ಬಿಎಸ್ವೈ ಸರಕಾರ ಅಲ್ಪಸಂಖ್ಯಾತರೊಂದಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ- ಬಿ.ಪೀರ್ ಬಾಷಾ

ಕನ್ನಡನೆಟ್ : ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಮೂಲಭೂತ ಆಶಯಗಳ ವಿರುದ್ದ ಕೆಲಸ ಮಾಡುತ್ತಿರುವದು ಅತ್ಯಂತ ವಿಷಾದನೀಯವಾಗಿದೆ. ರಾಜ್ಯದ ಯಡಿಯೂರಪ್ಪ ಸರಕಾರ ಅಲ್ಪಸಂಖ್ಯಾತ ಸಮುದಾಯದ ಅನುದಾನವನ್ನು ಕಡಿತ ಮಾಡುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೋರಾಟಗಾರ ಮುಸ್ಲಿಂ ಚಿಂತಕ ಚಾವಡಿಯ ರಾಜ್ಯ ಮಾರ್ಗದರ್ಶಕ ಬಿ.ಪೀರ್ ಬಾಷಾ ಆರೋಪಿಸಿದರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಾಖಲೆಗಳ ಸಮೇತ ಅಲ್ಪಸಂಖ್ಯಾತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದರು.

ರಾಜಕೀಯ ಕಾರಣಕ್ಕೆ ಎಲ್ಲ ಪಕ್ಷಗಳು ತಮ್ಮದೇ ಆದ ಆದ್ಯತೆಯ ಕೆಲಸ ಮಾಡುತ್ತ ಆರೋಪ, ಪ್ರತ್ಯಾರೋಪ ಮಾಡುವುದು ಸಾಮಾನ್ಯವಾದರೂ ಯಾವ ಸರಕಾರವೂ ಒಂದು ಸಮುದಾಯವನ್ನು ಇಷ್ಟೊಂದು ಅನ್ಯಾಯ ಮಾಡಿರುವದು ಇತಿಹಾಸದಲ್ಲಿ ಕಂಡು ಬರುವುದಿಲ್ಲ. ಬಿ.ಎಸ್.ಯಡಿಯೂರಪ್ಪನವರ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಅದರ ಮೂಲಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ಧ, ಪಾರ್ಸಿ ಮತ್ತು ಜೈನ ಸಮುದಾಯದ ಮೇಲೆ ತೋರಿಸಿದಷ್ಟು ತಾತ್ಸಾರ, ದ್ವೇಷ, ಅಸೂಯೆ ಅನ್ಯಾಯಗಳನ್ನು ದೇಶದ ಯಾವ ರಾಜ್ಯ ಸರಕಾರಗಳು ಕೂಡ ಮಾಡಿರುವ ಉದಾಹರಣೆ ಇಲ್ಲ. ಅವರದ್ದೇ ಪಕ್ಷದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೂಡ ಒಂದು ಸಮುದಾಯ ಕುರಿತ ಸರಕಾರದ ಜನಪರ, ಕಲ್ಯಾಣ ಯೋಜನೆಯ ಅನುಷ್ಠಾನದಲ್ಲಿ ಇಷ್ಟೊಂದು ದ್ವೇಷಯುತವಾಗಿ ನಡೆದುಕೊಂಡಿಲ್ಲ.
ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಬಂದ ಮೇಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸುತ್ತ ಬಂದಿರುವ ಅನುದಾನ ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ನಿಲ್ಲಿಸಿದೆ. ೨೦೧೯-೨೦ನೇ ಸಾಲಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು ೧೮೯೭.೦೦ ಕೋ.ರೂ. ಯಿಂದ ೧೫೭೧.೦೦ ಕೋ.ರೂ.ಗೆ ಕಡಿಮೆಗೊಳಿಸಿತು. ೨೦೨೦-೨೧ನೇ ಸಾಲಿನಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ೧೧೭೭.೦೦ಕೋ.ರೂ.ಗಳಷ್ಟಿದ್ದ ಅನುದಾನವನ್ನು ಮತ್ತೆ ಕಡಿತಗೊಳಿಸಿ ೧೦೫೫.೦೦ಕೋ.ರೂ.ಗಳಿಗೆ ನಿಗದಿಗೊಳಿಸಿದೆ. ಇತ್ತೀಚಿಗೆ ಮತ್ತೆ ೧೦೫೫.೦೦ ಕೋ.ರೂ.ಗಳಷ್ಟಿದ್ದ ಅನುದಾನದಲ್ಲಿ ೫೦.೦೦ ಕೋ.ರೂ. ಅನುದಾನ ಕಡಿತಗೊಳಿಸಿದೆ.
ಈಗ ಕಡಿತಗೊಳಿಸಿದ ಅನುದಾನದಲ್ಲಿ ಕಳೆದ ೫ ವರ್ಷಗಳಿಂದ ಅನುಷ್ಠಾನ ಮಾಡಲಾಗುತ್ತಿದ್ದ ಹಲವು ಜನಪರ ಕಲ್ಯಾಣ ಯೋಜನೆಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅನುಷ್ಠಾನ ಮಾಡುವುದನ್ನು ನಿಲ್ಲಿಸಿದೆ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಜಾರಿಗೊಳಿಸಿದ ಕಾಲೋನಿ ಅಭಿವೃದ್ದಿ ಯೋಜನೆ ಈಗಿನ ಸರಕಾರ ರದ್ದುಗೊಳಿಸಿದೆ. ಶಾದಿಭಾಗ್ಯ ಯೋಜನೆಯನ್ನು ಕೂಡ ರದ್ದುಗೊಳಿಸಿದೆ. ಈ ವರ್ಷ ಇವೆಲ್ಲಕ್ಕಿಂತ ಪ್ರಮುಖ ಯೋಜನೆಗಳಾದ ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರೀಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತಹ ಯೋಜನೆಗಳ ೨೦೧೯-೨೦ನೇ ಸಾಲಿನ ಅನುದಾನವನ್ನು ಸರಕಾರ ಇಲ್ಲಿಯವರೆಗೆ ಬಿಡುಗಡೆಗೊಳಿಸದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವಂತಹ ಕೆಲಸ ಮಾಡುತ್ತಿರುವದು ಅಕ್ಷಮ್ಯ ಅಪರಾಧವಾಗುತ್ತದೆ.

ರಾಜ್ಯದಲ್ಲಿ ೨೦೧೬-೧೭ರಿಂದ ಜಾರಿಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡಲ್ಲಿ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಈ ವರ್ಷದಿಂದ ಪ್ರತಿ ತಿಂಗಳು ೨೫೦೦೦ರೂಗಳನ್ನು ಕಡಿತಗೊಳಿಸಿ ೮೩೩೩ರೂಗಳಿಗೆ ಕಡಿತಗೊಳಿಸಿ ಯಾರೂ ಸಂಶೋಧನೆಯನ್ನು ಪೂರ್ಣಗೊಳಿಸದಂತಹೆ ವಾತಾವರಣ ನಿರ್ಮಿಸಿದೆ. ೨೦೨೦-೨೧ನೇ ಸಾಲಿನಲ್ಲಿ ರಾಜ್ಯಾದ್ಯಂತಹ ಸುಮಾರು ೩೦೦ವಿದ್ಯಾರ್ಥಿಗಳು ಸಂಶೋಧನೆಗಾಗಿ ಪ್ರೋತ್ಸಾಹ ಧನ ಪಡೆಯುತ್ತಿದ್ದರೂ, ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ೩ಲಕ್ಷರೂಗಳಾದರೂ ಒಟ್ಟು ೩೦೦ ವಿದ್ಯಾರ್ಥಿಗಳಿಗೆ ಈ ಮೊತ್ತ ೯ಕೋ.ರೂ. ಆಗುತ್ತದೆ. ಹಲವಾರು ಅನುಪಯುಕ್ತ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ವೆಚ್ಚ ಮಾಡುವ ಸರಕಾರ ಕೇವಲ ೯.೦ ಕೋ.ರೂ ಗೆ ೩೦೦ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದೆ.

ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ವಾರ್ಷಿಕವಾಗಿ ಕರ್ನಾಟಕ ರಾಜ್ಯದಿಂದ ಸುಮಾರು ೧೨ಲಕ್ಷ ೫೦ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರ ಸೇರಿ ಒಟ್ಟು ೨೭೦.೦೦ ಕೋ.ರೂ. ಅನುದಾನ ನಿಗದಿಗೊಳಿಸಲಾಗಿತ್ತು, ಆದರೆ ೨೦೧೯-೨೦ನೇ ಸಾಲಿನಲ್ಲಿ ರಾಜ್ಯ ಸರಕಾರ ಅನುದಾನ ಬಿಡುಗಡೆಗೊಳಿಸದೇ ಇರುವದರಿಂದ ಶೇ೫೦ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷದ ವಿದ್ಯಾರ್ಥಿ ವೇತನ ಪಡೆಯಲು ಸಾದ್ಯವಾಗಿಲ್ಲ. ಈಗಲೂ ಜಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳದ್ದಾಗಿದೆ.

೧೯೮೦ರಿಂದ ರಾಜ್ಯದಲ್ಲಿ ಎಲ್ಲ ಹಿಂದುಳಿದ ವಿದ್ಯಾರ್ಥಿಗಳಿಗೆ ಜಾರಿಯಲ್ಲಿದ್ದು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತ್ಯೇಕಗೊಂಡ ನಂತರ ಶುಲ್ಕವಿನಾಯತಿ ಯೋಜನೆ ೨೦೧೪ರಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತ ಸಮುದಾಯದ ಅರ್ಜಿ ಸಲ್ಲಿಸಿದ ಅರ್ಹ ವಿದ್ಯಾರ್ಥಿಗಳಿಗೆ ನೀಡುತ್ತ ಬಂದಿದೆ. ಆದರೆ, ೨೦೧೯-೨೦ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಈಗಲೂ ಅನುದಾನ ಬಿಡುಗಡೆಗೊಳಿಸದೇ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನವಾಗಿದೆ.
ಅದೇ ರೀತಿ ರಾಜ್ಯದಲ್ಲಿ ಎಲ್ಲ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ೨೦೧೪-೧೫ನೇ ಸಾಲಿನಿಂದ ಮನೆ ಬಿಟ್ಟು ಬೇರೆ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆಂದೇ ಸಿದ್ದರಾಮಯ್ಯ ನೇತೃತ್ವದ ಸರಕಾರ ಜಾರಿಗೊಳಿಸಿದ ವಿದ್ಯಾಸಿರಿ ಯೋಜನೆಯ ೨೦೧೯-೨೦ನೇ ಸಾಲಿನ ಅನುದಾನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಬಿಡುಗಡೆಗೊಳಿಸಿದೇ ಇರುವದರಿಂದ ಈ ಯೋಜನೆಯ ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳು ಆತಂಕದಲ್ಲಿದ್ದಾರೆ.
ಅಲ್ಪಸAಖ್ಯಾತರ ಅಭಿವೃದ್ದಿ ನಿಗಮದ ಮೂಲಕ ಅನುಷ್ಠಾನ ಮಾಡಲಾಗುತ್ತಿರುವ “ಅರಿವು” ಯೋಜನೆಯೂ ಸಹ ಈ ವರ್ಷ ದಾರಿ ತಪ್ಪಿದೆ, ಇದರ ಮೂಲಕ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತಗೊಳ್ಳುವAತೆ ಮಾಡಿದೆ. ಅರಿವು ಯೋಜನೆಯ ಮೂಲಕ ಸರಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಿಗಮದಿಂದ ಶೈಕ್ಷಣಿಕ ಸಾಲ ನೀಡಲಾಗುತ್ತಿತ್ತು, ಈ ವರ್ಷ ಸದರಿ ಸಾಲವನ್ನು ವಿದ್ಯಾರ್ಥಿಗಳು ಕೋರ್ಸುಗಳಿಗೆ ಪಾವತಿಸುವ ಮೊತ್ತದ ಅರ್ದ ಮೊತ್ತ ಮಾತ್ರ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಸಾಲದ ರೂಪದಲ್ಲಿ ನೀಡುತ್ತಿದೆ.
ಒಂದು ಕಡೆ ಪ್ರೋತ್ಸಾಹಧನ ಕಡಿತಗೊಳಿಸಿ, ಮತ್ತೊಂದು ಕಡೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನದ ಅನುದಾನ ಕಡಿತಗೊಳಿಸಿದ್ದಲ್ಲದೇ ಶುಲ್ಕವಿನಾಯತಿ, ವಿದ್ಯಾಸಿರಿ ಅನುದಾನವನ್ನೂ ಸರಕಾರ ನೀಡುತ್ತಿಲ್ಲ. ಇದನ್ನು ಹೊರತುಪಡಿಸಿ ಇದ್ದಂತಹ ಅರಿವು ಸಾಲದ ಯೋಜನೆಯನ್ನು ಮೊಟುಕುಗೊಳಿಸಲು ಹೊರಟಿರುವದನ್ನು ನೋಡಿದರೆ ಸರಕಾರವು ಅಲ್ಪಸಂಖ್ಯಾತ ಸಮುದಾಯವನ್ನು ಸಂಪೂರ್ಣ ಮೂಲೆಗುಂಪು ಮಾಡುವ ಶಪಥ ಮಾಡಿದಂತಿದೆ.
ಈ ಇಲಾಖೆಯ ಸಚಿವ ಶ್ರೀಮಂತ ಪಾಟೀಲ್ ಇವರು ಕಳೆದ ಮೂರು ತಿಂಗಳಿಂದ ಕಛೇರಿಗೆ ಆಗಮಿಸದೇ ಇರುವದರಿಂದ ಕಛೇರಿಯ ಅಗುಹೋಗುಗಳನ್ನು, ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸುವವರು ಯಾರೂ ಇಲ್ಲದಂತಾಗಿದೆ. ಅದೇ ರೀತಿ ಕಳೆದ ಒಂದು ತಿಂಗಳಿAದ ಇಲಾಖೆಯ ಪ್ರಭಾರಿ ಅಪರ ಮುಖ್ಯ ಕಾರ್ಯದರ್ಶಿ ಸ್ಥಾನವಹಿಸಿಕೊಂಡಿರುವ ಅಲ್ಪಸಂಖ್ಯಾತ ಸಮುದಾಯದವರೇ ಆದ ಮಹೇಂದ್ರ ಜೈನ್ ಅವರು ಕಛೇರಿಗೆ ಬಾರದೇ ಇರುವದರಿಂದ ಇಲಾಖೆಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿ, ಇಡೀ ಇಲಾಖೆ ಅನಾಥವಾಗಿರುವದು ಆತಂಕದ ವಿಷಯವಾಗಿದೆ.
ಕಾರಣ, ಕರ್ನಾಟಕ ರಾಜ್ಯ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂದಿಸಿದ ಯಾವುದೇ ಹೊಸ ಯೋಜನೆ ಜಾರಿಗೊಳಿಸದೇ ಇದ್ದರೂ ಈಗಾಗಲೇ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ಮುಂದುವರೆಸಬೇಕು, ಸದರಿ ಯೋಜನೆಗಳನ್ನು ಮುಂದುವರೆಸಲು ಈ ಮೊದಲು ಬಜೆಟ್‌ನಲ್ಲಿ ನಿಗದಿಗೊಳಿಸಿದ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ಶೀಘ್ರವೇ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಬಿ.ಖಾದ್ರಿ, ಸಿರಾಜ್ ಸಿದ್ದಾಪೂರ,

ಪಿಎಂ ೧೫ ಅಂಶಗಳ ಕಾರ್ಯಕ್ರಮ
ಅನುಷ್ಠಾನ ಸಮಿತಿ ಸದಸ್ಯ,ರಾಜ್ಯ ಸಮಿತಿ ಉಪಾಧ್ಯಕ್ಷ  ರಾಜಾಬಕ್ಷಿ ಎಚ್.ವಿ. ಉಪಸ್ಥಿತರಿದ್ದರು.

Please follow and like us:
error