿ, ಜೀವನಕ್ರಮಗಳೂ ಕಂಡ ವಿವಿಧ ಬದಲಾವಣೆಗಳಲ್ಲಿ ಅವುಗಳನ್ನು ನೋಡಬೇಕಿದೆ. ಅವರಾರದೋ ಧ್ಯೇಯ ಧೋರಣೆಗಳಿದ್ದಂತೆ ಈಗ ಬದುಕುತ್ತಿರುವವರದೂ ಧ್ಯೇಯ ಧೋರಣೆಗಳಿಲ್ಲವೇ? ಗ್ರಹಿಸುವ ರೀತಿನೀತಿಗಳಿಲ್ಲವೇ? ಅವುಗಳನ್ನು ಬಳಸುವ ಪರಿಭಾಷೆಗಳ ನಿಘಂಟುಗಳು ಬೆಳೆದಿಲ್ಲವೇ? ಒಪ್ಪಿಕೊಳ್ಳಬೇಕು ಅಷ್ಟೇ ಎಂದರೆ ಅಲ್ಲಿಗೆ ಅವುಗಳನ್ನು ಹೆಣಗಳನ್ನಾಗಿಸಿ ಘನವಾದ ಸಮಾಧಿ ಮಾಡಿದಂತಷ್ಟೇ. ನಾವು ಬದುಕಿದ್ದೇವೆ, ಬೆಳೆಯುವುದು, ಅರಳುವುದು, ವಿಕಾಸವಾಗುವುದು ಜೀವಂತಿಕೆಯ ಲಕ್ಷಣ. ಪ್ರೀತಿಯ ಭೈರಪ್ಪಾ, ನೀವೂ ಕೂಡಾ ಜೀವಂತವಾಗಿಯೇ ಇದ್ದೀರೆಂದು ನಾನು ದೃಢವಾಗಿ ನಂಬಿದ್ದೇನೆ.
ಪ್ರೀತಿಯಿಂದ,
ಯೋಗೇಶ್ ಮಾಸ್ಟರ್.

Please follow and like us:
error