ಬಜಿ ಮಿರ್ಚಿ ಚಾ ಮಾರಾಟ : ಸಾರಿಗೆ ನೌಕರರ ವಿನೂತನ ಹೋರಾಟ

ಕೊಪ್ಪಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಏಪ್ರಿಲ್ 1ರಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ಸಾರಿಗೆ ನೌಕರರು ಶುಕ್ರವಾರ ಬಸ್ ನಿಲ್ದಾಣದ ಎದುರಿಗೆ ಮಿರ್ಚಿ-ಬಜಿ ಬೋಂಡಾ ಮಾರಾಟ ಮಾಡುವ ಮೂಲಕ ವಿನೂತನ ಹೋರಾಟ ನಡೆಸಿದರು.

ಏಪ್ರಿಲ್ 7ರವರೆಗೆ ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಿರ್ಚಿ-ಚಹಾ ಮಾರಾಟ ಮಾಡುವವರೂ ಸಹ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿಲ್ಲ. ನಿಗಮದ ನೌಕರರ ಪರಿಸ್ಥಿತಿ ಹೊಟೇಲ್ ವ್ಯಾಪಾರಕ್ಕಿಂತಲೂ ಹದಗೆಟ್ಟಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದಿಂದ ಬಜ್ಜಿ ಬೋಂಡಾ ಕಾಫಿ – ಟೀ ವ್ಯಾಪಾರ ಚಳುವಳಿ ಹಮ್ಮಿಕೊಳ್ಳಲಾಗಿದೆ. ಪ್ರಮುಖ ವೃತ್ತ , ಬೀದಿಗಳಲ್ಲಿ ಬೋಂಡಾ ಬಜ್ಜಿ ಕಾಫಿ – ಟೀ ಮಾರುವ ಮೂಲಕ ಸರ್ಕಾರವು ಬೇಡಿಕೆಗಳನ್ನು ಸರಿಯಾಗಿ ಈಡೇರಿಸಿಲ್ಲ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಚಳುವಳಿ ನಡೆಯುತ್ತಿದೆ.

ಈ ಹಿಂದೆ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದಾಗ ಮೂರು ತಿಂಗಳೊಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಸರಕಾರ ಈಗ ಗಡುವು ಮೀರಿದರೂ ಮಾತು ಮರೆತಿದೆ. ಹಾಗಾಗಿ ವಿವಿಧ ರೀತಿಯ ಪ್ರತಿಭಟನೆಗಳನ್ನು ಗುರುವಾರದಿಂದ ಹಮ್ಮಿಕೊಂಡಿದ್ದು, ಇನ್ನೂ ಐದು ದಿನಗಳ ಕಾಲ ಹೋರಾಟ ಮುಂದುವರಿಯಲಿದ್ದು, ಏಪ್ರಿಲ್ 7ರಂದು ಬೃಹತ್ ಹೋರಾಟ ನಡೆಸಲು ನೌಕರರು ನಿರ್ಧರಿಸಿದ್ದಾರೆ ಎಂದು ಪ್ರತಿಭಟನಾನಿರತರು ಸರಕಾರಕ್ಕೆ ಎಚ್ಚರಿಸಿದರು. ಅಧಿಕಾರಿಗಳು ಪ್ರತಿಭಟನೆ ನಡೆಸದಂತೆ ಒತ್ತಡ ಹೇರುತ್ತಿದ್ದಾರೆ.

Please follow and like us:
error