ಪೊಲೀಸರು ಸುಟ್ಟದ್ದು ಯಾರ ಮೃತದೇಹವನ್ನು?

ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 28ರ ಸೋಮವಾರ ಅಪರಾಹ್ನ 3.30ಕ್ಕೆ ಪ್ರಾರಂಭಗೊಂಡ ಸರ್ಕಾರಿ ಪ್ರಾಯೋಜಿತ ನಾಟಕ ಉತ್ತರಪ್ರದೇಶದ ಹತ್ರಾಸ್ ನ ಸ್ಮಶಾನದಲ್ಲಿ ಮಂಗಳವಾರ ರಾತ್ರಿ 3.30ಕ್ಕೆ ಕೊನೆಗೊಂಡಿತು.

ಹತ್ರಾಸ್ ನ ದುರುಳರಿಂದ ಅತ್ಯಾಚಾರಕ್ಕೊಳಗಾದ ದಲಿತ ಯುವತಿ ಕೊನೆಯುಸಿರೆಳೆದದ್ದು ಸೆಪ್ಟೆಂಬರ್ 29ರ ಬೆಳಿಗ್ಗೆ 6.55ಕ್ಕೆ. ಮರಣೋತ್ತರ ಪರೀಕ್ಷೆ ಮುಗಿದಿದ್ದು ಸಂಜೆ ಆರುವರೆಗಂಟೆಗೆ. ಮಗಳ ಮೃತದೇಹವನ್ನು ಕೊಂಡೊಯ್ಯಲು ಯುವತಿಯ ತಂದೆ ಮತ್ತು ಅಣ್ಣ ಆಸ್ಪತ್ರೆ ಬಾಗಿಲಲ್ಲಿ ಕಾಯುತ್ತಿದ್ದರು. ಅವರಿಗೆ ಏನನ್ನೂ ತಿಳಿಸದೆ ಪೊಲೀಸ್ ರಕ್ಷಣೆಯಲ್ಲಿ ಯುವತಿಯ ಮೃತದೇಹ ಇದ್ದ ಅಂಬ್ಯುಲೆನ್ಸ್ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಿಂದ 200 ಕಿ.ಮೀ.ದೂರದಲ್ಲಿದ್ದ ಯುವತಿಯ ಊರಾದ ಹತ್ರಾಸ್ ಗೆ ಹೊರಡುತ್ತದೆ.

ಅಂಬ್ಯುಲೆನ್ಸ್ ಹೊರಟ ಒಂದು ಗಂಟೆ ನಂತರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಯುವತಿಯ ತಂದೆ ಮತ್ತು ಅಣ್ಣನನ್ನು ಸರ್ಕಾರಿ ವಾಹನದಲ್ಲಿ ಕೂರಿಸಿ ತಾವೇ ಎಸ್ಕಾರ್ಟ್ ಮಾಡಿಕೊಂಡು ಹತ್ರಾಸ್ ಗೆ ಹೊರಡುತ್ತಾರೆ.
ಆಗಲೇ ಊರಲ್ಲಿ ನೂರಾರು ಸಂಖ್ಯೆಯಲ್ಲಿ ಯುಪಿ ಪೊಲೀಸರು ಬೀಡುಬಿಟ್ಟಿದ್ದರು. ಯುವತಿಯ ಮನೆ ಮತ್ತು ಮುಖ್ಯರಸ್ತೆಯ ನಡುವೆ ಮೂರು ಹಂತಗಳ ಬ್ಯಾರಿಕೇಡ್ ಹಾಕಿ ಕುಟುಂಬದವರು ಹೊರಗೆ ಬರದಂತೆ ನಿರ್ಬಂಧಿಸಿದ್ದರು. ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಸ್ಮಶಾನದ ಸುತ್ತಲಿನ ಮತ್ತು ರಸ್ತೆಗಳ ಲೈಟ್ ಗಳನ್ನು ಆರಿಸಲಾಗಿತ್ತು. ಕತ್ತಲೆಯಲ್ಲಿಯೇ ಪೊಲೀಸರು ಕಟ್ಟಿಗೆ ತಂದು ರಾಶಿ ಹಾಕಿದ್ದರು.

ರಾತ್ರಿ ಹನ್ನೆರಡು ಗಂಟೆಗೆ ಮೃತದೇಹ ಹೊತ್ತ ಅಂಬ್ಯುಲೆನ್ಸ್ ಮನೆ ಎದುರುಬಂದು ನಿಲ್ಲುತ್ತದೆ. ಅದನ್ನು ನೋಡಿದ ಊರಲ್ಲಿಯೇ ಇದ್ದ ತಾಯಿ ಮತ್ತು ಕುಟುಂಬದ ಸದಸ್ಯರು ಮೃತದೇಹವನ್ನು ಕೊಡುವಂತೆ ನೆಲಕ್ಕೆ ,ಅಂಬ್ಯುಲೆನ್ಸ್ ಗೆ ತಲೆ ಬಡಿದುಕೊಂಡು ಗೋಗರೆಯುತ್ತಾರೆ. ಅಂಬ್ಯುಲೆನ್ಸ್ ನೇರವಾಗಿ ಸ್ಮಶಾನಕ್ಕೆ ಹೋಗುತ್ತದೆ. ಅಷ್ಟರಲ್ಲಿ ಡಿಸಿ,ಎಸ್ ಪಿ ಜೊತೆ ಯುವತಿಯ ತಂದೆ ಮತ್ತು ಅಣ್ಣ ಬಂದಿರುತ್ತಾರೆ. ಅವರನ್ನು ಕೂಡಾ ಮನೆಯೊಳಗೆ ಕೂಡಿಹಾಕಲಾಗುತ್ತದೆ. ಗ್ರಾಮದ ಜನ, ಮಾಧ್ಯಮದವರು ಯಾರೂ ಬರದಂತೆ ಪೊಲೀಸರು ಸ್ಮಶಾನದ ಪ್ರವೇಶದಲ್ಲಿಯೇ ಬ್ಯಾರಿಕೇಡ್ ಹಾಕಿ ಕಾವಲು ನಿಲ್ಲುತ್ತಾರೆ.

ಅಷ್ಟರಲ್ಲಿ ಪೊಲೀಸರು ಯುವತಿಯ ದೂರದ ಸಂಬಂಧಿಗಳಿಬ್ಬರನ್ನು ಬಲಾತ್ಕಾರವಾಗಿ ಕರೆತಂದು ಕಟ್ಟಿಗೆ ತುಂಡುಗಳನ್ನು ಚಿತೆಗೆ ಎಸೆಯುವಂತೆ ಹೇಳಿ ವಿಡಿಯೋ ಶೂಟ್ ಮಾಡ್ತಾರೆ. ರಾತ್ರಿ 3.30ಕ್ಕೆ ಅಂತ್ಯಕ್ರಿಯೆಯನ್ನು ಮುಗಿಸಲಾಗುತ್ತದೆ.

ಕೊನೆಗೂ ಉಳಿದಿರುವ ಪ್ರಶ್ನೆ: ಪೊಲೀಸರು ಸುಟ್ಟದ್ದು ಯಾರ ಮೃತದೇಹವನ್ನು?
ನಿನ್ನೆ ಇಂಡಿಯಾ ಟುಡೇ ಚಾನೆಲ್ ನಲ್ಲಿ ಯುವತಿಯ ಅಣ್ಣ ಕೂಡಾ ಈ ಪ್ರಶ್ನೆ ಕೇಳಿದ್ದರು.

Please follow and like us:
error