
ನಿಶಬ್ದದ ನಿರವತೆಯಲ್ಲಿ ಕಾರಟಗಿಯ
ಪರೀಕ್ಷಾ ಕೇಂದ್ರವು ತನ್ನ ಪಾಡಿಗೆ ತಾನು ಕಾರ್ಯತತ್ಪರವಾಗಿತ್ತು. ಅದು ಮುಂಜಾನೆಯ ಒಂಬೊತ್ತು ಮುಕ್ಕಾಲರ ಸಮಯ. ಭವಿಷ್ಯದ ಆಕಾಂಕ್ಷಿಗಳಾದ ಆಸೆಗಣ್ಣಿನ ಎಸ್ಎಸ್ಎಲ್ಸಿ ಮಕ್ಕಳು ಪರೀಕ್ಷಾ ಕೋಣೆಯಲ್ಲಿ ನೋಂದಣಿ ಸಂಖ್ಯೆಹಾಕಿ ಉತ್ತರ ಪತ್ರಿಕೆಯನ್ನು ಓರಣವಾಗಿ ಜೋಡಿಸಿಕೊಳ್ಳುತ್ತಿದ್ದರು. ಆ ದಿನ ರಿಜರ್ವ್ ಸಿಬ್ಬಂದಿಯಾದ ನಾನು, ಎಲ್ಲಾ ಕೊಠಡಿಗೂ ಉತ್ತರ ಪತ್ರಿಕೆಗಳು ಸಮರ್ಪಕವಾಗಿ ಪೊರೈಕೆಯಾಗಿವೆಯೇ? ಎಂದು ಖಚಿತಪಡಿಸಿಕೊಂಡು ಮಹಡಿಯ ಮೆಟ್ಟಿಲಿನಿಂದ ಇಳಿಯುತ್ತಿದ್ದೆ.
ಗೇಟಿನ ಕಡೆಯಿಂದ ಅವಸರ ಅವಸರದಲ್ಲಿ ಬಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಆತಂಕದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ
“ ಸಾರ್ ಈ ಹೆಸರಿನ ಮಗು ನಿಮ್ಮ ಪರೀಕ್ಷಾ ಕೇಂದ್ರದಲ್ಲಿದೆಯೇ? ಇದ್ದರೆ ಬೇಗ ನೋಡಿ ಪತ್ತೆ ಹಚ್ಚಿ ಯಾಕಂದ್ರ ಈ ಹೆಣ್ಣು ಮಗುವಿಗೆ ಕೊರೊನಾ ಪೋಜಿಟಿವ್ ಕನ್ಪ್ರ್ಮ ಆಗಿದೆ”
ಎಂದಾಗ ಅಲ್ಲಿದ್ದ ಎಲ್ಲರಿಗೂ ನಿಂತಲ್ಲೇ ನಡುಕ ಶುರುವಾಯಿತು. ‘ಬೆಂಕಿ ಚಿನ್ನವನ್ನು ಪರೀಕ್ಷಿಸಿದರೆ ಸಂಕಟ ಧೈರ್ಯಶಾಲಿಗಳನ್ನು ಪರೀಕ್ಷಿಸುತ್ತದೆ’ ಎಂಬಂತೆ ಅಧೀಕ್ಷಕರು ಸ್ಥಿತ ಪ್ರಜ್ಞೆಯಿಂದ ಆಪ್ತ ಸಿಬ್ಬಂದಿಯೊಂದಿಗೆ ಚರ್ಚಿಸಿ ಪರೀಕ್ಷಾ ಕೋಣಿಯಲ್ಲಿದ್ದ ‘ಆಮಗು’ವನ್ನು ಸೂಕ್ಷ್ಮವಾಗಿ ಹೊರಕರೆದು ಪ್ರತ್ಯೇಕ ಕೊಠಡಿಯಲ್ಲಿ ಕೂಡಿಸಲಾಯಿತು. ಆ ಮಗು ನಾನ್ಯಾಕೆ ಅಲ್ಲಿ ಕೂಡಬೇಕು ? ನನಗೇನು ಆಗಿದೆ ? ಅಂತ ಮುಗ್ಧತೆಯಿಂದ ಕೇಳಿತು
ಮಗುವನ್ನು ಸಮಾಧಾನಿಸಿ ಪಾಲಕರಿಗೆ ಕರೆಮಾಡಿ ಮನವಲಿಸಿ ಮಗುವಿನ ವಿಳಾಸ ವಿವರಗಳೊಂದಿಗೆ ಟ್ರಾವಲ್ ಹಿಸ್ಟರಿಯನ್ನು ಬಾಯಿ ಬಿಡಿಸಲಾಯಿತು
ಟ್ರಾವಲ್ ಹಿಸ್ಟರಿಯಲ್ಲಿ ಏನಿತ್ತು ?
ಕಳೆದ ಮೇ ತಿಂಗಳು ದುಡಿಯಲು ತಂದೆತಾಯಿಗಳೊಂದಿಗೆ ಮಗು ಬೆಂಗಳೂರಿಗೆ ತೆರಳಿ ಪರೀಕ್ಷೆಗೆಂದು ಪುನ: ವಾಪಸ್ಸಾಗಿ ಸಿಂಧನೂರಿನಲ್ಲಿರುವ ಚಿಕ್ಕಮ್ಮನ ಮನೆಯಿಂದ ಪರೀಕ್ಷೆಗೆ ಬರುತ್ತಿದ್ದಳು. ಮೂರು ಪರೀಕ್ಷೆ ಮುಗಿದು ನಾಲ್ಕನೇ ಪರೀಕ್ಷೆ ದಿನ ಆಕೆಗೆ ಕೊರೋನಾ ಪೊಜಿಟಿವ್ ಬಂದಿರುವುದು ಪತ್ತೆಯಾದಾಗ, ಮಗು ಪರೀಕ್ಷಾ ಆರಂಭವಾಗುವ ದಿನಕ್ಕಿಂತ ಮುಂಚೆಯೇ ಸ್ಲ್ಯಾಬ್ಟೆಸ್ಟಿಂಗ್ ಕೊಟ್ಟಿರುವುದು ಕೇಳಿ ಇಡೀ ಪರೀಕ್ಷಾ ಕೇಂದ್ರವೇ ಕಳವಳಗೊಂಡಿತ್ತು. ತಿಳುವಳಿಕೆಯ ಕೊರತೆಯಿಂದಲೋ? ಅಥವಾ ವಿಷಯ ತಿಳಿಸಿದರೆ ನಮ್ಮ ಮಗಳಿಗೆ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂಬ ಭಯದಿಂದಲೋ? ಅಥವಾ ಪಾಲಕರ ಪ್ರಜ್ಞಾಪೂರ್ವಕ ತಂತ್ರವೋ ? ಈ ವಿಷಯವನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲ ಹಾಲ್ಟಿಕೆಟ್ ಕೊಡುವಾಗಲೂ ವಿದ್ಯಾರ್ಥಿನಿ ಓದುವ ಶಾಲಾಸಿಬ್ಬಂದಿ ಟ್ರಾವಲ್ ಹಿಸ್ಟರ್ ಕೇಳಿದಾಗಲೂ ಆ ಮಗು ತುಟಿ ಪಿಟಕ್ ಅಂದಿಲ್ಲವಂತೆ. ‘small hole sinks a big ship ’ ಎಂಬಂತೆ ಒಂದೇ ಒಂದು ಗೌಪ್ಯತೆ ಇಡೀ ಪರೀಕ್ಷಾ ಕೇಂದ್ರವನ್ನು ಕೊರೋನಾದ ಆತಂಕದಲ್ಲಿ ಮುಳುಗಿಸಿತ್ತು. ವಿಷಯ ತಿಳಿದ ತತಕ್ಷಣವೇ ದಂಗು ಬಡಿದ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ನಮ್ಮ ಶಿಕ್ಷಣ ಇಲಾಖೆಯ ಅಧಿಕಾರಿಗಳು ದೈರ್ಯದ ದಾರಿ ತೋರಿದರು.
.
ಕ್ಯಾಂಪಸ್ ಕಮಿಟ್ಮೆಂಟ್ :
ವಿದ್ಯಾರ್ಥಿನಿಗೆ ಕೊರೋನಾ ಸೊಂಕು ದೃಢಪಟ್ಟ ವಿಚಾರವನ್ನು ಪರೀಕ್ಷೆ ಬರೆಯುತ್ತಿದ್ದ ಯಾವ ಮಕ್ಕಳಿಗೂ ಭಯ ಬಿಳುತ್ತಾರೆಂಬ ಕಾರಣಕ್ಕೆ ಪರೀಕ್ಷೆ ಮುಗಿಯುವ ತನಕ ತಿಳಿಸಬಾರದೆಂದು ಕ್ಯಾಂಪಸ್ ಕಮಿಟ್ಮೆಂಟ್ ಆಯಿತು. ಇದರ ಭಾಗವಾಗಿಯೇ ಸೋಂಕಿತ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಲು ಬರುವ ಅಂಬ್ಯುಲೆನ್ಸ್ನ ದೃಶ್ಯಗಳು ಪರೀಕ್ಷೆ ಬರೆಯುವ ಯಾವ ಮಕ್ಕಳಿಗೂ ಕಾಣದಂತೆ ಕಿಡಕಿ ಬಾಗಿಲುಗಳನ್ನು ಕ್ಲೊಜ್ ಮಾಡುವಂತೆ ನಿರ್ದೇಶಿಸಲಾಗಿತ್ತು. ನಂತರ ಅಂಬ್ಯುಲೆನ್ಸ್ ಬಂದಾಗ ಸೋಂಕಿತ ಮಗು ಚೀರಾಡಿ ಅಳತೊಡಗಿತು ಆರೋಗ್ಯ ಇಲಾಖೆಯ ಸಿಬ್ಬಂದಿ ಅಗತ್ಯ ಮುನ್ನಚ್ಚರಿಕೆಯೊಂದಿಗೆ ಆಕೆಯ ಆ ಕಡೆ ಕರೆದೊಯ್ದರು.
ಈ ಕಡೆ ಮನೆಯಲ್ಲಿ ಹಸುಗೂಸುಗಳನ್ನು ಬಿಟ್ಟು ಪರೀಕ್ಷಾ ಕಾರ್ಯಕ್ಕೆ ಬಂದ ಮಹಿಳಾ ಸಿಬ್ಬಂದಿ ಶೋಂಕಿತ ಮಗುವಿನ ಕೊಠಡಿ ಮೇಲ್ವಿಚಾರಕರಾದ ನಮಗೆ ಮುಂದೇನಾಗಬಹುದೆಂದು ಊಹಿಸಿಕೊಂಡು ಕಣ್ಣೀರಿಟ್ಟರು.
ಇನ್ಸ್ ಟ್ಯೂಟ್ ಕ್ವಾರಂಟೈನ್ :
ಪರೀಕ್ಷಾ ಮುಗಿದ ತಕ್ಷಣ ಸೋಂಕಿತ ವಿದ್ಯಾರ್ಥಿಯ ಕೊಠಡಿಯಲ್ಲಿದ್ದ ಇತರ ಮಕ್ಕಳು ಹಾಗೂ ಕೊಠಡಿ ಮೇಲ್ವಿಚಾರಕರನ್ನು ಪರೀಕ್ಷಾ ಕೇಂದ್ರದಲ್ಲಿಯೇ ಸ್ಲ್ಯಾಬ್ ಟೆಸ್ಟ್ ಮಾಡಿಸಿ ಪಾಲಕರೊಂದಿಗೆ ಸಮಾಲೋಚಿಸುವಾಗ ಕೆಲವರು ಆತಂಕಗೊಂಡಿದ್ದರು ಅವರ ವೇದನೆ ಮುಗಿಲು ಮುಟ್ಟಿತ್ತು. ಕೆಲವರು ಕೊರೊನಾ ಕಾಲದಲ್ಲಿ ಪರೀಕ್ಷೆ ನೆಡೆಸುತ್ತಿರುವುದನ್ನು ವಿರೋಧಿಸಿ ಹರಿಹಾಯ್ದರು ಕೊನೆಗೆ ಅಧೀಕ್ಷರ ತೂಕಬದ್ಧ ಮಾತುಗಳಿಗೆ ಬೆಲೆಕೊಟ್ಟು ಇನ್ಸೂಟ್ಯೂಟ್ ಕ್ವಾರೈಂಟನ್ಗೆ ಸಮ್ಮತಿಸಿದರು.
ಕ್ವಾರೈಂಟೆನ್ ನಿಂದಲೇ ಬಂದು ಪರೀಕ್ಷೆ ಬರೆದರು :
ಮರುದಿನವೇ ಸ್ಲ್ಯಾಬ್ ಕೊಟ್ಟವರ ಟೆಸ್ಟಿಂಗ್ ‘ನೆಗೆಟಿವ್ ‘ಬಂದಿದ್ದು ನಿರಾಳತೆಗೆ ನಾಂದಿ ಹಾಡಿತು. ಉಳಿದೆರಡು ವಿಷಯಗಳನ್ನು ಕ್ಚಾರೈಂಟನ್ ಕೇಂದ್ರದಿಂದಲೇ ಬಂದು ಪ್ರತ್ಯೇಕವಾಗಿ ಪರೀಕ್ಷೆ ಬರೆದರು. ಕೊನೆಯ ದಿನ ಪರೀಕ್ಷಾ ಮುಗಿದ ಮೇಲೆ ತಾಲೂಕ ವೈಧ್ಯಾಧಿಕಾರಿಗಳು ಇನ್ಸೂಟ್ಯೂಟ್ ಕ್ವಾರೈಂಟನ್ ನಿಂದ 14 ದಿನ ಹೋಮ್ ಕ್ವಾರೈಂಟನ್ನಲ್ಲಿರುವಂತೆ ಸೂಕ್ತ ಸಲಹೆಗಳೊಂದಿಗೆ ಬೀಳ್ಕೊಟ್ಟರು.
ಒಟ್ಟಾರೆ ಪರೀಕ್ಷಾ ಕೇಂದ್ರದಲ್ಲಿ ಸಂಭವಿಸಿದ ಈ ಕೊರೊನಾ ಕರಾಳ ಕಥನ ಹಲವು ಸವಾಲುಗಳನ್ನು ಮುನ್ನೋಟಗಳನ್ನು ಎಚ್ಚರಿಕೆಯ ಪಾಠಗಳನ್ನು ಕಲಿಸಿದೆ. ಇದೊಂದು ನಮ್ಮ ವೃತ್ತಿ ಬದುಕಿನ ರೋಚಕ ಅನುಭವ! Challenge s are charm if the life ’ ಅಲ್ಲವೆ? ಸಾಲು ಸಾಲು ಸವಾಲುಗಳನ್ನು ಮೆಟ್ಟಿನಿಂತು ಪರೀಕ್ಷೆಯ ಯಶಗೊಳಿಸಿದ ಸಕಲ ಸಿಬ್ಬಂದಿಯ ಸೇವೆಗೊಂದು ಸೆಲ್ಯೂಟ್ ಹೇಳಲೆಬೇಕು.
ಸದ್ಯ ಪರೀಕ್ಷೆ ಮುಗಿದಿದೆ ಕೊರೋನಾ ಪರೀಕ್ಷಾ ಇನ್ನೂ ಇದೆ! ಪರೀಕ್ಷೆ ಬರೆದ ಎಲ್ಲಾ ಮಕ್ಕಳೂ ಉತ್ತಮ ಫಲಿತಾಂಶದೊಂದಿಗೆ ಉಜ್ವಲ ಭವಿಷ್ಯರೂಪಿಸಿಕೊಳ್ಳಲಿ. ಸೋಂಕಿತ ವಿದ್ಯಾರ್ಥಿನಿಯೂ ಬೇಗ ಸಂಪೂರ್ಣ ಗುಣಮುಖವಾಗಲೆಂದು ಆಶಿಸೋಣ.
( ನಮನಗಳು : ಈ ಘಟನೆ ನೆಡೆದಾಗ ಕ್ರಿಯಾಶೀಲ BEO ಸಾಹೇಬ್ರಾದ ಸೋಮಶೇಖರ ಗೌಡ್ರು ಹಾಗೂ ಸಮನ್ವಯಾಧಿಕಾರಿಗಳಾದ ವಿ.ವಿ.ಗೊಂಡಬಾಳ್ ಸರ್ ಇಡೀ ದಿನ ಪರೀಕ್ಷಾ ಕೇಂದ್ರದಲ್ಲಿದ್ದು ಜೀವಬಲ ತುಂಬುವದರೊಂದಿಗೆ ‘ ಈ ಬರಹ’ಕ್ಕೆ ಕಾರಣರಾದ ಇರ್ವರಿಗೂ ಸಾವಿರದ ಶರಣು )
-ಕಡಿಗು