ಬಳ್ಳಾರಿ ಜಿಲ್ಲೆಗೆ ಸಂಗಣ್ಣ ಕರಡಿ ಉಸ್ತುವಾರಿ

ಬಿಜೆಪಿ ರಾಜ್ಯ ಉಸ್ತುವಾರಿ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಸಮ್ಮುಖದಲ್ಲಿ ಸಭೆ

ಕೊಪ್ಪಳ: ಪ್ರತಿಪಕ್ಷಗಳು ಏನೇ ಹೇಳಲಿ, ಬಿಜೆಪಿ ಹಿಂದೆಂದಿಗಿಂತಲೂ ಹೆಚ್ಚು ಒಂದಾಗಿದ್ದು, ಸಾಕಷ್ಟು ಬಲಯುತವಾಗಿದೆ. ಹೇಳಿಕೆಗಳ ಮೇಲೆ, ಅಂಕಿಅಂಶಗಳ ಮೂಲಕ ಪ್ರಗತಿಯನ್ನು ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷ 2018ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ನೇತೃತ್ವದಲ್ಲಿ ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಹಿಂದ ಹೆಸರಲ್ಲಿ ಅಸಮಾನತೆ ಬಿತ್ತುತ್ತಿರುವ ಮತ್ತು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಗುರಿಯಾಗಿರಿಸಿ ಸರ್ಕಾರಿ ಯಂತ್ರದ ದುರುಪಯೋಗ ಮಾಡುತ್ತಿರುವ ಸಿದ್ದರಾಮಯ್ಯನವರ ತಂತ್ರ ಫಲಿಸುವುದಿಲ್ಲ ಎಂದರು.
ಪಕ್ಷ ಸಂಘಟನೆಯ ಮಹತ್ವ ಒತ್ತಿ ಹೇಳಿದ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್, ಈ ಹಿಂದೆ ನಮ್ಮ ಪಕ್ಷ ಒಡೆದು ಮೂರು ಹೋಳಾಗಿತ್ತು. ಆದರೆ, ಈಗ ಎಲ್ಲರೂ ಒಂದಾಗಿದ್ದೇವೆ. 2008ರ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕೇವಲ 1 ಸೀಟನ್ನು ಮಾತ್ರ ಪಡೆದಿತ್ತು. ಆದ್ರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಕೂಡ ಅದು ಗೆಲ್ಲುವದಿಲ್ಲ ಎಂದರು.
ಇಡೀ ದೇಶದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ಯಾವೊಬ್ಬ ಮಂತ್ರಿಯ ವಿರುದ್ಧವೂ ಭ್ರಷ್ಟಾಚಾರದ ಆರೋಪವಿಲ್ಲ. ಆದರೆ, ರಾಜ್ಯದ ಕಾಂಗ್ರೆಸ್‍ನ ಶಾಸಕರು ಗುತ್ತಿಗೆ ಕೆಲಸ ಹಿಡಿಯುವ ಮೂಲಕ ಪ್ರಗತಿಯನ್ನು ಕಡೆಗಣಿಸಿದ್ದಾರೆ. ಹಿಂದುಳಿದ ಜನರ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಏನನ್ನೂ ಮಾಡದೇ, ಕೇವಲ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಅನ್ನಭಾಗ್ಯ ಯೋಜನೆಗೆ ಮಾಡಲಾಗುತ್ತಿರುವ ಖರ್ಚಿನಲ್ಲಿ ಕೇಂದ್ರ ಸರ್ಕಾರದ ಪಾಲೇ ಹೆಚ್ಚಿದೆ. ಇದನ್ನು ಮುಚ್ಚಿಟ್ಟು, ಅನ್ನಭಾಗ್ಯ ನಮ್ಮ ಯೋಜನೆ ಎಂದು ಸಿದ್ದರಾಮಯ್ಯ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಪ್ರಕಾಶ ಜಾವಡೇಕರ್ ಗೇಲಿ ಮಾಡಿದರು.
ಲಿಂಗಾಯತ ಧರ್ಮದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಈ ಕ್ರಮ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ಈ ಬಾರಿ ಸಚಿವ ಕೆ.ಜೆ. ಜಾರ್ಜ್‍ರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಜಾರ್ಜ್‍ಗೆ ಜೈಲೇ ಗತಿ ಎಂದು ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

Please follow and like us:
error