ಪೋಲಿಸರ ದೌರ್ಜನ್ಯ, ಅಮಾನವೀಯ ವರ್ತನೆ : ಭೀಮಣ್ಣನಿಗೆ ನ್ಯಾಯ ಕೊಡಿಸುವವರು ಯಾರು ? 

– ಕುಮಾರ್ ಬುರಡಿಕಟ್ಟಿ
​ಮೊದಲು ರೇಪ್ ಮಾಡಿ, ಆಮೇಲೆ ‘ನಿನ್ನನ್ನು ಮದುವೆ ಆಗ್ತೀನಿ, ಕೇಸ್ ವಾಪಾಸ್ ತಗೋ’ ಎನ್ನುವ ರೇಪಿಸ್ಟನಿಗೂ ಮತ್ತು ಮೊದಲು ಮನಸೋಯಿಚ್ಛೆ ದೈಹಿಕವಾಗಿ ಹಲ್ಲೆ ಮಾಡಿ, ಆಮೇಲೆ ನಿನ್ನ ಆಸ್ಪತ್ರೆಯ ಖರ್ಚನ್ನು ನಾವೇ ನೋಡಿಕೊಳ್ತೀವಿ, ಇದನ್ನೆಲ್ಲಾ ದೊಡ್ಡ ಇಶ್ಯೂ ಮಾಡಬೇಡ’ ಎನ್ನುವ ಪೊಲೀಸರಿಗೂ ಏನಾದರೂ ವ್ಯತ್ಯಾಸ ಇದೆಯೆ?

—————————————

ರಾಯಚೂರಿನ ಸುರಕ್ಷಾ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಈ ಯುವಕನ ಹೆಸರು ಭೀಮಣ್ಣ. ವಯಸ್ಸು ಇಪ್ಪತ್ನಾಲ್ಕು ವರ್ಷ. ಬೇಡ (ನಾಯಕ) ಸಮುದಾಯಕ್ಕೆ ಸೇರಿದ ಭೀಮಣ್ಣನದು ತುಂಬು ಕುಟಂಬ. ಅಪ್ಪ, ಅಮ್ಮ, ಹೆಂಡತಿ, ಇಬ್ಬರು ಮಕ್ಕಳು ಮತ್ತು ಒಬ್ಬ ತಂಗಿ. ನಾಲ್ಕು ಎಕರೆ ಒಣಭೂಮಿಯಲ್ಲಿ ಹತ್ತಿ, ತೊಗರಿ, ಜೋಳ ಬೆಳೆದುಕೊಂಡು, ಹೊಲದಲ್ಲಿ ಕೆಲಸ ಇಲ್ಲದಿದ್ದಾಗ ಕೂಲಿನಾಲಿ ಮಾಡುತ್ತಾ, ಹಮಾಲಿ ಮಾಡುತ್ತಾ ಬದುಕುವ ಶ್ರಮಿಕ ಕುಟುಂಬ. ಅತಿಯಾಸೆ ಪಡದೆ, ಮೋಸ ವಂಚನೆ ಮಾಡದೆ, ಯಾರ ತಂಟೆಗೂ ಹೋಗದೇ ತಾನಾಯಿತು, ತನ್ನ ಕೆಲಸವಾಯಿತು ಎನ್ನುತ್ತಾ ಕಷ್ಟಪಟ್ಟು ದುಡಿದು ಇಡೀ ಕುಟುಂಬವನ್ನು ಸಾಕುತ್ತಿರುವ ಯುವಕ ಭೀಮಣ್ಣನ ಬಗ್ಗೆ ಊರಿನ ಹಿರಿಯರಿಗೂ ಅಪಾರ ಗೌರವ, ಮೆಚ್ಚುಗೆ. 
ಒಳ್ಳೆಯವರಿಗೇ ಕಷ್ಟಗಳು ಹೆಚ್ಚು ಬರುತ್ತವೆ ಎಂಬ ಮಾತು ಯಾರ ವಿಷಯದಲ್ಲಿ ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ, ಭೀಮಣ್ಣನ ವಿಷಯದಲ್ಲಂತೂ ಅದು ಅಕ್ಷರಶಃ ಸತ್ಯ. ಈಗ್ಗೆ ಐದು ತಿಂಗಳ ಹಿಂದೆ ಹುಟ್ಟಿದ ಎರಡನೇ ಮಗು ಸಮಸ್ಯೆಯೊಂದಿಗೇ ಹುಟ್ಟಿತು. ರಾಯಚೂರಿನ ಹೊರವಲಯದ ನವೋದಯ ಖಾಸಗಿ ಆಸ್ಪತ್ರೆಯಲ್ಲಿ ಹುಟ್ಟಿದ ಆ ಗಂಡುಕೂಸು ಹುಟ್ಟಿದಾಗಿನಿಂದ ಸುಮಾರು ನಲವತ್ತು ದಿನ ಅದೇ ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು. ಭೀಮಣ್ಣ ಇಷ್ಟು ವರ್ಷ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವೆಲ್ಲಾ ಖಾಲಿಯಾಗಿ, ಸಾಲಸೋಲ ಮಾಡಿಕೊಂಡರೂ ಮಗು ಹುಷಾರಾಗುವ ಲಕ್ಷಣ ಕಾಣಲಿಲ್ಲ. ಖಾಸಗೀ ಆಸ್ಪತ್ರೆಯಲ್ಲೇ ಇದ್ದರೆ ಇರುವ ಹೊಲಮನೆಯನ್ನೂ ಮಾರಬೇಕಾದೀತು ಎಂದುಕೊಂಡ ಆತ ಕೊನೆಗೆ ಸರ್ಕಾರಿ ಒಡೆತನದ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ರಿಮ್ಸ್) ಮಗುವನ್ನು ಸ್ಥಳಾಂತರಿಸಿದ. ಅಲ್ಲಿಯೂ ಎರಡು-ಮೂರು ವಾರಗಳ ಚಿಕಿತ್ಸೆಯ ನಂತರ ಮಗುವನ್ನು ಊರಿಗೆ ಕರೆದುಕೊಂಡು ಹೋದ. ಕೆಲವೇ ದಿನಗಳಲ್ಲಿ ಮಗು ತೀರಿಕೊಂಡಿತು.
ಮಗುವಿನ ಸಾವಿನ ದುಃದಿಂದ ಹೊರಬರಲು ಹರಸಾಹಸ ಮಾಡುತ್ತಿದ್ದ ಭೀಮಣ್ಣ ಮತ್ತು ಆತನ ಕುಟುಂಬಕ್ಕೆ ಇನ್ನೊಂದು ಆಘಾತ ಕಾದಿತ್ತು. ಸಮೀಪದಲ್ಲಿರುವ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠಕ್ಕೆ ಹೋಗಿ ಬಂದರೆ ಸ್ವಲ್ಪ ಮನಸ್ಸಿಗೆ ನೆಮ್ಮದಿಯಾದರೂ ಸಿಕ್ಕೀತು ಎಂದು ಭೀಮಣ್ಣ ಮಗು ತೀರಿಕೊಂಡ ಒಂಬತ್ತನೇ ದಿನಕ್ಕೆ ಮಂತ್ರಾಲಯದತ್ತ ಮುಖ ಮಾಡಿದ್ದ. ಆತ ಮಂತ್ರಾಲಯ ಮುಟ್ಟುವ ಮೊದಲೇ ರಿಂಗಣಿಸಿದ ಫೋನು ಆತನ ತಂದೆಯ ನಿಧನದ ವಾರ್ತೆಯನ್ನು ಹೊತ್ತು ತಂದಿತ್ತು. ಅರ್ಧ ದಾರಿಯಿಂದಲೇ ಹಿಂತಿರುಗಿದ. ಮಗುವಿನ ಆಸ್ಪತ್ರೆ, ಶವಸಂಸ್ಕಾರಕ್ಕೆ ಸಾಕಷ್ಟು ಖರ್ಚಾಗಿ ದೊಡ್ಡ ಪ್ರಮಾಣದ ಸಾಲದ ಹೊರೆಯೂ ಹೆಗಲೇರಿದ್ದರಿಂದ ಭೀಮಣ್ಣ ಜೇಬು ಅಕ್ಷರಶಃ ಖಾಲಿಯಾಗಿತ್ತು. ತಂದೆಯ ಶವಸಂಸ್ಕಾರಕ್ಕೆ ಚಿಕ್ಕಪ್ಪನಾದ ತಿಮ್ಮಪ್ಪ ಹತ್ತು ಸಾವಿರ ರೂಪಾಯಿ ತಂದುಕೊಟ್ಟಿದ್ದರಿಂದ ಅಪ್ಪನನ್ನು ಮಣ್ಣು ಮಾಡಲು ಆತನಿಗೆ ಸಾಧ್ಯವಾಯಿತು. 
ಅಪ್ಪ ತೀರಿಕೊಂಡ ಕೆಲವೇ ದಿನಗಳಲ್ಲಿ ಮಾಡಬೇಕಾದ ಕೆಲವು ಆಚರಣೆಗಳಿಗಾಗಿ ಆತ ಪಕ್ಕದ ತೆಲಂಗಾಣದಲ್ಲಿದ್ದ ತನ್ನ ಸೋದರ ಮಾವನನ್ನು 5000 ರೂಪಾಯಿ ಕೇಳಿದ. ಆದರೆ, ಆ ಹಣವನ್ನು ತರಲು ಆತ ತೆಲಂಗಾಣದಲ್ಲಿ ಕರ್ನಾಟಕದ ಗಡಿಯಲ್ಲಿರುವ ಬೆಳಗೆರಾ ಊರಿಗೆ ಹೋಗಬೇಕಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ತನ್ನ ಸಂಬಂಧಿಯೂ ಆದ ಹುಲಿಗೆಮ್ಮ ಎಂಬ ಮಹಿಳೆಯೊಬ್ಬಳು ತಾವೇ ನೆರವಾಗುವುದಾಗಿ ಹೇಳಿದಳು. ಸಂಬಂಧದಲ್ಲಿ ಅವಳು ಭೀಮಣ್ಣನಿಗೆ ಚಿಕ್ಕಮ್ಮ ಆಗಬೇಕು. ಅದು ಸರಿಯೆನ್ನಿಸಿದ್ದರಿಂದ ಭೀಮಣ್ಣ ಮರುದಿನ ಹುಲಿಗೆಮ್ಮ ಮತ್ತು ಆಕೆಯ ಗಂಡ ಬಾರ್ ಆಂಜನೇಯ ಇಬ್ಬರೂ ಇರುವಾಗಲೇ ಅವರ ಮನೆಗೆ ಹೋಗಿ ಅವರಿಂದ ಮೂರು ಸಾವಿರ ರೂಪಾಯಿಗಳನ್ನು ಅಪ್ಪನ ಕಾರ್ಯಕ್ಕೆ ಸಾಲವಾಗಿ ಪಡೆದುಕೊಂಡು ಬಂದ. 
ಅದಾಗಿ ಸುಮಾರು ಇಪ್ಪತ್ತೈದು ದಿನ ಆದ ಮೇಲೆ, ತಮ್ಮ ಮನೆಯಲ್ಲಿ 55,000 ಸಾವಿರ ರೂಪಾಯಿ ಕಳ್ಳತನವಾಗಿದೆ ಎಂದು ಹುಲಿಗೆಮ್ಮ ಮತ್ತು ಬಾರ್ ಆಂಜನೇಯ ದೂರಲಾರಂಭಿಸಿದರು. ಕಳ್ಳತನ ಮಾಡಿದ್ದು ಭೀಮಣ್ಣನೇ ಇರಬೇಕು ಎಂಬುದು ಅವರಿಗಿದ್ದ ಬಲವಾದ ಅನುಮಾನ. ಭೀಮಣ್ಣ ತಮ್ಮ ಮನೆಯಿಂದ ಹಣ ಕದ್ದು ತನ್ನ ಸಾಲ ತೀರಿಸಿರಬೇಕು ಎಂಬ ಅನುಮಾನ ಮೂಡಿದ್ದರಿಂದ ಅವನು ಯಾರ ಯಾರ ಬಳಿ ಸಾಲ ಮಾಡಿದ್ದನೋ ಅವರೆಲ್ಲರಿಗೆ ಫೋನ್ ಮಾಡಿ ಭೀಮಣ್ಣ ಏನಾದರೂ ಸಾಲ ತೀರಿಸಿದ್ದಾನೆಯೇ ಎಂದು ವಿಚಾರಿಸಿದ್ದಾರೆ. “ಅಯ್ಯೋ, ಮಗನನ್ನು, ಅಪ್ಪನನ್ನು ಕಳೆದುಕೊಂಡ ದುಃಖದಲ್ಲಿದ್ದಾನೆ. ಪಾಪ ಅವನ ಪರಿಸ್ಥಿತಿ ಅವನಿಗೆ ಗೊತ್ತು. ಸಾಲ ತೀರಿಸೋಕೆ ಪಾಪ ಅವನ ಹತ್ರ ಹಣವಾದ್ರೂ ಎಲ್ಲಿದೆ? ಇಂಥ ಸಂದರ್ಭದಲ್ಲಿ ಸಾಲ ವಾಪಾಸು ಕೊಡು ಅಂತ ನಾವೂ ಕೇಳಿಲ್ಲ”ಎಂಬರ್ಥದಲ್ಲಿ ಅವರೆಲ್ಲಾ ಉತ್ತರಿಸಿದ್ದಾರೆ. ಭೀಮಣ್ಣ ಸಾಲ ತೀರಿಸಿಲ್ಲ ಎಂಬುದು ಖಾತ್ರಿಯಾದರೂ ಆತನ ಮೇಲಿನ ಅನುಮಾನ ಮಾತ್ರ ಹುಲಿಗೆಮ್ಮ ಮತ್ತು ಬಾರ್ ಆಂಜನೇಯರಿಗೆ ಹೋಗಿರಲಿಲ್ಲ. ತನಗೆ ಸಾಲ ಕೊಟ್ಟವರಲ್ಲಿ ಚಿಕ್ಕಪ್ಪನಾದ ಬಾರ್ ಆಂಜನೇಯ ಸಾಲ ಮರುಪಾವತಿಯ ಬಗ್ಗೆ ವಿಚಾರಿಸಿದ್ದು ಭೀಮಣ್ಣಿಗೆ ಗೊತ್ತಾಗಿದೆ. ಮರುದಿನವೇ ಚಿಕ್ಕಪ್ಪನ ಮನೆಗೆ ಹೋಗಿ ವಿಚಾರಿಸಿದ್ದಾನೆ. “ನೀನು ನಮಗೆ ಮಗನಿದ್ದಂತೆ. ನಮಗೆ ನಿನ್ನ ಮೇಲೆ ಅನುಮಾನವಿಲ್ಲ. ಮನೆಗೆ ಬಂದುಹೋದವರ ಮೇಲೆ ಕಳ್ಳತನದ ಆರೋಪ ಹೊರಿಸಲಾಗುತ್ತದೆಯೇ?” ಎಂದು ಭೀಮಣ್ಣನನ್ನು ವಾಪಾಸು ಕಳಿಸಿದ್ದಾರೆ ಬಾರ್ ಆಂಜನೇಯ ಮತ್ತು ಹುಲಿಗೆಮ್ಮ. 
ಇದಾದ ನಾಲ್ಕೈದು ದಿನಕ್ಕೆ ಬಾರ್ ಆಂಜನೇಯ ಇಡಪನೂರು ಪೊಲೀಸ್ ಸ್ಟೇಷನ್ನಿಗೆ ಹೋಗಿ ತನ್ನ ಮನೆಯಲ್ಲಿ 55,000 ರೂಪಾಯಿ ಕಳ್ಳತನವಾಗಿರುವುದಾಗಿಯೂ, ಕಳ್ಳತನವನ್ನು ಭೀಮಣ್ಣನೇ ಮಾಡಿದ್ದಾಗಿಯೂ ದೂರು ಕೊಟ್ಟಿದ್ದಾರೆ. ಪೊಲೀಸರು ಸಹಜವಾಗಿ ಭೀಮಣ್ಣನಿಗೆ ಫೋನ್ ಮಾಡಿ ತಮಗೆ ಬಂದಿರುವ ದೂರಿನ ಸಾರಾಂಶ ಹೇಳಿ ವಿಚಾರಣೆಗೆ ಹಾಜರಾಗಲು ಹೇಳಿದ್ದಾರೆ. ದಿಗ್ಭ್ರಾಂತನಾದ ಭೀಮಣ್ಣ ಸಂಬಂಧಿಕರಿಗೆ, ಊರಿನ ಹಿರಿಯರಿಗೆ ವಿಷಯ ತಿಳಿಸಿ ಅವರನ್ನು ಕರೆದುಕೊಂಡೇ ಪೊಲೀಸ್ ಸ್ಟೇಷನ್ನಿಗೆ ಹೋಗಿದ್ದಾನೆ. ಪೊಲೀಸ್ ಸ್ಟೇಷನ್ನಿನಲ್ಲಿ ಊರಿನ ಹಿರಿಯರೆಲ್ಲರೂ ಒಕ್ಕೊರಲಿನಿಂದ ಭೀಮಣ್ಣನ ಪರ ನಿಂತಿದ್ದಾರೆ. “ಆ ಹುಡುಗನನ್ನು ಹುಟ್ಟಿದಾಗಿನಿಂದಲೂ ನಾವು ನೋಡಿದ್ದೇವೆ. ಆತ ಕಳ್ಳತನ ಮಾಡುತ್ತಾನೆಂಬುದು ನಂಬೋದಕ್ಕೇ ಸಾಧ್ಯವಿಲ್ಲ. ಆ ಹುಡುಗ ಕಷ್ಟಪಟ್ಟು ದುಡಿದು ಬದುಕುತ್ತಾನೆ. ಅವನ ಮೇಲೆ ಇಂತಹ ಆರೋಪ ಎಲ್ಲಾ ಹೊರಿಸಬೇಡಿ…” ಅಂತೆಲ್ಲಾ ಭೀಮಣ್ಣನ ಪರವಾಗಿ ಗಟ್ಟಿಯಾಗಿ, ಒಕ್ಕೊರಲಿನಿಂದ ಮಾತಾಡಿದ್ದಾರೆ. ಜೊತೆಗೆ ಈ ವಿಷಯವನ್ನು ಊರಿನಲ್ಲೇ ಬಗೆಹರಿಸಿಕೊಳ್ಳುವುದಾಗಿ ಪೊಲೀಸರಿಗೆ ಹೇಳಿದ್ದಾರೆ. 
ಇಂತಹ ಸಮಸ್ಯೆಗಳು ಬಂದಾಗ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಈ ಊರಿನ ಜನ ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ, ಯಾರ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿರುತ್ತದೆಯೋ ಆತ ಮತ್ತು ಆತನ ಸಂಬಂಧಿಗಳು ಅಥವಾ ಆತನ ಪರವಾಗಿರುವವರು ಕಳ್ಳತನವಾದ ಮೊತ್ತದ ಹಣವನ್ನು ತಮ್ಮ ತಮ್ಮ ಕೈಯಿಂದ ಹಾಕಿ ಊರಿನ ಮಾರೆಮ್ಮನ ದೇವಸ್ಥಾನದಲ್ಲಿ ಇಡಬೇಕು. ತನ್ನ ಮನೆಯಲ್ಲಿ/ಹೊಲದಲ್ಲಿ ಕಳ್ಳತನ ಆಗಿದೆ ಎಂದು ಎಂದು ಆರೋಪಿಸಿದ ವ್ಯಕ್ತಿಯು ಮಾರೆಮ್ಮನಿಗೆ ನಮಸ್ಕರಿಸಿ ಆ ಮೊತ್ತವನ್ನು ತೆಗೆದುಕೊಂಡು ಹೋಗಬೇಕು. ಕಳ್ಳತನವಾಗದಿದ್ದರೂ ಕಳ್ಳತನವಾಗಿದೆ ಎಂದು ಆರೋಪಿಸುವ ಮಂದಿ ಸಾಮಾನ್ಯವಾಗಿ ಇಂತಹ ಅಗ್ನಿಪರೀಕ್ಷೆಗೆ ಒಳಗಾಗುವುದಕ್ಕೆ ಮುಂದಾಗುವುದಿಲ್ಲ. ಊರಿನ ಮಾರೆಮ್ಮ ಎಂದರೆ ಎಲ್ಲರಿಗೂ ಭಯ. ಈ ವಿಧಾನವನ್ನು ಆವತ್ತು ಊರಿನ ಹಿರಿಯರು ಇಡಪನೂರು ಪೊಲೀಸರಿಗೆ ವಿವರಿಸಿದ್ದಾರೆ. ಇದಕ್ಕೆ ಇಡಪನೂರು ಪೊಲೀಸರೂ ಸಮ್ಮತಿ ಸೂಚಿಸಿ ಊರಿನಲ್ಲೇ ಇದನ್ನು ಬಗೆಹರಿಸಿಕೊಳ್ಳಿ ಎಂದು ಊರಿನವರನ್ನು ವಾಪಾಸು ಕಳಿಸಿಕೊಟ್ಟಿದ್ದಾರೆ. 
ಆ ಪ್ರಕಾರ ಭೀಮಣ್ಣ ಈ ಅಗ್ನಿಪರೀಕ್ಷೆಗೆ ಸಿದ್ಧನಾದ. ಆದರೆ, ಮಾರೆಮ್ಮನ ಸನ್ನಿಧಿಯಲ್ಲಿ ಇಡುವುದಕ್ಕೆ ಅವನ ಬಳಿ 55,000 ಸಾವಿರ ರೂಪಾಯಿ ಹಣ ಇರಲಿಲ್ಲ. ಆಗ ನೆರವಿಗೆ ಬಂದ ಆತನ ಇನ್ನೊಬ್ಬ ಚಿಕ್ಕಪ್ಪ ತಿಮ್ಮಪ್ಪ 25,000 ರೂಪಾಯಿ, ಆತನಿಗೆ ಹೆಣ್ಣುಕೊಟ್ಟ ಮಾವ 20,000 ರೂಪಾಯಿ ಹಾಗೂ ಆತನ ಸೋದರ ಮಾವ 10,000 ರೂಪಾಯಿ ಜೋಡಿಸಿ ಕೊಟ್ಟಿದ್ದಾರೆ. ಭೀಮಣ್ಣ ಬೆಳಿಗ್ಗೆ ಸ್ನಾನ ಮಾಡಿ, ಮಡಿ ಬಟ್ಟೆ ಹಾಕಿಕೊಂಡು, ಮಾರೆಮ್ಮನಿಗೆ ಪೂಜೆ ಮಾಡಿ 55,000 ರೂಪಾಯಿಯನ್ನು ಊರ ಹಿರಿಯರ ಸಮ್ಮುಖದಲ್ಲಿ ಮಾರೆಮ್ಮನ ಸನ್ನಿಧಿಯಲ್ಲಿ ಇಟ್ಟು ನಿಂತ. ಆದರೆ, ಆ ಹಣವನ್ನು ಎತ್ತಿಕೊಂಡು ಬರುವುದಕ್ಕೆ ಕಳ್ಳತನ ಆರೋಪ ಹೊರಿಸಿದ ಬಾರ್ ಆಂಜನೇಯ ಸಿದ್ಧನಾಗಲಿಲ್ಲ. ಮಾರೆಮ್ಮನ ಹೆದರಿಕೆಯಿಂದಲೋ ಏನೋ ಆತ ಒಟ್ಟಿನಲ್ಲಿ ಹಣ ತೆಗೆದುಕೊಳ್ಳಲು ನಿರಾಕರಿಸಿ ಅಲ್ಲಿಂದ ಹೊರಟುಹೋದ. ಊರ ಹಿರಿಯರ ನಿರ್ಣಯದಂತೆ ಆ ಹಣವನ್ನು ಭೀಮಣ್ಣನೇ ಎತ್ತಿಕೊಂಡು ಯಾರ್ಯಾರು ಹಣ ಕೊಟ್ಟಿದ್ದರೋ ಅವರಿಗೆ ಅವರ ಹಣವನ್ನು ವಾಪಾಸು ಕೊಟ್ಟ. 
ಇದಾದ ಒಂದು ತಿಂಗಳಾದ ಮೇಲೆ ಬಾರ್ ಆಂಜನೇಯ ಮತ್ತೆ ಇಡಪನೂರು ಪೊಲೀಸ್ ಸ್ಟೇಷನ್ನಿಗೆ ಹೋಗಿ ಭೀಮಣ್ಣನ ವಿರುದ್ಧ ಅದೇ ಕಳ್ಳತನದ ಆರೋಪ ಹೊರಿಸಿದ. ಪೊಲೀಸರು ಮತ್ತೆ ಭೀಮಣ್ಣನಿಗೆ ಫೋನ್ ಮಾಡಿ ಠಾಣೆಗೆ ಹಾಜರಾಗಲು ಸೂಚಿಸಿದರು. “ಪದೇ ಪದೇ ಸ್ಟೇಷನ್ನಿಗೆ ಬರೋಕೆ ಆಗಲ್ಲ ಸಾರ್. ಊರಿನ ಹಿರಿಯರೆಲ್ಲಾ ಐದು ಸಾರಿ ಪೊಲೀಸ್ ಸ್ಟೇಷನ್ನಿಗೆ ಬಂದು ನಾನು ಕಳ್ಳತನ ಮಾಡಿಲ್ಲ ಅಂತ ಹೇಳಿದ್ದಾರೆ. ಮತ್ತೆ ಮತ್ತೆ ಅವರನ್ನೆಲ್ಲಾ ಕರೆದುಕೊಂಡು ಬರಲು ಆಗಲ್ಲ. ನೀವು ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಿ” ಎಂಬರ್ಥದಲ್ಲಿ ಭೀಮಣ್ಣ ಪೊಲೀಸರಿಗೆ ಉತ್ತರಿಸಿದ್ದಾನೆ. ಇದು ನಡೆದದ್ದು ಮೊನ್ನೆ ಶುಕ್ರವಾರ (ನವೆಂಬರ್ 1, 2019). 
ಮರುದಿನ, ಅಂದರೆ ನವೆಂಬರ್ 2ನೇ ತಾರೀಖು ಶನಿವಾರ ಬೆಳ್ಳಂಬೆಳಿಗ್ಗೆ 6 ಗಂಟೆಗೆ ಲಿಂಗನಕಾನದೊಡ್ಡಿಗೆ ಸಿವಿಲ್ ಡ್ರೆಸ್ಸಿನಲ್ಲಿ ಬಂದ ಇಡಪನೂರು ಪೊಲೀಸ್ ಸ್ಟೇಷನ್ನಿನ ಪೇದೆ ಶ್ರೀಶೈಲ ತನ್ನ ಬೈಕಿನಲ್ಲಿ ಭೀಮಣ್ಣನನ್ನು ಎತ್ತಾಕಿಕೊಂಡು ಹೋಗಲು ಪ್ರಯತ್ನಿಸಿದರು. ಪೊಲೀಸ್ ಸ್ಟೇಷನ್ನಿಗೆ ಒಬ್ಬನೇ ಹೋಗಲು ಹೆದರಿದ ಭೀಮಣ್ಣ ಊರ ಹಿರಿಯರ ಜೊತೆಗೆ ಬರುವುದಾಗಿ ತಿಳಿಸಿದ್ದಾನೆ. ಆದರೆ, ಅದಕ್ಕೆ ಶ್ರೀಶೈಲ ಒಪ್ಪಲಿಲ್ಲ. ಭೀಮಣ್ಣ ಊರಿನ ಹಿರಿಯರಿಗೆ ಫೋನ್ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಾಗ ಆತನ ಫೋನನ್ನೇ ಕಸಿದುಕೊಂಡರು ಶ್ರೀಶೈಲ. ಇಷ್ಟೆಲ್ಲಾ ನಡೆಯುತ್ತಿದ್ದಾಗಲೇ ಊರಿನ ಜನ ಎಲ್ಲಾ ಸೇರಿಕೊಂಡಿದ್ದರಿಂದ ಯಾರಿಗೂ ತಿಳಿಯದಂತೆ ಭೀಮಣ್ಣನನ್ನು ಎತ್ತಾಕಿಕೊಂಡು ಹೋಗುವ ಶ್ರೀಶೈಲ ಅವರ ಯೋಜನೆ ಸಫಲ ಆಗಲಿಲ್ಲ. ಆದರೂ, “ಕೇವಲ ವಿಚಾರಣೆ ಮಾಡಿ ಕಳಿಸ್ತೀವಿ, ಹೊಡೆಯೋದು, ಬಡಿಯೋದು ಎಲ್ಲಾ ಮಾಡಲ್ಲ” ಎಂಬ ಭರವಸೆಯನ್ನು ಊರಿನ ಹಿರಿಯರಿಗೆ ನೀಡಿದ ಶ್ರೀಶೈಲ ತನ್ನ ಬೈಕಿನ ಮೇಲೆ ಭೀಮಣ್ಣನನ್ನು ಕೂರಿಸಿಕೊಂಡು ಇಡಪನೂರು ಪೊಲೀಸ್ ಸ್ಟೇಷನ್ನಿಗೆ ಕರೆದೊಯ್ದ. ಆತ ಭೀಮಣ್ಣನೊಂದಿಗೆ ಸ್ಟೇಷನ್ ತಲುಪಿದಾಗ ಬೆಳಿಗ್ಗೆ 7.30 ಗಂಟೆ.
ನಿಜ ಹೇಳಬೇಕೆಂದರೆ, ಕಷ್ಟಪಟ್ಟು ದುಡಿದು ಬದುಕುತ್ತಿರುವ, ಎಂದೂ ಯಾರಿಗೂ ಕೇಡನ್ನು ಬಯಸದ, ತಾನಾಯಿತು, ತನ್ನ ಕೆಲಸವಾಯಿತು ಎಂದು ಬದುಕುತ್ತಿದ್ದ ಭೀಮಣ್ಣನ, ತನ್ನ ಹಸುಗೂಸನ್ನು ಕಳೆದುಕೊಂಡು, ತನ್ನ ಹೆತ್ತ ತಂದೆಯನ್ನು ಕಳೆದುಕೊಂಡು ಪರದಾಡುತ್ತಿದ್ದ ಅಮಾಯಕ ಭೀಮಣ್ಣನ ಹಿಂದೆ ಬಿದ್ದ ಪೊಲೀಸರನ್ನು ಊರಿನ ಹಿರಿಯರೂ ನಂಬಲಿಲ್ಲ. ಭೀಮಣ್ಣನನ್ನು ಶ್ರೀಶೈಲ ಬೈಕಿನಲ್ಲಿ ಹತ್ತಿಸಿಕೊಂಡು ಹೋದ ತಕ್ಷಣವೇ ಊರಿನ ಹಿರಿಯರೂ ಇಡಪನೂರು ಪೊಲೀಸ್ ಸ್ಟೇಷನ್ ಕಡೆ ಹೊರಟುನಿಂತರು. 
ಪೊಲೀಸ್ ಸ್ಟೇಷನ್ನಿಗೆ ಬಂದ ಊರಿನ ಹಿರಿಯರ ಜೊತೆ ಮಾತಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾಕೇಶ್ ಯು, “ನಮಗೆ ಭೀಮಣ್ಣ ವಿರುದ್ಧ ಕಳ್ಳತನದ ಕಂಪ್ಲೇಂಟ್ ಬಂದಿದೆ. ಎಫ್ಐಆರ್ ಮಾಡ್ತೇವೆ. ಮುಂದಿನದನ್ನು ಕೋರ್ಟು ವಿಚಾರಣೆ ಮಾಡುತ್ತೆ. ಎಫ್ಐಆರ್ ಮಾಡಿ ಸಂಜೆ ಆರು ಗಂಟೆಗೆ ಭೀಮಣ್ಣನನ್ನು ಬಿಡುಗಡೆ ಮಾಡುತ್ತೇವೆ” ಎಂದು ಹೇಳಿದ್ದಾರೆ. ಹೇಗೂ ಸಂಜೆ ಆರು ಗಂಟೆಗೆ ಭೀಮಣ್ಣನನ್ನು ಬಿಡುತ್ತಾರೆ ಎಂಬ ಭರವಸೆಯೊಂದಿಗೆ ಊರಿನ ಹಿರಿಯರೆಲ್ಲಾ ವಾಪಾಸು ಹೋಗಿದ್ದಾರೆ. ಆದರೂ, ಭೀಮಣ್ಣನ ಚಿಕ್ಕಪ್ಪ ತಿಮ್ಮಪ್ಪ, ಆತನಿಗೆ ಹೆಣ್ಣುಕೊಟ್ಟ ಮಾವ ಬಡೇಸಾಬ್, ಸ್ನೇಹಿತ ದಸ್ತಗೀರ್ಸಾಬ್ ಮತ್ತು ಇಡಪನೂರಿನ ಇನ್ನೊಬ್ಬ ಸ್ನೇಹಿತ – ಒಟ್ಟು ನಾಲ್ಕು ಜನ ಪೊಲೀಸ್ ಸ್ಟೇಷನ್ನಿನಲ್ಲೇ ಇದ್ದಾರೆ. 
ಪೊಲೀಸರು ಭೀಮಣ್ಣನನ್ನು ವಿಚಾರಣೆಗೆ ಒಳಗೆ ಕರೆದೊಯ್ದರು. ಹೊರಗಡೆ ನಿಂತಿದ್ದ ನಾಲ್ವರನ್ನು ಪೊಲೀಸರು ಪೊಲೀಸ್ ಸ್ಟೇಷನ್ನಿನಿಂದ ಹೊರಗೆ ಕಳಿಸಿದ್ದಾರೆ. ಪೊಲೀಸ್ ಸ್ಟೇಷನ್ನಿನ ಆವರಣದಲ್ಲೂ ಇರಕೂಡದೆಂದು ಅವರನ್ನು ರಸ್ತೆಯಾಚೆಗೆ ದಬ್ಬಿದ್ದಾರೆ. ಸಂಜೆ ಆರು ಗಂಟೆಗೆ ಹೇಗೂ ಭೀಮಣ್ಣನನ್ನು ಬಿಡುತ್ತಾರಲ್ಲಾ, ಅವನನ್ನು ಮನಗೆ ಕರೆದುಕೊಂಡು ಹೋದರಾಯಿತು ಅಂತ ಈ ನಾಲ್ವರೂ ರಸ್ತೆಯಾಚೆಗೆ ಕಾಯುತ್ತಾ ಕುಳಿತಿದ್ದಾರೆ. 
ಅತ್ತ ವಿಚಾರಣೆಗೆ ಅಂತ ಭೀಮಣ್ಣನನ್ನು ಕರೆದೊಯ್ದ ಪೊಲೀಸರು ಮಾಡಿದ್ದೇ ಬೇರೆ. ಮೊದಲು ಭೀಮಣ್ಣನ ಚಡ್ಡಿಯನ್ನು ಬಿಟ್ಟು ಉಳಿದೆಲ್ಲಾ ಬಟ್ಟೆ ಬಿಚ್ಚಿ ಬೆತ್ತಲು ಮಾಡಿದರು. ಹಿಟ್ಟಿನ ಗಿರಣಿಯಲ್ಲಿ ಎಂಜಿನ್ ತಿರುಗಿಸಲು ಬಳಸುವ ಬೆಲ್ಟಿನ ಎರಡು ತುಂಡು ಪಟ್ಟಿಗಳನ್ನು, ದಪ್ಪನಾದ ಎರಡು ಬಿದಿರಿನ ಕೋಲುಗಳನ್ನು ತೆಗೆದುಕೊಂಡು ಒಬ್ಬ ಪೊಲೀಸ್ ಪೇದೆ (ಆತನ ಹೆಸರು ಭೀಮಣ್ಣನಿಗೆ ಗೊತ್ತಿಲ್ಲ. ಎದುರು ಬಂದರೆ ಗುರುತಿಸುತ್ತೇನೆ ಎನ್ನುತ್ತಾನೆ) ಭೀಮಣ್ಣನ ಬಳಿ ಬಂದ. ಕೆಲವೇ ಕ್ಷಣಗಳಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾಕೇಶ್ ಕೂಡ ಬಂದ. ಡಾಕೇಶ್ ಕುರ್ಚಿಯಲ್ಲಿ ಕುಳಿತಿದ್ದ, ಆ ಪೇದೆ ಬೆಲ್ಟ್ ಮತ್ತು ಬಿದಿರಿನ ಕೋಲುಗಳಿಂದ ಮನೋಯಿಚ್ಛೆ ಭೀಮಣ್ಣನನ್ನು ಹೊಡೆಯಲಾರಂಭಿಸಿದ. ಅಸಹಾಯಕ ಭೀಮಣ್ಣ ಆ ಇಬ್ಬರೂ ಪೊಲೀಸ್ ಅಧಿಕಾರಿಗಳ ಕಾಲು ಹಿಡಿದು ಬೇಡಿಕೊಂಡ. ತಾನು ರೊಕ್ಕ ಕದ್ದಿಲ್ಲ ಎಂದು ಗೋಗರೆದ. ಆದರೂ ಪೊಲೀಸರ ಮನಸು ಕರಗಲಿಲ್ಲ. ಆ ಪೇದೆ ಸುಮಾರು 25-30 ನಿಮಿಷ ಮನಸೋಯಿಚ್ಛೆ ಹೊಡೆದು ಸುಸ್ತಾದ ಮೇಲೂ ಭೀಮಣ್ಣ ಮಾತ್ರ ತಾನು ಕಳ್ಳತನ ಮಾಡಿಲ್ಲ ಎಂದೇ ಅಳುತ್ತಾ, ಕೈಕಾಲು ಹಿಡಿಯುತ್ತಾ ಗೋಗರೆಯುತ್ತಿದ್ದ. ಹೊಡೆಯುತ್ತಿದ್ದ ಪೇದೆಯ ಕಾಲು ಹಿಡಿದುಕೊಂಡು, “ನಾನು ರೊಕ್ಕ ಕದ್ದಿಲ್ಲ, ನನಗ್ಯಾಕೆ ಹೊಡಿತ್ತಿದ್ದೀರಿ. ನೀವು ಹೀಗೆ ಹೊಡೆದರೆ ಸತ್ತು ಹೋಗುತ್ತೇನೆ. ನನ್ನ ಹೆಂಡತಿ, ಮಗು, ಅಮ್ಮನ್ನನು ಯಾರು ಸಾಕ್ತಾರೆ?” ಅಂತೆಲ್ಲಾ ಗೋಗರೆದ. “ನನ್ನೇನು ಕೇಳ್ತೀಯಾ? ಸಾಬ್ ಕೊ ಬೋಲೋ” ಅಂತ ಹೊಡೆಯುತ್ತಿದ್ದ ಪೇದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾಕೇಶ್ ಕಡೆ ಕೈತೋರಿಸುತ್ತಲೇ ಹೊಡೆಯುವುದನ್ನು ಮುಂದುವರೆಸಿದ.
ನಂತರ ಎದ್ದು ಬಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾಕೇಶ್. “ಇವನು ಈ ಸರಳ ವಿಚಾರಣೆಯಿಂದ ಬಾಯಿಬಿಡುವ ಮನುಷ್ಯ ಅಲ್ಲ. ಇವನಿಗೆ ಸ್ಪೆಷಲ್ ಟ್ರೀಟ್ಮೆಂಟ್ ಬೇಕು,” ಎನ್ನುತ್ತಾ ಗಿರಣಿಯ ಬೆಲ್ಟು, ಬಿದಿರಿನ ಕಟ್ಟಿಗೆಯನ್ನು ಕೈಗೆತ್ತಿಕೊಂಡು ಭೀಮಣ್ಣನಿಗೆ ಹೊಡೆಯಲಾರಂಭಿಸಿದ. ಕೈ, ಕಾಲು, ಬೆನ್ನು, ಕುಂಡೆ – ಮನಸ್ಸಿಗೆ ಬಂದ ಕಡೆ ಬಾರಿಸುತ್ತಲೇ ಹೋದ. ಆಗಲೂ ಭೀಮಣ್ಣನದು ಒಂದೇ ಮಾತು: “ಸಾರ್ ನಾನು ಕದ್ದಿಲ್ಲರಿ… ನಮ್ಮೂರ ಮಾರೆಮ್ಮನ ಆಣೆ, ನಾನು ಕದ್ದಿಲ್ಲರಿ…”. 
ಹಠಕ್ಕೆ ಬಿದ್ದ ಡಾಕೇಶ ಹೇಗಾದರೂ ಮಾಡಿ ಭೀಮಣ್ಣನಿಂದ ಕದ್ದಿರುವ ತಪ್ಪೊಪ್ಪಿಗೆ ಮಾಡಿಸಿಕೊಳ್ಳಬೇಕಲ್ಲ? ಮತ್ತಷ್ಟು ಚಿತ್ರಹಿಂಸೆ, ದೌರ್ಜನ್ಯ ಮುಂದುವರೆಸಿದ. ಭೀಮಣ್ಣ ಮಾತ್ರ ತಾನು ಕದ್ದಿದ್ದೇನೆಂದು ಒಪ್ಪಿಕೊಳ್ಳಲಿಲ್ಲ. ನಂತರ, ಭೀಮಣ್ಣನನ್ನು ಗೋಡೆಗೆ ಅಭಿಮುಖವಾಗಿ ಒರಗಿಸಿ, ಕೈಗಳನ್ನು ಮೇಲೆ ಎತ್ತಿ ನಿಲ್ಲುವಂತೆ ಹೇಳಿ, ಡಾಕೇಶ್ ಮತ್ತು ಆ ಪೇದೆ ಇಬ್ಬರೂ ಬಿದಿರಿನ ಬಡಿಗೆ ತೆದುಕೊಂಡು ಭೀಮಣ್ಣ ಕಾಲು, ಪಾದ, ಕುಂಡಿ, ಬೆನ್ನುಗಳಿಗೆ ಯದ್ವಾತದ್ವಾ ಹೊಡೆದರು. ಆ ಹೊಡೆತ ತಾಳಲಾರದೇ ಭೀಮಣ್ಣ ನೆಲಕ್ಕುರುಳಿದ. ಬೆತ್ತಲೆಯಾಗಿದ್ದ ಅವನನ್ನು ಮಕಾಡೆ ಮಲಗಿಸಿದ ಈ ಇಬ್ಬರು ಪೊಲೀಸ್ ಅಧಿಕಾರಿಗಳು ಅವನ ಎರಡೂ ಅಂಗೈಗಳನ್ನು ನೆಲಕ್ಕೆ ಅಭಿಮುಖವಾಗಿ ಇಟ್ಟು ತಮ್ಮ ಬೂಟುಗಾಲುಗಳನ್ನು ಅವುಗಳ ಮೇಲಿಟ್ಟು ತಮ್ಮೆಲ್ಲಾ ಶಕ್ತಿ ಬಳಸಿ ಅವನ ಬೆರಳುಗಳನ್ನು ಪುಡಿಮಾಡುವುದಕ್ಕೆ ಶುರುಮಾಡಿದರು. ಒಬ್ಬರು ತಮ್ಮ ಬೂಟುಗಾಲುಗಳಿಂದ ಭೀಮಣ್ಣನ ಕೈಬೆರಳುಗಳನ್ನು ಕ್ರಶ್ ಮಾಡುತ್ತಿದ್ದರೆ ಇನ್ನೊಬ್ಬರು ಬಡಿಗೆಯಿಂದ ಅವನ ಬೆನ್ನು, ಕುಂಡಿ, ತೊಡೆ, ಮೀನುಖಂಡ, ಪಾದಗಳನ್ನು ತನ್ನೆಲ್ಲಾ ಶಕ್ತಿಬಳಸಿ ಥಳಿಸುತ್ತಿದ್ದ. ಈ ದೌರ್ಜನ್ಯಗಳಿಂದ ನಿಸ್ತೇಜನಾಗಿ ಇನ್ನೇನು ಸತ್ತೇ ಹೋಗುತ್ತೇನೆ ಎಂಬ ಸ್ಥಿತಿಗೆ ಬಂದ ಭೀಮಣ್ಣ ಬಳಲಿ ಬಾಯಾರಿ ನೀರು ಕೇಳಿದ. ಕನಿಷ್ಠ ನೀರನ್ನೂ ಆ ಇಬ್ಬರು ಅಧಿಕಾರಿಗಳು ಕೊಡಲಿಲ್ಲ. 
ಈ ರೀತಿಯಲ್ಲಿ ಸುಮಾರು 50 ನಿಮಿಷಗಳ ಚಿತ್ರಹಿಂಸೆಯನ್ನು ಅನುಭವಿಸಿದ ಭೀಮಣ್ಣನಿಗೆ ಬದುಕುಳಿಯುವ ಆಸೆ ಹೊರಟುಹೋಯಿತು. ತಾನು ಇನ್ನೇನು ಕೆಲವೇ ನಿಮಿಷಗಳಲ್ಲಿ ಸಾಯಲಿದ್ದೇನೆ ಎಂದುಕೊಂಡ. ಕಣ್ಣು ಮಂಜಾಗತೊಡಗಿತು. ನೆಲಕ್ಕುರುಳಿದ. 
ದೌರ್ಜನ್ಯವೆಸಗುತ್ತಿದ್ದ ಇಬ್ಬರೂ ಪೊಲೀಸ್ ಅಧಿಕಾರಿಗಳಿಗೆ ಆಗ ಸ್ವಲ್ಪ ದುಗುಡ ಶುರುವಾಯಿತು. ಭೀಮಣ್ಣ ಲಾಕಪ್ಪಿನಲ್ಲೇ ಸತ್ತರೆ ತಮಗೆ ತೊಂದರೆಯಾಗಬಹುದು ಎಂದುಕೊಂಡು ಕೂಡಲೇ ಅವನನ್ನು ಸಂತೈಸಲಾರಂಭಿಸಿದರು. ಅಷ್ಟುಹೊತ್ತು ಕಾಡಿಬೇಡಿದರೂ ಒಂದು ತೊಟ್ಟು ನೀರು ಕೊಡದ ಈ ಕ್ರೂರ ಅಧಿಕಾರಿಗಳು ಭೀಮಣ್ಣನಿಗೆ ನೀರು ತಂದು ಕೊಟ್ಟರು. ಶಕ್ತಿಯಿಲ್ಲದ ಅವನನ್ನು ಇಬ್ಬರೂ ಅಧಿಕಾರಿಗಳು ಎತ್ತಿಕೊಂಡು ತಮ್ಮ ಭುಜಗಳ ಮೇಲೆ ಅವನ ಕೈಗಳನ್ನಿಟ್ಟುಕೊಂಡು ಪೊಲೀಸ್ ಸ್ಟೇಷನ್ನಿನಿಂದ ಹೊರ ತಂದರು. ಅಷ್ಟು ಹೊತ್ತಿಗಾಗಲೇ ಸ್ಟೇಷನ್ನಿನಿಂದ ದೂರ ಕಳಿಸಿದ್ದ ಭೀಮಣ್ಣನ ನಾಲ್ವರು ಸಂಬಂಧಿಗಳು ಸ್ಟೇಷನ್ ಬಳಿ ಬಂದಿದ್ದರು. ಅವರ ಕೈಗೆ ಭೀಮಣ್ಣನನ್ನು ಒಪ್ಪಿಸಿ, “ಇವನನ್ನು ಸೀದಾ ಊರಿಗೆ ಕರೆದುಕೊಂಡು ಹೋಗಿ. ಆಸ್ಪತೆಗೆ, ಅಲ್ಲಿಗೆ, ಇಲ್ಲಗೆ ಹೋಗಿ, ನಮ್ಮ ವಿರುದ್ಧ ಏನಾದರೂ ಮಾತಾಡಿದರೆ ಚೆನ್ನಾಗಿರಲ್ಲ. ಹಂಗೇನಾದ್ರೂ ಮಾಡಿದರೆ, ನಾಳೆಯೇ ಮತ್ತೆ ಎತ್ತಿಕೊಂಡು ಬಂದು ಇವತ್ತು ಮಾಡಿದ್ದರ ಹತ್ತು ಪಟ್ಟು ಮಾಡಿ, ಅವನನ್ನು ಕೊಂದು ಹೆಣ ಕೂಡ ಸಿಗದಂತೆ ಬಿಸಾಕುತ್ತೇವೆ,” ಎಂದು ಖುದ್ದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾಕೇಶನೇ ಎಚ್ಚರಿಕೆ ಕೊಟ್ಟ. 
ಭೀಮಣ್ಣನನ್ನು ಪೊಲೀಸ್ ಸ್ಟೇಷನ್ನಿನಿಂದ ರಸ್ತೆಯ ತನಕ ಹೇಗೋ ಕರೆದುಕೊಂಡು ಬಂದ ಅವನ ಸಂಬಂಧಿಕರು ಆತನ ಪರಿಸ್ಥಿತಿ ಕಂಡು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಯೋಚನೆ ಮಾಡಿದ್ರು. ಭೀಮಣ್ಣನ ಚಿಕ್ಕಪ್ಪ ತಿಪ್ಪಮ್ಮ ಬೈಕ್ ಸ್ಟಾರ್ಟ್ ಮಾಡಿದ. ಆದರೆ, ಬೈಕ್ ಹತ್ತಿ ಕೂರುವ ಸ್ಥಿತಿಯಲ್ಲಿ ಭೀಮಣ್ಣ ಇರಲಿಲ್ಲ. ಭೀಮಣ್ಣನಿಗೆ ಹೆಣ್ಣುಕೊಟ್ಟ ಮಾವ ಬಡೇಸಾಬ್ ಮತ್ತು ದಸ್ತಗೀರ್ ಇಬ್ಬರೂ ಸೇರಿ ಅವನ್ನು ಎತ್ತಿ ಬೈಕ್ ಮೇಲೆ ಕೂರಿಸಿದರು.  ಇಡಪನೂರಿನಲ್ಲೇ ಇರುವ ಒಬ್ಬ ಆರ್.ಎಂ.ಪಿ ಡಾಕ್ಟರ್ ಬಳಿ ಕರೆದುಕೊಂಡು ಹೋದರೆ ಆ ಕಾಕ್ಟರ್ ಭೀಮಣ್ಣನ ಪರಿಸ್ಥಿತಿ ಕಂಡು ಬೆಚ್ಚಿಬಿದ್ದ. “ನನ್ನಿಂದ ಈ ಕೇಸ್ ಹ್ಯಾಂಡಲ್ ಮಾಡೋಕೆ ಆಗಲ್ಲ. ನೀವು ಸೀದಾ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಒಯ್ಯಿರಿ” ಎಂದರು ಆ ಡಾಕ್ಟರ್. 
ಕೂಡಲೇ ತಿಪ್ಪಮ್ಮ ಭೀಮಣ್ಣನನ್ನು ಕೂರಿಸಿಕೊಂಡು ಬೈಕನ್ನು ರಾಯಚೂರಿನ ಕಡೆ ತಿರುಗಿಸಿದ. 25 ಕಿ.ಮೀ. ದೂರದ ಬೈಕ್ ಪ್ರಯಾಣವನ್ನು ಭೀಮಣ್ಣ ಹೇಗೆ ಕಳೆದ ಎಂಬುದು ಆತ ಮಾತ್ರ ಬಲ್ಲ. ಸುಮಾರು 8 ಗಂಟೆಯ ಹೊತ್ತಿಗೆ ರಿಮ್ಸ್ ಆಸ್ಪತ್ರೆಗೆ ಬಂದಿಳಿದ ತಕ್ಷಣ ವೈದ್ಯರು ಭೀಮಣ್ಣನನ್ನು ಅಟೆಂಡ್ ಮಾಡಿದರು. ತುರ್ತು ಚಿಕಿತ್ಸೆ ಪ್ರಾರಂಭಿಸಿದರು. ಶನಿವಾರ ರಾತ್ರಿ ಮತ್ತು ಭಾನುವಾರ ಎರಡೂ ದಿನ ಚಿಕಿತ್ಸೆ ಪಡೆದ ಭೀಮಣ್ಣ ಕೊಂಚ ಚೇತರಿಸಿಕೊಂಡ. 
ಅಷ್ಟರಲ್ಲಿ ರಿಮ್ಸ್ ಆಸ್ಪತ್ರೆಗೆ ಬಂದ ಮಫ್ತಿಯಲ್ಲಿದ್ದ ಇಡಪನೂರು ಪೊಲೀಸರು, ಅವರ ಏಜೆಂಟರು, ಮಾಹಿತಿದಾರರು ಭೀಮಣ್ಣ ಮತ್ತು ಅವರ ಸಂಬಂಧಿಕರ ಮನವೊಲಿಸಲು ಪ್ರಾರಂಭಿಸಿದರು. “ಇದನ್ನು ಇಲ್ಲಿಗೆ ಬಿಟ್ಟುಬಿಡು. ಮೀಡಿಯಾ ಎದುರು ಏನೂ ಹೇಳಬೇಡಿ. ನಿಮ್ಮ ಆಸ್ಪತ್ರೆಯ ಖರ್ಚನ್ನು ನಾವೇ ನೋಡಿಕೊಳ್ಳುತ್ತೇವೆ” ಎಂತೆಲ್ಲಾ ಪುಸಲಾಯಿಸಲಾರಂಭಿಸಿದರು. 
ಭೀಮಣ್ಣನ ಕುಟುಂಬದಲ್ಲಿ ಈಗ ಆತನೊಬ್ಬನೇ ದುಡಿಯುವ ಯುವಕ. ಆತನ ಹೆಂಡತಿ, ಮೂರು ವರ್ಷದ ಮಗಳು, ಐವತ್ತೈದು ವರ್ಷದ ತಾಯಿ, ಹದಿನೆಂಟು ವರ್ಷದ ತಂಗಿ – ಎಲ್ಲರಿಗೂ ಭೀಮಣ್ಣನೇ ಆಸರೆ. ಜೀವಕ್ಕೆ ಏನಾದರೂ ಹೆಚ್ಚು ಕಮ್ಮಿ ಆದರೆ ಇಡೀ ಕುಟುಂಬ ಬೀದಿಪಾಲಾಗಿಬಿಡುತ್ತದೆ. ಇದನ್ನು ಊಹಿಸಿಕೊಂಡೇ ಬೆಚ್ಚಿಬಿದ್ದ ಅವನ ಕುಟುಂಬ ಸರ್ಕಾರಿ ಆಸ್ಪತ್ರೆಯಲ್ಲಿ ಭೀಮಣ್ಣನಿಗೆ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ ಎಂದುಕೊಂಡು ಸೋಮವಾರ (ದಿನಾಂಕ: 04.11.2019) ಭೀಮಣ್ಣನನ್ನು ರಿಮ್ಸ್ನಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಸುರಕ್ಷಾ ಆಸ್ಪತ್ರೆಗೆ ಎಂಬ ಖಾಸಗಿ ಆಸ್ಪತ್ರೆಗೆ ಸೇರಿಸಿದರು. 
ಭೀಮಣ್ಣ ಅಲ್ಲಿಗೆ ಶಿಫ್ಟ್ ಆದ ಮೇಲೂ ಇಡಪನೂರು ಪೊಲೀಸರ, ಅವರ ಏಜಂಟರ ಕಾಟ ತಪ್ಪಿಲ್ಲ. ಅವರೆಲ್ಲಾ ಬರುತ್ತಲೇ ಇದ್ದಾರೆ, ಮೇಲಧಿಕಾರಿಗಳಿಗೆ, ಸರ್ಕಾರಕ್ಕೆ ಈ ಕುರಿತು ಕಂಪ್ಲೇಂಟ್ ಕೊಡಬಾರದೆಂದು ಭೀಮಣ್ಣ ಮತ್ತು ಆತನ ಕುಟುಂಬದವರಿಗೆ ಆಮೀಷ, ಬೆದರಿಕೆಗಳನ್ನು ಒಡ್ಡುತ್ತಲೇ ಇದ್ದಾರೆ. 
“ನೋಡು ಭೀಮಣ್ಣ. ಆದದ್ದು ಆಗಿಹೋಯಿತು. ಈಗ ನೀನು ಇದನ್ನೊಂದು ದೊಡ್ಡ ಇಶ್ಯೂ ಮಾಡಿದರೆ ನಮ್ಮ ಸಾಹೇಬರು [ಸಬ್ ಇನ್ಸ್ಪೆಕ್ಟರ್ ಡಾಕೇಶ್] ಸಸ್ಪೆಂಡ್ ಆಗುತ್ತಾರೆ. ಮತ್ತೆ ಒಂದೆರಡು ತಿಂಗಳಲ್ಲಿ ವಾಪಾಸು ನೌಕರಿ ಸೇರುತ್ತಾರೆ. ಅದೇನು ದೊಡ್ಡ ವಿಷಯ ಅಲ್ಲ. ಆದರೆ, ಅದನ್ನೆಲ್ಲಾ ಮಾಡೋದ್ರಿಂದ ನಿನಗೇನು ಸಿಗುತ್ತೆ ಹೇಳು? ನಮ್ಮ ಮಾತು ಕೇಳು. ಖಾಸಗಿ ಆಸ್ಪತ್ರೆಗೆ ಸೇರಿದ್ದೀಯ, ಒಳ್ಳೆ ಚಿಕಿತ್ಸೆ ದೊರೆಯುತ್ತಿದೆ. ಇನ್ನೊಂದಿಷ್ಟು ದಿನದಲ್ಲಿ ಆರಾಮಾಗಿ ಮನೆ ಸೇರುತ್ತೀಯ. ಆಸ್ಪತ್ರೆಯ ಖರ್ಚನ್ನೆಲ್ಲಾ ನಾವು ನೋಡಿಕೊಳ್ಳುತ್ತೇವೆ. ನೀನು ಒಂದು ಪೈಸೆ ಖರ್ಚು ಮಾಡುವ ಅವಶ್ಯಕತೆಯಿಲ್ಲ,” ಎಂದೆಲ್ಲಾ ಭೀಮಣ್ಣನಿಗೆ ಆಮೀಶ ಒಡ್ಡುತ್ತಿದ್ದಾರೆ. 
ಅಂದಹಾಗೆ, ಪೊಲೀಸರ ಪರವಾಗಿ ಈ ಮಾತುಗಳನ್ನು ಆಡಿಹೋದವರು ಬಹಳಷ್ಟು ಮಂದಿ ಇದ್ದಾರೆ. ಆದರೆ, ನಿರ್ದಿಷ್ಟವಾಗಿ ಆಸ್ಪತ್ರೆಯ ಖರ್ಚನ್ನು ನಾನೇ ನೋಡಿಕೊಳ್ಳುತ್ತೇನೆ, ಪೊಲೀಸರೇ ನನ್ನನ್ನು ಕಳಿಸಿದ್ದಾರೆ ಎಂದು ಹೇಳಿ ಖರ್ಚಿನ ಜವಾಬ್ದಾರಿ ಹೊತ್ತುಕೊಂಡು ಹೋದ ಪ್ರಮುಖ ವ್ಯಕ್ತಿ ಎಂದರೆ ಕೃಷ್ಣಾಜಿ. ಇಡಪನೂರು ಸುತ್ತಮುತ್ತ ಅನೇಕ ಬಾರ್, ರೆಸ್ಟೋರೆಂಟ್, ವೈನ್ ಷಾಪುಗಳನ್ನು ನಡೆಸುವ ಪ್ರಮುಖ ಲಿಕ್ಕರ್ ಕುಳ ಈ ಕೃಷ್ಣಾಜಿ. ಒಳ್ಳೆಯ ಮನುಷ್ಯ ಅಂತ ಬಹಳ ಜನ ಹೇಳ್ತಾರೆ. ಸುತ್ತಮುತ್ತಲ ಊರಿನ ಮಂದಿಗೂ ಇವರ ಮೇಲೆ ಗೌರವ ಜಾಸ್ತಿ. ತಮ್ಮ ಲಿಕ್ಕರ್ ದಂಧೆಯ ಕಾರಣಕ್ಕೆನೇ ಇಡಪನೂರು ಪೊಲೀಸರನ್ನೂ ಚೆನ್ನಾಗಿ ಇಟ್ಟುಕೊಂಡಿರುವ ಮನುಷ್ಯ ಇವರು. ಇವರ ಮೇಲೆ ಸುತ್ತಮುತ್ತಲ ಊರಿನ ಜನರಿಗೆ ಇರುವ ಉತ್ತಮ ಅಭಿಪ್ರಾಯ, ಗೌರವವನ್ನೇ ಬಂಡವಾಳ ಮಾಡಿಕೊಂಡ ಇಡಪನೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾಕೇಶ್ ಕೃಷ್ಣಾಜಿಯನ್ನೇ ಸಂಧಾನಕ್ಕೆ ಕಳಿಸಿದ್ದಾನೆ. ಕೃಷ್ಣಾಜಿ ಒಮ್ಮೆ ಸುರಕ್ಷಾ ಆಸ್ಪತ್ರೆಗೆ ಬಂದು, ಭೀಮಣ್ಣನ ಸಂಬಂಧಿಗಳನ್ನು ಭೇಟಿಯಾಗಿ, “ನನ್ನನ್ನು ಇಡಪನೂರು ಪೊಲೀಸರೇ ಕಳಿಸಿದ್ದಾರೆ. ನೀವೇನೂ ಈ ವಿಷಯವನ್ನು ಜಾಸ್ತಿ ಮಾಡಬೇಡಿ. ನಿಮ್ಮ ಆಸ್ಪತ್ರೆಯ ಖರ್ಚನ್ನು ನಾನೇ ನೋಡಿಕೊಳ್ಳುತ್ತೇನೆ,” ಎಂದು ಆಶ್ವಾಸನೆ ನೀಡಿ ಹೋಗಿದ್ದಾರೆ. 
“ಸಾರ್, ನಾವು ಬಡವರು. ದುಡಿದು ತಿನ್ನುವ ಮಂದಿ. ಏನೂ ತಪ್ಪು ಮಾಡದಿದ್ದರೂ ಈ ಪೊಲೀಸರು ನನಗೆ ಕಳ್ಳನ ಹಣೆಪಟ್ಟಿ ಕಟ್ಟಿ ಚಿತ್ರಹಿಂಸೆ ಕೊಟ್ಟರು. ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೆ. ಅದೃಷ್ಟವಶಾತ್ ಹೇಗೋ ಬದುಕಿಬಿಟ್ಟೆ. ಏನೂ ತಪ್ಪು ಮಾಡದಿದ್ದರೂ ಈ ರೀತಿ ಚಿತ್ರಹಿಂಸೆ ಕೊಟ್ಟ ಪೊಲೀರನ್ನು ಸುಮ್ಮನೇ ಬಿಡಬಾರದು ಅನ್ನಿಸುತ್ತೆ. ಆದರೆ, ಏನು ಮಾಡೋದು ಸಾರ್. ನಾವು ಬಡವರು. ಪೊಲೀಸರನ್ನು ಎದುರುಹಾಕಿಕೊಂಡರೆ ಮತ್ತೆ ನಾಳೆ ಇನ್ನೇನಾದರೂ ನೆಪವೊಡ್ಡಿ ಮತ್ತೆ ಠಾಣೆಗೆ ಕರೆತಂದು ಚಿತ್ರಹಿಂಸೆ, ಕೇಸು ಅಂತೆಲ್ಲಾ ತೊಂದರೆ ಕೊಡಬಹುದು ಅಂತ ಹೆದರಿಕೆಯಾಗುತ್ತದೆ. ಅದಕ್ಕೆ ಸುಮ್ಮನಾಗಿದ್ದೇವೆ,” ಎನ್ನುತ್ತಾನೆ ಭೀಮಣ್ಣ. 
“ನನಗಿರುವುದು ಒಬ್ಬನೇ ಮಗ. ಅವನೇ ನಮ್ಮ ಇಡೀ ಕುಟುಂಬಕ್ಕೆ ಅವನೇ ದಿಕ್ಕು. ಅವನಿಗೆ ಬೆಳೆದುನಿಂತಿರುವ ಒಬ್ಬ ತಂಗಿ ಇದ್ದಾಳೆ. ಮೂರು ವರ್ಷದ ಮಗಳಿದ್ದಾಳೆ. ವಯಸ್ಸಾದ ನಾನು, ಅವನ ಹೆಂಡತಿ. ಅವನ ಜೀವಕ್ಕೆ ಹೆಚ್ಚುಕಮ್ಮಿಯಾಗಿದ್ದರೆ ನಾವೆಲ್ಲಾ ಏನು ಮಾಡಬೇಕಿತ್ತು? ಹೇಗೋ ಮಗ ಬದುಕಿಬಿಟ್ಟ. ನನ್ನ ಮಗ ತಪ್ಪು ಮಾಡಿಲ್ಲ. ಒಂದು ವೇಳೆ ತಪ್ಪು ಮಾಡಿದ್ರೂ ಹೀಗೆ ಜೀವಕ್ಕೇ ಕುತ್ತು ಬರುವ ಹಾಗೆ ಹೀಗೆ ಹೊಡೆಯೋದಾ?” ಅಂತ ಭೀಮಣ್ಣನ ತಾಯಿ ಬತ್ತಲ್ಲಮ್ಮ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳುತ್ತಿದ್ದರು.
ಈ ವಿಷಯದ ಬಗ್ಗೆ ಇಡಪನೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾಕೇಶ್ ಅವರನ್ನು ಮಾತಾಡಿಸಿ ಅವರ ಅಭಿಪ್ರಾಯ ಕೇಳೋಣ ಅಂತ ಫೋನ್ ಮಾಡಿದರೆ ಅವರು ಫೋನನ್ನೇ ಎತ್ತಲಿಲ್ಲ…!
ನಾನು ನನ್ನ ಇತಿಮಿತಿಯಲ್ಲಿ ಪ್ರಯತ್ನಿಸಿ ಸಾಧ್ಯವಾದಷ್ಟು ವಸ್ತುನಿಷ್ಠ ಮಾಹಿತಿಯನ್ನು ಹೊರತರಲು ಪ್ರಯತ್ನಿಸಿದ್ದೇನೆ. ರಾಜ್ಯದ, ರಾಷ್ಟ್ರದ ಮಾನವಹಕ್ಕು ಹೋರಾಟಗಾರರು, ಸಂಘಸಂಸ್ಥೆಗಳು ಈ ವಿಷಯದ ಬಗ್ಗೆ ಗಮನ ನೀಡಿ ಇದನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂದು, ರಾಯಚೂರಿಗೆ ಬಂದು ಭೀಮಣ್ಣ ಮತ್ತು ಅವನ ಕುಟುಂಬವನ್ನು ಹಾಗೂ ಸಂಬಂಧಪಟ್ಟ ಪೊಲಿಸ್/ಜಿಲ್ಲಾಡಳಿತವನ್ನು ಭೇಟಿ ಮಾಡಿ ಸತ್ಯಶೋಧನೆ ನಡೆಸಬೇಕೆಂದು ಹಾಗೂ ನೊಂದ ಭೀಮಣ್ಣ ಮತ್ತು ಆತನ ಕುಟುಂಬಕ್ಕೆ ನ್ಯಾಯವನ್ನೂ ಮತ್ತು ಭೀಮಣ್ಣ ಮೇಲೆ ಕಾನೂನುಬಾಹಿರವಾಗಿ ದೈಹಿಕ ದೌರ್ಜನ್ಯವೆಸಗಿದ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆಯನ್ನೂ ಕೊಡಿಸಬೇಕೆಂದು ಮನವಿ ಮಾಡುತ್ತಿದ್ದೇನೆ.
– ಕುಮಾರ್ ಬುರಡಿಕಟ್ಟಿ

ಫೋಟೋಗಳು: ಸಂತೋಷ್ ಸಾಗರ್ (Santosh Sagar)
(ಸಾಧ್ಯವಾದಷ್ಟು ಷೇರ್ ಮಾಡಿ. ದೌರ್ಜನ್ಯ ಎಸಗಿದ ಪೊಲೀಸರಿಗೆ ಶಿಕ್ಷೆ ಆಗುವ ತನಕ)

Please follow and like us:
error