ನೇರ ಉದ್ಯೋಗ ಸಾಲದ‌ ಫಲಾನುಭವಿ ಪಟ್ಟಿಯಲ್ಲಿ ಕೊಪ್ಪಳಕ್ಕೆ ಪ್ರಥಮ ಸ್ಥಾನ- ಡಿ.ಎಸ್.ಅರುಣ್

ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ವರ್ಷ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವನ್ನು ಆರಂಭಿಸಿದ್ದು ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಮೊದಲ‌ ಬಾರಿಗೆ ಸಮುದಾಯದ ಜನರಿಗಾಗಿ ನೇರ ಉದ್ಯೋಗ ಸಾಲ ಯೋಜನೆ ಆರಂಭಿಸಿದ್ದು, ಫಲಾನುಭವಿಗಳ‌ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆ ಪ್ರಥಮ‌ ಸ್ಥಾನಸಲ್ಲಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಹೇಳಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮವು ಆರಂಭಗೊಂಡ ಮೇಲೆ ಎರಡು ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಜಾರಿಗೊಳಿಸಿದ್ದು, ಸಮುದಾಯದ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣಕ್ಕೆ ಶೇಕಡಾ 2ರ ಬಡ್ಡಿ ದರದಲ್ಲಿ ಲಕ್ಷ ಮಿತಿಗೆ ನಿಗಮವು ಸಾಲ ನೀಡುತ್ತದೆ. ನಾಲ್ಕು ವರ್ಷಗಳ ನಂತರ ಮರುಪಾವತಿ ಅವಧಿ ಆರಂಭವಾಗುತ್ತದೆ ಎಂದರು.

ಇನ್ನೊಂದು ಮಹತ್ವದ ಯೋಜನೆ ಎಂದರೆ‌ ನೇರ ಉದ್ಯೋಗ ಸಾಲ ಯೋಜನೆ. ಈ ಯೋಜನೆಯಡಿ ಸಮುದಾಯದ ಜನರ ಉದ್ಯೋಗಕ್ಕಾಗಿ ಶೇಕಡಾ 4ರ ಬಡ್ಡಿ ದರದಲ್ಲಿ ಲಕ್ಷ ರೂ. ಮಿತಿಗೆ ಸಾಲ ನೀಡಲಾಗುತ್ತದೆ ಎಂದರು.

ಈ‌ ಯೋಜನೆಯ ಪ್ರಯೋಜನ ಪಡೆಯಲು ರಾಜ್ಯದ್ಯಂತ 1,650 ಜನರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 1,150 ಜನ ಫಲಾನುಭವಿಗಳನ್ನು‌ ಆಯ್ಕೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ 392 ಅರ್ಜಿಗಳ ಪೈಕಿ 97 ಜನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ನಮ್ಮ ಸಮಾಜದಲ್ಲಿ ಶೇಕಡಾ 10 ರಷ್ಟು ಜನ ಕೋಟ್ಯಧಿಪತಿಗಳಿದ್ದಾರೆ ನಿಜ, ಆದರೆ ಶೇ 70 ರಷ್ಟು ಜನ ಮಧ್ಯಮವರ್ಗದವರೂ‌ ಇದ್ದಾರೆ. ಹಾಗೆಯೇ ಶೇಕಡಾ 10 ರಷ್ಟು ಜನರು ಬಡವರೂ‌ ಇದ್ದಾರೆ. ನಿಗಮದ ಯೋಜನೆಗಳು ಸಮುದಾಯದ ಬಡಜನರ‌ ಕಲ್ಯಾಣಕ್ಕೆ ಮೀಸಲು. ಇಡೀ ರಾಜ್ಯದಲ್ಲಿ ಸಮುದಾಯದ 10 ಲಕ್ಷ ಜನಸಂಖ್ಯೆಯಲ್ಲಿ 2 ಲಕ್ಷ ಜನರು ಬಡವರ್ಗದವರಿದ್ದಾರೆ ಎಂದು ಅವರು ಮಾಹಿತಿ‌ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಮುಖಂಡರಾದ ನವೀನ್‌ ಗುಳಗಣ್ಣವರ್, ಜಿಪಂ‌ ಸದಸ್ಯ ಕೆ.ಮಹೇಶ್, ಗಣೇಶ ಹೊರತಟ್ನಾಳ, ಬಸಯ್ಯ ಗದಗಿನಮಠ, ರಾಘವೇಂದ್ರ ಪಾನಘಂಟಿ, ಶ್ರೀನಿವಾಸ ಗುಪ್ತಾ, ಡಿ.ಗುರುರಾಜ ಇತರರು ಇದ್ದರು.

Please follow and like us:
error