ಪತ್ರಕರ್ತ ಅಶ್ವಥ್‌ ನಾರಾಯಣ ಆತ್ಮಹತ್ಯೆ ಯತ್ನ ಪ್ರಕರಣ : ತನಿಖೆಗೆ ಶಿವಾನಂದ ತಗಡೂರ ಆಗ್ರಹ, ಗೃಹಮಂತ್ರಿಗೆ ಪತ್ರ

ಕನ್ನಡ ಪ್ರಭ’ದ ಮಾಜಿ ಉದ್ಯೋಗಿಯ ಡೆತ್‌‌‌ ನೋಟ್: ತನಿಖೆಗೆ ಆಗ್ರಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ

ಶನಿವಾರ ರಾತ್ರಿ ದೇವಾಲಯವೊಂದರ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಪತ್ತೆ ಹಚ್ಚಿದ್ದ ಪೊಲೀಸರು ಅಲ್ಲಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಪತ್ರಕರ್ತ ಅಶ್ವಥ್‌ ನಾರಾಯಣ ಅವರ ಆತ್ಮಹತ್ಯೆ ಯತ್ನ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

ಹಿರಿಯ ಪತ್ರಕರ್ತ ಖಿನ್ನತೆಗೊಳಗಾಗಿ ಆತ್ಮಹತ್ಯೆ ಯತ್ನ ಮಾಡಿರುವುದು ಆತಂಕಕಾರಿ ಮತ್ತು ನೋವಿನ ಸಂಗತಿಯಾಗಿದೆ ಎಂದಿರುವ ಅವರು, “ಇವರನ್ನು ಸ್ಥಳೀಯ ಪೊಲೀಸ್ ಪ್ರಕರಣದಲ್ಲಿ ಸಿಲುಕಿಸಲು ಮತ್ತು ಆಗಿಂದಾಗ್ಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುವ ಪ್ರಯತ್ನ ನಡೆದಿದೆ. ಪತ್ರಕರ್ತನ ಮಾನಸಿಕ ಸ್ಥಿಮಿತ ತಗ್ಗಿಸುವ ಮಟ್ಟಿಗೆ ಪೊಲೀಸ್ ಒತ್ತಡ ಮತ್ತು ಕಿರುಕುಳ ಮಾಡುವುದು ಅತ್ಯಂತ ಖಂಡನೀಯ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕು. ಅಲ್ಲದೆ ಬಟ್ಲಹಳ್ಳಿ ಪೊಲೀಸ್ ಠಾಣೆ ಸಬ್‌‌ಇನ್ಸ್ಪೆಕ್ಟರ್ ಪಾಪಣ್ಣ ಅವರನ್ನು ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವೈದ್ಯಕೀಯ ಸಚಿವ ಸುಧಾಕರ್‌ ಹಾಗೂ ಕನ್ನಡ ಪ್ರಭ ಸಂಪಾದಕ ರವಿ ಹಗೆಡೆ ಸೇರಿದಂತೆ ಇನ್ನು ಹಲವರ ಕಿರುಕುಳ ನೀಡಿದ್ದಾಗಿ ಆರೋಪಿಸಿ ಕನ್ನಡ ಪ್ರಭ ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರ ಕಳೆದ ಶನಿವಾರ ಸುದೀರ್ಘ ಡೆತ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸುದ್ದಿ ರಾಜ್ಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಈ ಪ್ರಕರಣದ ಕುರಿತು ತನಿಖೆಯಾಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ವಾದ ವಿವಾದಗಳು ಆರಂಭವಾಗಿವೆ. ಈ ನಡುವೆ ಆತ್ಮಹತ್ಯೆಗೆ ಶರಣಾಗಿದ್ದ ಅಶ್ವತ್ಥ್‌ ನಾರಾಯಣ್ ಚೇತರಿಸಿಕೊಳ್ಳುತ್ತಿದ್ದು, ಈ ಪ್ರಕರಣದಲ್ಲಿ ಸರ್ಕಾರದ ನಡೆ ಹೇಗಿರಲಿದೆ? ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಅಸಲಿಗೆ ಅಶ್ವಥ್‌ ನಾರಾಯಣ ಅವರು ಶನಿವಾರದಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸುಧೀರ್ಘ ಡೆತ್‌‌ನೋಟ್ ಬರೆದಿದ್ದು, ತಮ್ಮ ಸಾವಿಗೆ ಸಚಿವ ಡಾ. ಕೆ. ಸುಧಾಕರ್, ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ. ಮಿಥುನ್ ಕುಮಾರ್, ಸಹ ಸಂಪಾದಕ ಬಿ. ವಿ. ಮಲ್ಲಿಕಾರ್ಜುನಯ್ಯಾ, ಪಿಎಸ್ಐ ಪಾಪಣ್ಣ ಸೇರಿದಂತೆ ಜಿಲ್ಲೆಯ ಇತರೆ ಐದು ಪತ್ರಕರ್ತರು ಕಾರಣ, ಅವರ ಪಿತೂರಿಯಿಂದಲೇ ನನ್ನ ಬದುಕು ಈ ಹಂತಕ್ಕೆ ತಲುಪಿದೆ ಎಂದು ಆರೋಪಿಸಿದ್ದರು.

Please follow and like us:
error