ಬಿಜೆಪಿ ಮಂಡಿಸಿದ ಭೂ ಸುಧಾರಣೆ ತಿದ್ದುಪಡಿ ಮಸೂದೆ ಪರ ಮತ ಹಾಕಿದ ಜೆಡಿಎಸ್

ರೈತರ ಆಕ್ರೋಶ

ಈಗ ಒಬ್ಬರು 450 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಬಹುದು. ಇಂತಹ ಕರಾಳ ತಿದ್ದುಪಡಿ ತರಲು ಕಾರ್ಪೋರೇಟ್ ಗಳ ಜೊತೆ ಮಾರಿಕೊಂಡ ಜೆಡಿಎಸ್, ಬಿಜೆಪಿಗೆ ಧಿಕ್ಕಾರ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಈ ಮೊದಲು ವಿರೋಧಿಸಿದ್ದ ಜೆಡಿಎಸ್ ಪಕ್ಷ ಇಂದು ಅಚ್ಚರಿಯ ರೀತಿಯಲ್ಲಿ ಬಿಜೆಪಿ ಪರವಾಗಿ ವಿಧಾನ ಪರಿಷತ್‌ನಲ್ಲಿ ಮಸೂದೆ ಪರ ಮತ ಹಾಕಿದೆ. ಇದರಿಂದ ಮಸೂದೆಯು ಕಾಯ್ದೆಯಾಗಿ ಅಂಗೀಕಾರಗೊಂಡಿದೆ.

ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಆಗಸ್ಟ್ ಅಂತ್ಯದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಬಹುಮತವಿದ್ದ ಬಿಜೆಪಿ ಅಂಗೀಕರಿಸಿತ್ತು. ಆದರೆ ಅದೇ ಸಮಯದಲ್ಲಿ ವಿಧಾನಪರಿಷತ್‌ನಲ್ಲಿ ಆ ಮಸೂದೆಗೆ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ

ಇಂದು ಕರ್ನಾಟಕ ಭೂ ಸುಧಾರಣೆ ಕಾಯ್ದೆ ಎರಡನೇ ತಿದ್ದುಪಡಿ ವಿಧೇಯಕವನ್ನು ಪರಿಷತ್ ನಲ್ಲಿ ಸಭಾಪತಿ ಮತಕ್ಕೆ ಹಾಕಿದರು. ಆಗ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಪರ ಜೆಡಿಎಸ್ ಸದಸ್ಯರು ಮತ ಚಲಾಯಿಸಿದ್ದಾರೆ. ಇದರಿಂದ ಹರ್ಷಗೊಂಡ ಬಿಜೆಪಿ ಸದಸ್ಯರು ಮೇಜು ಕಟ್ಟುವ ಮೂಲಕ ಸ್ವಾಗತಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ವಿಧೇಯಕದ ಪರವಾಗಿ 37 ಮತಗಳು ಹಾಗೂ ವಿಧೇಯಕದ ವಿರುದ್ದವಾಗಿ 21 ಮತಗಳು ಬಿದ್ದಿವೆ. ಹಾಗಾಗಿ ಕೊನೆಗೂ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಅಂಗೀಕಾರವಾಗಿದೆ.ಈ ವಿಷಯ ತಿಳಿಯುತ್ತಿದ್ದಂತೆ ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ ಪಕ್ಷವು ತನ್ನನ್ನು ಬಿಜೆಪಿಗೆ ಮಾರಿಕೊಂಡಿದೆ ಎಂದು ರೈತರು ಕಿಡಿಕಾರಿದ್ದಾರೆ. ಏಕಾಏಕಿ ಮೌರ್ಯ ಸರ್ಕಲ್ ನಲ್ಲಿ ಹೋರಾಟಗಾರರು ರಸ್ತೆತಡೆ ಆರಂಭಿಸಿ ಬಿಜೆಪಿ ಮತ್ತು ಜೆಡಿಎಸ್‌ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ರಸ್ತೆ ತಡೆ ಪ್ರತಿಭಟನೆ ಮುಂದುವರೆಯುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

Please follow and like us:
error