ಬುಕ್ ಬ್ರಹ್ಮ ಮತ್ತೆ ವಿವಾದ – ಮೋಸ ಹೋದ ಅನುಭವ !

-ಹರ್ಷಕುಮಾರ ಕುಗ್ವೆ

ಬುಕ್ ಬ್ರಹ್ಮ ಮತ್ತೆ ವಿವಾದಕ್ಕೆ ಸಿಲುಕಿದೆ. ಕೆಲ ದಿನಗಳ ಹಿಂದೆ ಇದರಲ್ಲಿ ಪ್ರಕಟವಾಗುತ್ತಿದ್ದ “ಜಾತಿ ಪದ್ಧತಿ” ಕುರಿತ ಅಂಕಣವೊಂದರ ಕುರಿತು ಕೆಲವು ಗೆಳೆಯರು ತಕಾರಾರು ತೆಗೆದಿದ್ದರು. ಆ ಸಂದರ್ಭದಲ್ಲಿ ಸದರಿ ಅಂಕಣದಲ್ಲಿನ ವಿಚಾರಗಳ ಕುರಿತು ನಾನೂ ಕೆಲ ಪ್ರಶ್ನೆಗಳನ್ನು ಎತ್ತಿದ್ದೆನಾದರೂ ಆ ಅಂಕಣದ ಉದ್ದೇಶವನ್ನಾಗಲೀ ಅಥವಾ ಅದನ್ನು ಪ್ರಕಟಿಸುವಲ್ಲಿನ ಬುಕ್ ಬ್ರಹ್ಮದ ಉದ್ದೇಶವನ್ನಾಗಲೀ ಈಗಲೇ ಅನುಮಾನದಿಂದ ನೋಡುವ ಅಗತ್ಯವಿಲ್ಲ ಎಂಬ ನಿಲುವುನ್ನು ನಾನು ತಳೆದಿದ್ದೆ. ಈ ಕುರಿತು ನಾನು ಬುಕ್ ಬ್ರಹ್ಮಕ್ಕೆ ಕಳಿಸಿದ ಪ್ರತಿಕ್ರಿಯೆ ಅಲ್ಲೇ ಪ್ರಕಟವಾಗಿತ್ತು ಸಹ. ಆ ಸಂದರ್ಭದಲ್ಲಿ ನಾವು ಸಾಹಿತ್ಯಕ ವಲಯದಲ್ಲಿ ಅಥವಾ ವೈಚಾರಿಕ ವಲಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾತಾಂತ್ರಿಕ ಅವಕಾಶಗಳನ್ನು ಉಳಿಸಿಕೊಂಡು ಆರೋಗ್ಯಕರ ಚರ್ಚೆಗಳನ್ನು ನಡೆಸಬೇಕಾದ ಹಿನ್ನೆಲೆಯಲ್ಲಿ ಜಾತಿ ಪದ್ಧತಿ ಕುರಿತ ಅಂತಹ ಚರ್ಚೆಗಳು ಅಗತ್ಯ ಎಂಬುದು ನನ್ನ ಇಂಗಿತವಾಗಿತ್ತು. ಈ ವಿಷಯದಲ್ಲಿ ಈಗಲೂ ನನ್ನ ನಿಲುವು ಒಲವು ಅದೇ ಆಗಿದೆ.

ಈಗ ತಲೆ ಎತ್ತಿರುವ ಹೊಸ ವಿವಾದ ಚೈತ್ರ ಕುಂದಾಪುರ ಎಂಬ ಹಾದಿ ತಪ್ಪಿದ ಬಲಪಂಥೀಯ ಉಗ್ರಗಾಮಿ ಯುವತಿಯೊಬ್ಬಳು ಬರೆದಿರುವ “ಪ್ರೇಮಪಾಶ” ಎಂಬ ‘ಕಾದಂಬರಿ’ಯ ಕುರಿತಾದದ್ದು. ಈ ಪುಸ್ತಕದ ಕುರಿತ ಪ್ರಚಾರದ ವಿಡಿಯೋ ಒಂದನ್ನು ಬುಕ್ ಬ್ರಹ್ಮ ಮೊನ್ನೆ ತನ್ನ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿತ್ತು. ಇದರಲ್ಲಿ ಕಾದಂಬರಿಯ ಹೂರಣದ ಕುರಿತು ಮತ್ತು ಅದಕ್ಕೆ ಮುನ್ನುಡಿ ಬೆನ್ನುಡಿ ಬರೆದಿರುವವರ ಕುರಿತು ಸ್ವತಃ ಚೈತ್ರ ಕುಂದಾಪುರ ಮಾಹಿತಿ ನೀಡಿದ್ದಳು. ಇದಕ್ಕೆ ನೆನ್ನೆಯಿಂದಲೂ ಸಾಮಾಜಿಕ ಮಾಧ್ಯಮದ ಮೂಲಕ ಸಾಕಷ್ಟು ವಿರೋಧ ಎದುರಾಗುತ್ತಿದೆ. ಈ ಕುರಿತು ಈಗಾಗಲೇ ನಾನಾ ರೀತಿಯಲ್ಲಿ ಹಲವಾರು ಗೆಳೆಯರು ಪ್ರತಿಕ್ರಿಯಿಸಿದ್ದಾರೆ. ಈ ನಡುವೆ ಚೈತ್ರ ಕುಂದಾಪುರಳ ಪುಸ್ತಕಕ್ಕೆ ಒಳ್ಳೆಯ ಪ್ರಚಾರವೂ ಸಿಕ್ಕಿದೆ, ಎಲ್ಲದರಿಂದಾಗಿ ಅದಕ್ಕೆ ಈಗಾಗಲೇ ಸಾಕಷ್ಟು ಮಾರ್ಕೆಟಿಂಗ್ ಕೂಡಾ ಸಿಕ್ಕಿದೆಯೆನ್ನಬಹುದು. ಈ ವಿಷಯದಲ್ಲಿ ಟೀಕಿಸುವ ಸಂದರ್ಭದಲ್ಲಿ ನಾವು ಇನ್ನಷ್ಟು ಸೂಕ್ಷ್ಮರಾಗಬೇಕು ಎಂಬ ಅಭಿಪ್ರಾಯವನ್ನೂ ಗೆಳೆಯರೊಬ್ಬರು ವ್ಯಕ್ತಪಡಿಸಿದ್ದರು.

ನಿಜಕ್ಕೂ ಇದು ಸೂಕ್ಷ್ಮ ವಿಷಯ. ಆದರೆ ಈ ವಿಷಯದಲ್ಲಿ ಸೂಕ್ಷ್ಮತೆ ತೋರಬೇಕಿದ್ದವರು ಯಾರು ಮತ್ತು ಹೇಗೆ ಎಂಬ ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಈ ಬರೆಹ.

ಮೊದಲಿಗೆ ಬುಕ್ ಬ್ರಹ್ಮದ ಕುರಿತು ಕೆಲ ಪ್ರಾಥಮಿಕ ಮಾಹಿತಿಗಳು:

ಬುಕ್ ಬ್ರಹ್ಮ ಡಿಜಿಟಲ್ ವೇದಿಕೆಯನ್ನು ಅನೇಕರಂತೆ ನಾನೂ ಸಹ ನೋಡುತ್ತಿದ್ದುದು ನಮ್ಮ ಮೆಚ್ಚಿನ ಹಿರಿಯ ಸ್ನೇಹಿತರಾದ ದೇವು ಪತ್ತಾರ ಮತ್ತು ಇನ್ನಿತರ ಸಹಮನಸ್ಕ ಕಿರಿಯ ಸ್ನೇಹಿತರ ಮೂಲಕವೇ. ಇದರಾಚೆಗೆ ಅಲ್ಲಿ ಏನಿದೆ ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯ ಎದುರಾಗಿದ್ದಿಲ್ಲ. ಈಗ ಈ ಬಗ್ಗೆ ಕೊಂಚ ತಲೆ ಕೆಡಿಸಿಕೊಂಡ ಪರಿಣಾಮವಾಗಿ, ಬುಕ್ ಬ್ರಹ್ಮದ ಕುರಿತು ಪ್ರಕಟವಾಗಿರುವ ಕೆಲವು ಪತ್ರಿಕಾ ಲೇಖನಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಬುಕ್ ಬ್ರಹ್ಮ ಸಂಸ್ಥೆಯನ್ನು ಹುಟ್ಟು ಹಾಕಿದ್ದು 2014ರಲ್ಲಿ ಪ್ರಾರಂಭಗೊಂಡಿದ್ದ ವರ್ಬಿಂಡೆನ್ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ. ತನ್ನನ್ನು ತಾನು ಮುದ್ರಣ ಹಾಗೂ ಮುದ್ರಣಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಇರುವ ಕಂಪನಿ ಎಂದು ಈ ವರ್ಬಿಂಡೆನ್ ಕಂಪನಿ ಹೇಳಿಕೊಂಡಿದೆ. ಬೆಂಗಳೂರು ಮೂಲದ ಈ ಕಂಪನಿಯ ನಿರ್ದೇಶಕರುಗಳೆಂದರೆ ಸತೀಶ್ ಚಪ್ಪರಿಕೆ, ಗಿರೀಶ್ ಕೆರೋಡಿ, ವಿನಯ್ ಕುಮಾರ್, ಜಗದೀಶ್ ಕುಮಾರ್ ಮತ್ತು ನಾಗರಾಜ್ ಎಂಬುವವರು. ಸಧ್ಯದ ಮಟ್ಟಿಗೆ ಕನ್ನಡ ಪುಸ್ತಕಗಳ ದಾಖಲೀಕರಣದಿಂದ ಶುರುವಾಗಿ ಮುಂದೆ ಪುಸ್ತಕಗಳ ಡಿಜಿಟಲ್ ಮುದ್ರಣ, ಮಾರ್ಕೆಟಿಂಗ್ ಇತ್ಯಾದಿ ಉದ್ದೇಶಗಳನ್ನು ಬುಕ್ ಬ್ರಹ್ಮ ಹೊಂದಿರುವುದಾಗಿ ಹೇಳಿಕೊಂಡಿದೆ.

ಈ ಮಾಹಿತಿಗಳನ್ನು ನೋಡಿದಾಗ ಇಲ್ಲಿ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಬುಕ್ ಬ್ರಹ್ಮ ಸಂಸ್ಥೆಗೆ ಯಾವುದೋ ಐಡಿಯಾಲಜಿ ಅಥವಾ ತಾತ್ವಿಕತೆಯ ಮೇಲೆ ಸಾಹಿತ್ಯಕ ಕೆಲಸಗಳನ್ನು ಮಾಡುವ ಇರಾದೆಯಿದ್ದಂತಿಲ್ಲ. ಇಂದಿನ ಹೊಸ ಕಾಲದಲ್ಲಿ ಡಿಜಿಟಲ್ ತಂತ್ರಜ್ಞಾನ ದೊಡ್ಡ ಮಟ್ಟದಲ್ಲಿ ಪ್ರಚಲಿತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಸಿಗಬಹುದಾದ ಅವಕಾಶಗಳನ್ನು ತಮ್ಮ ಮಾರ್ಕೆಟಿಂಗ್ಗೆ ಹೇಗೆ ಬಳಸಿಕೊಳ್ಳುವುದು ಮತ್ತು ಮುಂದಿನ ದಿನಗಳಲ್ಲಿ ತಾನು ಕನ್ನಡ ಮುದ್ರಣ ಲೋಕದಲ್ಲಿ ಒಂದು ಡಿಜಿಟಲ್ ಬಿಗ್ ಬಜಾರ್ ತರದ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ದೂರಾಲೋಚನೆ ಇದಕ್ಕೆ ಇದ್ದಂತಿದೆ.

ಇರಲಿ ಇಂತಹ ಪ್ರಯತ್ನಗಳು ತಪ್ಪೆಂದು ಯಾರೂ ಹೇಳುವುದಿಲ್ಲ. ಅಥವಾ ಈ ಪ್ರಯತ್ನ ಮೊದಲಿನದೂ ಅಲ್ಲ ಕೊನೆಯದೂ ಆಗಿರುವುದಿಲ್ಲ. ಆದರೆ ಮೇಲೆ ತಿಳಿಸಿದ “ಚೈತ್ರಳ ಪ್ರೇಮಪಾಶ”ದ ಚರ್ಚೆ ಇಡೀ ಬುಕ್ ಬ್ರಹ್ಮ ಸಂಸ್ಥೆಯ ಸಾಮಾಜಿಕ ಮತ್ತು ಸಾಹಿತ್ಯಕ ಬದ್ಧತೆಯ ಕುರಿತು ಪ್ರಶ್ನೆಗಳನ್ನು ಹುಟ್ಟಿಸಿರುವುದು ಯಾಕೆ ಎಂಬುದು ಮುಖ್ಯ. ಹಾಗಾದರೆ ಚೈತ್ರ ಎಂಬ ವ್ಯಕ್ತಿ ಒಂದು ‘ಕಾದಂಬರಿ’ ಬರೆದು ಅದನ್ನು ‘ಬುಕ್ ಬ್ರಹ್ಮ’ದಂತಹ ವೇದಿಕೆಯ ಮೂಲಕ ಪ್ರಚುರಪಡಿಸುವುದು ತಪ್ಪೇ? ಇದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಲ್ಲವೇ? ಹಾಗೆಯೇ ಬುಕ್ ಬ್ರಹ್ಮದಂತಹ ಡಿಜಿಟಲ್ ಬಿಸ್ನೆಸ್ ಸಂಸ್ಥೆಗಳು ತಮ್ಮ ಉದ್ಯಮದ ಹಿತದೃಷ್ಟಿಯಿಂದ ಯಾವುದೇ ಪುಸ್ತಕವನ್ನು ಯಾಕೆ ದೂರವಿಡಬೇಕು? ಎಂಬಂತಹ ಪ್ರಶ್ನೆಗಳು ಎಲ್ಲರಲ್ಲೂ ಸಹಜವಾಗಿ ಎದುರಾಗುತ್ತವೆ.
ಈ ಪ್ರಶ್ನೆಗೆ ನಾವು ನಿರ್ವಾತದಲ್ಲಿ ಉತ್ತರ ಕಂಡುಕೊಳ್ಳಲಾಗುವುದಿಲ್ಲ. ಬದಲಿಗೆ ಇದಕ್ಕೆ ನಾವಿರುವ ಒಂದು ನಿರ್ದಿಷ್ಟ ಕಾಲ-ದೇಶದ ಸಾಂದರ್ಭಿಕ ಚೌಕಟ್ಟಿನಲ್ಲಿ ಮಾತ್ರ ಉತ್ತರ ಕಂಡುಕೊಳ್ಳಲು ಸಾಧ್ಯ. ಸಾಕಷ್ಟು ದ್ರುವೀಕರಣಗೊಂಡಿರುವ ಸಾಮಾಜಿಕ-ಧಾರ್ಮಿಕ ಸನ್ನಿವೇಶದಲ್ಲಿ ನೀವು ಎಲ್ಲಿ ನಿಂತು ಯೋಚಿಸುತ್ತೀರ ಎಂಬುದರ ಮೇಲಷ್ಟೇ ಇದಕ್ಕೆ ಸೂಕ್ತ ಉತ್ತರ ಸಿಗಲು ಸಾಧ್ಯ.

ಚೈತ್ರ ಕುಂದಾಪುರ ನೀಡಿರುವ ಮಾಹಿತಿಯ ಪ್ರಕಾರ ಆಕೆಯ ಕಾದಂಬರಿ “ಲವ್ ಜಿಹಾದ್” ಸುತ್ತ ಹೆಣೆದ ಕತೆಯಾಗಿದೆ. ಮತ್ತು ಲವ್ ಜಿಹಾದಿನಲ್ಲಿ ಸಿಲುಕಿರುವ ಮಹಿಳೆಯರು ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವ ಕಥೆ ಇದೆಯಂತೆ. ಇಷ್ಟು ಹೇಳಿದರೆ ಇಡೀ ಕಾದಂಬರಿಯಲ್ಲಿ ಏನಿರಬಹುದು ಎಂದು ವಿಶೇಷವಾಗಿ ಹೇಳುವ ಅಗತ್ಯವೇನೂ ಉಳಿಯುದಿಲ್ಲ. ಕಾದಂಬರಿಯಲ್ಲಿ ಏನೇನಾಗುತ್ತದೆ ಎಂಬುದನ್ನೂ ನಿಂತಲ್ಲೇ ಊಹಿಸಿಬಿಡಬಹುದು! ಆದರೆ ವಾಸ್ತವದಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಈ ಬಲಪಂಥೀಯ ಉಗ್ರಗಾಮಿ ಸಂಘಟನೆಗಳು ಹುಟ್ಟು ಹಾಕಿದ ಸೊಕಾಲ್ಡ್ “ಲವ್ ಜಿಹಾದ್” ನರೇಟಿವ್ ನಲ್ಲಿರುವ ಹೂರಣ ಎಷ್ಟು ಎಂಬುದನ್ನು ಘನತೆವೆತ್ತ ನ್ಯಾಯಾಲಯಗಳೇ ಬಯಲಿಗೆಳಿದಿವೆ. 2018ರ ಮಾರ್ಚ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟು ಕೇರಳದ “ಲವ್ ಜಿಹಾದ್” ಪ್ರಕರಣವೊಂದರ ಕುರಿತಂತೆ ತೀರ್ಪು ನೀಡಿ ಅಲ್ಲಿ ಯಾವುದೇ ಜಿಹಾದ್ ಇಲ್ಲವೆಂದೂ ಇರುವುದು ಕೇವಲ ಪ್ರೇಮವೆಂದೂ ತಿಳಿಸಿದೆ. ಇದೇ ಕೋರ್ಟು ಈ ಲವ್ ಜಿಹಾದ್ ಆರೋಪಗಳಿಗೆ ಸಂಬಂಧಿಸಿದಂತೆ NIAಗೆ ತನಿಖೆ ಮುಂದುವರೆಸುವಂತೆಯೂ ಹೇಳಿತ್ತು. ಅದೇ ವರ್ಷ ಅಕ್ಟೋಬರ್ ವೇಳೆಗೆ ಸುಮಾರು 11 ಇಂತಹ “ಲವ್ ಜಿಹಾದ್” ಎಂದು ಹೇಳಲಾದ ಅಂತರ್ ಧರ್ಮೀಯ ಪ್ರೇಮ ವಿವಾಹ ಪ್ರಕರಣಗಳನ್ನು ಇಂಚಿಂಚೂ ತನಿಖೆ ನಡೆಸಿದ್ದ NIA ಕೊನೆಗೆ ಯಾವುದೇ ಪ್ರಕರಣದಲ್ಲಿಯೂ “ಲವ್ ಜಿಹಾದ್” ನಡೆದಿದೆ ಎನ್ನಲು ಯಾವುದೇ ಪುರಾವೆ ಇಲ್ಲ ಎಂದು ಕೈತೊಳೆದುಕೊಂಡಿದೆ. ಈ ಮೂಲಕ “ಲವ್ ಜಿಹಾದ್” ಎಂಬುದು ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನವೇ ಅಲ್ಲ, ಬದಲಾಗಿ ಬಲಪಂಥೀಯ “ಅನೈತಿಕ ಪೊಲೀಸರ” ಕೊಳಕು ಮನಸ್ಸುಗಳಲ್ಲಿ ಮಾತ್ರವೇ “ಲವ್ ಜಿಹಾದ್” ನಡೆಯುತ್ತಿರುವುದು ಎಂಬುದು ಸಾಬೀತಾಗಿತ್ತು. ಹೀಗಿರುವಾಗ “ಲವ್ ಜಿಹಾದ್” ಎಂಬ ವಿಕೃತ ಕಲ್ಪನೆಯನ್ನೇ ಆಧಾರವಾಗಿಟ್ಟುಕೊಂಡು ಬರೆದ ಒಂದು ಕಾದಂಬರಿ ಸಮಾಜದಲ್ಲಿ ಎಂತಹ ಭಾವನೆಗಳನ್ನು ಸೃಷ್ಟಿಸಬಹುದು? ಅಸಲಿಗೆ ಇದನ್ನು ಯಾವುದಾದರೂ ಮಾನದಂಡದಲ್ಲಿ ಸಾಹಿತ್ಯ ಕೃತಿ ಎನ್ನಲು ಸಾಧ್ಯವೇ? ಇನ್ನು ಈ ಲವ್ ಜಿಹಾದ್ ಗೂ ಭಯೋತ್ಪಾದನೆಗೂ ಸಂಬಂಧ ಕಲ್ಪಿಸುವುದು ಈಗಾಗಲೇ ಸಮಾಜದಲ್ಲಿ ಕೆಲವು ಸಮುದಾಯಗಳ ಕುರಿತು ಇರುವ ಪೂರ್ವಾಗ್ರಹಗಳನ್ನು ಹೆಚ್ಚಿಸುವುದರ ಹೊರತಾಗಿ ಏನು ಮಾಡಲು ಸಾಧ್ಯ? ಒಟ್ಟಿನಲ್ಲಿ ಇಂತಹ ಪುಸ್ತಕವೊಂದು ಸಮಾಜದಲ್ಲಿ ದ್ವೇಷವನ್ನು ಮತ್ತಷ್ಟು ಹರಡುವುದಲ್ಲದೇ ಮತ್ತೇನನ್ನು ಮಾಡಲೂ ಸಾಧ್ಯವಿಲ್ಲ.

ಹೌದು ಯಾವುದೇ ವ್ಯಕ್ತಿ ಯಾವುದೇ ಪುಸ್ತಕವನ್ನು ಬರೆಯಲು ಪ್ರಕಟಿಸಲು ಅಭಿವ್ಯಕ್ತಿ ಸ್ವಾತಂತ್ರ್ಯವಿರುತ್ತದೆ. ನಮ್ಮ ಸಂವಿಧಾನ ಅದಕ್ಕೆ ಮಾನ್ಯತೆಯನ್ನೂ ಒದಗಿಸಿದೆ. ಆದರೆ ಇದೇ ಸಂವಿಧಾನ ಕೆಲವು ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತದೆ ಮತ್ತು ಆ ಮೌಲ್ಯಗಳೇ ಸರ್ಕಾರದ ಮತ್ತು ಪ್ರಜೆಗಳ ಪ್ರತಿ ನಡೆಯನ್ನೂ ರೂಪಿಸಬೇಕು ಎನ್ನುತ್ತದೆ. ಧಾರ್ಮಿಕ ಸಾಮರಸ್ಯ, ಸಮಾನತೆ, ಸಹಬಾಳ್ವೆ, ಸೋದರತೆ ಇವರೇ ಆ ಮೌಲ್ಯಗಳು. ಇವು ಸಂವಿಧಾನದ ಮೂಲ ಅಂಶಗಳು ಸಹ. ಸಂವಿಧಾನದ ಪೀಠಿಕೆಯಲ್ಲೇ ಅಡಕವಾಗಿರುವ ಈ ಮೌಲ್ಯಗಳ ಜೊತೆಜೊತೆಗೇ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಹಕ್ಕನ್ನೂ ಅರ್ಥ ಮಾಡಿಕೊಳ್ಳಬೇಕಿರುತ್ತದೆ. ಯಾವುದೇ ಒಬ್ಬ ವ್ಯಕ್ತಿ ಚಲಾಯಿಸುವ ಒಂದು ಹಕ್ಕು ಮತ್ತೊಬ್ಬ ವ್ಯಕ್ತಿಯ ಘನತೆ, ಗೌರವಕ್ಕೆ ಕುಂದು ತರುವಂತಿದ್ದರೆ ಒಬ್ಬನ ಹಕ್ಕು ಚಲಾಯಿಸುವಿಕೆ ಸಂವಿಧಾನದ ಮೂಲ ಅಂಶಗಳಿಗೆ ವ್ಯತಿರಿಕ್ತವಾಗಿದ್ದರೆ ಆ ಹಕ್ಕನ್ನು ನಿರ್ಬಂಧಿಸುವ ಅಧಿಕಾರವನ್ನು ಸಂವಿಧಾನವೇ ಸರ್ಕಾರಗಳಿಗೆ ನೀಡಿರುವುದು ಏಕೆಂದು ನೋಡಬೇಕಲ್ಲವೇ?

ಈ ಹಿನ್ನೆಲೆಯಲ್ಲಿ ಸಮಾಜದ ಆರೋಗ್ಯವನ್ನು ಹದಗೆಡಿಸುವ, ಕೋಮು ಸಾಮರಸ್ಯ ನಾಶ ಮಾಡುವ, ಸಮುದಾಯಗಳ ನಡುವೆ ದ್ವೇಶ ಬೆಳೆಸುವ, ಹಿಂಸೆಗೆ ಪ್ರಚೋದನೆ ನೀಡುವ ಯಾವುದೇ ಕೃತಿ “ಅಭಿವ್ಯಕ್ತಿ”ಯ ಹೆಸರಿನಲ್ಲಿ ಯಾವ ರೀತಿಯಲ್ಲೂ ಸಮರ್ಥನೆಗೆ ಅರ್ಹವಾಗಿರುವುದಿಲ್ಲ. ಬದಲಿಗೆ ಅದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದರೆ ಅದು ಖಂಡನೆಗೆ ಅರ್ಹವಾಗಿರುತ್ತದೆ. ಚೈತ್ರಳ “ಪ್ರೇಮಪಾಶ” ಸಹ ಇದೇ ಕೆಟಗರಿಯದು ಎಂದು ನಿಸ್ಸಂಶಯವಾಗಿ ಹೇಳಬೇಕಾಗುತ್ತದೆ.

ಇಂತಹ ವಿ’ಕೃತಿ’ಯೊಂದಕ್ಕೆ ಮಾರುಕಟ್ಟೆ ಮಾಡಿಕೊಡಬೇಕೇ ಬೇಡವೇ ಎನ್ನುವುದು ಆಯಾ ಮಾರ್ಕೆಟಿಂಗ್ ಸಂಸ್ಥೆಯ ವಿವೇಚನೆಗೆ ಬಿಟ್ಟ ವಿಚಾರ. ಈಗಾಗಲೇ ಎಷ್ಟೋ ಬಲಪಂಥೀಯ ಅಂಗಡಿಗಳು ಮಾಡುತ್ತಿರುವುದೇ ಈ ಕೆಲಸವನ್ನು. ಅಂತಹ ಯಾವುದೇ ಸಂಸ್ಥೆ ಈ ಪುಸ್ತಕದ ಮಾರ್ಕೆಟಿಂಗ್ ವಹಿಸಿಕೊಂಡಿದ್ದರೆ ಪ್ರಾಯಶಃ ಇಲ್ಲಿ ಅಷ್ಟೊಂದು ಪ್ರಶ‍್ನೆಯೇನೂ ಬರುತ್ತಿರಲಿಲ್ಲ. ಆದರೆ ಇಲ್ಲಿ ಹಾಗಾಗಿಲ್ಲ.
ಇದುವರೆಗೆ ಬುಕ್ ಬ್ರಹ್ಮ ಸಂಸ್ಥೆ ತನ್ನನ್ನು ತಾನು ಕನ್ನಡ ಸಾಹಿತ್ಯದ ಉದಾತ್ತ ಪರಂಪರೆಯೊಂದಿಗೆ ಸಾಕಷ್ಟು ಗುರುತಿಸಿಕೊಂಡು ಬಂದು ಈಗ ಈ ಪ್ರಕರಣದಲ್ಲಿ ಉಲ್ಟಾ ಹೊಡೆದಿರುವುದೇ ಈಗ ಎದ್ದಿರುವ ಅಸಮಧಾನದ ಮೂಲ. ಕನ್ನಡ ಸಾಹಿತ್ಯ ಪರಂಪರೆ ಎಂದಿಗೂ ದ್ವೇಷ ಸಂಸ್ಕೃತಿಯ ವಿರೋಧಿ, ಅಸಮಾನತೆಯ ವಿರೋಧಿ, ಜಾತಿ, ಲಿಂಗ ತಾರತಮ್ಯದ ವಿರೋಧಿ. ಸಮಾಜದಲ್ಲಿ ಕೋಮುಗಳ ನಡುವಿನ ಸಹಬಾಳ್ವೆಯನ್ನು ಯಾವ ಕಾಲಕ್ಕೂ ಎತ್ತಿ ಹಿಡಿಯುವ ಕೆಲಸ ಮಾಡಿಕೊಂಡು ಬಂದಿರುವುದು ಕನ್ನಡ ಸಾಹಿತ್ಯದ ಹೆಗ್ಗಳಿಕೆ. ಈ ಹಿನ್ನೆಲೆಯಲ್ಲಿ “ಕನ್ನಡ ಸಾಹಿತ್ಯ”ವನ್ನೇ ಆಸರೆಯಾಗಿಸಿಕೊಂಡು ಮಾರ್ಕೆಟಿಂಗ್ ಮಾಡಿಕೊಳ್ಳಲು ಹೊರಡುವ ಯಾವುದೇ ಸಂಸ್ಥೆ ಹುಟ್ಟು ಹಾಕುವ ನಿರೀಕ್ಷೆಗಳೂ ಸಹಜವಾಗಿ ಇದಕ್ಕೆ ಪೂರಕವಾಗಿಯೇ ಇರುತ್ತವೆ. ಇದು ಬುಕ್ ಬ್ರಹ್ಮದವರ ಮೇಲೆ ಯಾರೋ ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದರು ಹೀಗಾಗಿಬಿಟ್ಟಿತು ಅನ್ನುವ ಪ್ರಶ್ನೆ ಅಲ್ಲವೇ ಅಲ್ಲ. ಇದು ಕನ್ನಡ ಸಾಹಿತ್ಯ ಪರಂಪರೆ ಪೊರೆದುಕೊಂಡು ಬಂದಂತಹ ಮೌಲ್ಯಗಳ ಪ್ರಶ್ನೆಯಷ್ಟೆ. ಒಂದಷ್ಟು ದಿನ ಸಾಹಿತ್ಯ ಪರಂಪರೆಗೆ ಪೂರಕವಾಗಿ ಕೆಲಸ ಮಾಡಿ ಒಂದಷ್ಟು ನಂಬಿಕೆಯನ್ನು ಸಮಾಜದಲ್ಲಿ ಹುಟ್ಟು ಹಾಕಿ ಒಂದು ದಿನ ಅದಕ್ಕೆ ವಿರುದ್ಧವಾಗಿ ನಿಂತಾಗ ‘ನಂಬಿಕೆಗೆ ದ್ರೋಹವಾಯಿತು’ ಎನಿಸಿದ ಯಾರೇ ಆಗಲೀ ಅದನ್ನು ಪ್ರಶ್ನಿಸುವ ಹಕ್ಕನ್ನು ಉಳಿಸಿಕೊಂಡಿರುತ್ತಾರೆ.

ಇದುವರೆಗೆ ಈ ಕುರಿತು ಎದುರಾದ ಪ್ರಶ‍್ನೆಗಳಿಗೆ ಬುಕ್ ಬ್ರಹ್ಮದ ನಿರ್ದೇಶಕ ಮಂಡಳಿ ಕಮಕ್ ಕಿಮಕ್ ಎನ್ನದೇ ಕುಳಿತಿದೆ. ತಮ್ಮ ಓದುಗರು, ತಮ್ಮ ಪೋರ್ಟಲ್ ಗೆ ಬರೆಯುವವರು ಈ ಕುರಿತು ವ್ಯಕ್ತಪಡಿಸುತ್ತಿರುವ ಸಂದೇಹಗಳಿಗೆ ಒಂದು ಸಂಸ್ಥೆಯಾಗಿ ಕನಿಷ್ಟ ಉತ್ತರದಾಯಿತ್ವವನ್ನೂ ತೋರುತ್ತಿಲ್ಲ.

ಬುಕ್ ಬ್ರಹ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವರಲ್ಲಿ ಕೆಲವಾರು ಮನುಷ್ಯ ಪರ ಸಂವೇದನೆ ಉಳ್ಳವರೂ ಇದ್ದಾರೆ. ಇಲ್ಲಿ ಸಂಬಳಕ್ಕಾಗಿ ಕೆಲಸ ಮಾಡುವ ಉದ್ಯೋಗಿಗಳನ್ನು ದೂರುವುದು ವ್ಯರ್ಥ. ಯಾಕೆಂದರೆ ಅವರು ತಮ್ಮ ಶ್ರಮವನ್ನು ಎಲ್ಲಿಯಾದರೂ ಮಾರಿಕೊಳ್ಳಲೇಬೇಕು. ಸಂಸ್ಥೆಯ ತೀರ್ಮಾನಗಳಲ್ಲಿ ಅವರಿಗೆ ಹೆಚ್ಚು ಅಧಿಕಾರ ಇರುವುದಿಲ್ಲ. ಕೆಲವೊಮ್ಮೆ ಅವರಿಗೂ ತಾವು ಮೋಸ ಹೋದ ಅನುಭವ ಆಗಬಹುದು.

ಬುಕ್ ಬ್ರಹ್ಮದ ನಿರ್ದೇಶಕರ ಮಂಡಳಿಯಲ್ಲೂ ಗೊತ್ತಿರುವ ಒಬ್ಬಿಬ್ಬರು ಒಳ್ಳೆಯ ಅಭಿರುಚಿಯನ್ನೇ ಹೊಂದಿದವರು. ಆದರೆ ಇಂತಹ ಸಂದರ್ಭದಲ್ಲಿ ವ್ಯಕ್ತಿಗಳ ಅಭಿರುಚಿ, ಹಿನ್ನಡವಳಿಗಳು,ಅವರು ಸಮಾಜಕ್ಕೇನು ಕೊಡುಗೆ ಕೊಟ್ಟಿದ್ದಾರೆ ಇತ್ಯಾದಿಗಳು ಮುಖ್ಯ ಪಾತ್ರ ವಹಿಸುವುದಿಲ್ಲ. ನಿರ್ದಿಷ್ಟ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಒಂದು ಸಂಸ್ಥೆಯಾಗಿ ಅವರು ಯಾವ ನಿರ್ಧಾರ ತಳೆದರು ಎಂಬುದಷ್ಟೇ ಮುಖ್ಯ. ಚರಿತ್ರೆಯಲ್ಲಿ ನಮ್ಮ ಪಾತ್ರವನ್ನು ನಿರ್ಧರಿಸುವುದು ಸಹ ಇಷ್ಟೇ ಆಗಿರುತ್ತದೆಯೇ ಹೊರತು ನಮ್ಮ ಇಹಪರಗಳಲ್ಲ.
ಈಗ ನಮಗಿರುವ ಆಯ್ಕೆಗಳು ಎರಡು: ಒಂದು- ಈ ಬಗ್ಗೆ ನಾವು ಕೇಳುತ್ತಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನಿರ್ವಹಣಾ ಮಂಡಳಿ ನೀಡುತ್ತದೆ ಎಂದು ನಿರುಕಿಸುತ್ತಾ ಕೂರುವುದು.

ಎರಡು- ಬುಕ್ ಬ್ರಹ್ಮ ಕನ್ನಡ ಸಾಹಿತ್ಯದ ಯಾವ ತಾತ್ವಿಕತೆ, ಮೌಲ್ಯಗಳಿಗಾಗಲೀ, ನಮ್ಮ ಸಂವಿಧಾನದ ಯಾವುದೇ ಮೌಲ್ಯಗಳಿಗಾಗಲೀ ನಯಾ ಪೈಸೆಯ ಗೌರವವನ್ನಾಗಲೀ ಬದ್ದತೆಯನ್ನಾಗಲೀ ಹೊಂದಿರದ ಒಂದು ಬರೀ ಬಿಸ್ನೆಸ್ ಕಂಪನಿ ಎಂದು ತೀರ್ಮಾನಿಸಿಕೊಳ್ಳುವುದು.

ಒಬ್ಬ ಓದುಗನಾಗಿ, ಲೇಖಕನಾಗಿ ಮತ್ತು ಸಾಹಿತ್ಯಾಸಕ್ತನಾಗಿ ನನ್ನ ಆಯ್ಕೆ ಎರಡನೆಯದು. ಜೊತೆಗೆ ಇನ್ನು ಮುಂದೆ ಯಾವುದೇ ರೀತಿಯಲ್ಲಿ ಬುಕ್ ಬ್ರಹ್ಮದ ಜೊತೆ ಗುರುತಿಸುಕೊಳ್ಳಬಾರದು ಮತ್ತು ಯಾವುದೇ ರೀತಿಯಲ್ಲಿ ಅದನ್ನು ಪ್ರೋತ್ಸಾಹಿಸಬಾರದು ಎಂದು ಮೇಲೆ ಹೇಳಿದ ಎಲ್ಲಾ ಕಾರಣಗಳಿಂದ ತೀರ್ಮಾನಿಸಿದ್ದೇನೆ. ನಿಮ್ಮ ನಿರ್ಧಾರ ನಿಮಗೆ ಬಿಟ್ಟದ್ದು.

Please follow and like us:
error