
ಆಡಳಿತಾರೂಢ ಪಕ್ಷದ ಬೆಂಬಲದಿಂದಲೇ ತನ್ನ ಚಾನೆಲ್ ಪ್ರಾರಂಭಿಸಿರುವ ಅರ್ನಾಬ್ ತನ್ನ ಚಾನೆಲ್ ನಲ್ಲಿ ನಿರಂತರವಾಗಿ ದೇಶಾದ್ಯಂತ ಅದೇ ಪ್ರಭುತ್ವ ನಡೆಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಬೆಂಬಲಿಸುತ್ತಾ ಬಂದಿದ್ದಾನೆ. ಈಗ ಒಂದು ರಾಜ್ಯದ ಅರ್ಧ ಸರ್ಕಾರ ಅವನಿಗೆ ತಿರುಗಿಬಿದ್ದ ಕೂಡಲೇ ನಾವೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಆತಂಕಕ್ಕೀಡಾಗಿರುವುದು ತಮಾಷೆಯಾಗಿ ಕಾಣುತ್ತಿದೆ.
“ಅರ್ನಾಬ್ ಗೋಸ್ವಾಮಿ ಬಂಧನದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ” ಎಂಬ ನನ್ನ ನಿನ್ನೆಯ ಪೋಸ್ಟ್ ಬಗ್ಗೆ ಪತ್ರಕರ್ತರ ಒಂದು ವಾಟ್ಸ ಪ್ ಗ್ರೂಪಲ್ಲಿ ಚರ್ಚೆ ನಡೆಯುತ್ತಿದೆ. ಅದನ್ನು ಸ್ವಲ್ಪ ಸಾರ್ವಜನಿಕಗೊಳಿಸುವ ಉದ್ದೇಶದಿಂದ ಆ ಚರ್ಚೆಯನ್ನು ಇಲ್ಲಿ ವಿಸ್ತರಿಸುತ್ತಿದ್ದೇನೆ.
ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬ ನನ್ನ ಪ್ರತಿಕ್ರಿಯೆಯಿಂದ ಕೆರಳಿರುವ ಒಬ್ಬ ಹಿರಿಯ ಪತ್ರಕರ್ತರು ‘ಇದೊಂದು ಆತಂಕಕಾರಿ ಧೋರಣೆ, ಇಂತಹ ಆತಂಕವಿಟ್ಟುಕೊಳ್ಳದಿದ್ದರೆ ಅದೆಂಥಾ ಸಂವೇದನೆ ‘ ಎಂದು ಪ್ರಶ್ನಿಸಿದ್ದಾರೆ.
ಅವರೇ ಮುಂದುವರಿದು ಇದು “ಏನುಬೇಕಾದರೂ ಮಾಡಬಲ್ಲೆ” ಎನ್ನುವ ಅನಾಹುತಕಾರೀ ಜರ್ನಲಿಸಮ್ಮಿಗಿಂತ ಅಪಾಯಕಾರಿಯಾದ, “ನಾವು ಏನು ಮಾಡುವುದಕ್ಕೂ ಸಿದ್ಧ” ಎಂಬ ವ್ಯವಸ್ಥೆಯ ಅಟ್ಟಹಾಸದ ನಡುವಿನ ಸಂಘರ್ಷ ಎಂದು ಹೇಳಿದ್ದಾರೆ.
ನನ್ನ ಪ್ರಕಾರ ನಮ್ಮಲ್ಲಿ ಆತಂಕ ಹುಟ್ಟಬೇಕಾಗಿರುವುದು, ನಮ್ಮಲ್ಲಿ ಸಂವೇದನೆ ಜಾಗೃತಗೊಳ್ಳಬೇಕಾಗಿರುವುದು ಅರ್ನಬ್ ಗೋಸ್ವಾಮಿ ಅರೆಸ್ಟ್ ಬಗ್ಗೆ ಅಲ್ಲ, ನಮ್ಮದೇ ಸುತ್ತಮುತ್ತಲಿನ ಮಾಧ್ಯಮ ಸಂಸ್ಥೆಗಳಲ್ಲಿ ನಮ್ಮದೇ ಅಣ್ಣ-ತಮ್ಮ, ಅಕ್ಕ-ತಂಗಿಯಂತಹವರನ್ನು ನಿರ್ದಯವಾಗಿ ಹೊರದಬ್ಬಿ ಬೀದಿಗೆ ಹಾಕುತ್ತಿದ್ದಾರಲ್ಲಾ? ಈ ಬಗ್ಗೆ ಮೊದಲು ನಮ್ಮಲ್ಲಿ ಆತಂಕ ಹುಟ್ಟಬೇಕು, ನಮ್ಮ ಸಂವೇದನೆ ಜಾಗೃತಗೊಳ್ಳಬೇಕು.
ದುರಂತ ಎಂದರೆ ಇಂತಹದ್ದೊಂದು ಕ್ರೌರ್ಯಕ್ಕೆ ಬಲಿಯಾದವರು ಕೂಡಾ ಶೋಷಕರ ವಿರುದ್ದ ದನಿ ಎತ್ತುವ ಧೈರ್ಯ ಮಾಡದೆ ಅರ್ನಾಬ್ ಗೋಸ್ವಾಮಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಬಗ್ಗೆ ಮಾತನಾಡುತ್ತಿರುವುದು.
ದಿಡೀರನೇ ಅವತಾರ ಎತ್ತಿರುವ ರಾಜ್ಯದ ಎಡಿಟರ್ ಗಿಲ್ಡ್ ಇದೆಯಲ್ಲಾ, ಅದರಲ್ಲಿರುವ ಸದಸ್ಯ ಸಂಪಾದಕರು ಅರ್ನಾಬ್ ಬಂಧನವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಖಂಡಿಸುವ ಮೊದಲು ಆತ್ಮಾವಲೋಕನ ಮಾಡಿಕೊಂಡರೇ ಅವರಲ್ಲೇನಾದರೂ ‘ಗಿಲ್ಟ್’ ಹುಟ್ಟಿಕೊಳ್ಳಬಹುದೇನೋ?
ಈ ಗಿಲ್ಡ್ ರಾಜ್ಯದಲ್ಲಿ ನಡೆದ ಪತ್ರಕರ್ತರ ಮೇಲಿನ ಇಲ್ಲವೇ ಸಂಪಾದಕರ ಮೇಲಿನ ದಾಳಿಗೆ ಯಾಕೆ ಪ್ರತಿಕ್ರಿಯಿಸಲಿಲ್ಲ ಎನ್ನುವ ಪ್ರಶ್ನೆ ಇದ್ದೇ ಇದೆ. ಇದರ ಜೊತೆಗೆ ಈ ಸಂಪಾದಕರು ಕೆಲಸ ಮಾಡುತ್ತಿರುವ ಪತ್ರಿಕೆಗಳಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಕನಿಷ್ಠ ಐವತ್ತು ಹಿರಿಯ ಪತ್ರಕರ್ತರನ್ನು ನಿರ್ದಯವಾಗಿ ಮನೆಗೆ ಕಳುಹಿಸುವಾಗ ಇವರೊಳಗಿನ ಸಂವೇದನೆ ಜಾಗೃತವಾಗಿರಲಿಲ್ಲ. ಮಾಲೀಕರೇ ಸಂಪಾದಕರಾಗಿರುವವರು ನೇರವಾಗಿ ಈ ಪತ್ರಕರ್ತರನ್ನು ಹೊರದಬ್ಬಿದರೆ, ಉಳಿದವರು ಮಾಲೀಕರನ್ನು ಓಲೈಸಲು ಮತ್ತು ಜೊತೆಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ತಮ್ಮ ಸಹದ್ಯೋಗಿಗಳನ್ನು ಬೀದಿಗೆ ತಳ್ಳಿದ್ದಾರೆ.
ಅಲ್ಲಿಯೂ ತಮ್ಮ ಜಾತಿಯ ಪತ್ರಕರ್ತರನ್ನು ರಕ್ಷಿಸಿ ಇತರರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಒಬ್ಬ ಸಂಪಾದಕರೊಡನೆ ಉಚ್ಚಾಟಿತ ಪತ್ರಕರ್ತನೊಬ್ಬ ‘ನಿಮ್ಮ ಜಾತಿಯವರನ್ನು ರಕ್ಷಿಸಿ ಬೇರೆಯವರನ್ನು ಯಾಕೆ ಕಿತ್ತು ಹಾಕಿದ್ದೀರಿ? ಎಂದು ಧೈರ್ಯ ಮಾಡಿ ಕೇಳಿದನಂತೆ. ಅದಕ್ಕೆ ಆ ಸಂಪಾದಕ ‘ ಹತ್ತು ಮಂದಿಯಲ್ಲಿ ಇಬ್ಬರು ನನ್ನ ಜಾತಿಯವರೂ ಇದ್ದಾರಲ್ಲಾ, ನಮ್ಮ ಜನಸಂಖ್ಯೆಯ ಪ್ರಮಾಣ ಅಷ್ಟೇ ಇರುವುದಲ್ಲವೇ” ಎಂದು ಹೇಳಿದನಂತೆ. ಏನು ಲಾಜಿಕ್ ? ಕಿತ್ತು ಹಾಕುವಾಗ ಜಾತಿ ಮೀಸಲಾತಿ, ನೇಮಕ ಮಾಡುವಾಗ ಮಾತ್ರ ಆ ಮೀಸಲಾತಿ ಸೂತ್ರ ಇಲ್ಲ.
ನಾವು ಆತಂಕಕ್ಕೀಡಾಗಬೇಕಾಗಿರುವುದು, ನಮ್ಮ ಸಂವೇದನೆ ಜಾಗೃತ ಗೊಳ್ಳಬೇಕಾಗಿರುವುದು ಈ ಬೆಳವಣಿಗೆ ಬಗ್ಗೆ ಹೊರತು ಪತ್ರಕರ್ತನ ಛದ್ಮವೇಷ ಧರಿಸಿರುವ ಪ್ರಭುತ್ವದ ಒಬ್ಬ ಚೇಲಾನ ಬಗ್ಗೆ ಅಲ್ಲ.
ಅರ್ನಾಬ್ ಗೋಸ್ವಾಮಿ ವಿರುದ್ಧದ ಪೊಲೀಸ್ ವಿಚಾರಣೆಯನ್ನು ಪ್ರಭುತ್ವದ ದಾಳಿ ಎಂದು ಬಣ್ಣಿಸಬಹುದೇ ಎನ್ನುವುದು ಪ್ರಶ್ನೆ. ದೇಶದ ಮುಕ್ಕಾಲು ಪಾಲು ರಾಜ್ಯಗಳನ್ನು ಮತ್ತು ಕೇಂದ್ರವನ್ನು ಕೈಯಲ್ಲಿಟ್ಟುಕೊಂಡು ಅಧಿಕಾರ ನಡೆಸುತ್ತಿರುವ ಪಕ್ಷ-ಪ್ರಭುತ್ವ ಅರ್ನಾಬ್ ಬೆನ್ನ ಹಿಂದೆ ನಿಂತಿದೆ. ನನ್ನ ಕತ್ತೆ ವಯಸ್ಸು ಮತ್ತು ಅನುಭವದಿಂದ ಹೇಳುವುದಾದರೆ ಇಲ್ಲಿಯ ವರೆಗೆ ದೇಶದ ಯಾವನೇ ಪತ್ರಕರ್ತ ರಕ್ಷಣೆಗೆ ಈ ರೀತಿ ಇಡೀ ಕೇಂದ್ರ ಸರ್ಕಾರ ಟೊಂಕಕಟ್ಟಿ ನಿಂತದ್ದನ್ನು ನಾನು ನೋಡಿಲ್ಲ.
ಆಡಳಿತಾರೂಢ ಪಕ್ಷದ ಬೆಂಬಲದಿಂದಲೇ ತನ್ನ ಚಾನೆಲ್ ಪ್ರಾರಂಭಿಸಿರುವ ಅರ್ನಾಬ್ ತನ್ನ ಚಾನೆಲ್ ನಲ್ಲಿ ನಿರಂತರವಾಗಿ ದೇಶಾದ್ಯಂತ ಅದೇ ಪ್ರಭುತ್ವ ನಡೆಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಬೆಂಬಲಿಸುತ್ತಾ ಬಂದಿದ್ದಾನೆ. ಈಗ ಒಂದು ರಾಜ್ಯದ ಅರ್ಧ ಸರ್ಕಾರ ಅವನಿಗೆ ತಿರುಗಿಬಿದ್ದ ಕೂಡಲೇ ನಾವೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಆತಂಕಕ್ಕೀಡಾಗಿರುವುದು ತಮಾಷೆಯಾಗಿ ಕಾಣುತ್ತಿದೆ.
ಅರ್ನಾಬ್ ತನ್ನ ಚಾನೆಲ್ ಪ್ರಾರಂಭಿಸಿದ ದಿನದಿಂದ ಪ್ರಭುತ್ವದ ದಾಳಿಗೆ ಬಲಿಯಾದವರನ್ನು ಅರ್ಬನ್ ನಕ್ಸಲೈಟ್, ಸಿಕ್ಯುಲರ್, ಲೂಟಿನ್ಸ್ ಡೆಲ್ಲಿ ಜರ್ನಲಿಸ್ಟ್ ಎಂದು ಗೇಲಿ ಮಾಡುತ್ತಾ, ಹಂಗಿಸುತ್ತಾ ಬಂದಿದ್ದಾನೆ. ತನ್ನ ವಿಕೃತ ಆರ್ಭಟವನ್ನಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ತಿಳಿದುಕೊಂಡಿರುವ ಅರ್ನಬ್ ಉಳಿದವರ ಬಿಟ್ಟು ಬಿಡಿ, ತನ್ನದೇ ಚಾನೆಲ್ ನಲ್ಲಿ ಡಿಬೇಟ್ ಗೆ ಆಹ್ಹಾನಿಸಿದವರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕನಿಷ್ಠ ಗೌರವವನ್ನು ಕೊಡುವುದಿಲ್ಲ. ಅರ್ನಾಬ್ ನ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ನಿಲ್ಲುವ ಮೊದಲು ಅವನದ್ದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರು ಸಿಡಿದು ಹೊರಬಂದ ಮೇಲೆ ನೀಡಿರುವ ಪ್ರತಿಕ್ರಿಯೆಯನ್ನು ದಯವಿಟ್ಟು ಗಮನಿಸಿ.
ಈ ಎಲ್ಲ ಹಿನ್ನೆಲೆಯಲ್ಲಿ ಅರ್ನಾಬ್ ನ ಬಂಧನವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಹೇಗೆ ವ್ಯಾಖ್ಯಾನಿಸಲು ಸಾಧ್ಯ ಎನ್ನುವುದನ್ನು ಯಾರಾದರೂ ತಿಳಿಸಿ. ನನ್ನ ಪ್ರಕಾರ ಅರ್ನಾಬ್ ಬಂಧನವೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿದವನ ಬಂಧನ ಅಷ್ಟೆ. ನಾನು ಅವನಿಂದಾಗಿ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಇಲ್ಲಿ ಚರ್ಚೆಗೆ ಹೋಗುವುದಿಲ್ಲ. ಅದು ಇನ್ನೊಂದು ದೀರ್ಘ ಚರ್ಚೆ.
ಒಂದೊಮ್ಮೆ ಇಂದು ನಾವೆಲ್ಲ ಅರ್ನಾಬ್ ಗೋಸ್ವಾಮಿ ಪರವಾಗಿ ನಿಂತು ಬಿಟ್ಟರೆ ನಾಳೆಯಿಂದ ಪ್ರಭುತ್ವ ದೇಶಾದ್ಯಂತ ಪತ್ರಕರ್ತರ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುತ್ತದೆ ಎನ್ನುವ ಖಾತರಿಯನ್ನು ಯಾರಾದರೂ ಕೊಡಬಲ್ಲಿರಾ?
(ಮುಂದುವರಿಯುವುದು)
Dinesh Amin