ಪ್ರಜಾಟಿವಿ ಕ್ಯಾಮರಾಮನ್ ಮೇಲೆ ಹಲ್ಲೆ : ಪೋಲಿಸ್ ಕಾನಸ್ಟೇಬಲ್ ವಿರುದ್ದ
ಕ್ರಮಕ್ಕೆ ಆಗ್ರಹ

ಕೊಪ್ಪಳ : ಕರ್ತವ್ಯನಿರತ ಪ್ರಜಾಟಿವಿ ಕ್ಯಾಮರಾಮನ್ ಮುಸ್ತಫಾ ಅಳವಂಡಿ ಮೇಲೆ ಹಲ್ಲೆಯನ್ನು ಖಂಡಿಸಿ, ಹಲ್ಲೆ ಮಾಡಿದ ಪೋಲಿಸ್ ವಿರುದ್ದ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರಿಗೆ ಮನವಿ ಸಲ್ಲಿಸಲಾಯಿತು.


ದಿ. ೨೯-೮-೨೦೨೦ರ ರಾತ್ರಿ ಸುಮಾರು ೧೨ ಗಂಟೆಯ ಸಮಯದಲ್ಲಿ ಅಳವಂಡಿ ಗ್ರಾಮದಲ್ಲಿ ನಡೆಯುತ್ತಿದ್ದ ಮೊಹರಂ ಆಚರಣೆಯ ವಿಡಿಯೋ ಮಾಡುತ್ತಿದ್ದ ನಮ್ಮ ಸಂಘದ ಸದಸ್ಯ ಪ್ರಜಾಟಿವಿ ಕ್ಯಾಮರಾಮನ್ ಮುಸ್ತಫಾ ಮೇಲೆ ಅಳವಂಡಿ ಪೋಲಿಸ್ ಠಾಣೆಯ ಕಾನ್ಸಟೇಬಲ್ ಉಮೇಶ ಎನ್ನುವವರು ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ನಾನು ಮಾಧ್ಯಮದವನು ಎಂದು ಹೇಳಿದರೂ ಕೇಳಿಲ್ಲ. ಅಷ್ಟೇ ಅಲ್ಲದೇ ಸ್ಥಳದಲ್ಲಿದ್ದ ಸ್ಥಳೀಯರು ಸಹ ಅವರು ಮೀಡಿಯಾದವರು ಬಿಡಿ ಎಂದರೂ ಕೇಳದೇ ಅವನು ಪ್ರೆಸ್‌ನವನಾದರೆ ನಾನು ಪೋಲಿಸ್ ಇದ್ದೀನಿ ಎಂದು ದರ್ಪದಿಂದ ಮಾತನಾಡಿದ್ದಾನೆ. ಅಲ್ಲಿ ನಡೆಯುತ್ತಿದ್ದ ಕಾರ್‍ಯಕ್ರಮದ ವಿಡಿಯೋ ಮಾಡುತ್ತಿದ್ದವನ ಮೇಲೆ ವಿನಾಕಾರಣ ಲಾಠಿಯಿಂದ ಪ್ರಹಾರ ಮಾಡಿದ್ದಾನೆ. ಕಾರ್‍ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಯಾವುದೇ ಗಲಾಟೆ ಇರಲಿಲ್ಲ. ಎಲ್ಲವೂ ಶಾಂತಿಯುತವಾಗಿ ನಡೆಯುತ್ತಿತ್ತು
ಈ ಮುಂಚೆಯೂ ಸಹ ಹಲವಾರು ಸಲ ಅಳವಂಡಿ ಪೋಲಿಸ್ ಠಾಣೆಯ ಕೆಲ ಪೋಲಿಸರು ಕ್ಯಾಮರಾಮನ್ ಮುಸ್ತಫಾ ಜೊತೆಗೆ ಅನುಚಿತವಾಗಿ ವರ್ತಿಸಿದ್ದರು. ಇದನ್ನು ಮುಸ್ತಫಾ ಮೇಲಿನ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದರು. ಇದು ಅಳವಂಡಿ ಪೋಲಿಸ್ ಠಾಣೆಯ ಕೆಲ ಪೋಲಿಸ್ ಸಿಬ್ಬಂದಿಗಳಿಗೆ ಗೊತ್ತಾಗಿತ್ತು. ನಂತರ ಅವರು ಮುಂದೆ ಒಂದು ದಿನ ಇವನನ್ನು ಮತ್ತು ಇವರ ಕುಟುಂಬದವರನ್ನು ಯಾವುದಾದರೂ ಕೇಸ್ ನಲ್ಲಿ ಸಿಕ್ಕಿ ಹಾಕಿಸುತ್ತೇವೆ ಎಂದು ಬೇರೆಯವರ ಮುಂದೆ ಹೇಳುವ ಮೂಲಕ ಬೆದರಿಕೆಯನ್ನೂ ಹಾಕಿದ್ಧಾರೆ.ಮುಸ್ತಫಾ ಕಳೆದ ಐದಾರು ವರ್ಷಗಳಿಂದ ಪತ್ರಿಕಾರಂಗದಲ್ಲಿ ಸಕ್ರೀಯನಾಗಿದ್ದಾರೆ. ಸಧ್ಯ ಪ್ರಜಾಟಿವಿಯಲ್ಲಿ ಕ್ಯಾಮರಾಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದು ಅಳವಂಡಿಯ ಗ್ರಾಮದಲ್ಲಿ ಸಾಕಷ್ಟು ಜನರಿಗೆ ಗೊತ್ತಿದೆ. ಅಲ್ಲದೇ ಅಳವಂಡಿ ಪೋಲಿಸ್ ಠಾಣೆಯ ಪ್ರತಿಯೊಬ್ಬರಿಗೂ ಗೊತ್ತಿದೆ. ಹೀಗಿದ್ದಾಗ್ಯೂ ಸಹ ಈ ರೀತಿ ಹಲ್ಲೆ ಮಾಡಿರುವ ಪೋಲಿಸ್ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು. .ಜಿಲ್ಲೆಯಲ್ಲಿ ಪದೇ ಪದೇ ಪತ್ರಕರ್ತರ ಮೇಲೆ ನಡೆಯುತ್ತಿರುವ ಇಂತಹ ದರ್ಪ ದೌರ್ಜ್ಯನ್ಯಗಳನ್ನು ತಡೆಗಟ್ಟಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಜಿ.ಎಸ್.ಗೋನಾಳ, ರಾಜ್ಯ ಸಮಿತಿ ನಾಮನಿರ್ದೇಶಿತ ಸದಸ್ಯ ಹೆಚ್.ಎಸ್.ಹರೀಶ್, ಜಿಲ್ಲಾ ಖಜಾಂಚಿ ಸಿರಾಜ್ ಬಿಸರಳ್ಳಿ, ಹಿರಿಯ ಪತ್ರಕರ್ತರಾದ ಮೌಲಾಹುಸೇನ್ ಬುಲ್ಡಿಯಾರ್, ಶಿವರಾಜ್ ನುಗಡೋಣಿ, ಖಲೀಲ್ ಉಡೇವು, ಶಿವಕುಮಾರ್ ಹಿರೇಮಠ, ರವಿ ಬಡಿಗೇರ, ಎಚ್.ವಿ.ರಾಜಾಬಕ್ಷಿ, ಫಕೀರಪ್ಪ ಗೋಟೂರು, ಅನೀಲ್ ಬಾಚನಹಳ್ಳಿ, ಪ್ರಭು ಗಾಳಿ, ಮುಸ್ತಫಾ ಅಳವಂಡಿ ಉಪಸ್ಥಿತರಿದ್ದರು

Please follow and like us:
error