ನವದೆಹಲಿ : “ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂ. ಹಳೆ ನೋಟು ರದ್ದತಿ ಘೋಷಿಸುವ ಮೊದಲು ಕಪ್ಪು ಹಣ ಹೊಂದಿದ ತನ್ನೆಲ್ಲಾ ಮಿತ್ರರಿಗೆ ಮಾಹಿತಿ ನೀಡಿದ್ದರು ಹಾಗೂ ಅವರು ತಮ್ಮ ಹಣ ಸುರಕ್ಷಿತವಾಗಿರುವಂತೆ ನೋಡಿಕೊಂಡಿದ್ದಾರೆ,” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
500 ಹಾಗೂ 1000 ರೂ. ನೋಟುಗಳ ರದ್ದತಿಯ ಆದೇಶ ಹಿಂದಕ್ಕೆ ಪಡೆಯಬೇಕೆಂದು ಕೇಂದ್ರ ಸರಕಾರಕ್ಕೆ ಆಗ್ರಹಿಸಿದ ಕೇಜ್ರಿವಾಲ್, ಭ್ರಷ್ಟಾಚಾರ ನಿಯಂತ್ರಿಸುವ ನೆಪದಲ್ಲಿ ಸರಕಾರ ದೊಡ್ಡ ಹಗರಣದಲ್ಲಿ ಭಾಗಿಯಾಗಿದೆ ಎಂದು ದೂರಿದರು.
“ಕಳೆದ ತ್ರೈಮಾಸಿಕದಲ್ಲಿ ಬ್ಯಾಂಕುಗಳ ಠೇವಣಿ ಕಡಿಮೆಯಾಗಿದ್ದರೆ, ಜುಲೈನಿಂದ- ಸೆಪ್ಟೆಂಬರ್ ವರೆಗಿನ ತ್ರೈಮಾಸಿಕದಲ್ಲಿ ದೊಡ್ಡ ಮೊತ್ತಗಳನ್ನು ಬ್ಯಾಂಕುಗಳಲ್ಲಿ ಠೇವಣಿಯಿರಿಸಲಾಗಿದೆ. ಈ ಹಣ ಯಾರಿಗೆ ಸೇರಿದ್ದು ?” ಎಂದು ಅವರು ಪ್ರಶ್ನಿಸಿದ್ದಾರೆ.
“ಕಪ್ಪು ಹಣವನ್ನು ಠೇವಣಿಯಿಡುವವರು ಶೇ 200 ರಷ್ಟು ದಂಡ ಪಾವತಿಸಬೇಕು ಎಂದು ಸರಕಾರ ಹೇಳಿದೆ. ಹೀಗೆ ಮಾಡಿದಲ್ಲಿ ಅವರಲ್ಲಿರುವ ಶೇ 90 ರಷ್ಟು ಹಣ ನಷ್ಟವಾಗುತ್ತದೆ. ಕಪ್ಪು ಹಣ ಹೊಂದಿರುವ ಯಾರು ಹೀಗೆ ಮಾಡುತ್ತಾರೆ?” ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಹಳೆಯ 500 ಹಾಗೂ 1000 ನೋಟುಗಳ ರದ್ದತಿಯ ನಿರ್ಧಾರ ರಾಜಕೀಯ ಪ್ರೇರಿತವಾಗಿದೆಯೆಂಬ ಆರೋಪವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಷಾ ನಿರಾಕರಿಸಿದ ಬೆನ್ನಲ್ಲೇ ಕೇಜ್ರಿವಾಲ್ ಅವರ ಆರೋಪ ಕೇಳಿ ಬಂದಿದೆ.