fbpx

ಟಿಪ್ಪು ಬಗ್ಗೆ ಅಪಸ್ವರ ಯಾಕೆ?- ಸಿಎಂ ಸಿದ್ಧರಾಮಯ್ಯ

ಬಳ್ಳಾರಿ,ನ.3-ಬ್ರಿಟೀಷರ ವಿರುದ್ಧ ಮೈಸೂರು 3ನೇ ಯುದ್ಧದಲ್ಲಿ ಸೆಣಸಾಡಿ ಸೋತಾಗ ಟಿಪ್ಪುವಿಗೆ ಬ್ರಿಟೀಷರು ಯುದ್ಧದ ಹಾನಿಯನ್ನು ಭರಿಸುವಂತೆ ಒತ್ತಾಯಿಸಿದ್ದರು. ಆಗ ಟಿಪ್ಪು ಸುಲ್ತಾನ್ ತನ್ನ ಇಬ್ಬರು ಮಕ್ಕಳನ್ನೇ ಒತ್ತೆ ಇಟ್ಟು ನಾಡ ಪ್ರೇಮ ಮೆರೆದಿದ್ದಾನೆ. ಇಂತಹ ಹೋರಾಟಗಾರರು ಯಾರಾದರೂ ಇತಿಹಾಸದಲ್ಲಿ ಇದ್ದಾರೆಯೇ? ಮತ್ತೆ ಯಾಕೆ ಟಿಪ್ಪು ಸುಲ್ತಾನ್ ಬಗ್ಗೆ ಟೀಕೆ ಮಾಡುತ್ತೀರಿ? ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರ ಕಾಲೆಳೆದರು.
ಹಂಪಿಯ ಎದುರು ಬಸವಣ್ಣ ವೇದಿಕೆ(ಎಂ.ಪಿ.ಪ್ರಕಾಶ್)ಯ ಹಂಪಿ ಉತ್ಸವ-2017 ಉದ್ಘಾಟಿಸಿ ಮಾತನಾಡಿದ ಅವರು, ವಿಜಯ ನಗರ ಸಾಮ್ರಾಜ್ಯದ ಕೊನೆಯ ಅರಸು ಶ್ರೀ ಕೃಷ್ಣದೇವರಾಯ ಸಾಮಾಜಿಕ ಒಕ್ಕೂಟ ವ್ಯವಸ್ಥೆಗೆ ಸಾಕಷ್ಟು ಒತ್ತು ನೀಡಿದ್ದರು. ಅವರ ಸೈನ್ಯದಲ್ಲಿ ಬಹುತೇಕರು ಮುಸ್ಲಿಮರೇ ಇದ್ದರು. ಟಿಪ್ಪು ಸುಲ್ತಾನ್ ಕೂಡ ಶೃಂಗೇರಿ ಮಠ, ನಂಜನಗೂಡು ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ದಿವಾನ್ ಆಗಿ ಪೂರ್ಣಯ್ಯ ಇದ್ದರು. ಕನ್ನಡ ಭಾಷೆ, ಕನ್ನಡ ಜನರನ್ನು, ಹಿಂದು, ಮುಸ್ಲಿಂ, ಕ್ರೈಸ್ತರು ಎಲ್ಲ ವರ್ಗದವರನ್ನು ಟಿಪ್ಪು ಗೌರವಿಸುತ್ತಿದ್ದರು. ಅವರು ಬ್ರಿಟೀಷರ ವಿರುದ್ಧ ಹೋರಾಡಿ ನಾಲ್ಕನೇ ಯುದ್ಧದಲ್ಲಿ ನಾಡಿಗಾಗಿ, ಸಂಸ್ಕೃತಿ ಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು ಎಂದರು.

*ಇತಿಹಾಸ ಮರೆತವರಿಂದ ಭವಿಷ್ಯ ನಿರ್ಮಿಸಲು ಸಾಧ್ಯವಿಲ್ಲ:*

ವಿಜಯ ನಗರ ಅರಸರು ಜಾತ್ಯಾತೀತತೆ ಮೆರೆದಿದ್ದರು. ಕಲೆ, ಸಂಸ್ಕೃತಿ, ನಾಟ್ಯ, ಶಿಲ್ಪಕಲೆ, ಆರ್ಥಿಕ, ಕೃಷಿ ನೀತಿಗೆ ಹೆಚ್ಚು ಆದ್ಯತೆ ನೀಡಿದ್ದರು. ಪ್ರತಿಯೊಬ್ಬರೂ ಇತಿಹಾಸದ ಬಗ್ಗೆ ಅರಿತಿರಬೇಕು. ಕೇವಲ ರಾಜಕೀಯ ಕಾರಣ ಮತ್ತು ಮತಕ್ಕೋಸ್ಕರ ಇತಿಹಾಸವನ್ನು ತಿರುಚಬಾರದು. ಜನರಿಗೆ ತಪ್ಪು ಮಾಹಿತಿ ನೀಡಿ ಇತಿಹಾಸ ತಿರುಚಲು ಹೋದರೆ ಅದಕ್ಕಿಂತ ಘೋರ ಪಾಪ ಇನ್ನೊಂದಿಲ್ಲ. ಇತಿಹಾಸ ಗೊತ್ತಿಲ್ಲದವರಿಂದ ಭವಿಷ್ಯ ನಿರ್ಮಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಯುವ ಜನತೆ ಸರಿಯಾದ ಹಾದಿಯಲ್ಲಿ ಸಾಗಬೇಕಾದರೆ ಇತಿಹಾಸ, ಪರಂಪರೆ, ಸಂಸ್ಕøತಿಗಳ ಮಾಹಿತಿಗಳನ್ನು ಉತ್ಸವಗಳ ಮೂಲಕ ನೀಡಬೇಕೆಂದರು ಸಲಹೆ ನೀಡಿದರು. ಧಾರ್ಮಿಕ ಕಣ್ಣುಗಳಿಂದ ಇತಿಹಾಸವನ್ನು ನೋಡಲೇಬಾರದು. ನಮ್ಮ ಸರ್ಕಾರವೂ ಕೂಡ ಜಾತ್ಯಾತೀತೆ ಆಧಾರದ ಮೇಲೆ ಎಲ್ಲ ವರ್ಗದ, ಸಮುದಾಯದ ಬಡವರಿಗೆ ಸಾಮಾಜಿಕ ನ್ಯಾಯ ನೀಡಲು ಬದ್ಧವಾಗಿದೆ ಎಂದರು.

*ವಿಜಯನಗರ ಆಳರಸರೇ ಮೇಲುಗೈ:*

ಕರ್ನಾಟಕವನ್ನು ಆಳಿದ ಅರಸರಲ್ಲಿ ಗಂಗ, ಕದಂಬ, ಚಾಲುಕ್ಯ, ಹೊಯ್ಸಳ ಮೊದಲಾದ ಅರಸರಲ್ಲಿ ವಿಜಯನಗರ ಆಳರಸರು ಮೇಲುಗೈ ಸಾಧಿಸಿದ್ದಾರೆ. ಕರ್ನಾಟಕಕ್ಕೆ ಅವರ ಕೊಡುಗೆ ಮಾತಿನಿಂದ ಅಳೆಯಲಾಗದು. ಅವರೊಂದಿಗೆ ವಿದ್ಯಾರಣ್ಯರು, ಹಕ್ಕ-ಬುಕ್ಕರನ್ನು ಸಹ ನೆನೆಯಬೇಕು. ಹಂಪಿ ವಿಶ್ವ ಪರಂಪರಾ ಪಟ್ಟಿಗೆ ಸೇರಿರುವುದರಿಂದ ಹಂಪಿಯಲ್ಲಿ ಏನೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದರೂ ಯುನೆಸ್ಕೋ ಅನುಮತಿ ಪಡೆಯಬೇಕು. ಆದಾಗ್ಯೂ, ಪ್ರವಾಸಿಗರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಸೌಕರ್ಯ ಒದಗಿಸಲಿದೆ ಎಂದು ಶಾಸಕ ಆನಂದ್ ಸಿಂಗ್ ಅವರಿಗೆ ಭರವಸೆ ನೀಡಿದರು.
ಕಾರ್ಮಿಕ, ಕೌಶಲ್ಯಾಭಿವೃದ್ಧಿ ಸಚಿವರು ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ, ವಿಕಲಚೇತನ ಸಬಲೀಕರಣ ಸಚಿವೆ ಉಮಾಶ್ರೀ, ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮಾತನಾಡಿದರು. ಅರಣ್ಯ ಸಚಿವ ರಮಾನಾಥ್ ರೈ, ಶಾಸಕರಾದ ಈ ತುಕಾರಾಂ, ಎನ್ವೈ ಗೋಪಾಲಕೃಷ್ಣ, ಬಿಎಂ ನಾಗರಾಜ, ಭೀಮಾ ನಾಯ್ಕ, ಅಲ್ಲಂ ವೀರಭದ್ರಪ್ಪ, ಜಿ.ಪಂ.ಅಧ್ಯಕ್ಷೆ ಭಾರತಿ ರೆಡ್ಡಿ, ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್, ಜಿಲ್ಲಾ ಎಸ್‍ಪಿ ಆರ್.ಚೇತನ್ ಇನ್ನಿತರರು ಇದ್ದರು.

Please follow and like us:
error
error: Content is protected !!