ಪರ್ಫೆಕ್ಟ್ “ಆಕ್ಟ್” :
ಕೋವಿಡ್ “2019” ಮರೆತುಬಿಡಿ, ಆಕ್ಟ್ “1978” ನೋಡಿ

ಆಕ್ಟ್ “1978” ಚಿತ್ರ ವಿಮರ್ಶೆ – ಹರಿ ಪರಾಕ್

ಚಿತ್ರ ಇನ್ನೇನು ಮುಗಿಯುತ್ತಾ ಬಂದಂತೆ, ಆಫೀಸಿನ ಟಾಯ್ಲೆಟ್ ನ ಕೊಳಕನ್ನು ಸ್ವಚ್ಛಗೊಳಿಸುವ ಕೆಲಸ ಮಾಡುವ ವ್ಯಕ್ತಿ, ಭಾವನಾತ್ಮಕವಾಗಿ ಟ್ರಿಗರ್ ಆಗಿ, ನಮ್ಮ ವ್ಯವಸ್ಥೆಯಲ್ಲಿರುವ ಕೊಳಕಿನ ಬಗ್ಗೆ ಆಕ್ರೋಶದಿಂದ ಮಾತನಾಡುತ್ತಾನೆ. ಅಂಥವನ ಬಾಯಲ್ಲಿ ವ್ಯವಸ್ಥೆಯ ಕೊಳಕನ್ನು ತೊಳೆಯುವ ಬಗ್ಗೆ ಹೇಳಿಸಿರುವ ನಿರ್ದೇಶಕ ಮನ್ಸೋರೆ ತಾನೇಕೆ ಕನ್ನಡದ ಸೆನ್ಸಿಬಲ್ ನಿರ್ದೇಶಕರಲ್ಲೊಬ್ಬ ಎನ್ನುವುದನ್ನು ಪ್ರೂವ್ ಮಾಡುತ್ತಾರೆ.
‘ಸರ್ಕಾರಿ ಕೆಲಸ, ದೇವರ ಕೆಲಸ’ ಅನ್ನೋ ಬೋರ್ಡ್ ಅನ್ನು ನಮ್ಮ ಗವರ್ನಮೆಂಟ್ ಆಫೀಸ್ ಗಳಲ್ಲಿ ಹಾಕಲಾಗಿರುತ್ತದೆ. ಆದರೆ ಅಲ್ಲಿ ಮನುಷ್ಯತ್ವಕ್ಕೆ ಬೆಲೆ ಇರೋದಿಲ್ಲ ಅನ್ನೋದು ಬಹುತೇಕ ಪ್ರಜೆಗಳ ಅನುಭವ. ಹಾಗಾಗಿ ಈ ಚಿತ್ರ ಆಕ್ಟ್ ಆಫ್ ಗಾಡ್ ಬಗ್ಗೆ ಮಾತಾಡೋದಿಲ್ಲ. ಇದೇನಿದ್ದರೂ ಆಕ್ಟ್ ಆಫ್ ಹ್ಯೂಮನ್ ಬೀಯಿಂಗ್ಸ್ ಬಗ್ಗೆ ಮಾಡಿರುವ ಚಿತ್ರ.
ನಮ್ಮ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದ ಬಗ್ಗೆ ಈ ಚಿತ್ರ ಮಾತನಾಡುತ್ತದೆ. ಆದರೆ ಚಿತ್ರದ ಮುಖ್ಯ ಪಾತ್ರವಾಗಿರುವ ನಾಯಕಿ ಬರೀ ಮಾತನಾಡುತ್ತ “ಕೂರದೆ”, ಇತರಿಗಿಂತ ಭಿನ್ನವಾಗಿ “ನಿಲ್ಲುತ್ತಾಳೆ” ಕೂಡ. ಹಾಗಂತ ನಿರ್ದೇಶಕ ಮನ್ಸೋರೆ ಈ ಚಿತ್ರವನ್ನು ನಿಲ್ಲಿಸಲು ಇದೊಂದೇ ಪಾತ್ರವನ್ನು ನಂಬಿಕೊಂಡಿಲ್ಲ.
ನಾಯಕಿ ಸರ್ಕಾರಿ ಕಚೇರಿಯೊಂದರಲ್ಲಿ ಉದ್ಯೋಗಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವ ಕಥೆಯಾದರೂ ಇದು ಥ್ರಿಲ್ಲರ್ ಸಿನಿಮಾ ಅಲ್ಲ. ಆದರೆ, ಹೋಸ್ಟೇಜ್ ಕಥೆ ಇರೋ ಆಕ್ಟ್ 1978 ಸಿನಿಮಾ ಪ್ರತಿ ಸ್ಟೇಜ್ ನಲ್ಲೂ ಕುತೂಹಲದ ಜೊತೆಗೆ ಆತಂಕವನ್ನೂ, ಒಂದು ನಾಗರಿಕ ಎಚ್ಚರವನ್ನೂ ಹುಟ್ಟು ಹಾಕುತ್ತದೆ. ಆಕ್ಟ್ 1978 ಚಿತ್ರವನ್ನು ಕನ್ನಡದ ನಿಷ್ಕರ್ಷಕ್ಕೆ ಹೋಲಿಸೋದು ತಪ್ಪಾಗುತ್ತೆ. ಯಾಕಂದ್ರೆ ಅಲ್ಲಿ ಅಮಾಯಕ ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳೋದು ವಿಲನ್ ಗಳು. ಇಲ್ಲಿ ಆ ಕೆಲಸ ಮಾಡೋದು ಒಬ್ಬ ಸಾಮಾನ್ಯ(?) ಹೆಣ್ಣು. ಹಾಗಾಗಿ ಇದನ್ನು ಹಿಂದಿಯ “ವೆಡ್ನಸ್ ಡೇ” ಚಿತ್ರಕ್ಕೆ ಹೋಲಿಸಬಹುದು ಅಷ್ಟೇ. ಆದರೆ ಕನ್ನಡಿಗರ ಪಾಲಿಗೆ ಇದು “ಬುಧವಾರ” ಅಲ್ಲ, ಬಹಳ ದಿನಗಳ ನಂತರ ಬಂದಿರೋ “ಶುಭ ಶುಕ್ರವಾರ” ಎನ್ನಬಹುದು., ಅಲ್ಲಿನ ಕಾಮನ್ ಮ್ಯಾನ್ ಜಾಗದಲ್ಲಿ ಇಲ್ಲಿ ಕಾಮನ್ ವುಮನ್ ಇದ್ದಾಳೆ ಅಷ್ಟೇ.
ನಾಗರಿಕರಿಗೆ ನ್ಯಾಯ ಒದಗಿಸಬೇಕಾದ ನಮ್ಮ ಸಿಸ್ಟಮ್, ಇಂದು ಸರಿಯಾದ ರೂಟ್ ನಲ್ಲಿ ಇಲ್ಲ ಅನ್ನೋ ಥೀಮ್ ನೊಂದಿಗೆ, ನಮ್ಮ ಸಿಸ್ಟಮ್ ನ ರೂಟ್, ಸ್ಟೆಮ್ ಯಾವುದೂ ಸರಿ ಇಲ್ಲ ಎಂಬುದನ್ನು ಸಮರ್ಥವಾಗಿ ಹೇಳಿದೆ ಆಕ್ಟ್ 1978 ಚಿತ್ರ. ಅಲ್ಲದೆ, ಬರೀ ರೂಟ್ ಕಾಸ್ ಬಗ್ಗೆ ಮಾತನಾಡದೆ, ಸರ್ಕಾರದ ಸಣ್ಣ ಸಣ್ಣ ಬ್ರಾಂಚ್ ಆಫೀಸ್ ವರೆಗೂ ಭ್ರಷ್ಟಾಚಾರದ ಬ್ರಾಂಚ್ ಗಳು ಹೇಗೆ ಹರಡಿಕೊಂಡಿವೆ ಅನ್ನೋದನ್ನ ಸಿನಿಮಾ ಹೈಲೈಟ್ ಮಾಡುತ್ತದೆ. ಆದರೆ ಇದು ಭಾಷಣದಂತೆ ಇರದೆ ಭಾವನಾತ್ಮಕವಾಗಿ ಮತ್ತು ಮನರಂಜನಾತ್ಮಕವಾಗಿದೆ ಅನ್ನೋದೇ ಇಲ್ಲಿನ ವಿಶೇಷ. ಚಿತ್ರದ ಕೊನೆ ಕೊನೆಯಲ್ಲಿರುವ ಭಾವನಾತ್ಮಕ ಸನ್ನಿವೇಶಗಳಂತೂ, ವ್ಯವಸ್ಥೆ ಅನ್ನೋದು ನಾಗರಿಕರ ಮನಸ್ಸಿನ ಮೇಲೆ ಮಾಡುತ್ತಿರುವ ಗಾಯ ಮಾಯುವಂತೆ ಮಾಡುವ ಅರಿಷಿಣದ ಕೊನೆಯಂತೆ ಕೆಲಸ ಮಾಡುತ್ತವೆ. ಹಾಗಾಗಿ, ಚಿತ್ರದ ಕ್ಲೈಮ್ಯಾಕ್ಸ್ ಎಂದರೆ ಅದು ಕಲ್ಲು ಕರಗುವ ಸಮಯ ಮತ್ತು ಕಲ್ಲೂ ಕೊರಗುವ ಸಮಯ. ಅದೆಲ್ಲಕ್ಕಿಂತ ಹೆಚ್ಚಾಗಿ ವ್ಯವಸ್ಥೆಯ ಮೇಲೆ ನಂಬಿಕೆ ಹುಟ್ಟಿಸುವ, ಕೊರಡು ಕೊನರುವ ಸಮಯ.
ಒಟ್ಟಾರೆಯಾಗಿ, “ನನಗೆ ಸಂಬಳ ಕಡಿಮೆ ಇದೆ”, “ನಾನೂ ಈ ಕೆಲಸಕ್ಕೆ ಸೇರಲು ಲಂಚ ಕೊಟ್ಟಿದ್ದೇನೆ” ಎಂದೆಲ್ಲಾ ತಾವು ಮಾಡುವ ಭ್ರಷ್ಟಾಚಾರಕ್ಕೆ ನೆಪಗಳನ್ನು ಹುಡುಕಿಕೊಳ್ಳುವ ಜನಗಳು ಮುಟ್ಟಿ ನೋಡಿಕೊಳ್ಳುವಂಥ ಕಥೆ ಹೆಣೆದಿರುವ ಟಿ.ಕೆ. ದಯಾನಂದ್, ಮನ್ಸೋರೆ, ವೀರು ಮಲ್ಲಣ್ಣ ಮತ್ತವರ ತಂಡ ಎಲ್ಲರ ಮನಮುಟ್ಟುವಂಥ ಸಿನಿಮಾ ಮಾಡಿದ್ದಾರೆ.
ಅಭಿನಯದ ವಿಷಯದಲ್ಲಿ ಎಲ್ಲರದೂ ಮೈಮರೆಸುವ “ಆಕ್ಟಿಂಗ್”. ಸಿನಿಮಾಗೆ “ಆಕ್ಟ್” 1978 ಅಂತ ಹೆಸರಿಟ್ಟಿದ್ದು ಈ ರೀತಿ ಸಾರ್ಥಕವಾಗಿದೆ ಎನ್ನಬಹುದು. ಯಜ್ಞಾ ಶೆಟ್ಟಿ, ಎದ್ದೇಳು ಮಂಜುನಾಥ ಚಿತ್ರದ ನಂತರ ತಮ್ಮೊಳಗಿನ ಕಲಾವಿದೆಯನ್ನು ಎಚ್ಚರಗೊಳಿಸಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಅವರದ್ದು ಅತಿ ಸಂಯಮದ ನಟನೆ. ನಿರ್ದೇಶಕರು ಡೈಲಾಗ್ ಕೊಡದಿದ್ದರೂ ಪರವಾಗಿಲ್ಲ, ನನಗೆ ಅಭಿನಯಿಸಲು, ನನ್ನ ಮಸುಕು ಕನ್ನಡಕದ ಹಿಂದಿನ ಕಣ್ಣುಗಳೂ ಬೇಡ, ನನ್ನ ದೇಹವೇ ದೇಗುಲ, ಕಲಾ ದೇಗುಲ ಎನ್ನುತ್ತಾರೆ ಬಿ ಸುರೇಶ್. ಅವರ ಅಭಿನಯ ನೋಡಿದ ಮೇಲೆ, ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸದೆ ಕನ್ನಡ ಪ್ರೇಕ್ಷಕರಿಗೆ ಸುರೇಶ್ ಮೋಸ ಮಾಡುತ್ತಿದ್ದಾರೆ ಎಂದು ಸಿಟ್ಟು ಬಂದರೆ ಅದರಲ್ಲಿ ತಪ್ಪಿಲ್ಲ. ಖಡಕ್ ಆಫೀಸರ್ ಆಗಿ ಕಾಣಿಸಿಕೊಂಡಿರುವ ಸಂಚಾರಿ ವಿಜಯ್ ಅವರಿಗೆ ಪರಕಾಯ ಸಂಚಾರ ಮಾಡುವಂಥ ಪಾತ್ರ ಸಿಕ್ಕಿಲ್ಲವಾದರೂ ಚಿತ್ರಕ್ಕೆ ಅವರು ಸ್ಟಾರ್ ವ್ಯಾಲ್ಯೂ ಕೊಟ್ಟಿದ್ದಾರೆ. ಒಟ್ಟಿನಲ್ಲಿ, “ಲೈಫ್ ಅಂಡ್ ಡೆತ್” ಪ್ರಶ್ನೆ ಇರೋ ಹೋಸ್ಟೇಜಸ್ ಜೊತೆಗೆ “ಫೈಲ್ ಅಂಡ್ ಡೆತ್” ಅಂತ ತಲೆಕೆಡಿಸಿಕೊಳ್ಳೋ ವಿನಯ್ ಕೃಷ್ಣಸ್ವಾಮಿ, ಅವಿನಾಶ್, ಅಚ್ಯುತ್ ಕುಮಾರ್, ದತ್ತಣ್ಣ, ಶ್ರುತಿ ಸೇರಿದಂತೆ ಎಲ್ಲರದ್ದೂ “ಪರ್ಫೆಕ್ಟ್ ಆಕ್ಟ್”.
ಗ್ಲಾಮರಸ್ ಆದ ಕಮರ್ಷಿಯಲ್ ಚಿತ್ರಗಳಲ್ಲೇ ಹೆಚ್ಚು ಕೆಲಸ ಮಾಡಿದ್ದ ಛಾಯಾಗ್ರಾಹಕ ಸತ್ಯ ಹೆಗಡೆ ನಮ್ಮ ವ್ಯವಸ್ಥೆಯ ವಾಸ್ತವವನ್ನು ತೋರಿಸುವಂಥ ಸಿನಿಮಾದಲ್ಲಿ ಸತ್ಯದರ್ಶನ ಮಾಡಿಸಿದ್ದಾರೆ. ನಾಗರಿಕರಿಗೆ ವ್ಯವಸ್ಥೆಯ ಮೇಲಿರುವ ನಂಬಿಕೆ ಅಲುಗಾಡುವ ಕಥೆಯಲ್ಲಿ ಹಲವು ಕಡೆ ಸ್ಟೆಡಿ ಶಾಟ್ ಬಿಟ್ಟು, ಅಲುಗಾಡುವ ಫ್ರೇಮ್ ಗಳನ್ನು ಇಟ್ಟಿರುವುದು ಸಾಂಕೇತಿಕ ಎನಿಸುತ್ತದೆ. ಒಟ್ಟಾರೆ ಕಾಮನ್ ಮ್ಯಾನ್ ನ ಸಿನಿಮಾದಲ್ಲಿ ಅವರು ಅದ್ಭುತ ಕ್ಯಾಮರಾ ಮ್ಯಾನ್ ಎನಿಸಿಕೊಂಡಿದ್ದಾರೆ.

ಕೊನೆಯಲ್ಲೊಂದು ಮಾತು.
ಕರೋನಾ ಕಾರಣ ಕೊಟ್ಟು ಈ ಚಿತ್ರವನ್ನು ಯಾರೂ, ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ. ಯಾಕಂದ್ರೆ ಇದು ಕರೋನಾಕ್ಕಿಂತ ದೊಡ್ಡ ರೋಗದ ವಿರುದ್ಧ ಹೋರಾಡುವ ಕಥೆ ಹೊಂದಿರುವ ಚಿತ್ರ.

Please follow and like us:
error