ಬುದ್ಧಮಾರ್ಗದಿಂದ ಮಾತ್ರ ಜಗತ್ತಿಗೆ ಶಾಂತಿ: ಯಡಹಳ್ಳಿ

ಸಾರಿಪುತ್ರ ಬುದ್ಧವಿಹಾರದಲ್ಲಿ ಬುದ್ಧ ಪೂರ್ಣಿಮೆ ಆಚರಣೆ
ವಿಜಯಪುರ : ಭಗವಾನ್ ಬುದ್ಧರ ತತ್ವ ಸಿದ್ಧಾಂತಗಳು ಮಾತ್ರ ಇಂದು ಜಗತ್ತನ್ನು ಭಯ ಮತ್ತು ಆತಂಕದಿಂದ ಪಾರು ಮಾಡುವ ಶಕ್ತಿಯನ್ನು ಹೊಂದಿವೆ ಎಂದು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ರಾಜಶೇಖರ ಯಡಹಳ್ಳಿ ಹೇಳಿದರು.
ಇಲ್ಲಿನ ಜಲಗನರದ ಸಾರಿಪುತ್ರ ಬುದ್ಧವಿಹಾರದಲ್ಲಿ ಇಂದು ಜರುಗಿದ ೨೫೬೩ನೆಯ ಬುದ್ಧಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ಧಾರ್ಥ ಗೌತಮರು ನೀರಿಗಾಗಿ ಯುದ್ಧ ಬೇಡ ಎಂದು ಗೃಹತ್ಯಾಗ ಮಾಡಿದರು. ಜಗತ್ತಿನ ಮಾನವರ ದುಃಖದ ಮೂಲವನ್ನು ಕಂಡುಹಿಡಿಯಲು ಅವರು ಕಠಿಣ ತಪಸ್ಸನ್ನು ಮಾಡಿದರು. ದೇಹದಂಡನೆಯಿಂದ ಯವ ಲಾಭವೂ ಇಲ್ಲ ಎಂಬುದನ್ನು ಕಂಡುಕೊಂಡ ಅವರು ಮಧ್ಯಮಮಾರ್ಗದ ಮೂಲಕ ಬೋಧಿಪ್ರಾಪ್ತಿ ಮಾಡಿಕೊಂಡರು.
ರಾಗ-ದ್ವೇಷಗಳಿಲ್ಲದ, ದುಃಖ-ದುಮ್ಮಾನಗಳಿಲ್ಲದ, ಶೋಷಣೆ ರಹಿತ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಸ್ವಂತ ಸುಖವೈಭೋಗಗಳನ್ನು ತೊರೆದ ಸಿದ್ಧಾರ್ಥ ಗೌತಮರು ತಾವು ಕಂಡುಕೊಂಡ ಸತ್ಯವನ್ನು ಜಗತ್ತಿಗೆ ಬೋಧಿಸಿದರು. ಮನುಷ್ಯನು ಶಾಂತಿ ಮತ್ತು ನೆಮ್ಮದಿಯ ಬದುಕಿಗಾಗಿ ಅನುಸರಿಸಬೇಕಾದ ಮಾರ್ಗಗಳನ್ನು ಸೂಚಿಸಿದರು. ಅಅವರು ಬೋಧಿಸಿದ ಅಷ್ಟಾಂಗ ಮಾರ್ಗಗಳು ಮನುಷ್ಯನನ್ನು ನಿರ್ವಾಣದತ್ತ ಕೊಂಡೊಯ್ಯುತ್ತವೆ ಎಂದು ಅವರು ಹೇಳಿದರು.
ಜಗತ್ತಿನ ಹಲವಾರು ರಾಷ್ಟ್ರಗಳ ಜನರು ಇಂದು ಭಯ-ಆತಂಕಗಳ ನೆರಳಿನಲ್ಲಿ ಬದುಕುತ್ತಿದ್ದಾರೆ. ಭಾರತವೂ ಕೂಡ ಅದಕ್ಕೆ ಹೊರತಾಗಿಲ್ಲ ಎಂದ ಅವರು ದ್ವೇಷವನ್ನು ಪ್ರೀತಿಯಿಂದ ಗೆಲ್ಲಬಹುದು ಎಂಬುದನ್ನು ಭಗವಾನ ಬುದ್ಧರು ತೋರಿಸಿಕೊಟ್ಟಿದ್ದಾರೆ. ಬುದ್ಧರನ್ನು ಅನುಸರಿಸುತ್ತಿರುವ ರಾಷ್ಟ್ರಗಳು ಇಂದು ನೆಮ್ಮದಿಯಿಂದ ಇವೆ ಎಂದು ಹೇಳಿದರು.
ಭಾರತದಿಂದ ಕಣ್ಮರೆಯಾಗಿದ್ದ ಬುದ್ಧನನ್ನು ಮರಳಿ ಭಾರತಕ್ಕೆ ತಂದ ಶ್ರೇಯಸ್ಸು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಹಿಂದೂ ಧರ್ಮದಲ್ಲಿದ್ದ ಜಾತಿ ಅಸಮಾನತೆಯಿಂದ ರೋಸಿ ಹೋಗಿದ್ದ ಅಂಬೇಡ್ಕರ್ ಅವರು ಹಿಂದೂವಾಗಿ ಹುಟ್ಟಿದ್ದೇನೆ. ಹಿಂದೂವಾಗಿ ಸಾಯಲಾರೆ ಎಂದು ಪ್ರತಿಜ್ಞೆ ಮಾಡಿದ ನಂತರ ಎಲ್ಲ ಧರ್ಮಗಳಲ್ಲಿ ಬೌದ್ಧ ಧರ್ಮವೇ ಶ್ರೇಷ್ಠ ಎಂಬುದನ್ನು ಮನಗಂಡರು. ಅಸಮಾನತೆಯಿಲ್ಲದ, ಮೌಢ್ಯಗಳಿಲ್ಲದ, ಮಾನವೀಯತೆಯನ್ನು ಸಾರುವ, ನೈತಿಕ ತಳಹದಿಯ ಮೇಲೆ ನಿಂತಿರುವ ಬೌದ್ಧ ಧರ್ಮವನ್ನು ಅವರು ಅಪ್ಪಿಕೊಂಡರು. ನಿತ್ಯ ನರಕವನ್ನು ಅನುಸರಿಸುತ್ತಿದ್ದ ಶೋಷಿತ ಸಮುದಾಯಗಳಿಗೆ ಹೊಸ ಮಾರ್ಗವನ್ನು ತೋರಿದರು. ಶೋಷಿತ ಸಮುದಾಯಗಳು ಡಾ. ಅಂಬೇಡ್ಕರ್ ತೋರಿದ ಬುದ್ಧ ಮಾರ್ಗದಲ್ಲಿ ನಡೆಯುವ ಅಗತ್ಯವಿದೆ ಎಂದು ಹೇಳಿದರು.
ಮಡಿವಾಳಪ್ಪ ದೊಡಮನಿ ಅವರು ಧ್ಯಾನದ ಮಹತ್ವವನ್ನು ತಿಳಿಸಿದರು. ಸಂತೋಷ ಶಹಾಪುರ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಇದಕ್ಕೂ ಮುನ್ನ ಸಾಮೂಹಿಕ ಪ್ರಾರ್ಥನೆ ಮೂಲಕ ಬುದ್ಧ-ಧಮ್ಮ-ಸಂಘ ವಂದನೆ ಸಲ್ಲಿಸಲಾಯಿತು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಉಪಾಸಕರಾದ ಪೀರಪ್ಪ ನಡುವಿನಮನಿ, ಎಸ್.ಎಲ್. ಮೂಕಿಹಾಳ, ಅನಿಲ ಹೊಸಮನಿ, ವೆಂಕಟೇಶ ವಗ್ಯಾನವರ, ಕೆ.ಎಂ. ಶಿವಶರಣ, ಎಂ.ಬಿ. ಹಳ್ಳದಮನಿ, ಭೀಮಶಿ ಹಿಪ್ಪರಗಿ, ಬಸವರಾಜ ತಳವಾರ, ಮಹಾದೇವ ಕಕ್ಕಳಮೇಲಿ, ಮನೋಜ ಕೋಟ್ಯಾಳ, ಬಸವರಾಜ ಚಲವಾದಿ, ಸಂತೋಷ ಸುತಗುಂಡಿ, ಸಂಜೀವ ಕಾಖಂಡಕಿ, ಸದಾಶಿವ ಚಲವಾದಿ, ಎಚ್.ಬಿ. ಸಿಂಗೆ, ಪರಶುರಾಮ ಲಂಬು, ಸಂಘರ್ಷ ಹೊಸಮನಿ, ದಿಲೀಪ ಯಂಭತ್ನಾಳ, ಉಪಾಸಕಿಯರಾದ ಡಾ. ಸುಜಾತಾ ಚಲವಾದಿ, ಸುಲೋಚನಾ ಚಲವಾದಿ, ರೇಣುಕಾ ಶಹಾಪುರ, ಭಾಗ್ಯಶ್ರೀ ವಗ್ಯಾನವರ, ಲಕ್ಷ್ಮಿ ಯಂಭತ್ನಾಳ, ಶಾರದಾ ಹೊಸಮನಿ, ಬಸಮ್ಮ ನಡುವಿನಮನಿ, ರಮಾ ಕ್ಯಾತನ್ ನೂರಾರು ಬುದ್ಧ ಮತ್ತು ಅಂಬೇಡ್ಕರ್ ಅನುಯಾಯಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Please follow and like us:
error